ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತಾಟ ತೆರೆಯ ಹಿನ್ನೆಲೆಗೆ ಸರಿಸಿದೆ

Last Updated 20 ಏಪ್ರಿಲ್ 2019, 9:35 IST
ಅಕ್ಷರ ಗಾತ್ರ

ಕಿರುತೆರೆಯತ್ತ ಮತ್ತೆ ಹೊರಳಿ ನೋಡಿದ್ದು ಏಕೆ?

ಪೌರಾಣಿಕ ರಂಗಭೂಮಿಯ ಮೋಹದಿಂದಲೇ ನಾನು ಕಲಾವಿದನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ನಾನು ನಾಲ್ಕನೆಯ ತರಗತಿಯಲ್ಲಿ ಓದುವಾಗ ಪೌರಾಣಿಕ ನಾಟಕದಲ್ಲಿ ಪಾತ್ರವನ್ನು ನಿರ್ವಹಿಸಿದ್ದೆ. ಗ್ರಾಮೀಣ ರಂಗಭೂಮಿಗೆ ಆರಂಭದಲ್ಲಿ ತೊಡಗಿಕೊಳ್ಳಲು ನನ್ನ ತಂದೆ ಮತ್ತು ನಮ್ಮ ಹಿರಿಯ ಅಣ್ಣಯ್ಯ ಕೂಡ ಕಾರಣ. ‘ಚಂದ್ರಹಾಸ’ ನಾಟಕದಲ್ಲಿ ಬಾಲಚಂದ್ರಹಾಸನ ಪಾತ್ರವನ್ನು ನಿರ್ವಹಿಸುವ ಮೂಲಕ ನನಗೆ ಒಂದು ರೀತಿಯಲ್ಲಿ ರಂಗ ದೀಕ್ಷೆ ಆಯಿತು. ನಂತರ ಅನೇಕ ಪೌರಾಣಿಕ ನಾಟಕಗಳನ್ನು ಬಾಲ್ಯದಲ್ಲಿ ನೋಡುವ– ನಟಿಸುವ ಅಭ್ಯಾಸ ರೂಢಿಯಾಯಿತು. ‘ಮಹಾಭಾರತ’ ‘ಕುರುಕ್ಷೇತ್ರ’ ‘ರಾಮಾಯಣ’ ವಸ್ತು ಆಧಾರಿತ ಅನೇಕ ನಾಟಕಗಳಲ್ಲಿ ನಟಿಸಿದೆ. ನಮ್ಮೂರು ಜಾಲ ಬೆಂಗಳೂರಿನ ಉತ್ತರ ದಿಕ್ಕಿನಲ್ಲಿದೆ. ಅಂದಿನ ನಮ್ಮ ಮನೆ ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಾಗಿ ನೆಲಸಮವಾಗಿದೆ. ಕಾಲೇಜು ದಿನಗಳಲ್ಲಿ ಗ್ರಾಮೀಣ ರಂಗಭೂಮಿಯಿಂದ ಹವ್ಯಾಸಿ ರಂಗಭೂಮಿಯತ್ತ ಮುಖ ಮಾಡಿದೆ. ‘ಭಾರತ ಯಾತ್ರಾ ಕೇಂದ್ರ’ ಏರ್ಪಡಿಸುತ್ತಿದ್ದ ಕಾಲೇಜು ನಾಟಕ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ತಂಡದ ನಾಟಕದಲ್ಲಿ ಅಭಿನಯಿಸುತ್ತಿದ್ದೆ. ಕ್ರಮೇಣ ಯಾತ್ರಾ ಕೇಂದ್ರದ ಸಂಚಾಲಕರಲ್ಲಿ ಒಬ್ಬನಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದೆ.

ಈಗ ಇರುವ ಕಾರ್ಯದ ಒತ್ತಡದ ಕಾರಣಕ್ಕೆ ಅಭಿನಯಕ್ಕೆ ಅವಕಾಶ ಕೊಡಲು ಆಗುತ್ತಿಲ್ಲ. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಲು ಸ್ನೇಹಿತರು ಒತ್ತಾಯಿಸುತ್ತಾರೆ. ಸಮಯದ ಹೊಂದಾಣಿಕೆ ಆಗದ ಕಾರಣಕ್ಕಾಗಿಯೇ ನಿರಾಕರಿಸಿದ್ದೇನೆ. ‘ವಿಷ್ಣುದಶಾವತಾರ’ ಕೆಲವು ಕಂತುಗಳಲ್ಲಿ ಮುಗಿಯುವ ಪಾತ್ರ ಆಗಿದ್ದರಿಂದ ಒಪ್ಪಿದ್ದೇನೆ. ಇದರಲ್ಲಿ ಪ್ರಹ್ಲಾದನ ಗುರುಗಳಲ್ಲಿ ಒಬ್ಬರಾದ ಶಂದರ ಪಾತ್ರ ನನ್ನ ಪಾಲಿಗೆ ಬಂದಿದೆ. ವಿಷ್ಣು ತನ್ನ ನಾಲ್ಕನೇ ಅವತಾರದಲ್ಲಿ ಉಗ್ರನರಸಿಂಹನಾಗಿ ಹಿರಣ್ಯ ಕಶಿಪುನನ್ನು ಸಂಹರಿಸುತ್ತಾನೆ. ಈ ಧಾರಾವಾಹಿ ಕನ್ನಡ ಮತ್ತು ತಮಿಳಿನಲ್ಲಿ ಏಕ ಕಾಲಕ್ಕೆ ಚಿತ್ರೀಕರಣ ಮಾಡಲಾಗುತ್ತಿದೆ.

* ಸುತ್ತಾಟ, ಸಂಘಟನೆ ನಡುವೆ ಸಮಯ ಹೇಗೆ ಹೊಂದಿಸುತ್ತೀರಿ?

ಜನಪದ ಕಲಾ ಪ್ರಕಾರಗಳ ಪ್ರದರ್ಶನ ಮತ್ತು ಸಂಘಟನೆಯಲ್ಲಿ ತೊಡಗಿದ್ದೇನೆ. ವರ್ಷದಲ್ಲಿ ಮೂರು ನಾಲ್ಕು ತಿಂಗಳು ಪ್ರವಾಸದಲ್ಲಿಯೇ ಮುಗಿಯುತ್ತದೆ. ಕಳೆದ ಮೂರು ವರ್ಷಗಳಿಂದ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ‘ಭಾರತ ಪರ್ವ’ ಕಾರ್ಯಕ್ರಮಕ್ಕೆ ಕರ್ನಾಟಕದ ಕಲಾವಿದರನ್ನು ಮತ್ತು ಸ್ತಬ್ಧ ಚಿತ್ರವನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಮಾಡುತ್ತಿದ್ದೇನೆ. ಈ ವರ್ಷ ಬೆಳಗಾವಿ, ಹಾವೇರಿ ಜಿಲ್ಲೆಯ ಕಲಾವಿದರ ಜೊತೆ ಹೋಗುತ್ತಿದ್ದೇನೆ. ಇದರ ಜೊತೆಗೆ ಜನಪದ ಜಾತ್ರೆ– ಉತ್ಸವ, ರಂಗಸಂಘಟನೆ ಮಾಡುತ್ತೇನೆ.

ನೀವು ನಟಿಸಿದರೆ ಪ್ರಶಸ್ತಿ ಖಚಿತ ಎನ್ನುವ ಮಾತಿದೆಯಲ್ಲಾ?

ಆ ರೀತಿಯ ಮಾತು ನಮ್ಮ ಗೆಳೆಯರ ಬಳಗದಲ್ಲಿದೆ. ಹಾಗೆಯೇ ರೇಗಿಸಿ ಪ್ರೀತಿಯ ಆಹ್ವಾನಗಳು ಬರುತ್ತವೆ. ನನಗೆ ಇಷ್ಟವಾದರೆ ಮಾತ್ರ ನಟಿಸುತ್ತೇನೆ. ಕಾಕತಾಳೀಯ ಎಂದರೆ ನಾನು ನಟಿಸಿರುವ ಸಿನಿಮಾಗಳಿಗೆ ಒಂದಲ್ಲ ಒಂದು ಪ್ರಶಸ್ತಿ ಲಭಿಸಿದೆ. ‘ಕಬಡ್ಡಿ’ ‘ಹಾಡು ಹಕ್ಕಿ ಹಾಡು’ ‘ಹೆಬ್ಬೆಟ್ಟು ರಾಮಕ್ಕ’ ‘ನಾನು ಅವಳಲ್ಲ ಅವನು’ ಇವೇ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಎಲ್ಲಾ ಸಿನಿಮಾಗಳೂ ಪುರಸ್ಕಾರಕ್ಕೆ ಪಾತ್ರವಾಗಿದ್ದಕ್ಕೆ ಹಾಗೆ ಹೇಳುತ್ತಾರೆ ಅಷ್ಟೆ. ಅದರಲ್ಲಿ ವಿಶೇಷ ಏನೂ ಇಲ್ಲ. ‘ಕಬಡ್ಡಿ’ಯಲ್ಲಿ ಕಾರ್ಯಕಾರಿ ನಿರ್ಮಾಪಕ ಕೂಡ ಆಗಿದ್ದೆ. ನಂತರ ಸಿನಿಮಾ ನಿರ್ದೇಶನಕ್ಕೆ ನನಗೆ ಅವಕಾಶಗಳು ಬಂದಿದ್ದವು. ಆದರೆ ಅಂತಹ ಧೈರ್ಯವನ್ನು ನಾನು ತೆಗೆದುಕೊಳ್ಳಲು ಬಯಸಲಿಲ್ಲ. ಏಕೆಂದರೆ ಯಾರದ್ದೇ ಹಣವಾದರೂ ನನ್ನದೇ ಹಣ ಎನ್ನುವ ಭಾವನೆ ನನ್ನದು. ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ನಿರ್ಮಾಣ ಎನ್ನುವುದು ನನಗೆ ಜೂಜಿನಂತೆ ಗೋಚರಿಸುತ್ತದೆ. ನಿರ್ಮಾಪಕರಿಗೆ ಭ್ರಮೆಯನ್ನು ಸೃಷ್ಟಿಸಲು ನನ್ನಿಂದ ಸಾಧ್ಯವಿಲ್ಲ. ಅದೇ ಕಾರಣಕ್ಕೆ ನಯವಾಗಿ ನಿರಾಕರಿಸಿದ್ದೇನೆ. ಸ್ನೇಹಿತರ ಸಹಭಾಗಿತ್ವದಲ್ಲಿ ಕಲಾತ್ಮಕ ಸಿನಿಮಾ ಮಾಡುವ ಬಯಕೆ ಮಾತ್ರ ಇದೆ.

* ನಿಮ್ಮದೇ ಆದ ಹೊಸ ಮಾರ್ಗಕ್ಕಾಗಿ ಹುಡುಕಾಟ ನಡೆಸಿದ್ದೀರಾ?

ಹಾಗೇನೂ ಇಲ್ಲ. ಪದವಿ ನಂತರ ‘ನೀನಾಸಂ’ಗೆ ಅಭಿನಯ ಕಲಿಯಲು ಹೋಗುವ ಆಸಕ್ತಿ ಇತ್ತು. ನಂತರ ‘ನ್ಯಾಷನಲ್‌ ಡ್ರಾಮಾ ಸ್ಕೂಲ್‌’ ಸೇರುವ ಬಯಕೆ ಇತ್ತು. ಅಷ್ಟರಲ್ಲಾಗಲೇ ಸಿಜಿಕೆ ಅವರ ರಂಗ ಗರಡಿಯಲ್ಲಿ ಪ್ರವೇಶ ಪಡೆದಿದ್ದರಿಂದ ರಂಗ ಸಿದ್ಧಾಂತ ಕಲಿಯುವುದಕ್ಕಿಂತ ರಂಗ ಪ್ರಯೋಗಗಳನ್ನೇ ಮಾಡು ಎಂದು ಅವರು ಹೇಳಿದ್ದರಿಂದ ಅದಾವುದೂ ಕೈಗೂಡಲಿಲ್ಲ. ‘ಪ್ರಯೋಗ ರಂಗ’ ತಂಡದಲ್ಲಿ ಸಕ್ರಿಯನಾದೆ. ಸುಮಾರು ವರ್ಷ ಕಳೆದ ನಂತರ ಬೆಂಗಳೂರು ವಿವಿಯಲ್ಲಿ ಡಿಡಿಎಂನಲ್ಲಿ ಎಂಎ ಮಾಡಿದೆ. ರಂಗಾನುಭವದ ಹಿನ್ನೆಲೆ ಇದ್ದಿದ್ದರಿಂದ ಒಳ್ಳೆಯ ಫಲಿತಾಂಶವನ್ನು ಪಡೆದೆ. ಪ್ರಥಮ ರ‍್ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕಗಳನ್ನು ದಕ್ಕಿಸಿಕೊಂಡೆ. ಈಗ ಶಿವಪ್ರಕಾಶ ಅವರ ನಾಟಕಗಳ ಮೇಲೆ ಸಂಶೋಧನೆಯನ್ನೂ ಕೈಗೊಂಡಿದ್ದೇನೆ. ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಸಹನಿರ್ದೇಶಕ ಮತ್ತು ಸಂಚಿಕೆ ನಿರ್ದೇಶಕನಾಗಿ ನಾಲ್ಕಾರು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT