ಸೋಮವಾರ, ಆಗಸ್ಟ್ 26, 2019
21 °C

ಕನ್ನಡ ಕೋಗಿಲೆಯಲ್ಲಿ ‘ಅಲಿ’ ರಾಗ

Published:
Updated:
Prajavani

‘ನನ್ನನ್ನು ಈ ಮಟ್ಟಕ್ಕೆ ಬೆಳೆಸಿರುವುದು ಕರ್ನಾಟಕದ ಜನ. ಮುಂದೆ ನಾನು ಹೇಗೆ ಬೆಳೆಯಬೇಕೆಂಬುದನ್ನು ಅವರೇ ನಿರ್ಧರಿಸಲಿ...’ ಹೀಗೆ ಹೇಳಿ ಮಾತಿಗಿಳಿದರು ಕಲರ್ಸ್‌ ಕನ್ನಡ ವಾಹಿನಿಯ ‘ಕನ್ನಡ ಕೋಗಿಲೆ’ ಎರಡನೇ ಆವೃತ್ತಿಯ ಗ್ರ್ಯಾಂಡ್‌ ಫಿನಾಲೆಯ ವಿಜೇತ ಕಾಸಿಂ ಅಲಿ.

ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಸಾವಸಗಿ ಗ್ರಾಮದ ಈ ಹುಡುಗ ಸಂಗೀತಗಾರನಾಗುವ ಕನಸು ಕಂಡವನೂ ಅಲ್ಲ. ಓದಿದ್ದು ಡಿ–ಫಾರ್ಮಾ. ಪೊಲೀಸ್‌ ಆಗಬೇಕೆನ್ನುವ ಕನಸು ಹೊತ್ತಿದ್ದ. ಅಲಿ ಬದುಕಿನಲ್ಲಿ ಸಂಭವಿಸಿದ ಅವಘಡವೊಂದು ಈ ಕ್ಷೇತ್ರದತ್ತ ಅವರನ್ನು ತಿರುಗಿಸಿತು.

ಆರು ವರ್ಷಗಳ ಹಿಂದೆ ಅಲಿ ಅವರ ಬೆನ್ನುಹುರಿಗೆ ಏಟು ಬಿದ್ದಿತ್ತು. ಬಹಳ ಕಾಲ ಹಾಸಿಗೆ ಹಿಡಿದಿರಬೇಕಾದ ದಿನಗಳು ಎದುರಾದವು. ಆಗ ಬದುಕಿಗೆ ಚೈತನ್ಯ ಕೊಟ್ಟದ್ದೇ ಸಂಗೀತ. ಹಾಸಿಗೆಯಲ್ಲಿದ್ದುಕೊಂಡೇ ಸಂಗೀತ ಗುನುಗತೊಡಗಿದರು. ಹಾನಗಲ್‌ನ ಕೋಮಾರ್‌ ಅವರು ಅಲಿಗೆ ಹಿಂದೂಸ್ತಾನಿ ಸಂಗೀತ ಕಲಿಸಿದರು.
‘ಹಾಗೇ ಗುನುಗುತ್ತಿದ್ದ ಸಾಲುಗಳು ರಾಗವಾಗಿ ಹೊರಹೊಮ್ಮಿದವು. ಗುರುಗಳ ಸಾಥ್‌ ಕೂಡಾ ಇತ್ತು. ನಿಧಾನಕ್ಕೆ ಜಿಲ್ಲಾಮಟ್ಟದ ಸ್ಪರ್ಧೆಗಳಿಗೆ ಹೋಗಲು ಆರಂಭಿಸಿದೆ’ ಎಂದು ನೆನಪು ತೆರೆದಿಟ್ಟರು ಅಲಿ.

‘2017ರ ಡಿಸೆಂಬರ್‌ ಅಂತ್ಯದಿಂದ ಇದುವರೆಗೆ ಸಂಗೀತದ ಬದುಕಿನಲ್ಲಿ ಗೆಲುವಿನ ದಿನಗಳೇ. 12 ಜಿಲ್ಲೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಗೆಲ್ಲುತ್ತಲೇ ಬಂದೆ. ಈ ಗೆಲುವು ಗಮನಿಸಿದ ಷಾ ಮ್ಯೂಸಿಕ್‌ ಸಂಸ್ಥೆಯವರು ಉತ್ತರ ಕರ್ನಾಟಕದ ‘ದಿ ಬೆಸ್ಟ್‌ ಮೇಲ್‌ ಸಿಂಗರ್‌’ ಪ್ರಶಸ್ತಿಯನ್ನೂ ನೀಡಿದರು. ಹೀಗೆ ಹಂತ ಹಂತವಾಗಿ ಗುರುತಿಸಿಕೊಂಡೆ. 12 ಜಿಲ್ಲಾಮಟ್ಟದ ಪ್ರಶಸ್ತಿಗಳು, ವಿವಿಧ ಅವಕಾಶಗಳು ಒಂದೇ ವರ್ಷದಲ್ಲಿ ಹುಡುಕಿಕೊಂಡು ಬಂದವು. ನಂತರ ವೇದಿಕೆ ಕೊಟ್ಟದ್ದು ಆಯುಷ್‌ ಟಿ.ವಿ ಮತ್ತು ಚಂದನ ವಾಹಿನಿ’ ಎಂದರು ಅಲಿ.

‘ನನಗೊಂದು ದೊಡ್ಡ ವೇದಿಕೆ ಬೇಕಿತ್ತು. ಅವಕಾಶಕ್ಕಾಗಿ ಹುಡುಕುತ್ತಿದ್ದೆ. ಕನ್ನಡ ಕೋಗಿಲೆ ಸೀಸನ್‌– 1ರ ವಿಜೇತ ದೊಡ್ಡಪ್ಪ ಅವರು ಇಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದರು. ಅಳುಕುತ್ತಲೇ ಬಂದಿದ್ದೆ. ಮೊದಲ ಮೂರು ಹಂತಗಳನ್ನು ದಾಟಿ ನಾಲ್ಕನೇ ಹಂತದ ಮೆಗಾ ಆಡಿಷನ್‌ನಲ್ಲಿ ಭಾಗವಹಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ, ನಾನು ಗೆಲ್ಲಬೇಕು ಎಂಬ ಒಂದೇ ಗುರಿ ಇತ್ತು’ ಎಂದು ‘ಕೋಗಿಲೆಯ’ ಪ್ರವೇಶದ ಕ್ಷಣಗಳನ್ನು ನೆನಪಿಸಿಕೊಂಡರು.

‘ಮೆಗಾ ಆಡಿಷನ್‌ನಲ್ಲಿ ‘ನೂರು ಕಣ್ಣು ಸಾಲದು. ನಿನ್ನ ನೋಡಲು...’ ಈ ಹಾಡು ಹಾಡಿದ್ದೆ. ಅದನ್ನು ಕೇಳಿದ ತೀರ್ಪುಗಾರರ ಕಣ್ಣುಗಳು ತೇವಗೊಂಡಿದ್ದವು. ಜೋಗಿ ಸುನೀತಾ ಅವರು ತೀರಾ ಭಾವುಕರಾಗಿದ್ದರು’ ಎಂದು ನೆನಪಿಸಿಕೊಂಡರು ಅಲಿ.

ಫಿನಾಲೆಯ ಹಾಡು, ‘ಮಹಾಪ್ರಾಣ ದೀಪಂ ಶಿವಂ ಶಿವಂ… ಮಹೋಂಕಾರ ರೂಪಂ ಶಿವಂ... ಈ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಹಾಡಿನ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾಗಿದೆ.

ಈ ಸ್ಪರ್ಧೆಯಲ್ಲಿ ಗೆದ್ದ ಮೊತ್ತದ ಒಂದು ಭಾಗವನ್ನು ಅಲಿ ಪ್ರವಾಹ ಸಂತ್ರಸ್ತರಿಗಾಗಿ ವಿನಿಯೋಗಿಸಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಬಳಿಯ ಬಸವನಾಳ ಗ್ರಾಮಕ್ಕೆ ತೆರಳಿ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಅಲಿ ಅವರ ಜತೆ ಹಲವು ದಾನಿಗಳೂ ಕೈ ಜೋಡಿಸಿದ್ದಾರೆ.

ಅಲಿ ತಂದೆ ದಾವಲ್‌ ಸಾಬ್‌ ಹಾನಗಲ್‌ನಲ್ಲಿ ಕಬ್ಬಿನ ರಸ ಮಾರುತ್ತಾರೆ. ತಾಯಿ ಅಮೀರ್‌ಬಿ ಗೃಹಿಣಿ. ಸಹೋದರ ಎಂಜಿನಿಯರಿಂಗ್‌ ಓದುತ್ತಿದ್ದಾರೆ. ಅಸಹಾಯಕನಾದಾಗ ಎಂದೂ ನಕಾರಾತ್ಮಕವಾಗಿ ಯೋಚಿಸಲಿಲ್ಲ. ಏನಾದರೂ ಸಾಧಿಸಬೇಕು. ಹೆತ್ತವರಿಗೆ ಕೊಡುಗೆ ಅರ್ಪಿಸಬೇಕು ಎಂಬ ಗುರಿ ಇತ್ತು. ಆ ಕನಸು ಈಡೇರಿದೆ. ಮುಖ್ಯವಾಗಿ ಇದೆಲ್ಲವೂ ನಾಡಿನ ಜನರಿಗೆ ಅರ್ಪಣೆಯಾಗಬೇಕು ಎಂದರು ಅಲಿ.

Post Comments (+)