ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀ ಕನ್ನಡದ ‘ಜೊತೆಜೊತೆಯಲಿ’ ಶೀಘ್ರದಲ್ಲಿ ಮುಕ್ತಾಯ, ‘ಸೀತಾ ರಾಮ’ ಪ್ರಾರಂಭ?

Last Updated 18 ಜನವರಿ 2023, 11:46 IST
ಅಕ್ಷರ ಗಾತ್ರ

ನಿರ್ಮಾಣ ಸಂಸ್ಥೆ ಜೊತೆಗೆ ನಟ ಅನಿರುದ್ಧ ವಿವಾದದ ಬಳಿಕ ಜೀ ಕನ್ನಡದ ‘ಜೊತೆಜೊತೆಯಲಿ’ ಧಾರಾವಾಹಿ ಅಂತ್ಯವಾಗುತ್ತೆ ಎಂಬ ಸುದ್ದಿ ಹರಡಿತ್ತು. ಮೂಲಗಳ ಪ್ರಕಾರ ಒಂದೊಮ್ಮೆ ವಿವಾದವಾಗದಿದ್ದರೂ ಕಥೆ ಹಾಗೂ ಮತ್ತಿತರ ಆಂತರಿಕ ಕಾರಣಗಳಿಂದ ಈ ಧಾರಾವಾಹಿಯನ್ನು ಶೀಘ್ರದಲ್ಲಿ ಮುಗಿಸಲು ವಾಹಿನಿ ಮತ್ತು ನಿರ್ಮಾಣ ಸಂಸ್ಥೆ ಆಲೋಚಿಸಿತ್ತು. ಅನಿರೀಕ್ಷಿತ ವಿವಾದದಿಂದಾಗಿ ಧಾರಾವಾಹಿ ಸ್ವಲ್ಪ ಕಾಲ ಮುಂದುವರಿಸುವ ಪರಿಸ್ಥಿತಿ ಎದುರಾಯಿತು. ಈಗ ಜೊತೆಜೊತೆಯಲಿ ಕೊನೆಗೊಳ್ಳುವ ಸಮಯ ಬಂದಿದೆ ಎನ್ನುತ್ತಿವೆ ಮೂಲಗಳು.

ಧಾರಾವಾಹಿಯ ಪ್ರಮುಖ ಪಾತ್ರಧಾರಿಯಾಗಿದ್ದ ಆರ್ಯವರ್ಧನ್‌(ಅನಿರುದ್ಧ) ಇಲ್ಲದೆ ಕಥೆ ಮುಂದುವರಿಸುವುದು ಕಷ್ಟವಾದರೂ ಕೂಡ, ಕಥೆಯಲ್ಲೇ ಬದಲಾವಣೆ ಮಾಡಿಕೊಳ್ಳಲಾಯಿತು. ನಟ ಹರೀಶ್‌ ರಾಜ್‌ ಹೊಸದೊಂದು ಪಾತ್ರದೊಂದಿಗೆ ಧಾರಾವಾಹಿ ತಂಡ ಸೇರಿಕೊಂಡರು. ಅನು ಸಿರಿಮನೆ ಸುತ್ತಲಿನ ಕಥೆ ಇಟ್ಟುಕೊಂಡು ಸದ್ಯಕ್ಕೆ ಈ ಧಾರಾವಾಹಿ ಮುಂದುವರಿಯುತ್ತಿದೆ.

ಆರೂರ್‌ ಜಗದೀಶ್‌ ನಿರ್ಮಾಣದ ಮತ್ತೊಂದು ಧಾರಾವಾಹಿ ‘ಭೂಮಿಗೆ ಬಂದ ಭಗವಂತ’ ಪ್ರಸಾರಕ್ಕೆ ಸಿದ್ಧವಾಗಿದೆ. ನವೀನ್‌ ಕೃಷ್ಣ ಮತ್ತು ರಾಧಾ ಕಲ್ಯಾಣದ ಕೃತಿಕಾ ರವೀಂದ್ರ ಮುಖ್ಯಭೂಮಿಯಲ್ಲಿರುವ ಈ ಧಾರವಾಹಿಯ ಪ್ರೊಮೊ ಈಗಾಗಲೇ ಬಿಡುಗಡೆಗೊಂಡಿದ್ದು ಪ್ರಸಾರದ ದಿನಕ್ಕಾಗಿ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೊಂದೆಡೆ ಮಂಗಳಗೌರಿ ಖ್ಯಾತಿಯ ಗಗನ್‌ ಚಿನ್ನಪ್ಪ ಮತ್ತು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಕಲರ್ಸ್‌ ಕನ್ನಡದಿಂದ ಜೀ ಕನ್ನಡ ವಾಹಿನಿಗೆ ಹಾರಿದ್ದಾರೆ. ಇವರಿಬ್ಬರ ನಟನೆಯ ‘ಸೀತಾ ರಾಮ’ ಧಾರಾವಾಹಿಯ ಪ್ರೊಮೊ ಬಿಡುಗಡೆಗೊಂಡಿದ್ದು, ವೀಕ್ಷಕರ ಮನ ಗೆದ್ದಿದೆ. ‘ಸತ್ಯ’ ಖ್ಯಾತಿಯ ಸ್ವಪ್ನ ಕೃಷ್ಣ ನಿರ್ದೇಶನದ ಈ ಧಾರಾವಾಹಿ ಕೂಡ ಪ್ರಸಾರಕ್ಕೆ ಸಿದ್ಧವಾಗಿದೆ. ನಾಗಿಣಿ ಧಾರಾವಾಹಿ ಕೂಡ ಮುಕ್ತಾಯಗೊಳ್ಳುತ್ತಿದ್ದು ಆ ಜಾಗದಲ್ಲಿ ಸೀತಾರಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

‘ಭೂಮಿಗೆ ಬಂದ ಭಗವಂತ’ ಕಾಮಿಡಿ ಕಥಾವಸ್ತುವಿನ ಧಾರಾವಾಹಿಯಾಗಿರುವುದರಿಂದ ಪ್ರೈಂ ಸ್ಲಾಟ್‌ನಲ್ಲಿ(7–10 ಗಂಟೆ) ಬರುವುದು ಅನುಮಾನ. ಈಗಿನ ಜೊತೆಜೊತೆಯಲಿ ಜಾಗದಲ್ಲಿ ಅಥವಾ 10 ಗಂಟೆಗೆ ಈ ಧಾರಾವಾಹಿ ಬಿತ್ತರಗೊಳ್ಳಬಹುದು. ‘ಸೀತಾ ರಾಮ’ದ ಸಮಯ ನಿಗದಿಯಾಗಿಲ್ಲ. ನಾಗಿಣಿ ಜಾಗಕ್ಕೆ ಇರುವ ಯಾವುದಾದರೂ ಧಾರಾವಾಹಿ ಬಿತ್ತರಿಸಿ 7 ಗಂಟೆ ಅಥವಾ 7.30ರ ಪ್ರೈಂ ಟೈಂನಲ್ಲಿ ಸೀತಾರಾಮ ಬರಬಹುದು ಎನ್ನುತ್ತಿವೆ ಮೂಲಗಳು.

ಒಂದು ಕಾಲಕ್ಕೆ ರಿಯಾಲಿಟಿ ಶೋಗಳಿಗೆ ಮನೆಮಾತಾಗಿದ್ದ ಜೀ ಕನ್ನಡ ಸದ್ಯಕ್ಕೆ ಧಾರಾವಾಹಿ ಪ್ರಿಯರ ನೆಚ್ಚಿನ ವಾಹಿನಿ. ಪುಟ್ಟಕ್ಕನ ಮಕ್ಕಳು, ಸತ್ಯ, ಗಟ್ಟಿಮೇಳದಂತಹ ಜನಪ್ರಿಯ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಕೂಡ ಮುಂಚೂಣಿಯಲ್ಲಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT