ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಡಿ ಹಿಂದಿನ ಕಿಲಾಡಿ

Last Updated 4 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

‘ಹಾಸ್ಯ ಸರಣಿ ಅಂದರೆ ಕ್ರಿಕೆಟ್‌ ಮ್ಯಾಚ್‌ ಇದ್ದ ಹಾಗೆ. ಒಂದು ಬಾಲ್,‌ ಬ್ಯಾಟಿಗೆ ಬಡಿದು ಮೇಲಕ್ಕೆ ಚಿಮ್ಮಿ ಕೆಳಗಿಳಿಯುವುದನ್ನು ಹತ್ತಾರು ಕೋನದಲ್ಲಿ ತೋರಿಸುತ್ತಾರಲ್ಲಾ ಹಾಗೆ. ನಮಗೆ ಸಮಯ ಕೊಡುವ ವೀಕ್ಷಕನ ನಾಡಿಮಿಡಿತ ಅರಿತು ನಾವು ನ್ಯಾಯ ಕೊಡಬೇಕು’.

- ಹೀಗೆಂದವರು ಝೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಸರಣಿಯ ನಿರ್ದೇಶಕ, ಸೂತ್ರಧಾರ ಗಡ್ಡ ಸತೀಶ್‌.

ಬದುಕಿನ ಹಿನ್ನೋಟ: ಸತೀಶ್‌ ಬೆಂಗಳೂರಿನವರು. ಓದಿದ್ದು ಕಾಮರ್ಸ್‌ ಪದವಿ. ಓದುತ್ತಲೇ ಬೆಂಗಳೂರಿನ ಗಾಂಧಿ ನಗರದಲ್ಲಿ ರೀಲ್‌ ಕಟ್ಟಿಂಗ್‌ ಸಹಾಯಕನಾಗಿ ಸೇರಿಕೊಂಡರು. ಡಾರ್ಕ್‌ ರೂಮಿನಲ್ಲಿ ನಿರ್ದಿಷ್ಟ ಗುರುತುಗಳಿಗೆ ಅನುಗುಣವಾಗಿ ರೀಲ್‌ಗಳನ್ನು ಕತ್ತರಿಸಿ ಜೋಡಿಸಿಡುವುದು ಮಾಡಬೇಕಿತ್ತು.

‘ನನಗೆ ಗ್ರಾಫಿಕ್‌ ಡಿಸೈನರ್‌ ಆನಿಮೇಟರ್‌ ಆಗಬೇಕು ಎಂಬ ಕನಸು ಇತ್ತು. ಆಗ ‘ಮಾಯಾ’ ಹೆಸರಿನ ಸಾಫ್ಟ್‌ವೇರ್ ಇತ್ತು. ಕಲಿಯೋಣ ಎಂದರೆ ಅಷ್ಟೊಂದು ಮೊತ್ತ ನನ್ನಲ್ಲಿ ಇರಲಿಲ್ಲ. ಎಡಿಟಿಂಗ್ ಅ‌ನ್ನು ಗೆಳೆಯರ ಬಳಿ ಕಲಿತೆ’ ಎಂದರು ಸತೀಶ್‌.

‘ಮುಂದೆ ಝೀ ಕನ್ನಡ ವಾಹಿನಿಯಲ್ಲಿ ‘ಅಕ್ಕ’ ಮತ್ತು ಉದಯ ಟಿವಿಯಲ್ಲಿ ‘ಪುಣ್ಯಕೋಟಿ’ ಧಾರಾವಾಹಿಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಂಕಲನ ಕೆಲಸಗಳನ್ನು ಮಾಡಿಕೊಡುತ್ತಿದ್ದೆ. 2006ರ ಸುಮಾರಿಗೆ ಸುವರ್ಣ ಎಂಟರ್‌ಟೈನ್‌ಮೆಂಟ್‌ ವಾಹಿನಿಯಲ್ಲಿ ಸಂಕಲನಕಾರನಾಗಿ ಸೇರಿಕೊಂಡೆ. ‘ಮಜಾ ವಿದ್‌ ಸೃಜಾ’, ‘ಇದು ಕತೆ ಅಲ್ಲ, ಜೀವನ’ ಸರಣಿಗಳಿಗೆ ಸಂಕಲನಕಾರನಾಗಿದ್ದೆ. ಬಿಗ್‌ಬಾಸ್‌ ಸರಣಿಗೆ ಪ್ರೊಮೊ ಇನ್‌ಚಾರ್ಜ್‌ ಆಗಿ ಕೆಲಸ ಮಾಡಿದ್ದೆ. ಪ್ರೊ– ಕಬಡ್ಡಿ ಪ್ರಸಾರ ಸಂಬಂಧಿಸಿ ವಾಹಿನಿ ಕಡೆಯಿಂದ ಪ್ರತಿನಿಧಿಸಿದ್ದೆ’ ಎಂದು ಅವರು ಹೇಳಿದರು.

ಝೀ ಪಯಣ: ಮುಂದೆ ಝೀ ವಾಹಿನಿಗೆ ರಾಘವೇಂದ್ರ ಹುಣಸೂರು ಕರೆಸಿಕೊಂಡರು. ಹುಣಸೂರು, ಶರಣಯ್ಯ, ಆ್ಯಂಟೋನಿಯೋ ದಾಸ್‌ ಇವರಿಗೆಲ್ಲಾ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಇವರ ಮಾರ್ಗದರ್ಶನದಲ್ಲಿ ಡ್ರಾಮಾ ಜ್ಯೂನಿಯರ್ಸ್‌, ಕಾಮಿಡಿ ಕಿಲಾಡಿಗಳು ಆರಂಭವಾಯಿತು. ಕಾಮಿಡಿ ಕಿಲಾಡಿಗಳು ಸೀಸನ್‌ 1, 2 ಮತ್ತು 3 ಆಗಿದೆ. ಈಗ ನಡೆಯುತ್ತಿರುವ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಷಿಪ್.‌ ಈ ಸರಣಿಗಳಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕನಾಗುವ ಅವಕಾಶ ಸಿಕ್ಕಿದೆ ಎಂದು ಖುಷಿ ಹಂಚಿಕೊಂಡರು ಅವರು.

‘ನಿರ್ದೇಶಕನಲ್ಲಿ ನಕಾರಾತ್ಮಕ ಆಲೋಚನೆಗಳು ಬರಲೇಬಾರದು. ಬಂದರೆ ಅದು ಇಡೀ ತಂಡದ ಮೇಲೆ ಪರಿಣಾಮ ಬೀರುತ್ತದೆ. ನಿರ್ದೇಶಕನಾದವನು ಕಣ್ಣೀರನ್ನು ನಗುವಾಗಿ ತೆಗೆದುಕೊಳ್ಳಬೇಕು. ನಾನು ಮಾಡುವುದು ಅದನ್ನೇ’ ಎಂದರು ಸತೀಶ್‌.

‘ಕೊರೊನಾ ಅವಧಿಯಲ್ಲಿ ಕಲಾವಿದರ ಪರಿಸ್ಥಿತಿಯನ್ನು ಗಮನಿಸಿ ನಾವು ಈ ಸರಣಿಗಳನ್ನು ಮುಂದುವರಿಸಿದೆವು. ಇಂದು ಈ ಸರಣಿ ಮೂಲಕ ಹಲವಾರು ಕಲಾವಿದರನ್ನು ಚಿತ್ರರಂಗಕ್ಕೆ ಉಡುಗೊರೆಯಾಗಿ ಕೊಟ್ಟಿದ್ದೇವೆ. ಕರ್ನಾಟಕದ ಎಲ್ಲ ಭಾಗಗಳ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿದ್ದೇವೆ. ಹೀಗಾಗಿ ಸರಣಿಯು ಕನ್ನಡದ ಎಲ್ಲ ಸೊಗಡುಗಳಿರುವ ಪ್ರದೇಶವನ್ನು ತಲುಪಿದೆ. ಈಗ ಸದ್ಯದ ಸರಣಿಯಲ್ಲಿ 36 ಕಲಾವಿದರು ಇದ್ದಾರೆ. ಅಷ್ಟೂ ಜನರನ್ನು ಮುನ್ನಡೆಸುವುದರಲ್ಲಿ ಖುಷಿ ಇದೆ’ ಎನ್ನುವುದು ಸತೀಶ್‌ ಅವರ ತೃಪ್ತಿಯ ಮಾತು.

ಚಿತ್ರರಂಗಕ್ಕೆ ಅಪೂರ್ವವಾದದ್ದನ್ನು ಏನಾದರೂ ಕೊಡಬೇಕು ಎಂಬ ಕನಸು ಇದೆ. ಸದ್ಯದ ಜವಾಬ್ದಾರಿ ಮುಗಿಸಿಕೊಂಡು ಆ ಕನಸಿನ ಮೇಲೆ ಕೆಲಸ ಮಾಡುತ್ತೇನೆ ಎಂದರು ಸತೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT