ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯಲ್ಲಿ ಅರಳಿದ ಹೂ

Last Updated 26 ಮಾರ್ಚ್ 2022, 19:30 IST
ಅಕ್ಷರ ಗಾತ್ರ

1994ರಲ್ಲಿ 24 ವರ್ಷದ ಮೀರಾ ಜಾಟವ್ ‘ಮಹಿಳಾ ಸಮಖ್ಯಾ’ ಎಂಬ ಸರ್ಕಾರಿ ಸಾಕ್ಷರತಾ ಯೋಜನೆಯ ಮೇಲ್ವಿಚಾರಕಿಯಾಗಿ ಉದ್ಯೋಗಕ್ಕೆ ಸೇರಿದಾಗ ಆಕೆ ಓದಿದ್ದು ಹತ್ತನೆಯ ಇಯತ್ತೆಯವರೆಗೆ ಮಾತ್ರ. ಮುಂದಿನ ಕೆಲವು ವರ್ಷಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಪೂರ್ಣ ಮಹಿಳೆಯರೇ ನಡೆಸುವ ‘ಖಬರ್ ಲೆಹರಿಯಾ’ ಪತ್ರಿಕೆಯ ಸ್ಥಾಪಕ ಸಂಪಾದಕಿಯಾಗಿ ಮೀರಾ ಬೆಳೆದದ್ದು ಎಂಥವರಿಗೂ ಸ್ಫೂರ್ತಿ ತುಂಬುವ ವಿಚಾರ.

2002ರಲ್ಲಿ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಮೀರಾ ಜಾಟವ್ ಮತ್ತು ಕವಿತಾ ದೇವಿ ಎಂಬ ಇಬ್ಬರು ದಿಟ್ಟ ದಲಿತ ಮಹಿಳೆಯರು ಸೇರಿ ‘ಖಬರ್ ಲೆಹರಿಯಾ’ ವಾರಪತ್ರಿಕೆಯನ್ನು ಆರಂಭಿಸಿದರು. ಬುಂದೇಲಿ, ಭೋಜ್‍ಪುರಿ, ಅವಧ್‍ನಂತಹ ಗ್ರಾಮ್ಯ ಭಾಷೆಗಳಲ್ಲಿ ಮಹಿಳೆಯರನ್ನು ಕುರಿತು ಮಹಿಳೆಯರೇ ವರದಿ ಮಾಡುವ ಪತ್ರಿಕೆಯನ್ನಾಗಿ ಇದನ್ನು ರೂಪಿಸುವ ಆಲೋಚನೆ ಮಾಡಿದರು. ದೆಹಲಿ ಮೂಲದ, ನಿರಂತರ್ ಸಂಸ್ಥೆಯ ಬೆಂಬಲದೊಂದಿಗೆ ಪತ್ರಿಕೆ ಪ್ರಾರಂಭವಾಯಿತು. ಆರಂಭದಲ್ಲಿ ಮಹಿಳಾ ಕೇಂದ್ರಿತ ಸುದ್ದಿ ಮಾತ್ರ ಪ್ರಕಟಿಸುತ್ತಿದ್ದ ಪತ್ರಿಕೆ ನಂತರದ ದಿನಗಳಲ್ಲಿ ನಿಜವಾದ ಅರ್ಥದಲ್ಲಿ ಗ್ರಾಮಭಾರತದ ವರದಿಗಾರಿಕೆಯ ಕಡೆಗೆ ಗಮನ ಕೊಡಲಾರಂಭಿಸಿತು.

ಮಹಿಳಾ ಸಮಖ್ಯಾ ತಂಡದ ಮೀರಾ, ಕವಿತಾ, ಮತ್ತಿತರ ಮಹಿಳೆಯರು ಸೇರಿ ಮೊದಲಿಗೆ ‘ಮಹಿಳಾ ಡಾಕಿಯಾ’ ಎಂಬ ನಾಲ್ಕು ಪುಟಗಳ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಆದರೆ, ಹಣಕಾಸಿನ ಕೊರತೆಯಿಂದ ಪತ್ರಿಕೆ ಬಹಳ ದಿನಗಳ ಕಾಲ ನಡೆಯದೆ ನಿಂತುಹೋಯಿತು. ಆದರೆ ‘ಮಹಿಳಾ ಡಾಕಿಯಾ’ ಪತ್ರಿಕೆಯನ್ನು ನಡೆಸಿದ ಅನುಭವ, ಈ ದಿಟ್ಟ ದಲಿತ ಮಹಿಳೆಯರ ಆಶೋತ್ತರಗಳನ್ನು ನೀರೆರೆದು ಪೋಷಿಸಿತ್ತು. ಇದರ ಪರಿಣಾಮವೇ ‘ಖಬರ್ ಲೆಹರಿಯಾ’. ನಿರಂತರ್ ಸಂಸ್ಥೆಯ ಬೆಂಬಲ ದೊರಕಿದ ಮೇಲಂತೂ ಹಿಂದಿ ಹೃದಯಭಾಗದ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು ಮೀರಾ ಮತ್ತು ಕವಿತಾ ಅವರ ಮಹಿಳೆಯರ ತಂಡ.

ಬುಂದೇಲ್‍ಖಂಡ್ ಭಾಗದ ದಲಿತ, ಆದಿವಾಸಿ ಸಮುದಾಯಗಳು, ಹಿಂದುಳಿದ ವರ್ಗಗಳು ಮತ್ತು ಮುಸಲ್ಮಾನ ಸಮುದಾಯದ ಬಡ ಮತ್ತು ಕೆಳ ಮಧ್ಯಮವರ್ಗದ ಮಹಿಳೆಯರನ್ನು ಸಮರ್ಥ ಪತ್ರಕರ್ತರನ್ನಾಗಿ ರೂಪಿಸಿ, ಮುಖ್ಯವಾಹಿನಿಯ ಪತ್ರಿಕೋದ್ಯಮದಿಂದ ಹೊರತಾದ ಪರ್ಯಾಯ ಮಾರ್ಗದ ಮೂಲಕ ಹೊಸ ಸಂಚಲನ ಸೃಷ್ಟಿಸಿದ ಕೀರ್ತಿ ‘ಖಬರ್ ಲೆಹರಿಯಾ’ದ ಮೀರಾ ಮತ್ತು ಕವಿತಾ ಅವರಿಗೆ ಸಲ್ಲುತ್ತದೆ. ಪುರುಷರ ಪ್ರಾಬಲ್ಯ ಹೊಂದಿರುವ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯರ ದೃಷ್ಟಿಕೋನದಲ್ಲಿ ಸುದ್ದಿಯನ್ನು ಪ್ರಸ್ತುತಪಡಿಸುವ ಅಗತ್ಯತೆಯನ್ನು ಮನಗಂಡು, ಮಹಿಳೆಯರ ವೇದಿಕೆಯಾಗಿ ‘ಖಬರ್ ಲೆಹರಿಯಾ’ ಪತ್ರಿಕೆ ಆರಂಭವಾಗಿದ್ದು. ಇನ್ನು ಪತ್ರಿಕೆಯ ವರದಿಗಾರರಾಗಿ ಗ್ರಾಮೀಣ ಒಳನಾಡಿನ ದಲಿತ-ಆದಿವಾಸಿ ಮಹಿಳೆಯರನ್ನು ನಿಯೋಜಿಸುವುದೇ ಒಂದು ರೀತಿಯ ಕ್ರಾಂತಿಕಾರಿ ಆಲೋಚನೆಯೆಂದರೆ ತಪ್ಪಾಗಲಾರದು. ಇಂಥ ಹಲವಾರು ಪ್ರಥಮಗಳಿಗೆ ಕಾರಣವಾದ ‘ಖಬರ್ ಲೆಹರಿಯಾ’ದ ಸಂಪಾದಕಿ ಮತ್ತು ಸುದ್ದಿ ನಿರೂಪಕಿ ಕವಿತಾ ದೇವಿ, ಪ್ರತಿಷ್ಠಿತ ಸಂಪಾದಕರ ಗಿಲ್ಡ್‌ನ ಸದಸ್ಯರಾಗಿ ಆಯ್ಕೆಯಾದ ಮೊತ್ತಮೊದಲ ದಲಿತ ಸಂಪಾದಕಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಗಟ್ಟಿಗಿತ್ತಿ ಶ್ರೀದೇವಿ

ಅತ್ತೆ ಮಾವಂದಿರ ಕಿರುಕುಳಕ್ಕೆ ಒಳಗಾಗಿ ಸಣ್ಣ ಮಗುವಿನೊಂದಿಗೆ ಮನೆಯಿಂದ ಹೊರಹಾಕಲ್ಪಟ್ಟ ಉತ್ತರ ಪ್ರದೇಶದ ದಲಿತ ಮಹಿಳೆ ಶ್ರೀದೇವಿ ‘ಖಬರ್ ಲೆಹರಿಯಾ’ದ ವರದಿಗಾರ್ತಿಯರಲ್ಲಿ ಒಬ್ಬರು. ಸ್ಥಳೀಯ ನಾಯಕರ ಬೈಗುಳ, ಪೊಲೀಸರ ನಿರ್ಲಕ್ಷ್ಯ, ಮಹಿಳೆ ಎಂಬ ಕಾರಣಕ್ಕೆ ಸದಾ ಎದುರಿಸಬೇಕಾಗುವ ಗ್ರಾಮಸ್ಥರ ಹೀಯಾಳಿಕೆ, ಇದ್ಯಾವುದಕ್ಕೂ ಕುಗ್ಗದೆ, ಪುರುಷಪ್ರಧಾನ ಗ್ರಾಮೀಣ ಭಾಗದ ಸುತ್ತಲೂ ತನ್ನ ಸ್ಕೂಟರ್‌ನಲ್ಲಿ ತಿರುಗಾಡುತ್ತಾ ಅನ್ಯಾಯ, ಅಕ್ರಮ ಮತ್ತು ದೌರ್ಜನ್ಯಗಳನ್ನು ಕುರಿತು ವರದಿ ಮಾಡುತ್ತಿರುವುದು ಸಾಹಸಗಾಥೆಯೇ ಸರಿ. ಕುಟುಂಬದ ಒತ್ತಡ, ತಾಯಿಯ ಸಾಂಪ್ರದಾಯಿಕ ಜವಾಬ್ದಾರಿ, ಮತ್ತು ಸಮಾಜದ ಅಸಹನೆಯನ್ನು ಮೀರಿ ಕೆಲಸ ಮಾಡಬೇಕಾದ ಅಸಾಧ್ಯವಾದ ನಿರ್ಧಾರ ಕೈಗೊಳ್ಳಲು ಗುಂಡಿಗೆ ಗಟ್ಟಿಯಿರಲೇಬೇಕು.

ಪತ್ರಕರ್ತರ ವೃತ್ತಿಯೇ ಸವಾಲಿನದು. ಅದರಲ್ಲಿಯೂ ದಲಿತ ಮಹಿಳೆಯರು ಪತ್ರಕರ್ತರೆಂದರೆ ಸಮಾಜ ಒಪ್ಪಿಕೊಳ್ಳುವುದೇ ಕಷ್ಟ. ಸಾಂಪ್ರದಾಯಿಕ ವಾತಾವರಣ ಹೊಂದಿರುವ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ತಲೆಯ ಮೇಲಿನ ಸೆರಗು ಸರಿಸಿ ಪುರುಷರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸುವುದು, ಹಗಲಿರುಳಲೆನ್ನದೆ ಅನಿಯಮಿತ ಅವಧಿಯಲ್ಲಿ ಕಾರ್ಯನಿರ್ವಹಿಸುವುದು ದೊಡ್ಡ ಸವಾಲಿನ ಕೆಲಸ. ಗ್ರಾಮೀಣ ಭಾರತದಲ್ಲಿ ಎಲ್ಲ ಸಮುದಾಯಗಳ ಮಹಿಳೆಯರಿಗೆ ನಿರ್ಬಂಧಗಳು ಸರ್ವೇಸಾಮಾನ್ಯ. ಅದರಲ್ಲಿಯೂ ದಲಿತ ಮತ್ತು ಆದಿವಾಸಿ ಸಮುದಾಯಗಳ ಮಹಿಳೆಯರಿಗೆ ಕುಟುಂಬದ ನಿರ್ಬಂಧದ ಜೊತೆಗೆ, ಸಮಾಜದ ಅಡೆತಡೆಗಳು ಇನ್ನೂ ಹೆಚ್ಚು. ಕೆಲವೊಮ್ಮೆ ಮೇಲ್ವರ್ಗದ ಅಸಹನೆಯು ಹಿಂಸೆ, ಮತ್ತು ಅತ್ಯಾಚಾರದ ಸ್ವರೂಪ ಪಡೆದುಕೊಳ್ಳುವುದೂ ಉಂಟು. ಇಷ್ಟಾಗಿಯೂ ಶ್ರೀದೇವಿಯಂತಹ ಪತ್ರಕರ್ತರು ತಮ್ಮ ಮಣ್ಣಿನ ಸೊಗಡಿನ ವರದಿಗಾರಿಕೆಯ ಮೂಲಕ ‘ನಿಜವಾದ’ ಗ್ರಾಮೀಣ ಭಾರತದ ದರ್ಶನ ಮಾಡಿಸುತ್ತಲಿದ್ದಾರೆ.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಹದಿಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಸುಮಾರು 30 ಮಹಿಳಾ ವರದಿಗಾರರ ಜಾಲವನ್ನು ‘ಖಬರ್ ಲೆಹರಿಯಾ’ ಹೊಂದಿದೆ. ಈ ಎಲ್ಲ ಮಹಿಳೆಯರದ್ದೂ ಶ್ರೀದೇವಿಯಂತಹದ್ದೇ ಒಂದೊಂದು ದೌರ್ಜನ್ಯದ ಕಥೆ. ಇವರಲ್ಲಿ ಬಹುತೇಕರು 10ನೇ ತರಗತಿಯ ಶೈಕ್ಷಣಿಕ ಅರ್ಹತೆ ಹೊಂದಿದವರು.

‘ಖಬರ್ ಲೆಹರಿಯಾ’ ಪತ್ರಿಕೆಗೆ ಸೇರಬಯಸುವ ಮಹಿಳೆಯರು ಕನಿಷ್ಠ 10ನೇ ತರಗತಿಯವರೆಗೆ ಓದಿರಬೇಕು. ದಲಿತ, ಆದಿವಾಸಿ, ಹಿಂದುಳಿದ ಸಮುದಾಯ, ಅಥವಾ ಮುಸ್ಲಿಂ ಸಮುದಾಯಕ್ಕೆ ಸೇರಿರಬೇಕು. ಸಾಮಾನ್ಯಜ್ಞಾನ, ಆತ್ಮವಿಶ್ವಾಸ ಮತ್ತು ಸ್ವಲ್ಪ ಮಟ್ಟಿಗಿನ ತಾಂತ್ರಿಕ ತಿಳಿವಳಿಕೆ ಹೊಂದಿರಬೇಕು. ಈ ಅರ್ಹತೆಗಳನ್ನು ಹೊಂದಿರುವ ಮಹಿಳೆಯರನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿ ನಂತರ ಚಿತ್ರಕೂಟದಲ್ಲಿ ತರಬೇತಿ ಮತ್ತು ಇಂಟರ್ನ್‍ಷಿಪ್‍ಗೆ ಕಳುಹಿಸಲಾಗುತ್ತದೆ. ಹೀಗೇ ಆಯ್ಕೆಯಾದ ನಾಚಿಕೆ ಸ್ವಭಾವದ, ಹಿಂಜರಿಕೆ ಗುಣದ ಮಹಿಳೆಯರು ದಿಟ್ಟ ಪತ್ರಕರ್ತರಾಗಿ ರೂಪುಗೊಂಡು ಜಾತಿ ಆಧಾರಿತ ಹಿಂಸೆ, ಮಹಿಳೆಯರ ಮೇಲಿನ ದೌರ್ಜನ್ಯ, ಮೂಲ ಸೌಕರ್ಯಗಳ ಕೊರತೆ, ಹೀಗೆ ಹತ್ತು ಹಲವು ಗುರುತರ ವಿಚಾರಗಳ ಬಗ್ಗೆ ಕಳೆದ ಎರಡು ದಶಕಗಳಿಂದ ಸುದ್ದಿ ಮಾಡುತ್ತಲಿರುವುದೇ ರೋಚಕವಾದ ಕಥನ.

ಎರಡು ದಶಕಗಳ ಹಿಂದೆ ಪೆನ್ ಮತ್ತು ಪುಸ್ತಕಗಳನ್ನು ಹಿಡಿದು ವರದಿ ಮಾಡುತ್ತಿದ್ದ ಕೈಗಳಿಗೆ ಈಗ ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್ ಬಂದಿದೆ. ಕೆಲಸ ಈಗ ಇನ್ನೂ ಸುಲಭವಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಸರಾಗವಾಗಿ ಮಾಹಿತಿ ಪಡೆಯುವ ಮಟ್ಟಕ್ಕೆ ವೃತ್ತಿಪರತೆ ಮತ್ತು ವಿಶ್ವಾಸಾರ್ಹತೆ ಸಾಧಿಸಿರುವ ದಲಿತ ಮಹಿಳಾ ಪತ್ರಕರ್ತರು, ಯಾವ ಮುಖ್ಯವಾಹಿನಿಯ ಪತ್ರಕರ್ತರಿಗೂ ಕಮ್ಮಿಯಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ!

ಕವಿತಾ ಮತ್ತು ಮೀರಾ

‘ಖಬರ್ ಲೆಹರಿಯಾ’ ಈಗ ಡಿಜಿಟಲ್ ಆವೃತ್ತಿಯನ್ನು ಹೊರತರುತ್ತಿದೆ. ಡಿಜಿಟಲ್ ಆವೃತ್ತಿಯ ಸಂಪಾದಕಿಯಾಗಿ ಜವಾಬ್ದಾರಿ ಹೊತ್ತಿರುವ ಕವಿತಾ ದೇವಿಗೆ 12ನೇಯ ವಯಸ್ಸಿಗೇ ಮದುವೆಯಾಗಿತ್ತು. ಯಾವುದೇ ರೀತಿಯ ಔಪಚಾರಿಕ ಶಿಕ್ಷಣ ಪಡೆಯದ ಕವಿತಾ, ನಂತರದ ವರ್ಷಗಳಲ್ಲಿ ಹಲವು ಒತ್ತಡಗಳ ನಡುವೆಯೂ ಪದವಿ ಶಿಕ್ಷಣ ಪೂರೈಸಿ, ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ಮಹಿಳಾ ಡಾಕಿಯಾ’ ಮೂಲಕ ಪತ್ರಕರ್ತರಾಗಿ ಕಾರ್ಯಾರಂಭ ಮಾಡುವ ಕವಿತಾ, ನಂತರ ಮೀರಾ ಜಾಟವ್ ಜೊತೆಗೂಡಿ ‘ಖಬರ್ ಲೆಹರಿಯಾ’ ಪತ್ರಿಕೆಯನ್ನು ಪ್ರಾರಂಭಿಸಿದರು. ಪ್ರಸ್ತುತ ‘ಖಬರ್ ಲೆಹರಿಯಾ’ ಡಿಜಿಟಲ್ ಆವೃತ್ತಿಯಲ್ಲಿ ‘ದಿ ಕವಿತಾ ಶೋ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. 2019ರಲ್ಲಿ ಖ್ಯಾತ ನಟ ಶಾರುಖ್ ಖಾನ್ ನಡೆಸಿಕೊಟ್ಟ ಟೆಡ್ ಸಮ್ಮೇಳನದಲ್ಲಿ ಭಾಷಣಕಾರರಾಗಿ ಭಾಗವಹಿಸಿ ರಾಷ್ಟ್ರದ ಗಮನ ಸೆಳೆದಿದ್ದರು.

ಇನ್ನು ಬುಂದೇಲ್‍ಖಂಡದ ದಲಿತ ಕುಟುಂಬದಲ್ಲಿ ಹುಟ್ಟಿದ ಮೀರಾ ಜಾಟವ್, ಡಕಾಯಿತರು, ಶಸ್ತ್ರಸಜ್ಜಿತ ದರೋಡೆಕೋರರಿಂದ ಸುತ್ತುವರೆದ ಪ್ರದೇಶದಲ್ಲಿ ಯಾವುದೇ ರೀತಿಯ ಶಿಕ್ಷಣ ಮತ್ತು ಸ್ವಾತಂತ್ರ್ಯವಿಲ್ಲದೆ, ಪುರುಷರ ಅಡಿಯಾಳಾಗಿದ್ದ ಈ ಭಾಗದ ಇತರ ಹೆಣ್ಣು ಮಕ್ಕಳಂತೆಯೇ ಬದುಕು ಸಾಗಿಸುತ್ತಿದ್ದವರು. ಆದರೆ, ಹತ್ತನೆಯ ತರಗತಿಯಲ್ಲಿ ತೇರ್ಗಡೆಯಾದ ನಂತರ ‘ಮಹಿಳಾ ಸಮಖ್ಯಾ’ ತಂಡಕ್ಕೆ ಸೇರ್ಪಡೆಗೊಳ್ಳುವ ಮೀರಾ, ಕವಿತಾ ದೇವಿ ಮತ್ತು ಇತರ ಐವರು ದಲಿತ ಮತ್ತು ಆದಿವಾಸಿ ಮಹಿಳೆಯರೊಂದಿಗೆ ಸೇರಿ ‘ಖಬರ್ ಲೆಹರಿಯಾ’ ಪತ್ರಿಕೆಯನ್ನು ಪ್ರಾರಂಭಿಸಿ ದಲಿತ ಇತಿಹಾಸದ ಜೀವಂತ ದಂತಕಥೆಯಾಗಿ ಬೆಳೆದಿದ್ದಾರೆ. ಕಳೆದ ಎರಡು ದಶಕಗಳಿಂದ ಪತ್ರಿಕೆಯು ಮಹಿಳೆಯರ ದೃಷ್ಟಿಕೋನದಿಂದ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿ ವರದಿ ಮಾಡುತ್ತಾ ಬಂದಿದೆ. ಒಬ್ಬ ದಲಿತ ಮಹಿಳೆ ಪತ್ರಿಕೆಯೊಂದರ ಸಂಪಾದಕಿಯಾಗಿ ಯಶಸ್ಸು ಸಾಧಿಸುವುದನ್ನು ಸಹಿಸದ ಪುರುಷರು, ಪುರುಷ ಪ್ರಧಾನ ವ್ಯವಸ್ಥೆ, ಮೇಲ್ಜಾತಿ ಹಿಂದೂಗಳು, ರಾಜಕಾರಣಿಗಳು ಮತ್ತು ಗೂಂಡಾಗಳಿಂದ ಬಂದ ಬೆದರಿಕೆಗಳು ಮತ್ತು ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಸೈ ಎನಿಸಿಕೊಂಡವರು ಮೀರಾ ಜಾಟವ್.

ಮೀರಾ, ಕವಿತಾ, ಶ್ರೀದೇವಿ ಮತ್ತು ‘ಖಬರ್ ಲೆಹರಿಯಾ’ದ ಎಲ್ಲ ಮಹಿಳಾ ಪತ್ರಕರ್ತರು ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಸೆಡ್ಡು ಹೊಡೆದು ಸ್ಥಳೀಯ ಆಡಳಿತಶಾಹಿ, ಮತ್ತು ರಾಜಕೀಯ ನಾಯಕರ ಕುರಿತು ನಿಜವಾದ ಗ್ರಾಮೀಣ ವರದಿಗಾರಿಕೆ ಮಾಡುತ್ತಿರುವ ದಿಟ್ಟ ಮಹಿಳೆಯರು. ಮಹಿಳಾ ಪರ ಪತ್ರಿಕೋದ್ಯಮದ ಉದ್ದಿಶ್ಯ ಹೊಂದಿರುವ ‘ಖಬರ್ ಲೆಹರಿಯಾ’ ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯದ ಚೌಕಟ್ಟಿನೊಳಗೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವರದಿ ಮಾಡುತ್ತಲಿದೆ. ಸಾರ್ವಜನಿಕ ವಲಯ ಮತ್ತು ವೈಯುಕ್ತಿಕ ನೆಲೆಗಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆಯನ್ನು ವರದಿಗಾರಿಕೆಯ ಮೂಲಕ ಪ್ರಶ್ನಿಸುತ್ತಿದೆ. ಅಲಕ್ಷಿತ ಮಹಿಳೆಯರೇ ಸೇರಿ ಕಟ್ಟಿ ಬೆಳೆಸಿರುವ ‘ಖಬರ್ ಲೆಹರಿಯಾ’ದ ಕಥೆ ಹೊಂದಿರುವ ‘ರೈಟಿಂಗ್ ವಿತ್ ಫೈರ್’ ಪ್ರಶಸ್ತಿ ಪಡೆಯಲಿ ಬಿಡಲಿ, ಮೀರಾ, ಕವಿತಾ, ಶ್ರೀದೇವಿಯಂತಹ ದಲಿತ ಮಹಿಳಾ ಪತ್ರಕರ್ತರ ಕಥನ ಈ ಚಿತ್ರದ ಮೂಲಕ ಜಾಗತಿಕ ಕ್ಯಾನ್‍ವಾಸ್‍ಗೆ ಪರಿಚಿತವಾಗಿರುವುದೇ ಈ ಗಟ್ಟಿಗಿತ್ತಿಯರ ಗೆಲುವು! ಇದರ ಶ್ರೇಯ ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್‍ಗೆ ಸಲ್ಲಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT