ಬುಧವಾರ, ಏಪ್ರಿಲ್ 21, 2021
23 °C

ಬಿಗ್‌ಬಾಸ್‌ಗೆ ರಕ್ಷಾ ಎಂಟ್ರಿ: ಯಾರು ಈಕೆ? ನೆಟ್ಟಿಗರ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Raksha Somashekar

ಎಂಟನೇ ವಾರದತ್ತ ಸಾಗಿರುವ ಕಲರ್ಸ್‌ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮನೆಗೆ ಕನ್ನಡದ ನಟಿ ರಕ್ಷಾ ಸೋಮಶೇಖರ್ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಯೊಳಗಿರುವವರಿಗಷ್ಟೇ ಅಲ್ಲ, ಈಗ ವೀಕ್ಷಕರಿಗೂ ಈ ನಟಿಯ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಮೂಡಿದೆ. ನೆಟ್ಟಿಗರಂತೂ  ಜಾಲತಾಣಗಳಲ್ಲಿ ರಕ್ಷಾ ಕುರಿತ ಮಾಹಿತಿ ಮತ್ತು ಫೋಟೊಗಳಿಗಾಗಿ ಶೋಧ ನಡೆಸತೊಡಗಿದ್ದಾರೆ.

ವಾರ ಕಳೆದಂತೆ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಸ್ಪರ್ಧಿಗಳು ಹೊರ ಬೀಳುತ್ತಿದ್ದಾರೆ. ಕಿರುತೆರೆ ನಟಿ ಸುಜಾತಾ ಸದ್ಯ ಹೊರಬಿದ್ದಿದ್ದಾರೆ. ಈ ವರೆಗೆ 6 ಸ್ಪರ್ಧಿಗಳು ಮನೆಯಿಂದ ಹೊರ ನಡೆದಂತಾಗಿದೆ. ಈ ವಾರಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳನ್ನು ಕಾಮಿಡಿ ನಟ ಕುರಿ ಪ್ರತಾಪ್‌ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ರೇಡಿಯೊ ಜಾಕಿ ಪೃಥ್ವಿ ಬಿಗ್‌ಬಾಸ್‌ ಮನೆಯೊಳಕ್ಕೆ ಕಾಲಿಟ್ಟಿದ್ದರು. ರಕ್ಷಾ ಪ್ರವೇಶದಿಂದ ಈಗ ಎರಡನೇ ವೈಲ್ಡ್‌ ಕಾರ್ಡ್‌ ಸ್ಪರ್ಧಿಯ ಎಂಟ್ರಿಯಾದಂತಾಗಿದೆ.

ರಕ್ಷಾ ಬಿಗ್‌ಬಾಸ್‌ ಮನೆ ಪ್ರವೇಶಿಸುತ್ತಿದ್ದಂತೆ ಕೆಲವು ಸ್ಪರ್ಧಿಗಳ ಎದೆಯಲ್ಲಿ ಢವಢವ, ಈರ್ಷೆ ಉದ್ಭವಿಸಿದೆ. ಜತೆಗೆ ಬಿಗ್‌ ಬಾಸ್‌ ಕೂಡ ರಕ್ಷಾ ಮತ್ತು ಡಾನ್ಸರ್‌ ಕಿಶನ್‌ಗೆ ಸಖತ್ತಾದ ಟಾಸ್ಕ್‌ ನೀಡಿದ್ದಾರೆ. ತಾವಿಬ್ಬರೂ ಮಾಜಿ ಪ್ರೇಮಿಗಳೆಂದು ಉಳಿದ ಸ್ಪರ್ಧಿಗಳನ್ನು ನಂಬಿಸಬೇಕು. ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದೆ ರಹಸ್ಯ ಕಾಪಾಡಿಕೊಳ್ಳಬೇಕೆಂಬ ಟಾಸ್ಕ್‌ ಅದು.

ಇನ್ನು ಈ ರಕ್ಷಾ ಎಲ್ಲಿಂದ ಬಂದ ನಟಿ? ಎನ್ನುವುದು ಕಾರ್ತಿಕ್ ಜಯರಾಮ್ ನಟನೆಯ ‘ಮೇ ಫಸ್ಟ್‌’ ಸಿನಿಮಾ ನೋಡಿದ್ದವರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಹಾರಾರ್‌ ಕಥೆಯ ‘ಮೇ ಫಸ್ಟ್‌’ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಿದ ರಕ್ಷಾ ಬೆಂಗಳೂರಿನ ಬೆಡಗಿ. ‘ಮಿಸ್ಟರ್‌ ಜೈ’ ಮತ್ತು ‘ಮಸ್ತ್‌ ನನ್ನ ಪ್ರೇಮ ಕಹಾನಿ' ಸಿನಿಮಾಗಳಲ್ಲೂ ನಟಿಸಿದ್ದಾರೆ. ನೀನಾಸಂ ಸತೀಸ್ ಮತ್ತು ಶ್ರದ್ಧಾ ಶ್ರಿನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಗೋದ್ರಾ’ ಸಿನಿಮಾದಲ್ಲೂ ರಕ್ಷಾ, ವಶಿಷ್ಠ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಇನ್ನಷ್ಟೆ ತೆರೆ ಕಾಣಬೇಕಿದೆ.

ಚಿಕ್ಕಮಗಳೂರಿನ ಪ್ರತಿಭೆಯಾದ ಡಾನ್ಸರ್‌ ಕಿಶನ್ ಮತ್ತು ನಟಿ ರಕ್ಷಾ ಸೋಮಶೇಖರ್‌ ಅವರ ‘ಪ್ರೇಮ್‌ ಕಹಾನಿ’ ಬಿಗ್‌ಬಾಸ್‌ ಮನೆಯಲ್ಲಿ ಯಾವ ರೀತಿ ನಡೆಯಲಿದೆ, ಪ್ರೇಕ್ಷಕರನ್ನು ಹೇಗೆ ಮನಗೆಲ್ಲಲಿದ್ದಾರೆ, ಉಳಿದ ಸ್ಪರ್ಧಿಗಳನ್ನು ಹೇಗೆ ‘ಕುರಿ’ಯಾಗಿಸಲಿದ್ದಾರೆ ಎನ್ನುವ ಕುತೂಹಲ ಗರಿಗೆದರಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು