ಸೋಮವಾರ, ಆಗಸ್ಟ್ 15, 2022
23 °C
ಕಿರುತೆರೆ

ಹೀರೊ ಆಗುವುದಕ್ಕಿಂತ ನಟನಾಗಬೇಕು: ಅಭಿ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ರಿಯಾಲಿಟಿ ಷೋದಿಂದ ಧಾರಾವಾಹಿ, ಧಾರಾವಾಹಿಯಿಂದ ಸಿನಿಮಾ ಹೀಗೆ ಅವರ ನಟನೆಯ ಹಾದಿ ಸಾಗುತ್ತದೆ. ಸದ್ಯ ಕಿರುತೆರೆಯ ಟಾಪ್‌ ನಟರ ಪೈಕಿ ಇವರ ಹೆಸರು ಮುಂಚೂಣಿಯಲ್ಲಿದೆ. ಅವರೇ ಅಭಿಷೇಕ್ ರಾಮ್‌ದಾಸ್ ಅಲಿಯಾಸ್ ‘ಗಟ್ಟಿಮೇಳ’ದ ವಿಕ್ರಾಂತ್‌.

ಈಜುಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದವರೆಗೂ ಸ್ಪರ್ಧಿಸಿ ಪ್ರಶಸ್ತಿಗಳನ್ನು ಗೆದ್ದ ಆ ಹುಡುಗನ ತಲೆಯಲ್ಲಿ ನಟನಾಗುವ ಯೋಚನೆಯೂ ಇರಲಿಲ್ಲ. ತಂದೆ ತೀರಿಕೊಂಡ ಮೇಲೆ ಪಾಕೆಟ್ ಮನಿಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡರು, ಜೊತೆಜೊತೆಗೆ ಆರ್ಕೆಸ್ಟ್ರಾಗಳಲ್ಲೂ ನೃತ್ಯ ಮಾಡುತ್ತಿದ್ದರು. ಅಲ್ಲಿಂದ ರಿಯಾಲಿಟಿ ಷೋದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ರಿಯಾಲಿಟಿ ಷೋದಿಂದ ಧಾರಾವಾಹಿ, ಧಾರಾವಾಹಿಯಿಂದ ಸಿನಿಮಾ ಹೀಗೆ ಅವರ ನಟನೆಯ ಹಾದಿ ಸಾಗುತ್ತದೆ. ಸದ್ಯ ಕಿರುತೆರೆಯ ಟಾಪ್‌ ನಟರ ಪೈಕಿ ಇವರ ಹೆಸರು ಮುಂಚೂಣಿಯಲ್ಲಿದೆ. ಅವರೇ ಅಭಿಷೇಕ್ ರಾಮ್‌ದಾಸ್ ಅಲಿಯಾಸ್ ‘ಗಟ್ಟಿಮೇಳ’ದ ವಿಕ್ರಾಂತ್‌.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಇರಿಸಿಕೊಂಡ ಮೈಸೂರು ಮೂಲದ ಈ ಹುಡುಗ ಬಂದ ಅವಕಾಶಗಳನ್ನು ತಿರಸ್ಕರಿಸಿರಲಿಲ್ಲ. ‘ಡಾನ್ಸ್ ಡಾನ್ಸ್’ ಹಾಗೂ ‘ಲೈಫ್ ಸೂಪರ್ ಗುರು’ ಡಾನ್ಸ್‌ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿಂದ ಉದಯ ವಾಹಿನಿಯಲ್ಲಿ ಪ್ರಸಾರವಾದ ‘ಸರಯೂ’ ಧಾರಾವಾಹಿಗೆ ನಾಯಕನಾಗಿ ಕಿರುತೆರೆ ಅಂಗಳಕ್ಕೆ ಕಾಲಿರಿಸುತ್ತಾರೆ. ನಂತರ ನೇರವಾಗಿ ಚಂದನವನಕ್ಕೆ ಹೆಜ್ಜೆ ಇಡುವ ಇವರು ರೆಬೆಲ್‌ಸ್ಟಾರ್ ಅಂಬರೀಶ್ ಜೊತೆ ‘ಅಂಬಿ ನಿಂಗೆ ವಯಸ್ಸಾಯ್ತು’ ಸಿನಿಮಾದಲ್ಲಿ ನಟಿಸುತ್ತಾರೆ. ಜೀ ಕನ್ನಡ ವಾಹಿನಿಯ ಗಟ್ಟಿಮೇಳ ಧಾರಾವಾಹಿಯ ವಿಕ್ರಾಂತ್ ಪಾತ್ರದ ಮೂಲಕ ಕರ್ನಾಟಕದ ಮನೆಮಗನಾಗಿದ್ದಾರೆ. ಸದ್ಯ ಇವರ ಕೈಯಲ್ಲಿ ಎರಡು ಹೊಸ ಸಿನಿಮಾಗಳಿದ್ದು ತಮ್ಮ ನಟನಾ ಪಯಣದ ಕುರಿತು ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ.

ಗಟ್ಟಿಮೇಳ ಧಾರಾವಾಹಿ ಬಗ್ಗೆ ಹೇಳಿ..
ನನಗೆ ನನ್ನ ಮೊದಲ ಸಿನಿಮಾದ ಬಳಿಕ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅವಕಾಶ ಸಿಗುತ್ತದೆ. ನಾನು ಮೊದಲಿನಿಂದಲೂ ಸಿನಿಮಾ, ಧಾರಾವಾಹಿ ಎರಡರಲ್ಲೂ ನಟಿಸಬೇಕು ಎಂದುಕೊಂಡಿದ್ದೆ. ‘ಅಂಬಿ ನಿಂಗೆ ವಯಸ್ಸಾಯ್ತು’ ಬಿಡುಗಡೆಯಾದ ತಕ್ಷಣಕ್ಕೆ ಗಟ್ಟಿಮೇಳ ಸಿಕ್ಕಿತ್ತು. ಅಲ್ಲಿಂದ ಇಂದಿನವರೆಗೆ ನನ್ನ ಪಯಣ ಸಾಗಿದೆ.

ಇನ್ನು ಪಾತ್ರದ ಬಗ್ಗೆ ಹೇಳುವುದಾದರೆ ನಾನು ಮಾಡಿರುವ ಎಲ್ಲಾ ಪಾತ್ರಗಳಿಗಿಂತ ಹೆಚ್ಚು ಜನ ಗುರುತಿಸಿದ್ದು ವಿಕ್ರಾಂತ್ ಪಾತ್ರದಿಂದ. ಕರ್ನಾಟಕದ ನೆಟ್‌ವರ್ಕ್‌ ಸಿಗದ ಮೂಲೆಗೆ ಹೋದರೂ ‘ನೀವು ಗಟ್ಟಿಮೇಳದ ವಿಕ್ರಾಂತ್ ಅಲ್ವಾ?’ ಎಂದು ಗುರುತು ಹಿಡಿಯುತ್ತಾರೆ. ಇದು ನಿಜಕ್ಕೂ ಖುಷಿ ಕೊಡುತ್ತದೆ.

ವಿಕ್ರಾಂತ್ ಹಾಗೂ ಅಭಿ ನಡುವಿನ ವ್ಯತ್ಯಾಸವೇನು?
ವಿಕ್ರಾಂತ್ ಪಾತ್ರದ ಬಗ್ಗೆ ಹೇಳುವುದಾದರೆ ಅವನು ತುಂಬಾ ಉತ್ಸಾಹಿ ಹುಡುಗ. ಸದಾ ತಮಾಷೆ ಮಾಡಿಕೊಂಡು ಎಲ್ಲರನ್ನೂ ನಗಿಸಿಕೊಂಡು ಇರುವವನು. ಆದರೆ ವೈಯಕ್ತಿಕವಾಗಿ ನಾನು ಹಾಗಿಲ್ಲ. ನಾನು ಗಂಭೀರ ಸ್ವಭಾವದವನು. ನನ್ನದು ಸ್ವಲ್ಪ ಸೈಲೆಂಟ್ ವ್ಯಕ್ತಿತ್ವ. ಆದರೆ ಪಾತ್ರ ಮಾಡುವುದು ಕಷ್ಟ ಆಗಿಲ್ಲ. ಮಾಡಿದ ಪಾತ್ರವನ್ನು ಜನ ಒಪ್ಪಿಕೊಂಡು ಇಷ್ಟಪಟ್ಟಿದ್ದಾರೆ ಎನ್ನುವುದು ಸಂತಸದ ವಿಷಯ.

ಮೊದಲ ಸಿನಿಮಾದ ಅನುಭವ
ಸಿನಿಮಾ ಶೂಟಿಂಗ್‌ನ ಮೊದಲ ದಿನ ನಾನು ತುಂಬಾನೇ ಭಯಪಟ್ಟಿದ್ದೆ. ಆಗ ಅಂಬರೀಷ್ ಅವರು ‘ಯೇ ಮಗನೇ, ಇದೆಲ್ಲಾ ಇದ್ದಿದ್ದೆ. ಹೆದರಿಕೆ ಎಲ್ಲಾ ಬಿಟ್ ಬಿಟ್ಟು ಚೆನ್ನಾಗಿ ಮಾಡು, ಏನೋ ಹೆದರಿಕೆ ಪಡ್ಬೇಡ ಎಂದಿದ್ದರು’. ಅಂಬರೀಷ್ ಅವರ ಜೊತೆ ನಟಿಸಿದ್ದ ಫಸ್ಟ್ ಟೇಕ್‌ ಓಕೆ ಆಗಿತ್ತು. ಇದು ನನಗೆ ಜೀವಮಾನದಲ್ಲಿ ಮರೆಯಲಾಗದಂತಹದ್ದು.

ಕೈಯಲ್ಲಿರುವ ಸಿನಿಮಾಗಳು
ಸದ್ಯ ನನ್ನ ಕೈಯಲ್ಲಿ ಎರಡು ಸಿನಿಮಾಗಳಿವೆ. ‘ಫೆ.14’ ಹಾಗೂ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಫೆ.14 ಚಿತ್ರ ಹಾಸ್ಯಮಯ ಪ್ರೇಮಕಥೆಯನ್ನು ಹೊಂದಿದೆ. ಹದಿಹರೆಯದವರು ಹಾಗೂ ತಂದೆ–ತಾಯಿಗಳು ನೋಡಲೇಬೇಕಾದ ಚಿತ್ರವಿದು. ಇನ್ನೊಂದು ಚಿತ್ರ ಜೀ 5 ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತದೆ. ಅದರ ಶೂಟಿಂಗ್ ಶೇ 90 ಭಾಗ ಮುಗಿದಿದೆ.

ನಟನಾಗಿ ನೀವು ಮೆಚ್ಚುವ ಪಾತ್ರ
ನನಗೆ ಹೀರೊ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವುದಕ್ಕಿಂತ ಒಬ್ಬ ನಟನಾಗಿ ಇರುವುದು ಇಷ್ಟ. ಹೀರೊ ಆದರೆ ಹೀರೊ ಮಾತ್ರ ಆಗಿರಬೇಕು. ಆದರೆ ಒಬ್ಬ ನಟನಾದರೆ ಎಲ್ಲಾ ಬಗೆಯ ಪಾತ್ರಕ್ಕೂ ಜೀವ ನೀಡಬಹುದು.

ನಟನೆಗೆ ಬಂದಿಲ್ಲ ಅಂದಿದ್ರೆ
ನಾನು ಮೊದಲೇ ಹೇಳಿದಂತೆ ನಟನೆಗೆ ಬಂದಿಲ್ಲ ಅಂದಿದ್ರೆ ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದೆ. ಈಜು ಸ್ಪರ್ಧೆಯಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿದ್ದೆ ಅನ್ನಿಸುತ್ತದೆ.

ಡ್ರಗ್ಸ್ ಪ್ರಕರಣದ ಬಗ್ಗೆ ನಿಮ್ಮ ಮಾತು
ನಮ್ಮ ಮೇಲೆ ಇಂತಹ ಆರೋಪ ಬಂದು ಅದು ಮಾಧ್ಯಮಗಳಲ್ಲಿ ಪ್ರಸಾರ ಆದಾಗ ನಮಗಿಂತ ಜಾಸ್ತಿ ಚಿಂತೆಗೊಳಗಾಗುವುದು ನಮ್ಮ ಮನೆಯವರು. ಜಗತ್ತು ಏನೇ ಹೇಳಿದರು ತಲೆ ಕೆಡಿಸಿಕೊಳ್ಳದೇ ಮೊದಲು ನಮ್ಮ ಮನೆಯವರನ್ನು ನಂಬಿಸಬೇಕು. ನಾವು ಏನು ಎಂಬುದನ್ನು ಸಾಧಿಸಿ ಜಗತ್ತಿಗೆ ತೋರಿಸಬೇಕು. ನಾನು ತಪ್ಪು ಮಾಡಿದಿದ್ರೆ ಆವತ್ತು ನನ್ನನ್ನು ಆರೆಸ್ಟ್ ಮಾಡ್ತಾ ಇದ್ರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ನಾನು ಒಂದು ಸಿನಿಮಾವನ್ನು ಕಳೆದುಕೊಂಡೆ. ಎಲ್ಲವೂ ಸರಿಯಾಗಿ ಇದ್ದಿದ್ರೆ ಆ ಸಿನಿಮಾ ಮಾರ್ಚ್, ಏಪ್ರಿಲ್‌ನಲ್ಲಿ ಬಿಡುಗಡೆಯಾಗುತ್ತಿತ್ತು. ನಾನು ಎಲ್ಲರಿಗೂ ಹೇಳುವುದು ಏನೆಂದರೆ ನೀವು ತಪ್ಪು ಮಾಡಿದ್ರೆ ಖಂಡಿತಾ ಸಿಕ್ಕಿಹಾಕಿಕೊಳ್ತೀರಾ. ನೀವು ಒಳ್ಳೆಯದು ಮಾಡಲು ಬಯಸಿದರೆ ದೇವರೇ ನಿಮಗೆ ದಾರಿ ತೋರುತ್ತಾನೆ, ಆ ಸಿನಿಮಾ ಹೋಯ್ತು ಅಂತ ಒಂದಿಷ್ಟು ದಿನ ಖಿನ್ನತೆಗೆ ಒಳಗಾಗಿದ್ದೆ. ಆದರೆ ಈಗ ಅದಕ್ಕಿಂತ ಒಳ್ಳೆಯ ಕಥೆ ಇರುವ ಇನ್ನೊಂದು ಸಿನಿಮಾ ಸಿಕ್ಕಿದೆ ಅದೇ ಖುಷಿ.

ಗಟ್ಟಿಮೇಳ ತಂಡದ ಬಗ್ಗೆ ಹೇಳುವುದಾದರೆ
ಸಿನಿಮಾ ಎಂದರೆ ಒಂದು ನಿರ್ದಿಷ್ಟ ಅವಧಿಯವರೆಗೆ ಶೂಟಿಂಗ್ ಇರುತ್ತದೆ. ಆದರೆ ಧಾರಾವಾಹಿ ಹಾಗಲ್ಲ. ಕಳೆದ ಎರಡು ವರ್ಷದಿಂದ ಧಾರಾವಾಹಿ ಪ್ರಸಾರವಾಗುತ್ತಿದೆ. ನಾವು ಮನೆಯಲ್ಲಿ ಇರುವುದಕ್ಕಿಂತ ಹೆಚ್ಚು ಧಾರಾವಾಹಿ ತಂಡದ ಜೊತೆ ಕಾಲ ಕಳೆಯುತ್ತೇವೆ. ತೆರೆಯ ಹಿಂದೆ ನಾವು ಸ್ವಂತ ಅಣ್ಣ–ತಮ್ಮ, ಅಮ್ಮ–ಅಪ್ಪ ಅನ್ನುವ ಹಾಗೇ ಆರ್ಗಿತೀವಿ. ಇದು ನನಗೆ ಕುಟುಂಬದ ಥರವೇ ಆಗಿದೆ.

ನಟನೆ ಎಂದರೆ ನಿಮ್ಮ ಮಾತಲ್ಲಿ
ನಾವು ಈ ಕ್ಷೇತ್ರದಲ್ಲಿ ಎಷ್ಟು ಗೌರವ, ಶ್ರದ್ಧೆ ಹಾಗೂ ನಂಬಿಕೆ ಇಟ್ಟು ಮಾಡುತ್ತೇವೊ ಅಷ್ಟು ಅದು ನಮ್ಮನ್ನು ಮೇಲಕ್ಕೆ ಕರೆದೊಯ್ಯುತ್ತದೆ. ಶೋಕಿಗಾಗಿ ನಟನೆ ಮಾಡುವುದಲ್ಲ. ಕಷ್ಟಪಟ್ಟು ಸಾಧಿಸಬೇಕು ಎನ್ನುವ ಛಲದಲ್ಲಿ ಮುಂದುವರಿದರೆ ಮಾತ್ರ ನಟನೆ ಒಲಿಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು