ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ಸೇರಿ ಆರು ಜನರಿಗೆ ಮುಂಬೈ ಪೊಲೀಸ್ ಸಮನ್ಸ್

Last Updated 11 ಅಕ್ಟೋಬರ್ 2020, 3:54 IST
ಅಕ್ಷರ ಗಾತ್ರ

ಮುಂಬೈ: ಟಿಆರ್‌ಪಿ ತಿರುಚಿರುವ ಆರೋಪಗಳ ಸಂಬಂಧ ತನಿಖೆ ಕೈಗೊಂಡಿರುವ ಮುಂಬೈ ಪೊಲೀಸರು, ರಿಪಬ್ಲಿಕ್‌ ಟಿವಿ ಸಿಇಒ ಸೇರಿದಂತೆ ಆರು ಜನರಿಗೆ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದಾರೆ.

ರಿಪಬ್ಲಿಕ್‌ ಟಿವಿ ಸಿಇಒ ವಿಕಾಸ್‌ ಕಂಚಂದಾನಿ, ಸಿಒಒಗಳಾದ ಹರ್ಷ್ ಭಂಡಾರಿ ಮತ್ತು ಪ್ರಿಯಾ ಮುಖರ್ಜಿ, ಚಾನೆಲ್‌ನ ಡಿಸ್ಟ್ರಿಬ್ಯೂಷನ್‌ ಹೆಡ್‌ ಘನಶ್ಯಾಮ್‌ ಸಿಂಗ್ ಹಾಗೂ ಹಂಸ ರಿಸರ್ಚ್‌ ಗ್ರೂಪ್‌ನ ಸಿಇಒ ಪ್ರವೀಣ್‌ ನಿಝಾರ, ಮತ್ತೊಬ್ಬ ಸಿಬ್ಬಂದಿಯನ್ನು ವಿಚಾರಣೆಗೆ ಕರೆಯಲಾಗಿದೆ.

'ಭಾನುವಾರ ಬೆಳಿಗ್ಗೆ 9ಕ್ಕೆ ಎಲ್ಲರೂ ಹಾಜರಿರುವಂತೆ ಶನಿವಾರ ಸಮನ್ಸ್ ನೀಡಲಾಗಿದ್ದು, ಹಣಕಾಸು ಆಯಾಮದಿಂದ ಟಿಆರ್‌ಪಿ ಹಗರಣದ ತನಿಖೆ ನಡೆಯಲಿದೆ' ಎಂದು ಪೊಲೀಸ್‌ ಅಪರಾಧ ದಳದ ಜಂಟಿ ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ರಿಪಬ್ಲಿಕ್‌ ಟಿವಿ ಎಡಿಟರ್‌–ಇನ್‌–ಚೀಫ್ ಅರ್ನಬ್‌ ಗೋಸ್ವಾಮಿ ಶುಕ್ರವಾರ ಚಾನೆಲ್‌ನ ವೆಬ್‌ಸೈಟ್‌ನಲ್ಲಿ ವಿಡಿಯೊ ಸಂದೇಶ ಪ್ರಕಟಿಸಿದ್ದು, 'ಎಫ್‌ಐಆರ್‌ನಲ್ಲಿ ಚಾನೆಲ್‌ನ ಹೆಸರು ನಮೂದಿಸಿಲ್ಲ. ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದ ಸಂಬಂಧ ಮಾಡಿರುವ ವರದಿಗಳಿಗಾಗಿ ಚಾನೆಲ್‌ನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಹಾಗೂ ಪೊಲೀಸರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ' ಎಂದಿದ್ದಾರೆ.

ಘನಶ್ಯಾಮ್‌ ಸಿಂಗ್‌ ಅವರಿಗೆ ಎರಡನೇ ಬಾರಿ ಸಮನ್ಸ್‌ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್‌ 9ರಂದು ನೀಡಲಾದ ಸಮನ್ಸ್‌ಗೆ ಪ್ರತಿಕ್ರಿಯಿಸಿದ್ದ ಸಿಂಗ್‌, ಅಕ್ಟೋಬರ್‌ 16ರ ವರೆಗೂ ನಗರದಲ್ಲಿ ಇರುವುದಿಲ್ಲ ಎಂದಿದ್ದಾರೆ. ಎರಡನೇ ಸಮನ್ಸ್‌ನಲ್ಲಿ ಅಕ್ಟೋಬರ್‌ 11ರಂದು ಹಾಜರಾಗುವಂತೆ ಸೂಚಿಸಲಾಗಿದೆ.

ರಿಪಬ್ಲಿಕ್‌ ಟಿವಿ ಸಿಎಫ್‌ಒ ಶಿವ ಸುಂದರಂ ಮುಂಬೈ ಪೊಲೀಸರಿಗೆ ಪತ್ರ ಬರೆದು, ಅಕ್ಟೋಬರ್‌ 14–15ರಂದು ತನಿಖೆಯಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು. ಹಾಗೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಸಂಬಂಧ ರಿಟ್‌ ಅರ್ಜಿ ವಿಚಾರಣೆ ನಡೆಯುವವರೆಗೆ ತನಿಖೆ ಮುಂದುವರಿಸದಂತೆ ಕೇಳಿದ್ದಾರೆ.

ಮ್ಯಾಡಿಸನ್‌ ವರ್ಲ್ಡ್ ಮತ್ತು ಮ್ಯಾಡಿಸನ್‌ ಕಮ್ಯುನಿಕೇಷನ್ಸ್‌ ಮುಖ್ಯಸ್ಥ ಸ್ಯಾಮ್‌ ಬಾಲ್ಸಾರ, ಬಾಕ್ಸ್‌ ಸಿನೆಮಾ ಮತ್ತು ಫಕ್ತ್ ಮರಾಠಿ ಟಿವಿಯ ಅಕೌಂಟೆಟ್‌ಗಳ ಹೇಳಿಕೆಗಳನ್ನು ಶನಿವಾರ ದಾಖಲಿಸಿಕೊಳ್ಳಲಾಗಿದೆ.

ಫಕ್ತ್‌ ಮರಾಠಿ ಮತ್ತು ಬಾಕ್ಸ್‌ ಸಿನೆಮಾ ಚಾನೆಲ್‌ಗಳ ಮಾಲೀಕರು ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪ್ರಸ್ತುತ ಟಿಆರ್‌ಪಿ ಲೆಕ್ಕಾಚಾರ ನಡೆಸುವತ್ತಿರುವ ಬಾರ್ಕ್‌ ಸಂಸ್ಥೆಯು ಹಂಸ ರಿಸರ್ಚ್‌ ಗ್ರೂಪ್‌ ಪ್ರೈ.ಲಿ., ಮೂಲಕ ಟಿಆರ್‌ಪಿ ಹಗರಣದ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT