ಸಿಂಹಬಾಲದ ಸಿಂಗಳಿಕ

ಮಂಗಳವಾರ, ಜೂನ್ 25, 2019
30 °C

ಸಿಂಹಬಾಲದ ಸಿಂಗಳಿಕ

Published:
Updated:
Prajavani

ವಿಶಿಷ್ಟ ದೇಹಾಕೃತಿ ಮತ್ತು ವಿಚಿತ್ರ ವರ್ತನೆಯಿಂದ ಗಮನ ಸೆಳೆಯುವ ಪ್ರಾಣಿಗಳಲ್ಲಿ ಕೋತಿಗಳಿಗೆ ಅಗ್ರಸ್ಥಾನವಿದೆ. ಅವುಗಳಲ್ಲಿ ಸಿಂಗಳಿಕಗಳಂತೂ ನೋಡಿದ ಕೂಡಲೇ ಆಕರ್ಷಿಸುತ್ತವೆ. ಅಂತಹ ಸಿಂಗಳಿಕಗಳಲ್ಲಿ ಸಿಂಹಬಾಲದ ಸಿಂಗಳಿಕವೂ ಒಂದು. ಇದನ್ನು ಇಂಗ್ಲಿಷ್‌ನಲ್ಲಿ ಲಯನ್ ಟೇಲ್ಡ್ ಮಕ್ಯಾಕ್ (Lion Tailed Macaque) ಎನ್ನತ್ತಾರೆ. ಸರ್ಕೊಪಿಥೆಸಿಡೆ (Cercopithecidae) ಕುಟುಂಬಕ್ಕೆ ಸೇರಿದ ಈ ಕೋತಿಯ ವೈಜ್ಞಾನಿಕ ಹೆಸರು ಮಕಾಕ ಸಿಲೆನಸ್ (Macaca silenus). ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?
ಸಿಂಹಕ್ಕಿರುವಂತೆ ನೀಳವಾದ ಮತ್ತು ದುಂಡನೆಯ ಬಾಲವನ್ನು ಈ ಕೋತಿಯೂ ಹೊಂದಿರುವುದರಿಂದ ಇದಕ್ಕೆ ಸಿಂಹಬಾಲದ ಸಿಂಗಳಿಕ ಎನ್ನುತ್ತಾರೆ. ಹಲವು ವರ್ಷಗಳಿಂದ ಭುಮಿಯ ಮೇಲೆ ವಾಸಿಸುತ್ತಿರುವ ಪ್ರಾಣಿಗಳಲ್ಲಿ ಒಂದಾಗಿ ಸಂಶೋಧಕರು ಇದನ್ನು ಪರಿಗಣಿಸಿದ್ದಾರೆ.

ಕಪ್ಪು ಬಣ್ಣದ ನೀಳವಾದ ಮತ್ತು ದಟ್ಟವಾದ ಕೂದಲಿನಿಂದ ಕೂಡಿರುವ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಕತ್ತು, ಕುತ್ತಿಗೆ ಮತ್ತು ಕೆನ್ನೆಗಳನ್ನು ಮುಚ್ಚಿರುವಂತೆ ತಿಳಿಕಂದು ಬಣ್ಣದ ಕೂದಲು ಬೆಳೆದಿರುತ್ತದೆ. ಇದು ಥೇಟ್ ಸಿಂಹದ ಜೂಲನ್ನೇ ಹೋಲುತ್ತದೆ. ಮುಖ ಕಪ್ಪು ಬಣ್ಣದಲ್ಲಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಂದು ಬಣ್ಣದಲ್ಲಿರುತ್ತವೆ. ಮಾಂಸಾಹಾರ ಪ್ರಾಣಿಗಳಿಗೆ ಇರುವಂತೆ ಕೋರೆಹಲ್ಲುಗಳು ಬೆಳೆದಿರುತ್ತವೆ. ಅಂಗೈಗಳು ಮತ್ತು ಬೆರಳುಗಳು ಪುಟ್ಟಮಗುವಿಗಿರುವಂತೆ ಇರುತ್ತವೆ.

ಎಲ್ಲಿದೆ?
ಭಾರತದ ಪಶ್ಚಿಮ ಘಟ್ಟಗಳೇ ಇದರ ಮೂಲ ನೆಲೆ ಮತ್ತು ವಾಸಸ್ಥಾನ. ಕರ್ನಾಟಕ, ಕೇರಳದ ಪಶ್ಚಿಮ ಘಟ್ಟದ ಕಾಡುಗಳು ಮತ್ತು ಅಣ್ಣಾಮಲೈ ಬೆಟ್ಟಗಳಲ್ಲಿ ಇದನ್ನು ಕಾಣಬಹುದು. ಮಳೆಬೀಳುವ ಕಾಡಿನ ಪ್ರದೇಶಗಳಲ್ಲಿನ ಮರಗಳ ಮೇಲೆ ಸದಾ ವಾಸಿಸುತ್ತದೆ.

ಆಹಾರ
ಇದು ಮಿಶ್ರಾಹಾರಿ ಪ್ರಾಣಿ. ವಿವಿಧ ಬಗೆಯ ಹಣ್ಣುಗಳು ಇದರ ಪ್ರಮುಖ ಆಹಾರ. ಎಲೆಗಳು, ದಂಟುಗಳು, ಹೂಗಳು, ಮೊಗ್ಗುಗಳನ್ನೂ ತಿನ್ನುತ್ತದೆ. ಕೆಲವು ಬಗೆಯ ಕೀಟಗಳು, ಸರೀಸೃಪಗಳು, ಕೆಲವು ಬಗೆಯ ಕಪ್ಪೆಗಳನ್ನೂ ಭಕ್ಷಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ
ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಒಂದು ಗುಂಪಿನಲ್ಲಿ ಗರಿಷ್ಠ 34 ಸಿಂಗಳಿಕಗಳು ಇರುತ್ತವೆ. ಸಾಮಾನ್ಯವಾಗಿ 10ರಿಂದ 20 ಸಿಂಗಳಿಕಗಳಿರುತ್ತವೆ. ಬಲಿಷ್ಠ ಗಂಡು ಸಿಂಗಳಿಕ ಗುಂಪಿನ ನೇತೃತ್ವ ವಹಿಸಿಕೊಂಡಿರುತ್ತದೆ. ಅದರ ಜತೆಗೆ ಒಂದು ಅಥವಾ ಎರಡು ಗಂಡು ಸಿಂಗಳಿಕಗಳೂ ಇರುತ್ತವೆ. ಗುಂಪಿನಲ್ಲಿ ಸಂಚರಿಸುವುದು, ನಿದ್ರಿಸುವುದು ಇದರ ಜೀವನ ಶೈಲಿ.

ಹಗಲೆಲ್ಲಾ ಹೆಚ್ಚು ಚುರುಕಾಗಿದ್ದು, ರಾತ್ರಿಯಲ್ಲಿ ಮರಗಳ ಮೇಲೆ ನಿದ್ರಿಸುತ್ತದೆ. ವಿಶಿಷ್ಟ ಬಗೆಯ ಸದ್ದುಗಳನ್ನು ಮಾಡುತ್ತಾ ಗಂಡು ಸಿಂಗಳಿಕಗಳು ಗಡಿ ಗುರುತಿಸಿಕೊಳ್ಳುತ್ತವೆ. ದೇಹದ ಭಂಗಿ, ತುಟಿಗಳ ಚಲನೆ, ಹುಬ್ಬುಗಳ ಚಲನೆ ಮೂಲಕವೂ ಸಂವಹನ ನಡೆಸುತ್ತದೆ. ಇದು 17 ಬಗೆಯ ಶಬ್ದಗಳನ್ನು ಹೊರಡಿಸುತ್ತದೆ.

ಸಂತಾನೋತ್ಪತ್ತಿ
ಗುಂಪಿನಲ್ಲಿರುವ ಎಲ್ಲ ಹೆಣ್ಣು ಸಿಂಗಳಿಕಗಳ ಜೊತೆ ಗುಂಪಿನ ಬಲಿಷ್ಠ ಗಂಡು ಸಿಂಗಳಿಕ ಜೊತೆಯಾಗಿರುತ್ತದೆ. ಆಹಾರ ಹೆಚ್ಚಾಗಿ ದೊರೆಯುವಂತಹ ಸಂದರ್ಭದಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಸುಮಾರು 6 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ‘ಇನ್‌ಫ್ಯಾಂಟ್’ ಎನ್ನುತ್ತಾರೆ.

ಮರಿ ತಾಯಿ ಉದರಭಾಗವನ್ನು ಸದಾ ಅಂಟಿಕೊಂಡೇ ಇರುತ್ತದೆ. ಸುಮಾರು 1 ವರ್ಷದ ವರೆಗೆ ಮರಿಯನ್ನು ತಾಯಿ ಜೋಪಾನ ಮಾಡುತ್ತದೆ. ಹೆಣ್ಣು ಮರಿ 5 ವರ್ಷಕ್ಕೆ ಮತ್ತು ಗಂಡು ಮರಿ 8 ವರ್ಷಕ್ಕೆ ವಯಸ್ಕ ಹಂತ ತಲುಪುತ್ತವೆ. 

ಮಳೆಕಾಡು ಪ್ರದೇಶ ಕ್ಷೀಣಿಸುತ್ತಿರುವುದು ಇದರ ಸಂತತಿ ಉಳಿವಿಗೆ ಮಾರಕವಾಗಿದೆ. ಶೇ 99ರಷ್ಟು ಸಿಂಗಳಿಕಗಳು ಮೂಲ ನೆಲೆ ಕಳೆದುಕೊಂಡಿವೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ವಿಶ್ವಸಂಸ್ಥೆ ಇದನ್ನು ಅಳವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಿದ್ದು, ಪ್ರಸ್ತುತ ಸುಮಾರು 4 ಸಾವಿರ ಸಿಂಗಳಿಕಗಳು ಮಾತ್ರ ಉಳಿದಿವೆ.

ಸ್ವಾರಸ್ಯಕರ ಸಂಗತಿಗಳು
* ಸದಾ ಮರಗಳ ಮೇಲೆ ವಾಸಿಸುವುದಕ್ಕೆ ಇಷ್ಟಪಡುವ ಈ ಪ್ರಾಣಿ ಆಗಾಗ್ಗೆ ನೀರಿನಲ್ಲಿ ಈಜುವುದಕ್ಕೂ ಉತ್ಸಾಹ ತೋರುತ್ತದೆ.
* ಎಲೆಗಳಲ್ಲಿ ಜಿನುಗುವ ಇಬ್ಬನಿಯನ್ನೇ ಹೆಚ್ಚಾಗಿ ಸೇವಿಸುತ್ತಾ ದೇಹಕ್ಕೆ ಬೇಕಾದ ತೇವಾಂಶವನ್ನು ಪಡೆದುಕೊಳ್ಳುತ್ತದೆ.
* ಇದರ ಗುಂಪನ್ನು ಟ್ರೂಪ್, ಬ್ಯಾರೆಲ್, ಕಾರ್ಟ್‌ಲೋಡ್, ಟ್ರೈಬ್, ವೈಲ್ಡರ್ನೆಸ್ ಎಂದು ಕರೆಯುತ್ತಾರೆ.
* ಇದನ್ನು ‘ಬಿಯರ್ಡ್ ಏಪ್‌’ (ಗಡ್ಡ ಬಿಟ್ಟ ಕೋತಿ) ಎಂದೂ ಕರೆಯುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !