ನಟ ಅಲ್ಲ; ನಿರ್ಮಾಪಕ ರಮೇಶ್ ಅರವಿಂದ್

ಮಂಗಳವಾರ, ಏಪ್ರಿಲ್ 23, 2019
31 °C

ನಟ ಅಲ್ಲ; ನಿರ್ಮಾಪಕ ರಮೇಶ್ ಅರವಿಂದ್

Published:
Updated:
Prajavani

ನಟ ರಮೇಶ್ ಅರವಿಂದ್ ಕಿರುತೆರೆಗೆ ಹೊಸಬರೇನೂ ಅಲ್ಲ. ಅವರ ನಿರೂಪಣೆಯ ಟಿ.ವಿ. ಷೋಗಳು ಯಶಸ್ವಿಯಾಗಿವೆ. ಇನ್ನು ಅವರ ನಟನಾ ಸಾಮರ್ಥ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಮ್ಮ ನಗು ಹಾಗೂ ಸರಳ ಮಾತುಗಳಿಂದಲೇ ತಮ್ಮತ್ತ ಆಕರ್ಷಿಸುವ, ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವ ಗುಣದವರು. ರಮೇಶ್ ಅರವಿಂದ್ ಈಗ ಮತ್ತೆ ಕಿರುತೆರೆ ಮೂಲಕ ನಮ್ಮ ಮುಂದೆ ಬರುತ್ತಿದ್ದಾರೆ. ಆದರೆ, ಈ ಬಾರಿ ನಟರಾಗಿಯೂ ಅಲ್ಲ, ನಿರೂಪಕರಾಗಿಯೂ ಅಲ್ಲ; ನಿರ್ಮಾಪಕರಾಗಿ.

ಉದಯ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿಯ ನಿರ್ಮಾಣದ ಹೊಣೆಯನ್ನು ತಮ್ಮ ‘ವಂದನಾ ಮೀಡಿಯಾ ಕ್ರಿಯೇಷನ್ಸ್’ ಮೂಲಕ ಹೊತ್ತುಕೊಂಡು ಕಿರುತೆರೆ ವೀಕ್ಷಕರ ಮನೆ ತಲುಪಲಿದ್ದಾರೆ. ಧಾರಾವಾಹಿ ನಿರ್ಮಾಣ ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಅವರು ‘ಸಿನಿಮಾ ಪುರವಣಿ’ ಜೊತೆ ಹಂಚಿಕೊಂಡಿದ್ದಾರೆ.

‘ನಾನು ಮಾಡುವ ಬಹುತೇಕ ಚಿತ್ರಗಳು ನೈಜತೆಗೆ ಹತ್ತಿರವಾಗಿರುತ್ತವೆ. ಮಾಟ–ಮಂತ್ರ, ನಾಗಿಣಿ ತರಹದ ವಿಷಯಗಳ ಬಗ್ಗೆ ನಾನು ದೊಡ್ಡ ಪರದೆಯ ಮೇಲೆ ಎಂದೂ ನಟನೆ ಮಾಡಿಲ್ಲ. ಈ ಧಾರಾವಾಹಿ ನನಗೊಂದು ಸವಾಲೇ ಸರಿ. ನನ್ನ ಕಲ್ಪನಾ ಶಕ್ತಿಯ ವಿಸ್ತಾರಕ್ಕೆ ಇದೊಂದು ಅವಕಾಶವಾಗಿ ಒದಗಿಬಂತು ಎನ್ನುವುದೇ ನನಗೆ ಖುಷಿ ಕೊಟ್ಟಿದೆ.

‘ಎಲ್ಲವನ್ನೂ ನಾನೊಬ್ಬನೇ ಮಾಡುತ್ತೇನೆ, ನೋಡಿಕೊಳ್ಳುತ್ತೇನೆ ಎಂದರೆ ತಪ್ಪಾಗುತ್ತದೆ. ಇದನ್ನೆಲ್ಲ ನೋಡಿಕೊಳ್ಳುವುದಕ್ಕೆ ಒಂದು ತಂಡ ಇದೆ. ನನ್ನದು ಕೇವಲ ನಿರ್ಮಾಣ ಕೆಲಸ. ಆದರೆ, ಒಟ್ಟಾರೆಯಾಗಿ ಈ ಕಥೆ ಹೀಗೆ ಹೋಗಬಹುದು ಎನ್ನುವ ಕಲ್ಪನೆ ನನ್ನಲ್ಲಿ ಇದೆ. ಕಥೆಯಲ್ಲಿ ಬರುವ ತಿರುವುಗಳು, ಮ್ಯಾಜಿಕ್‌ಅನ್ನು ಇಟ್ಟುಕೊಂಡು ಕಥೆ ಮಾಡುವುದು ಸ್ವಾರಸ್ಯಕರ ಅನುಭವ ನೀಡುತ್ತಿದೆ. ವೈಯಕ್ತಿಕವಾಗಿ ನಾನು ಮಾಟ–ಮಂತ್ರ, ಮೂಢನಂಬಿಕೆ ಇಂಥವುಗಳನ್ನು ನಂಬುವುದಿಲ್ಲ. ನಮ್ಮ ದಾರಿ ತಪ್ಪಿಸುವ, ಕೆಟ್ಟ ಕೆಲಸಗಳಿಗೆ ಪ್ರಚೋದನೆ ನೀಡುವ ಕೆಟ್ಟ ಆಚರಣೆಗಳು, ನಂಬಿಕೆಗಳನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ.

‘ಸಿನಿಮಾ, ಧಾರಾವಾಹಿ ಕಥೆ ವಿಷಯ ಬಂದಾಗ, ನಾವು ಆ ಒಂದು ಕಥೆಯನ್ನು ಯಾವ ದೃಷ್ಟಿಕೋನದಿಂದ ನೋಡುತ್ತಿದೇವೆ ಎಂಬುದು ಮುಖ್ಯ. ಇದನ್ನು ಬೇರೆ ರೀತಿಯಲ್ಲಿಯೂ ಹೇಳಬಹುದು. ಕಥೆಯಲ್ಲಿ ಹಲವಾರು ಪ್ರಕಾರಗಳಿವೆ; ಹಾರರ್ ಕಥೆ, ರಮ್ಯ ಕಥೆ, ರೌಡಿಸಂ ಹೀಗೆ ಬೇರೆ ಬೇರೆ. ನಾವು ಕೇವಲ ಮನರಂಜನೆಯ ದೃಷ್ಟಿಯಿಂದ ಈ ಕಥೆಗಳನ್ನು ನೋಡಬೇಕಷ್ಟೆ.

‘ನಂದಿನಿ’ ಈಗಾಗಲೇ ದಕ್ಷಿಣ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ. ಅದನ್ನು ನಟಿ ಖುಷ್ಬು ನಿರ್ಮಾಣ ಮಾಡುತ್ತಿದ್ದರು. ಈಗ ಧಾರಾವಾಹಿಯ ಕಥೆ ಮುಗಿದಿದೆ. ಧಾರಾವಾಹಿ ನಿಲ್ಲಿಸಬೇಕು, ಮುಂದುವರೆಸಬಾರದು ಎನ್ನುವ ಅಭಿಪ್ರಾಯ ಖುಷ್ಬು ಅವರದ್ದು. ಹೀಗಾಗಿ, ಈ ಧಾರಾವಾಹಿ ಸ್ಥಗಿತಗೊಳಿಸಬೇಕು ಎನ್ನುವ ಚಿಂತನೆ ಸುಳಿಯಿತು. ಆದರೆ, ಕನ್ನಡದಲ್ಲಿ ಈ ಧಾರಾವಾಹಿಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಹಾಗಾಗಿ, ಇದನ್ನು ಕನ್ನಡದಲ್ಲಿ ಮುಂದುವರೆಸಬೇಕು ಎಂದು ವಾಹಿನಿಯವರು ಆಸೆಪಟ್ಟರು.

‘ಅದಕ್ಕೆ ಅವರು ಸೂಕ್ತ ಕಥೆಗಾಗಿ ಹುಡುಕಾಡುತ್ತಿದ್ದರು. ನನಗೇನೋ ಆ ಸಮಯದಲ್ಲಿ ಒಂದು ಕಥೆ ಹೊಳೆಯಿತು. ಕಥೆ ಒಂದೇ ಬಾರಿಗೆ ಹದಿನೆಂಟು ವರ್ಷ ಮುಂದಕ್ಕೆ ಸಾಗಿದರೆ ಹೇಗಿರಬಹುದು ಎನ್ನುವ ಆಲೋಚನೆ ಬಂತು. ನಾನು ನನ್ನ ಯೋಚನೆಗಳನ್ನು ವಾಹಿನಿಯವರ ಮುಂದಿಟ್ಟಾಗ ಅವರಿಗೆ ಅದು ಇಷ್ಟ ಆಯಿತು. ಹಾಗಾಗಿ, ಕನ್ನಡದಲ್ಲಿ ಮಾತ್ರ ಧಾರಾವಾಹಿ ಮುಂದುವರಿದಿದೆ. ಆದರೆ, ಕಥೆ ಇಷ್ಟವಾದ ಕಾರಣ, ತೆಲುಗಿನಲ್ಲೂ ವಾಹಿನಿಯವರೇ ಡಬ್ ಮಾಡುತ್ತಾ ಇದ್ದಾರೆ.

‘ಇದೊಂದು ಆರಂಭ ಮಾತ್ರ. ನಮ್ಮ ನಿರ್ಮಾಣ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಬೇರೆ ಬೇರೆ ಪ್ರಯೋಗ ಮಾಡುವ ಯೋಚನೆ ಇದೆ.'

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !