ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಕನಕೋಟೆಯ ಹೀರೊ 'ಅರ್ಜುನ'

ಕೆ.ನರಸಿಂಹಮೂರ್ತಿ
Published 10 ಡಿಸೆಂಬರ್ 2023, 0:56 IST
Last Updated 10 ಡಿಸೆಂಬರ್ 2023, 0:56 IST
ಅಕ್ಷರ ಗಾತ್ರ

ಅರ್ಜುನ ಬಹುತೇಕರ ದೃಷ್ಟಿಯಲ್ಲಿ ಅಂಬಾರಿ ಹೊತ್ತ ಆನೆ. ಅದರ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವ ಮಾವುತರ ಅಂತರಂಗದಲ್ಲಿ ಉಳಿದಿರುವ ಅರ್ಜುನನ ಚಿತ್ರ ಬೇರೆಯದೇ ಇದೆ. ಅದನ್ನು ಕಾಣಿಸುವ ನುಡಿನಮನ ಇದು.

‘ಅರ್ಜುನನ ಕತ್ತಿಗೆ ಕಟ್ಟಿದ್ದ ಘಂಟೆ ಸದ್ದಾದರೆ ನಮ್ಮಪ್ಪ, ನಮ್ಮವ್ವ, ನನ್ ಹೆಂಡ್ತಿ, ಮಕ್ಳು ಎಲ್ರೂ ಬೆಲ್ಲ ಹಿಡ್ಕೊಂಡು ಮನೆಯಿಂದ ಈಚೆ ಬರೋವ್ರು. ಈಗ ಯಾರಿಗ್ ಕೊಡೋದು ನಾವು? ಯಾವ್ ಆನೆ ಬರುತ್ತೆ ನಮ್‌ ಹತ್ರಾ? ದೇವ್ರನ್ನ ಕಳ್ಕೊಂಡ್ವಲ್ಲ ಸಾರ್‌ ನಾವು...’

ಹಾಸನದ ಅರಣ್ಯ ಪ್ರದೇಶಗಳಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆಂದು ಬಳ್ಳೆ ಶಿಬಿರದಿಂದ ನವೆಂಬರ್‌ ಕೊನೆ ವಾರ ಅರ್ಜುನನೊಂದಿಗೆ ಹೋಗಿದ್ದ ವಿನು ವಾಪಸು ಬರಿಗೈಯಲ್ಲಿ ಬಂದಿದ್ದರು. ಆದರೆ ಅವರ ಮೈಮೇಲೆ ಗಾಯಗಳಿದ್ದವು. ಮರೆಯಾಗದ ನೋವುಗಳಿದ್ದವು. ಪಡಸಾಲೆಯ ನೆಲದ ಮೇಲೆ, ಅರ್ಜುನನನ್ನು ಕಟ್ಟಿಹಾಕಲು ಬಳಸುತ್ತಿದ್ದ ಹಗ್ಗಗಳ ರಾಶಿ ಇತ್ತು. ಕತ್ತಿಗೆ ಕಟ್ಟುತ್ತಿದ್ದ ಘಂಟೆಯ ಸರಪಳಿಯೂ ಮೌನವಾಗಿತ್ತು.

–ಅದು ಮೈಸೂರಿನ ಎಚ್‌.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಬಳ್ಳೆ ಆನೆ ಶಿಬಿರದ ಹಾಡಿಯ ಮನೆ. ಪಡಸಾಲೆಯಲ್ಲಿ ಕುಳಿತು ಮಾವುತ ವಿನು ಕಣ್ಣೀರಿಡುತ್ತಿದ್ದಾಗ, ಅವರ ಮನೆಯವರೆಲ್ಲರಲ್ಲೂ ದುಃಖ ಮಡುಗಟ್ಟಿತ್ತು. ಅಲ್ಲಿ, ರಾಜನಂತೆ ತಾವು ಸಾಕಿದ ಮನೆಯ ಧೀರ ಮಗನನ್ನು ಅನಿವಾರ್ಯವಾಗಿ ಬೇರೆಲ್ಲೋ ಮಣ್ಣು ಮಾಡಿ ಬಂದ ಅಸಹಾಯಕತೆ ಇತ್ತು. ‘ಕೊನೆಬಾರಿಗೆ ಅವನ ಮುಖ ನೋಡುವ ಅವಕಾಶವನ್ನೂ ಕೊಡಲಿಲ್ಲ’ ಎಂಬ ಆಕ್ರೋಶ, ಸಂಕಟಗಳಿದ್ದವು.

ಕೊನೆ ಇರದ ಶೋಕ

ಕಾರ್ಯಾಚರಣೆಯಲ್ಲಿ ಒಂಟಿ ಸಲಗದ ದಾಳಿಯಿಂದ ವೀರಮರಣವನ್ನಪ್ಪಿದ ಅರ್ಜುನ, ಮೈಸೂರು ದಸರಾ ಉತ್ಸವದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ವಿಶಿಷ್ಟ ಸ್ವಭಾವದ, ಧೀರೋದಾತ್ತ ನಡವಳಿಕೆಯ ಅಪರೂಪದ ಸಾಕಾನೆ. ಈ ಬಾರಿಯ ದಸರೆಯಲ್ಲಿ ‘ನಿಶಾನೆ ಆನೆ’ಯಾಗಿದ್ದೇ ಕೊನೆಯ ನೆನಪು. ಉತ್ಸವಕ್ಕೆಂದು ಗಜಪಡೆ ಜೊತೆಗೆ ಬಂದು ಅರಣ್ಯ ಭವನದಲ್ಲಿ ನಾಲ್ಕು ರಾತ್ರಿ ಕಳೆದು, ಅರಮನೆಗೆ ಗಜಪಡೆ ಪ್ರವೇಶವಾದ ದಿನವೇ, ಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕಲ್ಲಹಟ್ಟಿಯಲ್ಲಿ ಬಾಲಕನ ಕೊಂದ ಹುಲಿ ಸೆರೆ ಕಾರ್ಯಾಚರಣೆಗೆಂದು ಕರೆದೊಯ್ಯಲಾಗಿತ್ತು. ಅದರ ಅಲಂಕಾರವೂ ಮಾಸಿರಲಿಲ್ಲ. ಅದಾಗಿ ಕೆಲವು ತಿಂಗಳು ಕಳೆಯುವಷ್ಟರಲ್ಲೇ, ಅವನ ಅಕಾಲಿಕ ಸಾವಿಗೆ ಇಡೀ ನಾಡು ಬೆಚ್ಚಿಬಿದ್ದಿದೆ. ಬಳ್ಳೆ ಹಾಡಿಯ ಎರಡು ಕುಟುಂಬಗಳನ್ನು ಮಾತ್ರ ಕೊನೆ ಇರದ ಶೋಕಕ್ಕೆ ನೂಕಿದೆ.

1968ರಲ್ಲಿ ಖೆಡ್ಡಾ ವಿಧಾನದಲ್ಲಿ ಇದೇ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದ ಬಳಿಕ ಕೊಡಗಿನ ದುಬಾರೆ ಶಿಬಿರಕ್ಕೆ ಅವನನ್ನು ಕಳಿಸಲಾಗಿತ್ತು. ಮತ್ತೆ ಅಲ್ಲಿಂದ ಬಳ್ಳೆ ಹಾಡಿಗೆ ಬಂದು ಇಲ್ಲಿಯೇ ಹದಿಹರೆಯದ ತುಂಟತನಗಳೊಂದಿಗೇ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಗಂಭೀರನಾಗಿ ಬೆಳೆದ ಅರ್ಜುನ, ಈ ಕುಟುಂಬಗಳಿಗಷ್ಟೇ ಅಲ್ಲದೆ, ಈ ಭಾಗದ ಸುತ್ತಮುತ್ತಲಿನ ಹಳ್ಳಿಜನರೆಲ್ಲರಿಗೂ ‘ಕಾಕನಕೋಟೆಯ ಹೀರೊ’ ಆಗಿದ್ದ.

ಹೀಗಾಗಿಯೇ, ಕೋಟೆಯಿಂದ ಬಳ್ಳೆ ಹಾಡಿಯವರೆಗೆ ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಅರ್ಜುನನ ಆಳೆತ್ತರದ ಬ್ಯಾನರ್‌ಗಳನ್ನು ಜನ ಕಟ್ಟಿ ‘ಕನ್ನಡದ ಕಂದ ಅರ್ಜುನ, ವಿ ಮಿಸ್‌ ಯೂ ಲೆಜೆಂಡ್‌’ ಎಂದು ಬರೆದಿದ್ದರು. 64 ವರ್ಷ ಬದುಕಿದ್ದ ಅವನು ನಿಜಕ್ಕೂ ಕನ್ನಡ ನಾಡು ಮತ್ತು ಕಾಡಿನ ಲೆಜೆಂಡ್‌.

ಬಳ್ಳೆಗೆ ಬಂದಾಗಿನಿಂದ ಸುಮಾರು ನಾಲ್ಕು ದಶಕ ಕಾಲ ಅರ್ಜುನನನ್ನು ಮಾವುತ ದೊಡ್ಡಮಾಸ್ತಿಯವರ ಕುಟುಂಬ ಸಾಕಿತ್ತು. ನಂತರ, ತಮ್ಮ ಕೈಗೆ ಬಂದ ಮೇಲೆ ಕೊನೆವರೆಗೂ ನೋಡಿಕೊಂಡ ಮಾವುತರಾದ ದೊಡ್ಡಪ್ಪಾಜಿ ಮತ್ತು ವಿನುವಿನ ಕುಟುಂಬಕ್ಕೆ ಅವನು ದೇವರೇ ಆಗಿದ್ದ. ಏಕೆಂದರೆ, ಅವನ ಸೇವೆ ಎಂದರೆ ಅವರಿಗೆ ಆನೆ ಸೇವೆ ಅಲ್ಲ, ಗಣಪತಿ ಸೇವೆ. ಅದು ಅವರ ಮನೆ ದೇವರು. ಅರ್ಜುನನ ಎಲ್ಲ ಏಳು–ಬೀಳುಗಳಿಗೆ ಈ ಎರಡು ಕುಟುಂಬಗಳೇ ಜೀವಂತ ಸಾಕ್ಷಿ.

‘ಅದಕ್ಕೆ ವಯಸ್ಸಾಯ್ತು ಅಂತ ಅಂಬಾರಿ ಹೊರೋದರಿಂದ ರಿಟೈರ್‌ಮೆಂಟ್‌ ಕೊಟ್ರು. ಆದರೆ ಹುಲಿ, ಆನೆ ಹಿಡಿಯೋದಕ್ಕೆ ಕರ್ಕೊಂಡು ಹೋಗೋವಾಗ ವಯಸ್ಸಾಗಿರಲಿಲ್ಲವೇ’ ಎಂಬುದು ಈ ಜೀವಗಳು ಸಂಕಟದಿಂದ ಕೇಳುವ ಪ್ರಶ್ನೆ. 

ವಿನುವಿನ ತಂದೆ ದೊಡ್ಡಪ್ಪಾಜಿ ಹತ್ತು ಬಾರಿ ದ್ರೋಣನ ಜೊತೆ ಅಂಬಾರಿ ಹೊತ್ತಿದ್ದವರು. ಅವರ ಎರಡನೇ ಮಗ ರಾಜು, ಅರ್ಜುನನೊಂದಿಗೆ ಕಾವಾಡಿಯಾಗಿದ್ದರು. ಅವರ ಮನೆಯ ಹೆಂಗಸರು, ಚಿಕ್ಕಮಕ್ಕಳಾದಿಯಾಗಿ ಎಲ್ಲರಿಗೂ ಅರ್ಜುನ ಆಪ್ತಸ್ನೇಹಿತನಂತಿದ್ದ. ಈ ಕುಟುಂಬಕ್ಕೆ ಅರ್ಜುನನೊಂದಿಗೆ ಐದು ವರ್ಷದ ನಂಟು.

ಆದರೆ, ದೊಡ್ಡಮಾಸ್ತಿಯವರ ಕುಟುಂಬಕ್ಕೆ ಅರ್ಜುನನೊಂದಿಗೆ ದಶಕಗಳ ನಂಟು. ಚಿಕ್ಕವನಿದ್ದಾಗ ದುಬಾರೆಯಲ್ಲಿ ಮಾವುತ ಸಣ್ಣಪ್ಪನವರ ಕೈಯಲ್ಲಿ ಪಳಗಿ, ಮತ್ತೆ ಬಳ್ಳೆ ಹಾಡಿಗೆ ಬಂದ ಕೆಲ ದಿನಗಳಲ್ಲೇ ಮಾವುತ ಕೂಸ ಅವರಿಂದ ದೊಡ್ಡಮಾಸ್ತಿಯವರಿಗೆ ಅರ್ಜುನನ ಉಸ್ತುವಾರಿ ಬಿದ್ದಿತ್ತು. ಮಕ್ಕಳೊಂದಿಗೆ ಮತ್ತೊಂದು ಮಗುವೆಂಬಂತೆ ಮನೆ–ಕಾಡು ಎರಡೂ ಕಡೆ ಅವನು ಬೆಳೆದ.

ದೊಡ್ಡಮಾಸ್ತಿಯ ಕಕ್ಕುಲತೆ

ಅರ್ಜುನನನ್ನು ಸಾಕುವಲ್ಲಿ ಸಹಾಯಕರ ಶ್ರಮದ ಬಗ್ಗೆ ತೃಪ್ತಿಗೊಳ್ಳದ ದೊಡ್ಡಮಾಸ್ತಿ, ಮೈಸೂರು ಅರಮನೆಯ ಆನೆಗಳನ್ನು ನೋಡಿಕೊಳ್ಳುತ್ತಿದ್ದ ತಮ್ಮಿಬ್ಬರು ಮಕ್ಕಳಾದ ಬೋಳ ಮತ್ತು ಸಣ್ಣಪ್ಪನ ಪೈಕಿ ಎರಡನೆಯವನನ್ನು ಜೊತೆಗೆ ಸೇರಿಸಿಕೊಂಡರು. ತಂದೆಯ ನಿಧನದ ನಂತರ ಸಣ್ಣಪ್ಪ ಮುಂದುವರಿದರು.

ಅಪ್ಪನಿಗೆ ದುಂಬಾಲು ಬಿದ್ದು ಅರ್ಜುನನ ಮೇಲೆ ಹತ್ತುತ್ತಿದ್ದ ನೆನಪುಗಳ ಜೊತೆಗೆ, ಸಣ್ಣಪ್ಪನವರಿಗೆ, ಅದೇ ರೀತಿ ದುಂಬಾಲು ಬೀಳುತ್ತಿದ್ದ ತಮ್ಮ ಮಕ್ಕಳನ್ನೂ ಅರ್ಜುನನ ಮೇಲೆ ಹತ್ತಿಸುತ್ತಿದ್ದ ನೆನಪುಗಳೂ ಇವೆ. ಅರ್ಜುನ ನಡೆದು ಬರುತ್ತಿದ್ದರೆ, ಅವರಿಗೆ ಅಪ್ಪನೇ ಬರುತ್ತಿದ್ದಾನೆಂಬಂತೆ ಕಾಣುತ್ತಿತ್ತು. ಹೀಗೆ ನಾಲ್ಕು ತಲೆಮಾರಿನ ಬದುಕು ಅರ್ಜುನನೊಂದಿಗೆ ಬೆಸೆದುಕೊಂಡಿದೆ.

ಅರ್ಜುನ ಭೌತಿಕವಾಗಿ ಸತ್ತಿರಬಹುದು. ಆದರೆ ಅವರೆಲ್ಲರ ಎದೆಯಲ್ಲಿ ಜೀವಂತವಾಗಿದ್ದಾನೆ.

ಸಣ್ಣಪ್ಪನವರ ಮಾತಿನಲ್ಲೇ ಹೇಳುವುದಾದರೆ, ‘ಅರ್ಜುನನನ್ನು ಅವರು ನಮ್ಮಿಂದ ಕಿತ್ತುಕೊಂಡಿರಬಹುದಷ್ಟೇ. ಆದರೆ ಅದು ನಮ್ಮ ಮನಸ್ಸಿನಲ್ಲಿದೆ. ನಮಗೆ ಅದು ಅನ್ನದಾನ ಮಾಡಿ ಹೊರಟುಹೋಯಿತು.’

ಅರ್ಜುನನ ಉಸ್ತುವಾರಿ ವಹಿಸುವುದು ಕಾಕನಕೋಟೆಯ ಅರಣ್ಯದ ಮಾವುತ, ಕಾವಾಡಿಗಳಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಈ ಪ್ರತಿಷ್ಠೆಗಾಗಿಯೇ ಎರಡೂ ಕುಟುಂಬಗಳ ಹಲವು ಬಗೆಯ ಮೇಲಾಟ–ಸೆಣಸಾಟಗಳೂ ಅರಣ್ಯ ಇಲಾಖೆಯಲ್ಲಿ ಸಂಚಲನೆಗೂ ಕಾರಣವಾಗಿತ್ತು. ಕೊನೆಗೆ ದೊಡ್ಡಪ್ಪಾಜಿಯ ಮಕ್ಕಳಾದ ಮಾವುತ ವಿನು ಮತ್ತು ಕಾವಾಡಿ ರಾಜು ಅವರಿಗೆ ವಹಿಸಲಾಗಿತ್ತು. ಅರ್ಜುನನನ್ನು ಕಳೆದುಕೊಂಡು ಸಂಕಟದಲ್ಲಿರುವ ಈ ಎರಡೂ ಕುಟುಂಬಗಳ ನೋವು ಕಡಿಮೆ ಮಾಡಲು ಸದ್ಯ ಯಾವುದೇ ಮುಲಾಮಿಲ್ಲ, ಭಾರವಾದ ನೆನಪುಗಳ ಯಾನ ಬಿಟ್ಟು.

‘ಆನೆ ನಡೆದಿದ್ದೇ ದಾರಿ’ ಎಂಬ ಮಾತು ಎಲ್ಲ ಆನೆಗಳಿಗೂ ಅನ್ವಯಿಸಲಾರದು. ಆದರೆ, ಅರ್ಜುನ ಆ ಮಾತಿಗೆ ಅನ್ವರ್ಥವಾಗಿಯೇ ಬದುಕಿದ್ದ.

ಅರ್ಜುನನ ಹೀರೊ ಮಾಡಿದ ದೊಡ್ಡಮಾಸ್ತಿ

‘ಎಲ್ಲರಿಂದಲೂ ಕೇಡಿ ಎಂದೇ ಕರೆಸಿಕೊಂಡು, ಮೂಲೆಗುಂಪಾಗಿದ್ದ ಅರ್ಜುನನನ್ನು ಹೀರೊ ಮಾಡಿದ್ದೇ ನಮ್ಮಪ್ಪ ದೊಡ್ಡಮಾಸ್ತಿ’ ಎನ್ನುತ್ತಾರೆ ಅವರ ದೊಡ್ಡ ಮಗ ಬೋಳ.

ತನ್ನನ್ನು ಹೀರೋ ಮಾಡಿದ ಮಾವುತ ದೊಡ್ಡ ಮಾಸ್ತಿಯವರೊಂದಿಗೆ ಅರ್ಜುನ

ತನ್ನನ್ನು ಹೀರೋ ಮಾಡಿದ ಮಾವುತ ದೊಡ್ಡ ಮಾಸ್ತಿಯವರೊಂದಿಗೆ ಅರ್ಜುನ

  •  

‘ಅರ್ಜುನ ಯಾವತ್ತಿಗೂ ಹಸಿದು ಮಲಗೋ ಹಂಗಿರಲಿಲ್ಲ. ಆನೆ ರೇಷನ್‌ ಅಂಗಡಿಯಲ್ಲಿ ಕೊಡುತ್ತಿದ್ದ ಆಹಾರದ ಜೊತೆಗೆ ಮನೆಯಲ್ಲೂ ಬೇಯಿಸಿ ಹಾಕಲು ಅಪ್ಪ ನಮಗೆ ಹೇಳುತ್ತಿದ್ದರು. ಅಷ್ಟು ದೊಡ್ಡ ಜೀವಕ್ಕೆ ಇಷ್ಟೇ ಆಹಾರಾವೇ ಎನ್ನುತ್ತಿದ್ದರು’ ಎಂದು ಕಣ್ಣೀರಾದರು.

ಅರ್ಜುನನ ಹೀರೊ ಮಾಡಿದ ದೊಡ್ಡಮಾಸ್ತಿ
‘ಎಲ್ಲರಿಂದಲೂ ಕೇಡಿ ಎಂದೇ ಕರೆಸಿಕೊಂಡು ಮೂಲೆಗುಂಪಾಗಿದ್ದ ಅರ್ಜುನನನ್ನು ಹೀರೊ ಮಾಡಿದ್ದೇ ನಮ್ಮಪ್ಪ ದೊಡ್ಡಮಾಸ್ತಿ’ ಎನ್ನುತ್ತಾರೆ ಅವರ ದೊಡ್ಡ ಮಗ ಬೋಳ. ‘ಅರ್ಜುನ ಯಾವತ್ತಿಗೂ ಹಸಿದು ಮಲಗೋ ಹಂಗಿರಲಿಲ್ಲ. ಆನೆ ರೇಷನ್‌ ಅಂಗಡಿಯಲ್ಲಿ ಕೊಡುತ್ತಿದ್ದ ಆಹಾರದ ಜೊತೆಗೆ ಮನೆಯಲ್ಲೂ ಬೇಯಿಸಿ ಹಾಕಲು ಅಪ್ಪ ನಮಗೆ ಹೇಳುತ್ತಿದ್ದರು. ಅಷ್ಟು ದೊಡ್ಡ ಜೀವಕ್ಕೆ ಇಷ್ಟೇ ಆಹಾರಾವೇ ಎನ್ನುತ್ತಿದ್ದರು’ ಎಂದು ಕಣ್ಣೀರಾದರು.
ಕಾಳಗಕ್ಕಿಳೀತಿದ್ದ ಮರ್ಕಾ..!
‘ಕಾಡಿಗೆ ಸೊಪ್ಪು ಸೆದೆ ತರಲು ಅರ್ಜುನನೊಂದಿಗೆ ಹೋದಾಗ ಕಾಡಾನೆ ಏನಾದರೂ ಎದುರಾದರೆ ಮೊದಲು ನನ್ನನ್ನು ಮರ ಹತ್ತಿಸಿ ಸೇಫ್‌ ಮಾಡಿ ಆಮೇಲೆ ಫೈಟಿಂಗ್‌ಗೆ ಇಳೀತಿತ್ತು. ಎಂಥ ದಟ್ಟ ಕಾಡಿನಲ್ಲೇ ಇದ್ದರೂ ಮರ್ಕಾ ಎನ್ನುತ್ತಿದ್ದಂತೆ ಓಡಿ ಬರ್ತಿತ್ತು’ ಎಂದು ತಂದೆ ದೊಡ್ಡಮಾಸ್ತಿ ಹೇಳುತ್ತಿದ್ದುದು ಅವರ ಎರಡನೇ ಮಗ ಸಣ್ಣಪ್ಪನವರ ನೆನಪಿನಲ್ಲಿದೆ. ಅದು ರೋಚಕ ಕತೆಯಾಗಿ ಅವರ ಮಕ್ಕಳಲ್ಲಿ ನೆಲೆಸಿದೆ! ‘ಮರ್ಕಾ’ ಎಂಬುದು ಅರ್ಜುನನ ಮತ್ತೊಂದು ಹೆಸರು.
ಅರ್ಜುನ ಅಂದ್ರೆ ಪುನೀತ್‌ ರಾಜ್‌ಕುಮಾರ್‌!
‘ಈ ಕಾಕನಕೋಟೆ ಕಾಡಲ್ಲಿ ವೀರಾನೆ ಅಂದ್ರೆ ಪುನೀತ್‌ ರಾಜ್‌ಕುಮಾರೇ. ಅಂದ್ರೆ ನಮ್ಮ ಅರ್ಜುನ. ಅದಕ್ಕೇ ಪುನೀತ್‌ ರಾಜ್‌ಕುಮಾರ್‌ ಲೆವೆಲ್‌ನಲ್ಲೇ ಅದನ್ನ ನೋಡ್ಕೋತಿದ್ದೆವು’ ಎಂದರು ಮಾವುತ ಸಣ್ಣಪ್ಪ. ‘ಕಾಡಲ್ಲಿ ಯಾವ ಕೆಲ್ಸ ಕೊಟ್ರೂ ಅಚ್‌ಕಟ್ಟಾಗಿ ಮಾಡ್ಕೊಂಡ್‌ ಹೋಗ್ತಿದ್ವಿ. ತಾನೂ ಛೀ ಅನ್ನಿಸಿಕೊಳ್ಳಲಿಲ್ಲ. ನಮ್ಮನ್ನೂ ಛೀ ಅನ್ನಿಸಿಕೊಳ್ಳಕೆ ಬಿಡಲಿಲ್ಲ. ಬಳ್ಳೆ ಹಾಡಿಗೆ ಅರ್ಜುನನೇ ಫೇಮಸ್‌. ಚಿನ್ನ ಇದ್ದಂಗಿತ್ತು. ಆದ್ರೆ ಬರಿ ಚಿನ್ನ ಅನ್ನಂಗಿಲ್ಲ ವಜ್ರಾನೇ ಅದು. ಅದರ ಜೊತೆ ಐದು ವರ್ಷ ಅಂಬಾರಿ ಹೊತ್ತಿದ್ದೆ’ ಎಂದು ಸ್ಮರಿಸಿದರು. ‘ನಮ್ಮ ಬಳ್ಳೆ ಕ್ಯಾಂಪಲ್ಲಿ ಅರ್ಜುನ ಇಲ್ಲ ಅಂದ್ರೆ ಹವಾ ಇಲ್ಲ. ಮತ್ತೆ ಅಂಥ ಅರ್ಜುನ ಹುಟ್ಟಲ್ಲ. ಆ ಗತ್ತು ಆ ನಡೆ ಸೇವ್‌ಕಟ್ಟು ಅದರ ಲುಕ್ಕು ಅದರ ಸ್ವಭಾವ ಹುಡುಕೋದು ಕಷ್ಟ. ಇನ್ ಅಂತ ಆನೆ ಸಿಗಲ್ಲ’ ಎನ್ನುತ್ತಾ ಸಣ್ಣಪ್ಪ ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT