ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive-Interview| ಚಿತ್ಕಳಾರೊಳಗಿನ ಅಮ್ಮಮ್ಮ

Last Updated 21 ನವೆಂಬರ್ 2020, 6:56 IST
ಅಕ್ಷರ ಗಾತ್ರ
ADVERTISEMENT
""

ಒಂದು ಧಾರಾವಾಹಿ ಜನಮನ್ನಣೆ ಗಳಿಸಲು ಕಾರಣಗಳು ಹಲವಿರಬಹುದು. ಆದರೆ ಆ ಧಾರಾವಾಹಿಯಲ್ಲಿನ ಒಂದು ಪಾತ್ರ ಜನಮಾನಸದಲ್ಲಿ ಸದಾ ಜೀವಂತವಾಗಿರಬೇಕು ಎಂದರೆ ಆ ಪಾತ್ರಕ್ಕೆ ಜೀವ ತುಂಬುವ ವ್ಯಕ್ತಿ ಮುಖ್ಯ ಕಾರಣ. ಧಾರಾವಾಹಿಯಲ್ಲಿ ಪಾತ್ರವೊಂದು ವೀಕ್ಷಕರ ಮನೋಭಾವವನ್ನು ಬದಲಿಸಲು ಸಾಧ್ಯವಿದೆಯೇ ಎಂದು ಕೇಳಿದರೆ ಹೌದು ಖಂಡಿತ ಸಾಧ್ಯವಿದೆ ಎನ್ನುವಂತಿದೆ ಕನ್ನಡತಿಯ ಅಮ್ಮಮ್ಮ ಅಥವಾ ರತ್ನಮಾಲಾ ಪಾತ್ರ. ಆಕೆಯ ಪಾತ್ರದ ಹೆಸರು ರತ್ನಮಾಲಾ ಆದರೂ ಅವರು ಅಮ್ಮಮ್ಮ ಆಗಿಯೇ ಕನ್ನಡಿಗರಿಗೆ ಪರಿಚಿತರು. ಕಲರ್ಸ್ ಕನ್ನಡದ ಕನ್ನಡತಿಯ ರತ್ನಮಾಲಾ ಪಾತ್ರಕ್ಕೆ ಜೀವ ತುಂಬಿದವರು ಚಿತ್ಕಳಾ ಬಿರಾದಾರ್‌. ಇವರು ತಮ್ಮ ವೈಯಕ್ತಿಕ ಜೀವನ, ನಟನೆ ಹಾಗೂ ಅಭಿಮಾನಿಗಳ ಬಗ್ಗೆ ಪ್ರಜಾವಾಣಿ ಜೊತೆ ಮಾತನಾಡಿದ್ದಾರೆ.

ನಿಮ್ಮ ಬಗ್ಗೆ ಒಂದೆರಡು ಮಾತು?

ನಾನು ಮೂಲತಃ ಕಲಬುರ್ಗಿಯವಳು. ನನ್ನ ತಂದೆ–ತಾಯಿ ಇಬ್ಬರೂ ಕನ್ನಡ ಪ್ರಾಧ್ಯಾಪಕರು. ಆ ಕಾರಣಕ್ಕೆ ಮನೆಯಲ್ಲಿ ಕನ್ನಡದ ಸೊಗಡು ಹರಡಿತ್ತು. ಆದರೆ ನಾನು ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವಳು. ಮದುವೆಯಾಗಿ ಬೆಂಗಳೂರಿಗೆ ಬಂದು ಸದ್ಯ ಇಲ್ಲಿಯೇ ನೆಲೆಸಿದ್ದೇನೆ. ಮದುವೆಯಾದ ಹೊಸತರಲ್ಲಿ ಮೂರು ವರ್ಷಗಳ ಕಾಲ ಕಾಲೇಜು ಒಂದರಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದೆ. ನನ್ನ ಗಂಡ ಸಾಫ್ಟ್‌ವೇರ್ ಎಂಜಿನಿಯರ್‌ ಹಾಗೂ ನನಗಿಬ್ಬರು ಮಕ್ಕಳು. ಇದು ನನ್ನ ಕಿರು ಪರಿಚಯ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ನಿಮ್ಮ ಬಾಲ್ಯದ ದಿನಗಳನ್ನು ನೆನೆಯುವುದಾದರೆ...

ನನಗೆ ಸಣ್ಣ ವಯಸ್ಸಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ವಿಪರೀತ ಒಲವು. ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೆ. ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ನೃತ್ಯ, ನಾಟಕ ಎಲ್ಲದರಲ್ಲೂ ಮುಂದಿದ್ದೆ. ಆದರೆ ತಂದೆ–ತಾಯಿಗೆ ಮಗಳು ಎಲ್ಲಿ ಓದುವುದನ್ನು ನಿಲ್ಲಿಸುತ್ತಾಳೋ ಎಂಬ ಆತಂಕ. ಆ ಕಾರಣಕ್ಕೆ ಆಗ ನಾನು ಓದಿನತ್ತ ಹೆಚ್ಚು ಗಮನ ನೀಡಿದ್ದೆ. ಅಲ್ಲದೇ ನಾನು ಸಣ್ಣ ವಯಸ್ಸಿನಲ್ಲಿ ಕಂಡ ಕನಸಿನಂತೆ ಪ್ರಾಧ್ಯಾಪಕಿಯೂ ಆದೆ.

ರಂಗಭೂಮಿಯ ನಂಟು ಬೆಳೆದಿದ್ದು ಹೇಗೆ?

ನಾನು ಮದುವೆಯಾಗಿ ಕೆಲ ವರ್ಷಗಳ ನಂತರ ಜರ್ಮನಿಗೆ ಹೋಗಬೇಕಾಯ್ತು. ಅಲ್ಲಿಂದ ಬಂದ ಮೇಲೆ ರಂಗಭೂಮಿಯಲ್ಲಿ ತೊಡಗಿಕೊಳ್ಳುವ ಮನಸ್ಸಾಗಿತ್ತು. ರಂಗಶಂಕರದ ಬಳಿ ನಮ್ಮ ಮನೆಯಿತ್ತು. ಒಮ್ಮೆ ನಾಟಕ ನೋಡಲು ಹೋದಾಗ ನಮ್ಮ ಪತಿಯವರ ಸ್ನೇಹಿತರ ಸಹಕಾರದಿಂದ ರಂಗಭೂಮಿಗೆ ಪ್ರವೇಶ ಮಾಡಿದೆ.

ಕಿರುತೆರೆ ಪಯಣ ಆರಂಭವಾಗಿದ್ದು ಹೇಗೆ?

ನಾನು ರಂಗದಲ್ಲಿ ನಾಟಕಗಳನ್ನು ಮಾಡಿಕೊಂಡಿದ್ದೆ. ಹಿರಿಯ ಕಲಾವಿದೆ ಸುಂದರಶ್ರೀ ಅವರ ಜೊತೆ ನಾಟಕಗಳನ್ನು ಮಾಡುತ್ತಿದ್ದೆ. ಅವರು ಒಮ್ಮೆ ನನಗೆ ‘ಧಾರಾವಾಹಿಯೊಂದಕ್ಕೆ ಮಗುವನ್ನು ನೋಡಿಕೊಳ್ಳುವ ಹೆಂಗಸಿನ ಪಾತ್ರದಲ್ಲಿ ಅಭಿನಯಿಸುವವರು ಬೇಕು. ಒಂದೆರಡು ದಿನದ ಶೂಟಿಂಗ್ ಅಷ್ಟೆ. ನೀನು ಅದನ್ನು ಮಾಡು’ ಎಂದು ಒತ್ತಾಯ ಮಾಡಿದ್ದರು. ನಾನು ಸಿನಿಮಾ, ಧಾರಾವಾಹಿ ಸಹವಾಸವೇ ಬೇಡ ಎಂದುಕೊಂಡಿದ್ದವಳು. ಆದರೆ ಅವರ ಒತ್ತಾಯಕ್ಕೆ ಕಲಾಗಂಗ್ರೋತಿ ಮಂಜು ಅವರ ನಿರ್ದೇಶನದ ‘ಬಂದೇ ಬರುತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದ್ದೆ. ಹೀಗೆ ಆರಂಭವಾದ ಕಿರುತೆರೆ ಪಯಣ ‘ಕನ್ನಡತಿ’ವರೆಗೆ ಬಂದು ನಿಂತಿದೆ.

ಇಲ್ಲಿಯವರೆಗೆ ಎಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೀರಿ?

ಇಲ್ಲಿಯವರೆಗೆ ನಾನು ಮೂವತ್ತೈದು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಜನ ನನ್ನನ್ನು ಗುರುತಿಸಲು ಆರಂಭಿಸಿದ್ದು ಉತ್ತರಕರ್ನಾಟಕ ಭಾಷೆಯ ಹಾಸ್ಯಮಯ ಧಾರಾವಾಹಿ ‘ನೂರೆಂಟು ಸುಳ್ಳು’ ಮೂಲಕ. ನಂತರ ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿಯ ತಮಿಳು ಅಯ್ಯಂಗಾರ್ ಮಹಿಳೆಯ ಪಾತ್ರದಿಂದ. ‘ಅಗ್ನಿಸಾಕ್ಷಿ’, ‘ಮಾನಸ ಸರೋವರ’, ‘ಸುಬ್ಬಲಕ್ಷ್ಮಿ ಸಂಸಾರ’, ‘ಆರತಿಗೊಬ್ಬ ಕೀರ್ತಿಗೊಬ್ಬ’ ಹೀಗೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಆದರೆ ಕನ್ನಡತಿಯ ಅಮ್ಮಮ್ಮ ಅಥವಾ ರತ್ನಮಾಲಾ ಪಾತ್ರ ನನ್ನನ್ನು ಬೇರೆಯದೇ ದಿಕ್ಕಿನೆಡೆಗೆ ಕರೆದ್ಯೋದಿದೆ.

ಕನ್ನಡತಿ ಧಾರಾವಾಹಿ ಹಾಗೂ ಅಮ್ಮಮ್ಮ ಪಾತ್ರದ ಬಗ್ಗೆ ನಿಮ್ಮ ಮಾತು?

ಪ್ರತಿಯೊಬ್ಬ ಕಲಾವಿದರಿಗೂ ನಾವು ಇಂತಹದ್ದೊಂದು ಪಾತ್ರ ಮಾಡಬೇಕು ಎಂಬ ಹಂಬಲವಿರುತ್ತದೆ. ಆದರೆ ನಾನು ಯಾವತ್ತೂ ಇಂತಹದ್ದೇ ಪಾತ್ರ ಮಾಡಬೇಕು ಎಂದು ಅಪೇಕ್ಷೆ ಪಟ್ಟವಳಲ್ಲ. ಆದರೆ ರತ್ನಮಾಲಾ ಪಾತ್ರ ಮಾಡುತ್ತಾ ಮಾಡುತ್ತಾ ನನಗನ್ನಿಸಿದ್ದು ರತ್ನಮಾಲಾಳಂತಹ ಅನೇಕ ಆದರ್ಶಪ್ರಾಯ ಮಹಿಳೆಯರು ನಮ್ಮ ಸಮಾಜದಲ್ಲಿ ಹಲವರಿದ್ದಾರೆ. ಮನೆ, ಸಂಸಾರ, ಜೀವನ, ಉದ್ಯೋಗದೊಂದಿಗೆ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಹೊತ್ತು ಮುಂದೆ ಸಾಗಿ ಯಶಸ್ಸು ಕಂಡಿರುತ್ತಾರೆ. ನಾನು ಸುಧಾಮೂರ್ತಿ ಅವರಂತಹ ಆದರ್ಶಪ್ರಾಯರನ್ನು ಆರಾಧಿಸುತ್ತೇನೆ. ಬಹುಶಃ ಆ ಆರಾಧನೆಯೇ ನನಗೆ ರತ್ನಮಾಲಾಳಂತಹ ತೂಕದ ಪಾತ್ರಕ್ಕೆ ಜೀವ ನೀಡಲು ಸಾಧ್ಯವಾಗಿದ್ದು ಅನ್ನಿಸುತ್ತದೆ. ಹಲವು ಬಾರಿ ತಾಯಿಯ ಪಾತ್ರವನ್ನೇ ಮಾಡಿದ್ದೆ. ಆದರೆ ಇದು ತುಂಬಾ ಭಿನ್ನವಾದದ್ದು. ಇದನ್ನು ಸೃಷ್ಟಿ ಮಾಡಿದ ಪರಮೇಶ್ವರ್ ಗುಂಡ್ಕಲ್‌ಗೆ ಧನ್ಯವಾದ ಹೇಳಬೇಕು.

ಅಮ್ಮಮ್ಮ ಪಾತ್ರ ನಿಮ್ಮ ಜೀವನದಲ್ಲಿ ತಂದ ಬದಲಾವಣೆ?

ನಟನೆ ಎಂದು ಬಂದರೆ ನಾನು ಹಿಂದೆ ಮಾಡಿದ ಪಾತ್ರಗಳಿಗೂ ಇದಕ್ಕೂ ತುಂಬಾನೇ ವ್ಯತ್ಯಾಸವಿದೆ. ಯಾಕೆಂದರೆ ಇದು ತುಂಬಾ ಸಮತೋಲಿತ ಪಾತ್ರ. ಕ್ಯಾಮೆರಾ ಎದುರು ನಟನೆ ಮಾಡುವುದಕ್ಕಿಂತ ನಾನು ಆ ಪಾತ್ರವೇ ಆಗಿ ಕ್ಯಾಮೆರಾ ಮುಂದೆ ನಿಲ್ಲಬೇಕಾಗುತ್ತದೆ. ಆ ಪಾತ್ರದ ಗಾಂರ್ಭೀಯತೆಯೇ ಹಾಗಿದೆ. ನನ್ನನ್ನು ಅಮ್ಮಮ್ಮಳಾಗಿ ಬದಲಿಸಿದ ಶ್ರೇಯ ನಮ್ಮ ನಿರ್ದೇಶಕ ಯಶವಂತ್ ಅವರಿಗೆ ಹೋಗಬೇಕು. ಚಿತ್ಕಳಾಳಾಗಿ ಇಷ್ಟೊಂದು ಸ್ಪಷ್ಟ ಕನ್ನಡ ನನಗೆ ಬರುತ್ತದೆ ಎಂಬುದು ಗೊತ್ತಿರಲಿಲ್ಲ. ಅದನ್ನು ತಿಳಿಸಿದ್ದು ಈ ಧಾರಾವಾಹಿ ಹಾಗೂ ಪಾತ್ರ.

ಅಮ್ಮಮ್ಮ ಪಾತ್ರ ಸೃಷ್ಟಿಸಿದ ಟ್ರೆಂಡ್ ಬಗ್ಗೆ ನಿಮ್ಮ ಮಾತು...

ಅಮ್ಮಮ್ಮ ಪಾತ್ರ ಇಷ್ಟರ ಮಟ್ಟಿಗೆ ಜನರ ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ಬಹುಶಃ ಯಾರೂ ಊಹಿಸಿರಕ್ಕಿಲ್ಲ. ಅಷ್ಟರಮಟ್ಟಿಗೆ ಜನ ಈ ಪಾತ್ರವನ್ನು ಹಚ್ಚಿಕೊಂಡಿದ್ದಾರೆ. ಎಷ್ಟೋ ಜನ ನನಗೆ, ನಿರ್ದೇಶಕರಿಗೆ ಸಂದೇಶಗಳನ್ನು ಕಳುಹಿಸುತ್ತಾರೆ. ಅಮ್ಮಮ್ಮನ ಪಾತ್ರವನ್ನು ಸಾಯಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಎಷ್ಟೋ ಜನ ಅವರೇ ಮುಂದಿನ ಕತೆಯನ್ನು ಬರೆದು ಬಿಡುತ್ತಾರೆ. ಅಮ್ಮಮ್ಮನಿಗೆ ಯುನಾನಿ, ಆಯುರ್ವೇದದ ಔಷಧಿ ಕೊಡಿಸಿ ಅವರನ್ನು ಬದುಕಿಸಿ ಎಂದು ಕೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಒಂದಿಷ್ಟು ಅಡ್ರೆಸ್ ಕಳುಹಿಸಿ ಅಲ್ಲಿಗೆ ಕರೆದುಕೊಂಡು ಹೋಗಿ ಅಮ್ಮಮ್ಮನ್ನು ಉಳಿಸಿ ಎಂದೆಲ್ಲಾ ಕೇಳಿಕೊಳ್ಳುವುದು ನೋಡಿದಾಗ ಖುಷಿ ಎನ್ನಿಸುತ್ತದೆ.

ಅಭಿಮಾನಿಗಳ ಬಗ್ಗೆ ನಿಮ್ಮ ಮಾತು..

ಅಭಿಮಾನಿಗಳು ನನ್ನ ಪಾತ್ರಕ್ಕೆ ಭಾವನಾತ್ಮಕವಾಗಿ ಹೊಂದಿಕೊಂಡಿದ್ದಾರೆ. ಎಷ್ಟೋ ಮಂದಿ ಅಮ್ಮಮ್ಮನ ಬಾಯಿಯಿಂದ ಬಂದ ಮಾತುಗಳಿಂದ ಬದಲಾಗಿದ್ದಾರೆ. ವಯಸ್ಸಾದವರು ಕೂಡ ನಿಮ್ಮಲ್ಲಿ ನನ್ನ ತಾಯಿಯನ್ನು ನೋಡಿದ ಹಾಗೇ ಆಗುತ್ತದೆ ಎಂದು ಸಂದೇಶಗಳನ್ನು ಕಳುಹಿಸುತ್ತಾರೆ. ಎಷ್ಟೋ ಜನ ಲೀಲಾವತಿ, ಪಂಢರಿಬಾಯಿ ಅವರಿಗೆ ಹೋಲಿಸಿ ಮಾತನಾಡಿದ್ದಾರೆ. ಅದಕ್ಕಿಂತ ಸಂತೋಷ ಬೇರೆನಿದೆ. ‌ಎಲ್ಲಾ ರೀತಿಯಿಂದ ಅಮ್ಮಮ್ಮನ ಪಾತ್ರಕ್ಕೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರತಿಕ್ರಿಯೆ ಸಿಕ್ಕಿದೆ. ಇದೆಲ್ಲವೂ ಸಾಧ್ಯವಾಗಿದ್ದು ಅಭಿಮಾನಿಗಳಿಂದ.

ನಿಮ್ಮ ಪಾತ್ರದಿಂದ ಜನ ಇನ್ನೇನು ನಿರೀಕ್ಷೆ ಮಾಡಬಹುದು?

ಅಮ್ಮಮ್ಮ ಸಾಯಬಾರದು ಎಂದು ಅನೇಕ ಮಂದಿ ಕೇಳುತ್ತಾರೆ. ಅದು ಅಭಿಮಾನಿಗಳ ಪ್ರೀತಿ ಎಂಬುದು ನಿಜ. ಆದರೆ ಅದನ್ನು ಅಪೇಕ್ಷೆ ಮಾಡಿಕೊಳ್ಳಬಾರದು. ಅದು ಹಾಗಾಗುತ್ತೋ ಇಲ್ಲವೋ ಎಂಬುದು ನಮಗೂ ತಿಳಿದಿರುವುದಿಲ್ಲ. ನಮಗೂ ಕೂಡ ಶೂಟಿಂಗ್ ದಿನ ಬೆಳಿಗ್ಗೆ ಸೆಟ್‌ ಹೋದಾಗಲೇ ಕಥೆ ಏನು ಎಂಬುದು ತಿಳಿಯುವುದು. ಕಥೆಗೆ ಪೂರಕವಾಗಿ ಪಾತ್ರಗಳು ಸಾಗಬೇಕು. ಇಲ್ಲಿಯವರೆಗೂ ಕಥೆಯಲ್ಲಿ ನೈಜತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಮುಂದೆ ಕೂಡ ಕಥೆ ಸಾಗಲಿ ಎಂಬುದು ನನ್ನ ಆಶಯ. ಜೊತೆಗೆ ಕಥೆಗಾರರ ವಿವೇಚನೆಗೆ ತಕ್ಕ ಹಾಗೆ ಕಥೆ ಸಾಗಬೇಕೇ ಹೊರತು ನಮ್ಮ ಇಷ್ಟಕ್ಕೆ ತಕ್ಕ ಹಾಗೇ ಅಲ್ಲ ಎಂಬುದು ನನ್ನ ಭಾವನೆ.

ಸಿನಿಮಾ ಅವಕಾಶ ಬಗ್ಗೆ ಹೇಳುವುದಾದರೆ...

ಇಲ್ಲಿಯವರೆಗೆ ಸುಮಾರು 18 ಸಿನಿಮಾಗಳಲ್ಲಿ ನಟಿಸಿದ್ದೇನೆ. ಯುವರತ್ನ, ‌ಪ್ರೇಮಂ ಪೂಜ್ಯಂ, ನಿನ್ನ ಸನಿಹಕೆ, ಕಾಲಚಕ್ರ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ತೆರೆ ಕಾಣಲು ಸಿದ್ಧವಾಗಿವೆ. ಅದರೊಂದಿಗೆ ಸುದೀಪ್ ಅವರ ‘ಫ್ಯಾಂಟಮ್‌’, ಗಣೇಶ್ ಅವರ ’ತ್ರಿಬಲ್ ರೈಡಿಂಗ್’ ಸಿನಿಮಾದಲ್ಲೂ ನಟಿಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT