ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಲ್ಲೂ ‘ರಾಜಹಂಸ’ಗಳ ಕಲರವ..!

ಆಲಮಟ್ಟಿಯ ಲಾಲ್‌ಬಹಾದ್ದೂರ್ ಶಾಸ್ತ್ರಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ಪಕ್ಷ ಸಂಕುಲ
Last Updated 8 ಜುಲೈ 2018, 14:33 IST
ಅಕ್ಷರ ಗಾತ್ರ

ಆಲಮಟ್ಟಿ:ಇಲ್ಲಿನ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಹಿನ್ನೀರು ದಿನೇ ದಿನೇ ಏರಿಕೆಯಾಗುತ್ತಿದ್ದರೂ; ಪಕ್ಷಿಗಳ ಕಲರವ ಅನುರಣಿಸುವುದು ಹೆಚ್ಚುತ್ತಿದೆ.

ಹಿನ್ನೀರು ಇಳಿಕೆಯಾಗುತ್ತಿದ್ದಂತೆ ಲಗ್ಗೆಯಿಡುವ ಫ್ಲೆಮಿಂಗೋ (ರಾಜಹಂಸ) ಪಕ್ಷಿ ಸಂಕುಲ; ಜುಲೈನಲ್ಲೂ ವಾಸ್ತವ್ಯ ಹೂಡಿರುವುದು ಇದೇ ಮೊದಲು. ರಾಜಹಂಸ ಪಕ್ಷಿ ನವೆಂಬರ್‌ನಿಂದ ಏಪ್ರಿಲ್‌ವರೆಗೂ ಮಾತ್ರ ಹಿನ್ನೀರಿನ ಹಳೆ ಆಲಮಟ್ಟಿ, ಬೇನಾಳ, ಚಿಮ್ಮಲಗಿ, ಕೊಲ್ಹಾರ, ಬಾಗಲಕೋಟೆ ಬಳಿಯ ಹೆರಕಲ್‌ ಹತ್ತಿರ ಹೆಚ್ಚಾಗಿ ಕಾಣ ಸಿಗುತ್ತಿದ್ದವು. ಜೂನ್‌ ಆರಂಭದೊಡನೆ ಬೇರೆಡೆಗೆ ವಲಸೆ ಹೋಗುತ್ತಿದ್ದವು. ಆದರೆ ಈ ಬಾರಿ ಆಲಮಟ್ಟಿ ಹಿನ್ನೀರಿನ ಪಾರ್ವತಿ ಕಟ್ಟಾ ಸೇತುವೆಯ ಸಮೀಪ ಈ ಫ್ಲೆಮಿಂಗೋ ಹಿಂಡು ಗೋಚರಿಸಿದ್ದು ಅಪರೂಪದ ಬೆಳವಣಿಗೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೆ.ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಹಂಸ’ ಕುರಿತಂತೆ:

ಬಹು ಎತ್ತರದ ಈ ಪಕ್ಷಿಗಳು ನೋಡಲು ಅತ್ಯಾಕರ್ಷಕ. ಉದ್ದ ಕುತ್ತಿಗೆ ಹೊಂದಿದ್ದು, ಕುತ್ತಿಗೆಯನ್ನು ನೀರಿನ ಆಳಕ್ಕೆ ಹಾಕಿ ಮೀನನ್ನು ಹಿಡಿಯುವ ದೃಶ್ಯ ರಮಣೀಯ. ರೆಕ್ಕೆ ಬಿಚ್ಚಿದಾಗ ಗೋಚರಿಸುವ ಕೆಂಗುಲಾಬಿ ಬಣ್ಣಕ್ಕೆ ಮನಸೋಲದವರೇ ಇಲ್ಲ, ಒಮ್ಮೆಗೆ ಈ ಪಕ್ಷಿಗಳು ಹಿಂಡಿನಲ್ಲಿ ಗರಿ ಬಿಚ್ಚಿ ಹಾರಿದಾಗ ಕಾಣುವ ಗುಲಾಬಿ ವರ್ಣದ ಸೌಂದರ್ಯ ಬಣ್ಣಿಸಲಾಸಾಧ್ಯ.

ಸಂತಾನೋತ್ಪತ್ತಿಗೆ ಆಗಮನ:

‘ಗುಜರಾತ್‌ನಲ್ಲಿ ಗೋಚರಿಸುತ್ತಿದ್ದ ರಾಜಹಂಸ ಪಕ್ಷಿಗಳು ಇದೀಗ ಸ್ಥಳ ಬದಲಾಯಿಸಿ, ಕೃಷ್ಣಾ ನದಿಯ ಹಿನ್ನೀರು ಪ್ರದೇಶವನ್ನು ಹೆಚ್ಚಾಗಿ ಸಂತಾನೋತ್ಪತ್ತಿಗಾಗಿ ಆಯ್ಕೆ ಮಾಡಿಕೊಂಡಿವೆ. ಇವುಗಳಿಗೆ ಪೂರಕ ವಾತಾವರಣ ಹಾಗೂ ರಕ್ಷಣೆ ನೀಡುವುದು ಕೂಡಾ ನಮ್ಮ ಕರ್ತವ್ಯ’ ಎನ್ನುತ್ತಾರೆ ಪಕ್ಷಿ ಪ್ರೇಮಿಯೂ ಆಗಿರುವ ಎಸಿಎಫ್‌ ಎಸ್‌.ಎಂ.ಖಣದಾಳಿ.

‘ರಾಜಹಂಸದ ಜತೆಗೆ ಬ್ಲಾಕ್‌ ವಿಂಗ್ಡ್ ಸ್ಟಿಲ್ಟ್‌, ಕಪ್ಪು ಬಣ್ಣದ ಗ್ಲಾಸಿ ಐಬಿಸ್‌, ಕಾರ್ಮೋರೆಂಟ್‌ (ನೀರು ಕಾಗೆ), ಲಾರ್ಜ್‌ ಇಗ್ರೀಟ್‌ (ದೊಡ್ಡ ಬೆಳ್ಳಕ್ಕಿ) ಅಲ್ಲದೇ ಇನ್ನೂ ಹೆಸರು ಗೊತ್ತಾಗದ ಹಲವು ಪಕ್ಷಿಗಳು ಪ್ರಸ್ತುತ ಆಲಮಟ್ಟಿಯ ಹಿನ್ನೀರಿನಲ್ಲಿ ಇದೀಗ ಕಂಡು ಬರುತ್ತವೆ’ ಎಂದು ಆರ್‌ಎಫ್‌ಓ ಮಹೇಶ ಪಾಟೀಲ ತಿಳಿಸಿದರು.

ಯಲ್ಲಪ್ಪರೆಡ್ಡಿ ಶಿಫಾರಸು:

ಇಲ್ಲಿನ ಪಕ್ಷಿ ಸಂಕುಲದ ಬಗ್ಗೆ ಅಧ್ಯಯನ ನಡೆಸಿ, ಆಲಮಟ್ಟಿಯ ಹಿನ್ನೀರು ಪ್ರದೇಶವನ್ನು ವೆಟ್‌ ಲ್ಯಾಂಡ್‌ ಎಂದು ಘೋಷಿಸಿ, ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಸರ್ಕಾರಕ್ಕೆ ಈಗಾಗಲೇ ಪರಿಸರವಾದಿ ಯಲ್ಲಪ್ಪರೆಡ್ಡಿ ತಂಡ ಸಾಕ್ಷ್ಯ ಚಿತ್ರದ ಮೂಲಕ ಮನವಿ ಮಾಡಿದೆ. ಇದಕ್ಕೆ ಪೂರಕವಾಗಿ ಪಕ್ಷಿ ಸಂಕುಲ ಇನ್ನಷ್ಟು ಹೆಚ್ಚಿಸಲು ಈ ಪ್ರದೇಶವನ್ನು ‘ಪಕ್ಷಿ ಸಂರಕ್ಷಿತ ತಾಣ’ ಎಂದು ಘೋಷಿಸಿ, ಪಕ್ಷಿ ಸಂಕುಲಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು ಎಂಬ ಆಗ್ರಹ ಹಲ ಪಕ್ಷಿ ಪ್ರೇಮಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT