ಮಂಗಳವಾರ, ನವೆಂಬರ್ 19, 2019
21 °C

ಕಾವ್ಯಶ್ರೀಗೆ ಪುನೀತ್‌ ಜತೆ ನಟಿಸುವಾಸೆ

Published:
Updated:
ಕಾವ್ಯಶ್ರೀ ಗೌಡ

ಕಿರುತೆರೆಯ ನಟಿ ಕಾವ್ಯಶ್ರೀ ಗೌಡ ಅವರ ಹುಟ್ಟೂರು ಚನ್ನಪಟ್ಟಣ. ಆದರೆ, ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿಯೇ. ಚಿಕ್ಕವಯಸ್ಸಿನಿಂದಲೇ ಟಿ.ವಿ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಬೆಳೆಸಿಕೊಂಡಿದ್ದ ಅವರಿಗೆ, ಮನೆಯಲ್ಲಿ ಅವರ ಆಸೆಯನ್ನು ಯಾರೂ ಬೆಂಬಲಿಸಿರಲಿಲ್ಲ. ಸಾಂಪ್ರದಾಯಿಕ ಮನೆಯ ವಾತಾವರಣದಲ್ಲಿ ನಟನೆ, ಮೇಕಪ್‌ ಬಗ್ಗೆ ಮಾತೂ ಆಡುವ ಹಾಗಿರಲಿಲ್ಲ. ಹಾಗಾಗಿ ಮನದ ಆಸೆಯನ್ನು ಹಾಗೆಯೇ ಮುಚ್ಚಿಟ್ಟುಕೊಂಡಿದ್ದರು.

ಪದವಿಯಲ್ಲಿ ಪತ್ರಿಕೋದ್ಯಮ ಓದಿದ್ದ ಕಾವ್ಯಶ್ರೀ ಗೌಡ, ಟಿ.ವಿಯಲ್ಲಾದರೂ ಕಾಣಿಸಿಕೊಳ್ಳಬಹುದು ಎಂದು ನಿರೂಪಣೆಯತ್ತ ಹೊರಳಿದರು. ಟಿ.ವಿ ಚಾನೆಲ್‌ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು. ಅಲ್ಲಿಂದ ಅವರ ಕನಸಿಗೆ ರೆಕ್ಕೆ ಪುಕ್ಕ ಮೂಡಿತು. ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಅವರು, ಏನಾಗುತ್ತದೋ ಆಗಲಿ ಎಂಬ ಭಾವದಿಂದ ಕಿರುತೆರೆ ಆಡಿಷನ್‌ಗಳಲ್ಲಿ ಭಾಗವಹಿಸಲು ಆರಂಭಿಸಿದರು.

‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟ ಗೌರಿ ಮದುವೆ’ ಜನಪ್ರಿಯ ಧಾರಾ ವಾಹಿಯ ಮುಂದುವರಿದ ಭಾಗ ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಮಂಗಳ ಪಾತ್ರದಲ್ಲಿ ನಟಿಸುತ್ತಿರುವ ಕಾವ್ಯಶ್ರೀ ಗೌಡ, ನಟಿಸಿದ ಮೊದಲ ಧಾರಾವಾಹಿ ‘ಮನೆಯೇ ಮಂತ್ರಾಲಯ’. ಅದರಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ಈ ಸಣ್ಣ ಪಾತ್ರದಲ್ಲೇ ಗಮನ ಸೆಳೆಯುವ ಅಭಿನಯ ತೋರಿದ ಇವರಿಗೆ, ಅದೇ ಧಾರಾವಾಹಿಯ ನಿರ್ದೇಶಕ ಕೆ.ಎಸ್‌.ರಾಮ್‌ಜಿ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನೀಡಿದ್ದಾರೆ.

‘ನಾನು ರಾಮ್‌ಜಿ ಅವರ ‘ಪುಟ್ಟಗೌರಿ ಮದುವೆ’ ಧಾರಾವಾಹಿ ನೋಡುತ್ತಿದ್ದೆ. ಆ ಜನಪ್ರಿಯ ಧಾರಾವಾಹಿಯ ಮುಂದುವರಿದ ಭಾಗದಲ್ಲಿ ನಟಿಸಲು ಅವಕಾಶ ಸಿಕ್ಕಾಗ ಖುಷಿಯಿಂದ ಒಪ್ಪಿಕೊಂಡೆ’ ಎನ್ನುತ್ತಾರೆ ಕಾವ್ಯಶ್ರೀ.

ಆಗ ‘ಪುಟ್ಟಗೌರಿ ಮದುವೆ’ ಕಿರುತೆರೆಯಲ್ಲೇ ಹೆಚ್ಚು ಜನಪ್ರಿಯ ಧಾರಾವಾಹಿಯಾಗಿತ್ತು. ಅದರಲ್ಲಿನ ಗೌರಿ, ಹಿಮ, ಮಹೇಶನ ಪಾತ್ರಗಳು ವೀಕ್ಷಕರಿಗೆ ಹೆಚ್ಚು ಆಪ್ತವಾಗಿದ್ದವು. ಆ ಧಾರಾವಾಹಿಯ ಎಳೆ ಹಿಡಿದು, ಮುಂದುವರಿದ ಭಾಗದಲ್ಲಿ ನಟಿಸಬೇಕು ಎಂದು ನಿರ್ದೇಶಕರು ಹೇಳಿದಾಗ, ಆರಂಭದಲ್ಲಿ ಭಯಪಟ್ಟಿದ್ದೆ. ನನಗೆ ನಟನೆಯ ಗಂಧಗಾಳಿ ಗೊತ್ತಿರಲಿಲ್ಲ. ಹೊಸ ಗೌರಿಯನ್ನು ಜನ ಹೇಗೆ ಸ್ವೀಕರಿಸುತ್ತಾರೋ, ಹಳೆ ಗೌರಿ ಪಾತ್ರಕ್ಕೆ ನ್ಯಾಯ ಸಲ್ಲಿಸಬಹುದಾ? ಎಂದು ಆತಂಕಪಟ್ಟಿದ್ದೆ. ಆದರೆ, ನಟ ರಕ್ಷಿತ್‌ ಹಾಗೂ ಅಜ್ಜಮ್ಮ ಪಾತ್ರಧಾರಿ ಚಂದ್ರಕಲಾ, ನಿರ್ದೇಶಕ ರಾಮ್‌ಜಿ ನನ್ನಲ್ಲಿ ಧೈರ್ಯ ತುಂಬಿದರು ಎಂದು ಕಾವ್ಯಶ್ರೀ ವಿನಮ್ರವಾಗಿ ನುಡಿದರು.

‘ಮಂಗಳ ಗೌರಿ ಅಳುಮುಂಜಿಯಲ್ಲ. ತನ್ನ ಮನೆಗಾಗಿ, ಗಂಡನಿಗಾಗಿ ತ್ಯಾಗ ಮಾಡುವವಳು. ಭಾವನಾತ್ಮಕ ಮನಸ್ಸಿರುವವಳು. ತನ್ನ ಮನಸ್ಸಿನ ನೋವನ್ನು ಮುಚ್ಚಿಟ್ಟುಕೊಂಡು ಸದಾ ಖುಷಿಯಾಗಿರುವ ಪಾತ್ರವಿದು. ಆದರೆ, ನಿಜ ಜೀವನದಲ್ಲಿ ನಾನು ಮಂಗಳಗೌರಿಯಷ್ಟು ಅಳುಮುಂಜಿಯಲ್ಲ. ತುಂಬಾ ಮಾತನಾಡುತ್ತೇನೆ. ಯಾವಾಗಲೂ ನಗುನಗುತ್ತಾ ಇರುವ ನನಗೆ ಯಾರಾದರೂ ಬೇಗ ಸ್ನೇಹಿತರಾಗುತ್ತಾರೆ. ಆದರೆ ನನ್ನವರಿಗಾಗಿ ನೋವನ್ನು ಮುಚ್ಚಿಡುವ ಸ್ವಭಾವ ನನ್ನಲ್ಲೂ ಇದೆ. ಹಾಗಾಗಿ ಈ ಪಾತ್ರ ನನಗಿಷ್ಟ’ ಎಂದು ತಮ್ಮ ಪಾತ್ರ ಮತ್ತು ವ್ಯಕ್ತಿತ್ವದ ಬಗ್ಗೆಯೂ ಮನದ ಮಾತು ಹೇಳಿದರು.

ಈಗ ಕಾಣಿಸಿಕೊಳ್ಳುತ್ತಿರುವ ಪಾತ್ರಕ್ಕಿಂತ ಸಂಪೂರ್ಣ ತದ್ವಿರುದ್ಧವಾದ ಪಾತ್ರದಲ್ಲಿ, ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಕಾವ್ಯಶ್ರೀಗೆ ತುಂಬಾ ಇಷ್ಟವಂತೆ. ಜೀವನದಲ್ಲಿ ಒಮ್ಮೆಯಾದರೂ ನಟ ಪುನೀತ್‌ ರಾಜ್‌ಕುಮಾರ್‌ ಜೊತೆ ಸಣ್ಣ ಪಾತ್ರದಲ್ಲಾದರೂ ನಟಿಸಬೇಕು ಎಂಬ ಆಸೆ ಇಟ್ಟುಕೊಂಡಿರುವ ಅವರು, ‘ನನಗೆ ಸಿನಿಮಾದಲ್ಲಿ ಅವಕಾಶ ಬಂದರೆ ಖಂಡಿತಾ ಮಾಡುತ್ತೇನೆ’ ಎಂದು ಮನದ ಇಂಗಿತವನ್ನು ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)