ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರುತೆರೆಯಲ್ಲಿ ಯೋಗಿಯ ಹೊಸ‘ಗಾನ ಬಜಾನಾ’

Last Updated 24 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್‌ ಜತೆಗೆ ‘ಲೈಫ್‌ ಸೂಪರ್‌ ಗುರು’ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದ ನಟ ಯೋಗಿಗೆ ‘ಗಾನ ಬಜಾನಾ’ ಎರಡನೇ ರಿಯಾಲಿಟಿ ಶೋ ಎನಿಸಿದೆ.‌ ಯೋಗಿ ನಿರೂಪಣೆಯ ಗಾನ ಬಜಾನಾದಲ್ಲಿ ವೀಕ್ಷಕರು ಮಸ್ತ್‌ ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ..

ನಟ ಯೋಗಿ ಅಲಿಯಾಸ್‌ ‘ಲೂಸ್‌ ಮಾದ’ ಮದುವೆ ನಂತರ, ಅದರಲ್ಲೂ ಮಗಳು ಹುಟ್ಟಿದ ಮೇಲಂತೂ ಕೆಲಕಾಲ ಬಣ್ಣದ ಬದುಕಿನಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ಯಾವುದೇ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಚಿತ್ರರಂಗ ಅವರನ್ನು ಇನ್ನೇನು ಮರೆತೇಬಿಟ್ಟಿತು ಎನ್ನುವಷ್ಟರಲ್ಲಿ ಯೋಗಿ ಈಗ ಮತ್ತೆ ಬಣ್ಣದ ಬದುಕಿಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.

ಯೋಗಿ ನಡೆಸಿಕೊಡುವ ವೀಕೆಂಡ್‌ ಸೆಲೆಬ್ರಿಟಿ ಶೋ ‘ಗಾನ ಬಜಾನಾ’ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ನವೆಂಬರ್‌ನಲ್ಲಿ ಆರಂಭವಾಗಲಿದೆ.

ಕಿರುತೆರೆ ವೀಕ್ಷಕರನ್ನು ರಂಜಿಸುವ ಜತೆಗೆ ಕೈತುಂಬಾ ಸಿನಿಮಾ ಒಪ್ಪಿಕೊಂಡಿರುವ ಯೋಗಿ ಸಿನಿ ರಸಿಕರನ್ನು ಮತ್ತು ಅವರ ಅಭಿಮಾನಿಗಳನ್ನೂ ಮತ್ತೆ ಖುಷಿಪಡಿಸುವತವಕದಲ್ಲಿದ್ದಾರೆ. ಅವರ ನಟನೆಯ ಸಾಲು ಸಾಲು ಚಿತ್ರಗಳು2020ರಲ್ಲಿ ತೆರೆ ಕಾಣಲಿವೆ. ‘ಒಂಬತ್ತನೇ ದಿಕ್ಕು’, ‘ಕಿರಿಕ್‌ ಶಂಕರ’ ಹಾಗೂ ‘ಲಂಕೆ’ ಈ ಮೂರು ಸಿನಿಮಾಗಳು ಬರುವಜನವರಿ ಅಥವಾ ಫೆಬ್ರುವರಿಯಲ್ಲಿ ತೆರೆಗೆ ಲಗ್ಗೆ ಇಡಲಿವೆ. ಇದಲ್ಲದೆ ಅವರ ಕೈಯಲ್ಲಿ ಇನ್ನೂ ಎರಡು ಹೊಸ ಚಿತ್ರಗಳಿದ್ದು, ಜತೆಗೆ ಹೋಂ ಬ್ಯಾನರ್‌ ಕೂಡ ಆರಂಭಿಸಿ, ಚಿತ್ರಗಳ ನಿರ್ಮಾಣಕ್ಕೂ ಅವರು ಕೈ ಇಟ್ಟಿದ್ದಾರೆ.

‘2020ರಲ್ಲಿನನ್ನದೇ ಹವಾ ಆಗಿರಲಿ’ ಎನ್ನುವ ಆಸೆ ಇಟ್ಟುಕೊಂಡಿರುವ ಯೋಗಿಗೆ ಚಿತ್ರರಂಗದಿಂದ ದೂರವುಳಿದಿದ್ದಕ್ಕೆ ನಿಜವಾದ ಕಾರಣವೇನು ಎಂದು ಕೇಳಿದರೆ, ‘ಹಾಗೇನು ಇಲ್ಲ. ಯಾಕೋ ಸ್ವಲ್ಪ ಬೇಸರವಾಗಿತ್ತು. ಹಾಗಾಗಿ ಬಿಡುವು ತೆಗೆದುಕೊಂಡಿದ್ದೆ. ಒಂದಿಷ್ಟು ಹೊಸತನದಿಂದ ಮತ್ತೆ ವಾಪಸಾಗುತ್ತಿದ್ದೇನೆ.ಎರಡನೇ ಇನಿಂಗ್ಸ್‌ನಲ್ಲಿ ಮತ್ತೆ ಹಿಂತಿರುಗಿ ನೋಡಬಾರದೆನ್ನುವ ಸಂಕಲ್ಪ ಮಾಡಿದ್ದೇನೆ’ ಎಂದರು.

‘ಗಾನಾ ಬಜಾನಾ’ದ ಬಗ್ಗೆ ಮಾತಿಗಿಳಿದಅವರು, ‘ಇದೊಂದುಸ್ಪೆಷಲ್‌ ಫನ್‌ ಎಲಿಮೆಂಟ್‌ ಇರುವ ಸೆಲೆಬ್ರಿಟಿ ರಿಯಾಲಿಟಿ ಶೋ. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ವೀಕ್ಷಕರನ್ನು ನಕ್ಕುನಗಿಸುವ ಉದ್ದೇಶದಿಂದ ನಡೆಸುತ್ತಿರುವ ಶೋ ಇದಾಗಿದೆ’ ಎಂದರು.

‘ಜನರು ಮರೆಯುವ ಮೊದಲು ಮತ್ತೆಬಣ್ಣದ ಬದುಕಿಗೆ ವಾಪಸಾಗುತ್ತಿದ್ದೇನೆ. ಅದೂ ಕಿರುತೆರೆ ಮತ್ತು ಹಿರಿತೆರೆಗೂ ನಾನು ಸೈ ಎಂದುಕೊಂಡೇ ಸೆಕೆಂಡ್‌ ಇನಿಂಗ್ಸ್‌ ಶುರು ಮಾಡಿದ್ದೇನೆ. ಮುಂಬರುವ ನನ್ನ ಚಿತ್ರಗಳಲ್ಲಿ ಕಥೆ, ನಿರ್ದೇಶಕರಿಂದ ಹಿಡಿದು ಎಲ್ಲದರಲ್ಲೂ ಹೊಸತನವಿರಲಿದೆ. ಹಳೆಯ ಯೋಗಿ ಅಂದರೆ, ಪಾತ್ರದಲ್ಲಿ ದುರಂತ ನಾಯಕ ಇರುವುದಿಲ್ಲ. ಹೊಸ ಯೋಗಿ ಮಸ್ತ್‌ ಎಂಟರ್‌ಟೈನ್‌ಮೆಂಟ್‌ ನೀಡಲಿದ್ದಾನೆ’ಎಂದು ಹೇಳಲು ಅವರು ಮರೆಯಲಿಲ್ಲ.

ನಾಯಕನಾಗಿ ನಟಿಸುತ್ತಿರುವತಮ್ಮ ಸಾಲು ಸಾಲು ಸಿನಿಮಾಗಳ ಬಗ್ಗೆಯೂ ಮಾಹಿತಿ ಅರುಹಿದ ಯೋಗಿ, ದಯಾಳ್‌ ಪದ್ಮನಾಭನ್‌ ನಿರ್ದೇಶನದ‘ಒಂಬತ್ತನೇ ದಿಕ್ಕು’ ಸಿನಿಮಾ ಬಹುತೇಕ ಪೂರ್ಣಗೊಂಡಿದೆ. ಇದರಲ್ಲಿನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಎನ್‌.ಕುಮಾರ್‌ ನಿರ್ದೇಶನ– ನಿರ್ಮಾಣದ‘ಕಿರಿಕ್‌ ಶಂಕರ’ ಸಿನಿಮಾದ ಚಿತ್ರೀಕರಣ 30 ದಿನ ಬಾಕಿ ಇದೆ.ಹಾಗೆಯೇರಾಮ್‌ ಪ್ರಸಾದ್‌ ನಿರ್ದೇಶನದ‘ಲಂಕೆ’ ಬಹುತೇಕ ಪೂರ್ಣ ಆಗಿದ್ದು, ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಈ ಚಿತ್ರದಲ್ಲಿ ಕೃಷಿ ತಾಪಂಡ ಮತ್ತು ಕಾವ್ಯ ಶೆಟ್ಟಿ ನಾಯಕಿಯರಾಗಿಅಭಿನಯಿಸಿದ್ದಾರೆ. ಈ ಚಿತ್ರವನ್ನು ತಮಿಳಿನಲ್ಲೂ ಬಿಡುಗಡೆ ಮಾಡುವ ಉದ್ದೇಶವಿದ್ದು, ಚಿತ್ರದ ಬಜೆಟ್‌ ₹15 ಕೋಟಿ ದಾಟುವ ಅಂದಾಜು ಇದೆ ಎಂದು ಮಾತು ಸೇರಿಸಿದರು.

‘ವಿಜಯಪ್ರಸಾದ್‌ ನಿರ್ದೇಶನದ ‘ಪರಿಮಳ ಲಾಡ್ಜ್‌’ನಲ್ಲಿ ನೀನಾಸಂ ಸತೀಶ್‌ ಮತ್ತು ನಾನು ನಟಿಸುತ್ತಿದ್ದು,ಡಿಸೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಅಲ್ಲದೆ, ಹೋಂ ಪ್ರೊಡಕ್ಷನ್‌ ಎಂವೈ ಫಿಲಂ ಫ್ಯಾಕ್ಟರಿ ಆರಂಭಿಸಿದ್ದೇನೆ.‘ಕಂಸ’ ಚಿತ್ರವನ್ನು ಸ್ವಂತ ಬ್ಯಾನರ್‌ನಲ್ಲಿ ಮಾಡಲಿದ್ದೇನೆ. ನಾನು ಒಪ್ಪಿಕೊಂಡಿರುವ ಚಿತ್ರಗಳು ಮುಗಿದ ನಂತರ ಬೇರೆಯವರ ಚಿತ್ರಗಳನ್ನೂ ನನ್ನ ಬ್ಯಾನರ್‌ನಲ್ಲಿ ನಿರ್ಮಿಸಲಿದ್ದೇನೆ’ ಎಂದು ಅವರ ಹೊಸ ಯೋಜನೆಗಳ ಬಗ್ಗೆಯೂ ಹೇಳಿಕೊಂಡರು.

ನಾಲ್ಕು ಲಕ್ಷ ಗೆಲ್ಲುವ ಅವಕಾಶ

ಗಾಯನದ ಜತೆಗೆ ತಂಡದ ಪ್ರದರ್ಶನ ಈ ಶೋ ಪರಿಕಲ್ಪನೆ. ನಾಲ್ಕು ಸುತ್ತಿನ ಸ್ಪರ್ಧೆ ಇರಲಿದೆ. ಮೊದಲ ಸುತ್ತಿನಲ್ಲಿ ವಿಜೇತರಾದರೆ ₹1 ಲಕ್ಷ, 2ನೇ ಸುತ್ತಿನ ವಿಜೇತರಿಗೆ ₹2 ಲಕ್ಷ, ಮೂರನೇ ಸುತ್ತಿಗೆ ₹3 ಲಕ್ಷ ಹಾಗೂ ನಾಲ್ಕನೇ ಸುತ್ತಿನಲ್ಲಿ ವಿಜೇತರಾದರೆ ಒಟ್ಟು ₹ 4 ಲಕ್ಷ ನಗದು ಬಹುಮಾನ ಸಿಗಲಿದೆ.

‘ಭರಾಟೆ’ ಚಿತ್ರದ ಶ್ರೀಮುರಳಿ, ಶ್ರೀಶೀಲಾ, ಸಾಯಿಕುಮಾರ್‌ ತಂಡದಎದುರಾಳಿ ತಂಡವಾಗಿಗುರುಕಿರಣ್‌, ಸೋನುಗೌಡ, ಶುಭಾ ಪೂಂಜಾ ಗಾನ ಬಜಾನಾದ ಮೊದಲ ಎಪಿಸೋಡ್‌ನಲ್ಲಿಮೋಡಿ ಮಾಡಲಿದ್ದಾರೆ. ಎರಡನೇ ಎಪಿಸೋಡಿನಲ್ಲಿ ಒರಟ ಪ್ರಶಾಂತ್‌, ಸಂತೋಷ್‌, ಕೃಷಿ ತಾಪಂಡ ತಂಡದ ಎದುರು ನೇಹಾ ಪಾಟೀಲ್‌,ಜೆ.ಕೆ., ಕೃಷಿ ತಾಪಂಡ ಅವರ ತಂಡ ಗಾನ ಬಜಾನಾ ಬಾರಿಸಲಿದೆ.

ಮೂರನೇ ಎಪಿಸೋಡಿನಲ್ಲಿ ನೀನಾಸಂ ಸತೀಶ್‌, ಅದಿತಿ ಪ್ರಭುದೇವ, ಚಂದ್ರ ಮೋಹನ್‌ ತಂಡದ ಎದುರುರಾಧಿಕಾ ಚೇತನ್‌, ಪ್ರವೀಣ್‌, ಅನನ್ಯ ಕಶ್ಯಪ್‌ ಗಾನ ಬಜಾನ ನಡೆಯಲಿದೆ. ಹೀಗೆ ಒಂದೊಂದು ಎಪಿಸೋಡ್‌ನಲ್ಲೂ ಚಿತ್ರರಂಗದ ನಟ–ನಟಿಯರು, ಕಿರುತೆರೆ, ರಿಯಾಲಿಟಿ ಶೋ ಸೆಲೆಬ್ರಿಟಿಗಳು ತಂಡವಾಗಿ ಸ್ಪರ್ಧಿಸಲಿದ್ದಾರೆ.

ಈ ರಿಯಾಲಿಟಿ ಶೋ ನಿರ್ದೇಶನ ಸಂಜೀವ್‌ ಅವರದ್ದು. ‘ದಿಲ್‌ಮಾರ್‌’ ಸಿನಿಮಾದ ನಾಯಕ ರಾಮ್‌ಗೌಡಮತ್ತು ಅವರ ಪತ್ನಿ ದಿವ್ಯಾ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಅ.23ರಿಂದಲೇ ಚಿತ್ರೀಕರಣ ಆರಂಭವಾಗಿದ್ದು, ದಿನಕ್ಕೆ ಎರಡು ಎಪಿಸೋಡ್‌ನಂತೆ 12 ದಿನಗಳ ಕಾಲ ನಿರಂತರ ರಾಕ್‌ಲೈನ್‌ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಯಲಿದೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿನವೆಂಬರ್‌ 9ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ರಿಂದ 10ರವರೆಗೆ ಈ ಶೋ ಮೂರು ತಿಂಗಳ ಕಾಲ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT