ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌, ಸುದೀಪ್, ದರ್ಶನ್‌ರಿಂದ ಹೊಸ ಚಾನಲ್

ಕಿರುತೆರೆಯಲ್ಲಿ ಚಂಡಮಾರುತ!
Last Updated 20 ಏಪ್ರಿಲ್ 2019, 5:56 IST
ಅಕ್ಷರ ಗಾತ್ರ

ಸುದ್ದಿ ವಾಹಿನಿಗಳಲ್ಲಿ ‘ಬ್ರೇಕಿಂಗ್‌ ನ್ಯೂಸ್‌’ ಹೆಸರಿನಲ್ಲಿ ಪ್ರತಿ ಕ್ಷಣವೂ ಸುದ್ದಿಗಳು ಸ್ಫೋಟಗೊಳ್ಳುತ್ತವೆ. ಈವರೆಗೆ ಎಲ್ಲಿಯೂ ‘ಬ್ರೇಕ್‌’ ಆಗದ, ಕಿರುತೆರೆಯನ್ನು ಚಂಡಮಾರುತದಂತೆ ಅಪ್ಪಳಿಸಬಹುದಾದ ಸುದ್ದಿಯೆಂದರೆ – ಕನ್ನಡ ಚಿತ್ರರಂಗದ ಮೂವರು ಖ್ಯಾತನಾಮ ನಾಯಕರು ಬಂಡವಾಳ ಹೂಡಿ ಮನರಂಜನಾ ವಾಹಿನಿಯಿಂದನ್ನು ಆರಂಭಿಸುತ್ತಿರುವುದು.

ಪುನೀತ್‌ ರಾಜ್‌ಕುಮಾರ್‌, ದರ್ಶನ್‌ ಹಾಗೂ ಸುದೀಪ್‌ ಈ ಮೂವರು ಖ್ಯಾತನಾಮರು. ಚಿತ್ರರಂಗದಲ್ಲಿ ತಮ್ಮದೇ ಆದ ಬೃಹತ್‌ ಅಭಿಮಾನಿ ಸಮೂಹವನ್ನು ಹೊಂದಿರುವ ಈ ನಾಯಕರು, ಕಿರುತೆರೆಯ ಮೂಲಕ ಒಗ್ಗೂಡುತ್ತಿರುವುದು ಕನ್ನಡ ಪ್ರೇಕ್ಷಕರ ಪಾಲಿಗೆ ನಿಜವಾದ ಬ್ರೇಕಿಂಗ್‌ ಹಾಗೂ ಶಾಕಿಂಗ್‌ ಸುದ್ದಿಯೇ ಸರಿ.

ತ್ರಿಮೂರ್ತಿಗಳ ಹೊಸ ವಾಹಿನಿ ಸಾಹಸದ ಬಗ್ಗೆ ‘ಸುಧಾ’ ವರದಿಗಾರರು ಸುದೀಪ್‌ ಅವರನ್ನು ಸಂಪರ್ಕಿಸಿದಾಗ ಅವರು ಸುದ್ದಿಯನ್ನು ಖಚಿತಪಡಿಸಿದರು.

‘ನಾವು ಮೂವರು ಗೆಳೆಯರು ಎಂಟರ್‌ಟೈನ್‌ಮೆಂಟ್‌ ಚಾನಲ್‌ ಆರಂಭಿಸುತ್ತಿರುವುದು ನಿಜ. ಕಳೆದೊಂದು ವರ್ಷದಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಸದ್ಯದಲ್ಲೇ ಸಿಹಿ ಸುದ್ದಿಯೊಂದಿಗೆ ನಿಮ್ಮೆದುರು ಬರಲಿದ್ದೇವೆ’ ಎಂದರು. ಏಕತಾನತೆಯ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಿಂದ ಮಂಕಾಗಿರುವ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡುವ ಉತ್ಸಾಹ ಸುದೀಪ್‌ ಧ್ವನಿಯಲ್ಲಿ ಇಣುಕುತ್ತಿತ್ತು.

ಬಲ್ಲ ಮೂಲಗಳ ಪ್ರಕಾರ ಬರುವ ಯುಗಾದಿ ಹಬ್ಬದ ದಿನ (ಏಪ್ರಿಲ್ 6) ಇಲ್ಲವೇ ಏಪ್ರಿಲ್‌ 24ರ ರಾಜಕುಮಾರ್‌ ಜನ್ಮದಿನದಂದು ಹೊಸ ವಾಹಿನಿ ಪ್ರಸಾರ ಆರಂಭಿಸಬೇಕಾಗಿತ್ತು. ಆದರೆ, ಚುನಾವಣಾಜ್ವರದ ಸಂದರ್ಭ ಮನರಂಜನಾ ವಾಹಿನಿಯ ಆರಂಭಕ್ಕೆ ಸರಿಯಾದ ಸಂದರ್ಭ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾದುದರಿಂದ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ವಾಹಿನಿಯ ಆಧಾರಸ್ಥಂಭಗಳಲ್ಲಿ ಒಬ್ಬರಾದ ದರ್ಶನ್‌ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಕೂಡ ವಾಹಿನಿಯ ಆರಂಭ ಮುಂದೆ ಹೋಗುವುದಕ್ಕೆ ಪ್ರಮುಖ ಕಾರಣವಾಗಿದೆ.

‘ವಾಹಿನಿಯನ್ನು ಆರಂಭಿಸುವುದಕ್ಕೆ ನಮಗೆ ಅವಸರವೇನಿಲ್ಲ. ಬೇರೆ ಭಾಷೆಗಳನ್ನು ಅನುಕರಣೆ ಮಾಡದ, ಕನ್ನಡದ ಸೊಗಡಿನ ಕಾರ್ಯಕ್ರಮಗಳನ್ನು ನಾವು ರೂಪಿಸುತ್ತಿದ್ದೇವೆ. ಈ ಕಾರ್ಯಕ್ರಮಗಳು ಸಾಕಷ್ಟು ಸಾವಧಾನ ಹಾಗೂ ಸಿದ್ಧತೆ ಬಯಸುತ್ತವೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡ ನಂತರವೇ ಕನ್ನಡಿಗರ ಮುಂದೆ ದೊಡ್ಡ ಪ್ರಮಾಣದಲ್ಲಿ ಬರಲಿದ್ದೇವೆ. ಬಹುಶಃ ಆ ‘ಅಮೃತ ಮುಹೂರ್ತ’ ನವೆಂಬರ್‌ 1ರಂದು ಒದಗಿಬರಬಹುದು’ ಎಂದು ‘ಸುಧಾ’ ಜೊತೆ ಮಾತನಾಡಿದ ಪುನೀತ್‌ ಹೇಳಿದರು.

ವಾಹಿನಿಯ ಹೆಸರೇನು? ಈಗ ಇರುವ ವಾಹಿನಿಗಳಿಗಿಂತಲೂ ನಿಮ್ಮ ಚಾನಲ್‌ ಹೇಗೆ ಭಿನ್ನವಾಗಿರುತ್ತದೆ ಎನ್ನುವ ಪ್ರಶ್ನೆಗಳಿಗೆ, ‘ಸದ್ಯದಲ್ಲೇ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ’ ಎಂದು ಪುನೀತ್‌ ಮಾತುಮುಗಿಸಿದರು. ‘ಎಲ್ಲವೂ ಒಮ್ಮೆಗೇ ಹೇಳಿದರೆ ಹೇಗೆ? ಸ್ಪಲ್ಪ ಸಸ್ಪೆನ್ಸ್‌ ಉಳಿದಿರಲಿ’ ಎಂದು ಸುದೀಪ್‌ ಮಾತು ಫೋನ್‌ ಕಟ್‌ ಮಾಡಿದರು.

ಹೆಸರಿಗಾಗಿ ಕಸರತ್ತು

ಗಾಂಧಿನಗರದ ವಿಶ್ವಸನೀಯ ಮೂಲಗಳ ಪ್ರಕಾರ ಹೊಸ ವಾಹಿನಿಯ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಮೂವರು ನಾಯಕನಟರ ಹೆಸರುಗಳ ಅಕ್ಷರಗಳನ್ನು ಒಳಗೊಂಡ ಹೆಸರೊಂದನ್ನು ರೂಪಿಸುವ ಜವಾಬ್ದಾರಿಯನ್ನು ‘ರಾಜ್‌ಕುಮಾರ’ ಚಿತ್ರದ ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ. ಮೂವರು ಸ್ಟಾರ್‌ಗಳ ಅಭಿಮಾನಿಗಳಿಗೆ ಇಷ್ಟವಾಗುವಂತಹ ಹೆಸರೊಂದರ ಹುಡುಕಾಟದಲ್ಲಿ ಸಂತೋಷ್‌ ಹಾಗೂ ಅವರ ಬಳಗ ತೊಡಗಿಕೊಂಡಿದ್ದು, ಈ ಬಗ್ಗೆ ಮಾತನಾಡಲು ಪ್ರಯತ್ನಿಸಿದರೆ ಸಂತೋಷ್‌ ಅವರು ಫೋನ್‌ ಕರೆ ಸ್ವೀಕರಿಸಲಿಲ್ಲ.

ವಾಹಿನಿಯ ಹೆಸರಿಗೆ ಸಂಬಂಧಿಸಿದಂತೆ ಅಭಿಮಾನಿಗಳ ಸಲಹೆಗಳನ್ನು ಪಡೆಯಲು ಸಂತೋಷ್‌ ಬಳಗ ಉದ್ದೇಶಿಸಿದೆ. ಶೀರ್ಷಿಕೆ ಸ್ಪರ್ಧೆಯ ಕುರಿತಂತೆ ಸದ್ಯದಲ್ಲೇ ಪ್ರಕಟಣೆಯೊಂದು ಹೊರಬೀಳಲಿದೆ.

ಮೂವರ ಅಭಿನಯದ ಧಾರಾವಾಹಿ!

ಸುದೀಪ್‌, ಪುನೀತ್‌, ದರ್ಶನ್‌ ಅವರು ಒಟ್ಟಾಗಿ ಅಭಿನಯಿಸಿದ ಧಾರಾವಾಹಿಯೊಂದು ವಾಹಿನಿಯ ಆರಂಭದ ದಿನದಿಂದಲೇ ಪ್ರಸಾರ ಆರಂಭಿಸಲಿದ್ದು, ಈ ಧಾರಾವಾಹಿ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಇತಿಹಾಸ ಬರೆಯಲಿದೆ ಎಂದು ಸದಾಶಿವನಗರದ ಮೂಲಗಳು ತಿಳಿಸಿವೆ. ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಹೇಳಿದ ಕಥೆಯೊಂದು ಮೂವರು ನಾಯಕರಿಗೂ ಇಷ್ಟವಾಗಿದ್ದು, ಆರಂಭಿಕ ಕಂತುಗಳ ಚಿತ್ರಕಥೆ ಈಗಾಗಲೇ ಸಿದ್ಧವಾಗಿದೆಯಂತೆ. ದುಬಾರಿ ಬಜೆಟ್‌ ಹಾಗೂ ಅದ್ದೂರಿ ತಾರಾಗಣದ ಈ ಕಥನ, ಧಾರಾವಾಹಿಗಳ ಪರಿಕಲ್ಪನೆಯನ್ನೇ ಬದಲಿಸುವ ನಿರೀಕ್ಷೆಯಿದೆ. ಲೀಲಾವತಿ, ಜಯಂತಿ, ಭಾರತಿ ವಿಷ್ಣುವರ್ಧನ್‌ ಅವರೊಂದಿಗೆ ರಚಿತಾ ರಾಮ್‌ ತಾರಾಗಣದಲ್ಲಿರುವ ಪ್ರಸಿದ್ಧ ಕಲಾವಿದರು. ಸದ್ಯಕ್ಕೆ ಅಭಿನಯದಿಂದ ದೂರವಿರುವ ರಮ್ಯಾ ಅವರು ಕೂಡ ಧಾರಾವಾಹಿಗಾಗಿ ಬಣ್ಣ ಹಚ್ಚುವ ನಿರೀಕ್ಷೆಯಿದೆ. ನಾಗಾಭರಣ ಅವರೇ ಧಾರಾವಾಹಿಯನ್ನು ನಿರ್ದೇಶಿಸಲಿದ್ದು, ಅವರಿಗೆ ಯುವ ನಿರ್ದೇಶಕರ ತಂಡವೊಂದು ನೆರವಾಗಲಿದೆ ಎನ್ನಲಾಗಿದೆ.

ಈ ನಟರ ಕಾಂಬಿನೇಷನ್‌ನ ಸಿನಿಮಾ ತಯಾರಿಸುವುದೇ ಈವರೆಗೆ ಯಾರಿಗೂ ಸಾಧ್ಯವಾಗಿಲ್ಲ ಎನ್ನುವ ಹಿನ್ನೆಲೆಯಲ್ಲಿ, ಉದ್ದೇಶಿತ ಧಾರಾವಾಹಿ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳ ಪ್ರೇಕ್ಷಕರ ಗಮನಸೆಳೆಯುವುದೂ ಖಚಿತ. ಈ ಧಾರಾವಾಹಿಯನ್ನು ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಎಂಟು ಭಾಷೆಗಳಿಗೆ ಡಬ್‌ ಮಾಡುವ ಯೋಚನೆಯೂ ವಾಹಿನಿಗಿದೆ.

ದುನಿಯಾ ಸೂರಿ ಅವರು ಹೊಸ ವಾಹಿನಿಗಾಗಿ ಕ್ರೈಂ ಕಥನವೊಂದನ್ನು ರೂಪಿಸುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ನಟ ವಸಿಷ್ಠ ಸಿಂಹ ಅವರು ಧ್ವನಿ ನೀಡಲಿದ್ದಾರೆ. ಯುವ ನಿರ್ದೇಶಕರಾದ ಸಿಂಪಲ್‌ ಸುನಿ, ಸತ್ಯಪ್ರಕಾಶ್‌, ಹೇಮಂತ್‌ ಅವರು ಧಾರಾವಾಹಿಗಳನ್ನು ನಿರ್ದೇಶಿಸಲಿದ್ದಾರೆ. ರಂಗಾಯಣ ರಘು ಹಾಗೂ ನಿರ್ದೇಶಕ ಗುರುಪ್ರಸಾದ್‌ ಅವರು ವಾರಾಂತ್ಯದಲ್ಲಿ ಹಾಸ್ಯೋತ್ಸವಗಳನ್ನು ನಡೆಸಿಕೊಡಲಿದ್ದಾರೆ.

ಈವರೆಗೆ ಬೇರೆ ಬೇರೆ ವಾಹಿನಿಗಳಲ್ಲಿನ ರಿಯಾಲಿಟಿ ಶೋಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಸಿದ್ಧ ನಟರು ಹೊಸ ವಾಹಿನಿಯೊಂದಿಗೆ ಗುರ್ತಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ. ಹೀಗೇನಾದರೂ ಆದಲ್ಲಿ ಕನ್ನಡದ ಉಳಿದ ವಾಹಿನಿಗಳು ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಕೊರತೆ ಎದುರಿಸುವುದು ಖಚಿತ.

ಚತುರ್ಮುಖನಾಗಿ ಯಶ್‌?

ತ್ರಿಮೂರ್ತಿಗಳ ಕೂಟಕ್ಕೆ ಯಶ್‌ ಅವರನ್ನು ಸೇರಿಸಿಕೊಳ್ಳುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ. ಸದ್ಯಕ್ಕೆ ಯಶ್‌ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರ ಪರವಾಗಿ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಪ್ರಚಾರಕಾರ್ಯದ ನಡುವೆಯೇ ದರ್ಶನ್‌ ಹಾಗೂ ಯಶ್‌ ನಡುವೆ ವಾಹಿನಿಯ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. ರಾಜ್‌ಕುಮಾರ್‌ ಕುಟುಂಬದೊಂದಿಗೆ ಯಶ್‌ ಅವರು ಆಪ್ತಸಂಬಂಧ ಹೊಂದಿರುವುದರಿಂದ, ಪುನೀತ್‌ ಅವರು ಕೂಡ ಯಶ್‌ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಹೊಸ ವಾಹಿನಿಯ ಮೂಲಕ ಮುಂಬರುವ ಕನ್ನಡ ರಾಜ್ಯೋತ್ಸವ ಕನ್ನಡ ಪ್ರೇಕ್ಷಕರ ಪಾಲಿಗೆ ಅವಿಸ್ಮರಣೀಯವಾಗುವ ಎಲ್ಲ ಸಾಧ್ಯತೆಗಳಿವೆ. ಈ ವಾಹಿನಿಯ ಮೂಲಕ ಕನ್ನಡದ ತಾರಾ ವರ್ಚಸ್ಸಿನ ನಟರು ತಮ್ಮ ಕನ್ನಡಿಗರ ಮನೆ–ಮನಗಳಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನದಲ್ಲಿದ್ದಾರೆ.

ತಾರೆಯವರು ಹೇಳಿದ್ದೇನು?

ಹೊಸ ಚಾನಲ್‌ನಲ್ಲಿ ನನ್ನ ಹೂಡಿಕೆ ಎಷ್ಟು? ಅದರ ಬಿಜಿನೆಸ್‌ ಹೇಗೆ? ಇವೆಲ್ಲ ಮಾಹಿತಿ ಕಟ್ಟಿಕೊಂಡು ನೀವು ಏನ್ಮಾಡ್ತೀರಿ? ಈ ವಿಷಯ ತಿಳಕೊಂಡು ಜನ ತಾನೆ ಏನ್‌ ಉಪಯೋಗ? ‘ನಿಮ್ಮ ಆಸ್ತಿ ಪಾಸ್ತಿ ಎಷ್ಟಿದೆ ಅಂತ ತನಿಖೆ ಮಾಡಿಸ್ತೀವಿ’ ಅಂತ ಕೆ.ಆರ್. ಪೇಟೆ ಶಾಸಕ ಬೇರೆ ಧಮ್ಕಿ ಹಾಕಿರೋ ಹೊತ್ನಲ್ಲಿ ನೀವು ದುಡ್ಡಿನ ಬಗ್ಗೆ ಮಾತಾಡ್ತಿದ್ದೀರಿ. ಇದು ಸರಿಯಲ್ಲ. ನಾನು ಹೇಳೋದು ಇಷ್ಟೇ, ನಮ್ಮ ಚಾನಲ್‌ ಮೂಲಕ ಜನರಿಗೆ ಫುಲ್‌ ಎಂಟರ್‌ಟೈನ್‌ಮೆಂಟ್‌ಗೆ ಮೋಸವಿಲ್ಲ. ಇಷ್ಟು ಸಾಕು ತಾನೆ? ಎಂದರು ದರ್ಶನ್.

ಅಭಿಮಾನಿಗಳೇ ನಮ್ಮನೆ ದೇವ್ರು ಎಂದ ಅಪ್ಪಾಜಿ ಮಾತು ನಮಗೆಲ್ಲ ದಾರಿ ದೀಪ. ಹೊಸ ಚಾನಲ್‌ಗೆ ಕೂಡ ಅಭಿಮಾನಿಗಳೇ ಬಂಡವಾಳ. ಅವರ ಪ್ರೀತಿಯೇ ಶ್ರೀರಕ್ಷೆ ಎನ್ನುವುದು ಪುನೀತ್ ಮಾತು.

ಕನ್ನಡದ ಸಿನಿಮಾಗಳು ಈಗ ದೇಶದ ತುಂಬಾ ಸುದ್ದಿ ಮಾಡ್ತಿವೆ. ನೋಡ್ತಿರಿ, ಇನ್ನು ಮುಂದೆ ಕನ್ನಡ ಕಿರುತೆರೆ ಇಂಡಿಯಾದಲ್ಲೆಲ್ಲ ಸುದ್ದಿ ಮಾಡುತ್ತೆ. ನಮ್ಮ ಚಾನಲ್‌ ಭಾರತದಲ್ಲೇ ನಂ. 1 ಎಂಟರ್‌ಟೈನ್‌ಮೆಂಟ್‌ ಚಾನಲ್‌ ಆಗುತ್ತೆ ಎಂದವರು ಸುದೀಪ್.

ವಾಹಿನಿಯ ಸಾಹಸಕ್ಕೇನು ಕಾರಣ?

ಕಲಾವಿದರಾಗಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಸಿನಿಮಾ ನಟರು ಚಾನಲ್‌ ಸ್ಥಾಪಿಸಲು ಮುಂದಾದುದೇಕೆ? ಅದೊಂದು ದೊಡ್ಡ ಕಥೆ ಎನ್ನುತ್ತಾರೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಓರ್ವ ಪದಾಧಿಕಾರಿ. ಹೆಸರು ಬಹಿರಂಗಪಡಿಸಲು ಬಯಸದ ಅವರು, ‘ಪುನೀತ್‌, ದರ್ಶನ್‌, ಯಶ್‌, ಸುದೀಪ್‌ ಅವರ ಸಿನಿಮಾಗಳಿಗೆ ಬಹುದೊಡ್ಡ ಮಾರುಕಟ್ಟೆ ಇರುವುದು ನಿಜವಷ್ಟೇ. ಈ ಜನಪ್ರಿಯತೆಯನ್ನು ಬಳಸಿಕೊಂಡು, ಅವರ ಸಿನಿಮಾಗಳನ್ನು ಪ್ರಸಾರ ಮಾಡುವ ವಾಹಿನಿಗಳು ದೊಡ್ಡ ಲಾಭ ಪಡೆಯುತ್ತವೆ. ಆದರೆ, ಸಿನಿಮಾದ ಸ್ಯಾಟಲೈಟ್‌ ಹಕ್ಕುಗಳ ಖರೀದಿ ಸಂದರ್ಭದಲ್ಲಿ ಮಾತ್ರ ಚೌಕಾಸಿ ಮಾಡುತ್ತವೆ. ಅಲ್ಲದೆ, ಈ ನಾಯಕರು ತಮ್ಮ ವಾಹಿನಿಗಳ ಜೊತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಷರತ್ತು ಹಾಕುತ್ತವೆ. ವಾಹಿನಿಗಳ ಈ ಧೋರಣೆಯಿಂದ ನಾಯಕನಟರು ತಮ್ಮದೇ ಆದ ವಾಹಿನಿಯನ್ನು ಆರಂಭಿಸಲು ಯೋಚನೆ ಮಾಡಿದ್ದಾರೆ’ ಎನ್ನುತ್ತಾರೆ.

ಅರವತ್ತರ ದಶಕದಲ್ಲಿ, ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ದ ಹೆಸರಿನಲ್ಲಿ, ರಾಜಕುಮಾರ್‌, ಜಿ.ವಿ. ಅಯ್ಯರ್, ಬಾಲಕೃಷ್ಣ ಹಾಗೂ ನರಸಿಂಹರಾಜು ಅವರು ಅರವತ್ತರ ದಶಕದಲ್ಲಿ ‘ರಣಧೀರ ಕಂಠೀರವ’ ಸಿನಿಮಾ ನಿರ್ಮಿಸಿದ್ದನ್ನು ನೆನಪಿಸುವ ಅವರು, ಅದಾದ ನಂತರ ಇಂಥ ಪ್ರಯೋಗ ದೊಡ್ಡ ಪ್ರಮಾಣದಲ್ಲಿ ಕನ್ನಡ ದೃಶ್ಯಮಾಧ್ಯಮದಲ್ಲಿ ನಡೆಯುತ್ತಿರುವುದು ಈಗಲೇ ಎಂದು ಅಭಿಪ್ರಾಯಪಡುತ್ತಾರೆ.

ಸೂಚನೆ: ಈ ಬರಹ ಏಪ್ರಿಲ್‌ 1ರ ‘ನಗೆ ದಿನ’ದ ಹಿನ್ನೆಲೆಯಲ್ಲಿ ರೂಪುಗೊಂಡ ಕಾಲ್ಪನಿಕ ಬರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT