ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆರೆ ಮಿಲನ ಪತಂಗ: ಈ ಚಿಟ್ಟೆಯ ಆಯುಷ್ಯ ಏಳೇ ಏಳು ದಿನಗಳು!

Last Updated 14 ಮೇ 2022, 19:30 IST
ಅಕ್ಷರ ಗಾತ್ರ

ಈ ಪತಂಗದ ಆಯುಷ್ಯ ಏಳೇ ಏಳು ದಿನಗಳು. ಹೆಣ್ಣಿನ ಮಿಲನಕ್ಕಾಗಿ ತನ್ನ ಶಕ್ತಿಯನ್ನೆಲ್ಲ ಕಾಪಿಟ್ಟುಕೊಂಡಿರುತ್ತದೆ

ರಾತ್ರಿ ಪಯಣದಿಂದ ಬಳಲಿದ ದೇಹಕ್ಕೆ ಉತ್ಸಾಹ ನೀಡಿದ ಮೂಡಿಗೆರೆಯ ಕಾಫಿ ಹೀರಿ, ಹ್ಯಾಂಡ್‌ಪೋಸ್ಟಿನಿಂದ ಬಲಕ್ಕೆ ತಿರುಗಿ ಈ ಕಡೆಗೆಲ್ಲೋ ‘ನಿರುತ್ತರ’ವಿರುವುದೆಂದು (ಪೂರ್ಣಚಂದ್ರ ತೇಜಸ್ವಿ ಅವರ ಮನೆ) ನಡೆಯತೊಡಗಿದೆವು. ಡೈಸಿಯೂ ಬಿರುಬಿರನೆ ನಡೆಯುತ್ತಿದ್ದಳು. ತಂಪಾದ ಗಾಳಿಗೆ ಅವಳ ಗುಂಗುರು ಕೂದಲು ಕೆದರುತ್ತಿತ್ತು. ನೋಟವೆಲ್ಲಾ ಕಾನನದ ಕಡೆಗಿತ್ತು.

ದಟ್ಟ ಹಸುರು ತೋಟಗಳ ನಡುವಿನ ಎತ್ತರದ ಮರಗಳು ನಿದ್ದೆ ಮಾಡುತ್ತಿದ್ದವು. ಎದುರುಗಡೆ ಬಲಕ್ಕೆ ಕಾಣಿಸಿದ ಕೃಷಿ ವಿಜ್ಞಾನ ಕೇಂದ್ರ ಮೂವತ್ತು ನಲವತ್ತು ವರ್ಷಗಳ ಹಿಂದಿನ ಏಲಕ್ಕಿ ತಳಿ, ಅಲ್ಲಿನ ಕೀಟಜಗತ್ತು, ಈ ಜಗತ್ತಿನ ಸುತ್ತಲಿನ ನಿಗೂಢ ಮನುಷ್ಯರನ್ನು ನೆನಪಿಸುತ್ತಿತ್ತು. ಪಕ್ಕದಲ್ಲೆಲ್ಲ ಕಾಡಿನಂತಿದ್ದ ಕಾಫಿ ತೋಟದ ನಡುವಿನಿಂದ ಎರಡು ಸ್ವರ. ಒಂದು, ದೀರ್ಘ ಧ್ವನಿಯಿಂದ ಕೂಡಿದ್ದ ‘ಟ್ವುಟೂ ಟ್ವುಟೂ ಟೂ....ಟು’ ಎಂಬ ಕೂಗಿಗೆ ನಮ್ಮ ಪಕ್ಕದಲ್ಲೇ ಇದ್ದ ಪೊದೆಯಿಂದ ಇನ್ನೊಂದು ಹಕ್ಕಿ ಪ್ರತಿಕ್ರಿಯೆಯಾಗಿ ಅದೇ ತೆರನಾದ ಕೂಗನ್ನ ಹೊಮ್ಮಿಸುತ್ತಿತ್ತು.

‘ಡೈಸಿ ನಿಲ್ಲೂ...’ ಎಂದೆ.

ಎರಡು ನಿಮಿಷ ನಡೆದಾಡದೆ ಒಂದು ಕಡೆ ನಿಂತಾಗ, ಅವು ಒಂದೊಂದಾಗಿ ಒಂದು ಕಡೆಯಿಂದ ದಾರಿಯ ಇನ್ನೊಂದು ಕಡೆಗೆ ತೋಟಕ್ಕೆ ಹಾರತೊಡಗಿದವು. ನಮ್ಮ ಬಯಲು ಸೀಮೆಯ ಕಡೆ ಕಾಣದ ಇವುಗಳ ಹೆಸರು ‘ಉಬ್ಬು ಕಂಠದ ಹರಟೆಮಲ್ಲ’ (puff throated babbler). ಗುಂಪಲ್ಲಿ ಇರುವ ಇವು ಹರಟೆ ಹೊಡೆಯುತ್ತಾ, ಕೀಟಗಳನ್ನು ಹಿಡಿದು ತಿನ್ನುತ್ತಾ ಜೀವಿಸುತ್ತವೆ.

ಡೈಸಿಯ ಕ್ಯಾಮೆರಾ ಧ್ವನಿ ಮಾಡಿತು. ಅಂದದ ಒಂದೆರಡು ಚಿತ್ರಗಳ ಸೆರೆಹಿಡಿದು. ಮುಂದೆ ಸಾಗುತ್ತಾ ಕೈಮರವೆಂಬ ಜಾಗದ ಮನೆಗಳವರೆಗೂ ಚಲಿಸಿ, ಹಾದಿ ತಪ್ಪಿದ ಅರಿವಾಗಿ ವಾಪಸ್ಸು ಹ್ಯಾಂಡ್‌ಪೋಸ್ಟಿನಿಂದ ಎಡಕ್ಕೆ ಸಾಗಿ ವೃತ್ತದಿಂದ ದಾರಿ ಹೋದ ಹಾಗೆ ನಡೆದಾಗ ಎಡಬದಿ ಹಳದಿ ಬಣ್ಣ ಉಳಿಸಿಕೊಂಡ ‘ನಿರುತ್ತರ’ದ ಗೇಟು ಸ್ವಾಗತಿಸಿತು.

ಎರಡು ನಿಮಿಷ ನಿಂತು ನಮ್ಮನ್ನ ಸದಾ ತಿದ್ದುವ ಶಾಲೆಯ ಮಾಸ್ಟರು ಅಲ್ಲದಿದ್ದರೂ ನಮಗೆಲ್ಲರಿಗೂ ಮಾಸ್ಟರ್ ಆದಂತಹ ತೇಜಸ್ವಿ ಹಾಗೂ ಅವರ ಸಂಗಾತಿ ರಾಜೇಶ್ವರಿ ಅಮ್ಮನವರನ್ನು ನೆನೆದು, ಅಲ್ಲಿನ ಸುತ್ತಲಿನ ಚಿಲಿಪಿಲಿ ಗಾನದೆಡೆಗೆ ಗಮನಕೊಟ್ಟಾಗ ಅದ್ಭುತವಾದ ಪಕ್ಷಿಸಂಪತ್ತು ಕಾಣಿಸುತ್ತಿತ್ತು.

ಈ ಕಾಡಿಗೇ ಸೀಮಿತವಾದ ನಾಚಿಕೆ ಸ್ವಭಾವದ, ವೆಲ್ವೆಟ್ ಬಣ್ಣದ ವಸ್ತು ಮುಖದ ಎದುರು ಇದೆಯೇನೋ ಎಂಬಂತ ಕಲ್ಪನೆ ಮೂಡಿಸುವ ‘ವೆಲ್ವೆಟ್ ಮುಖದ ನಟ್ಯಾಚ್’ ಹಕ್ಕಿಯ ದರ್ಶನವಾಯ್ತು. ಕೆಂಪು ಬೀಕ್, ನೀಲಿಯ ಮೇಲ್ಭಾಗ, ಕೆಳಭಾಗ ಬಿಳಿ, ಮರದ ಕಾಂಡ ಕೊಂಬೆಗಳಲ್ಲಿ ತಲೆಕೆಳಗು ಮಾಡಿ ಕೆಳಮುಖವಾಗಿ ಜಿಗಿಯುತ್ತಾ ಕೀಟಾನ್ವೇಷಣೆ ಮಾಡುತ್ತಿತ್ತು.
ಬಿಳಿ ಹೊಟ್ಟೆಯ ಮರಕುಟಿಕ, ಜೇಡರಬೇಟೆ ಹಕ್ಕಿ, ಕಪ್ಪು ಹಿಂಗತ್ತಿನ ಮೊನಾರ್ಚ್, ಪರ್ವತ ಮೈನಾ, ಬಿಳಿ ಕದುಗ ಇವುಗಳನ್ನು ವೀಕ್ಷಿಸಿ, ಅದನ್ನು ‘ಇಂಡಿಯನ್ ಇ-ಬರ್ಡ್’ ಎಂಬ ತಾಣದಲ್ಲಿ ದಾಖಲು ಮಾಡಿ, ಇಲ್ಲಿಗೆ ಬಂದುದರ ಮೂಲ ಉದ್ದೇಶ ಮುಗಿಸಿ, ಅಲ್ಲಿಂದ ಎತ್ತಿನ ಭುಜದ ದುರ್ಗಮ ಕಾಡಿನ ಕಡೆ ಡೈಸಿ ಬೈಕ್ ತಿರುಗಿಸಿದಳು. ಅಲ್ಲಿನ ಕೀಟಗಳ ಹುಡುಕುವುದು ನಮ್ಮ ಮೂಲ ನಿರೀಕ್ಷೆಯಾಗಿತ್ತು.

ಕಾಲ್ನಡಿಗೆ ಶುರುವಾಗುತ್ತಿದ್ದಂತೆ ರಣ ಬಿಸಿಲಿನ ಅನುಭವ. ಬೆಂಗಳೂರು, ಮತ್ತಿತರ ಕಡೆಗಳಿಂದ ಬಂದಂತಹ ಹಲವು ಪ್ರವಾಸಿಗರು ಬಿರು ಹೆಜ್ಜೆಗಳನ್ನಿಡುತ್ತಾ ಸಾಗುತ್ತಿದ್ದರು. ಕೆಲವರ ಸೆಲ್ಫಿಗಳು, ರೀಲ್ಸ್‌ಗಳು ನಡೆಯುತ್ತಿದ್ದವು. ಹಸುರು ಹೊದಿಕೆಯ ಕಾಡು ಮಾತ್ರ ಡಿಂಮ್ಮನೆ ತೂಕಡಿಕೆಯಲ್ಲಿತ್ತು.

ಬಿಸಿಲು ಹೆಚ್ಚಾದ್ದರಿಂದ ಹಕ್ಕಿಗಳು, ಕೀಟಗಳು ಸ್ತಬ್ಧವಾಗಿ ಒಂದೆಡೆ ನೆಲೆಸಿ ವಿಶ್ರಮಿಸುತ್ತಿದ್ದವು. ದೂರದ ಎತ್ತಿನ ಭುಜದಂತೆ ಕಾಣುವ ಆ ಬೆಟ್ಟದ ಭುಜ ‘ಈ ಬಿಸಿಲಲ್ಲಿ ನನ್ನ ತಲುಪಿ ನೋಡುವ’ ಎನ್ನುವ ಸವಾಲೆಸೆದಂತೆ ಕಾಣುತ್ತಿತ್ತು. ಅಲ್ಲಲ್ಲಿ ಸಣ್ಣ ಸಣ್ಣಗೆ ಬೆಳೆದಿದ್ದ ಈಚಲು ಹಣ್ಣಿನ ಗೊಂಚಲುಗಳ ಅರಿಶಿಣ ಬಣ್ಣದ ಹಣ್ಣುಗಳ ಮೂಲ ಯಾವ ಹಕ್ಕಿಯ ಹಿಕ್ಕೆಯೋ! ಕೆಲವು ಹಣ್ಣಾಗಿದ್ದವುಗಳನ್ನು ಡೈಸಿ ಹುಡುಕಿ ತಂದಳು. ರುಚಿಕರವಾಗಿದ್ದವು.

ಬೆಳಕಿನ ಕಿರಣಗಳನ್ನ ನೆಲಕ್ಕೆ ತಾಕದ ಹಾಗೆ ಹರಡಿದ್ದ ತುಸು ದಟ್ಟ ಹಸುರಿನ ಎಲೆಗಳ ಚಾವಣಿಯ (canopy) ಕೆಳಗಿನ ನೆಲದಲ್ಲಿ ತೇವಾಂಶವಿದ್ದ ಕಾರಣ ತಂಪಾಗಿತ್ತು. ಕೈಹಿಡಿದು ಜಗ್ಗುತ್ತಾ ಡೈಸಿ ‘ಹೇ, ನಿಂಗೇನು ಅನ್ನಿಸುತ್ತಿಲ್ಲವಾ?’ ಎಂದಳು ವಾರೆ ನೋಟದಿಂದ.

‘ಅನ್ನಿಸ್ತಿದೆ. ಮೇಲೆ ಬಿಸಿ, ಪಕ್ಕದಲ್ಲಿ ಬೆವರಿನ ಘಮಲು’
‘ಅಷ್ಟೇನಾ’‘ಅ..ಲ್ಲಾ.. ಇನ್ನೂ...’ ಮಾತು ಕೊನೆಯಾಗಲೇ ಇಲ್ಲ, ಅಷ್ಟರಲ್ಲೇ, ಯಾವುದೋ ಜೀವಿ ಹಾವಿನ ತಲೆ ಹೆಡೆ ಬಿಚ್ಚಿದ ಹಾಗೆ ಭಾಸವಾಗಿ, ಒಮ್ಮೆಲೇ ಬೆಚ್ಚಿದ ಡೈಸಿ ‘ಅರೇ ಇಲ್ಲೇನೊ ಇದೆ’ ಎಂದು ಚೀರಿದಳು. ಬೆಚ್ಚಿ ಹಿಂದೆ ಸರಿದಾಗ ನನ್ನ ಕೈ ಡೈಸಿಯ ಕೈಯನ್ನ ಗಟ್ಟಿಯಾಗಿ ಹಿಡಿದಿತ್ತು. ನಿಧಾನಕ್ಕೆ ಕಣ್ಣರಳಿಸಿ ನೋಡಿದೆವು. ಅಂಗೈ ಅಗಲದ ಹಸಿರೆಲೆ, ಬಲಿತ ಕಾಂಡ ನಡುವೆತ್ತರಕ್ಕೆ ಬೆಳೆದು ನಿಂತು ಈ ವಿಶ್ವದ ವಿಶೇಷ ಜೀವಿಯ ನೆಲೆಗೆ ಸಾಕ್ಷಿಯಾಗಿತ್ತು, ಈ ಯಾವುದೋ ಜಾತಿಯ ಕಾಡು ಗಿಡ!
ಅದರ ಮುಂದಿನ ರೆಕ್ಕೆಗಳು (forewings) ತ್ರಿಭುಜಾಕೃತಿಯಂತೆ. ಎರಡೂ ಕಡೆಯ ಮೇಲ್ಭಾಗದ ಅಂಚಿಗೆ ವಿಸ್ತರಣೆಯಿದ್ದು, ಕಪ್ಪು ಕಣ್ಣುಗಳುಳ್ಳ ಒಂದು ಹಾವಿನ ತಲೆಯ ಹಾಗೆ ಕಾಣಿಸಿತು. ಇಡೀ ರೆಕ್ಕೆಗಳೇ ಹಾವಿನಂತೆ ಕಂಡರೂ ನಿಧಾನಕ್ಕೆ ಗಮನಿಸಿದರೆ ಇದೊಂದು ದೈತ್ಯ ಚಿಟ್ಟೆ ಎಂದು ತಿಳಿಯಬಹುದಿತ್ತು. ಆದರೆ ಇದು ಚಿಟ್ಟೆಯಲ್ಲ. ಇದು ವಿಶ್ವದಲ್ಲೇ ದೊಡ್ಡದಾದ ಪತಂಗ! ಇದನ್ನು ಟಿ.ವಿ, ಪುಸ್ತಕಗಳಲ್ಲಿ, ನಮ್ಮ ಕಾಲೇಜಿನ ಕೀಟಶಾಸ್ತ್ರದ ತರಗತಿಗಳಲ್ಲಿ ಕೇಳಿದ್ದೇವೆ ಹೊರತು ಕಣ್ಣಿಂದ ಕಂಡಿರಲಿಲ್ಲ.

ದೊಡ್ಡದಾದ ವಿಶಾಲ ರೆಕ್ಕೆಗಳು. ರೆಕ್ಕೆಗಳ ಮೊದಲ ಹೊರ ಅರ್ಧ ಕೆಂಪುಗಂದು ಬಣ್ಣಕ್ಕೆ ಇದ್ದರೆ ಒಳ ಅರ್ಧ ಗಾಢಕಂದು ಬಣ್ಣದ್ದು. ಒಳ-ಹೊರ ಭಾಗವ ವಿಭಾಗಿಸುವ ಅಲೆಗಳಂತಹ ಬಿಳಿಯ ಬಣ್ಣದ ಪಟ್ಟಿ ಕಾಣುತ್ತಿತ್ತು. ಮೇಲಿನಿಂದ ಕೆಳಗೆ ಮೂರು ಬಿಳಿಯ ನಿರಾಕಾರದ ಮಚ್ಚೆಗಳು. ಹೊರ ಅಂಚಿನ ಉದ್ದಕ್ಕೂ ಅಲೆಯಾಗಿ ಹರಡಿರುವ ಕಪ್ಪು, ಬಿಳಿ, ಪಿಂಕ್, ತಿಳಿನೀಲಿ ಬಣ್ಣದ ಬಾರ್ಡರ್ ಗೆರೆಗಳು. ದೊಡ್ಡ ಗಾತ್ರದ ಹಾಗೂ ವಿಶೇಷವಾಗಿ ಕಾಣುವ ಎರಡು ಆಂಟೆನಾ. ದಪ್ಪನಾದ ಹೊಟ್ಟೆ.

ಸುಮಾರು 8-9 ಇಂಚಿನ ಅಗಲವಾದ ರೆಕ್ಕೆಯನ್ನು ಹೊಂದಿರುವ ಪ್ರಪಂಚದ ಅತಿದೊಡ್ಡ ಪತಂಗವಾದ ಇದರ ಹೆಸರು ‘ಅಟ್ಲಾಸ್ ಪತಂಗ’ (Atlas moth). ಇದನ್ನು ನೋಡುತ್ತಾ ಡೈಸಿ ಕಣ್ಣುಗಳು ಹೊಳೆಯುತ್ತಿದ್ದವು. ನಾನು ಆ ಚಂದ್ರನಂತಿದ್ದ ಆ ಹೊಳಪು ಕಣ್ಣುಗಳನ್ನು ಸೆರೆ ಹಿಡಿಯುತ್ತಿದ್ದೆ.

‘ಅರೇ, ಐದ್ ಮಾರ್ಕ್ಸ್‌ ಮಿಸ್ ಮಾಡಿಕೊಂಡ್ನಲ್ಲಾ...’ ಎಂದು ಬೊಬ್ಬೆ ಶುರುವಿಟ್ಟಳು.
‘ಏನ್ ಡೈಸಿ...? ನಿಧಾನ ನಿಧಾನ. ಅದು ಹಾರಿ ಹೋಗೋದೂ...’
‘ಕೀಟ ಸಂಗ್ರಹಣೆ ಮಾಡುವಾಗ ಇದು ಸಿಗಬಾರದಿತ್ತೇ... ಮಿಸ್ ಆಯ್ತಲ್ಲಾ ಐದು ಮಾರ್ಕ್ಸು..’
ಬೇಸರಿಸಿಕೊಳ್ಳುತ್ತಿದ್ದಳು. ನಗುತ್ತಾ, ‘ಬಿಡು, ಹೀಗ ಸಿಕ್ಕಿದೆಯಲ್ಲಾ...’ ಎನ್ನುತ್ತಾ ಅದರ ನಾನಾ ರೀತಿಯ ಭಂಗಿಗಳಿಂದ ಫೋಟೊ ಕ್ಲಿಕ್ಕಿಸುವ ಸಾಹಸ ಮಾಡುತ್ತಾ ಗಮನಿಸಿದರೆ, ಅದರ ತಲೆ ಭಾಗದ ಅಂಗಗಳ ಯಾವ ಚಲನೆಯೂ ಕಾಣಿಸುತ್ತಿರಲಿಲ್ಲ. ವಿಶೇಷವೆಂದರೆ ಇವುಗಳಿಗೆ ಬಾಯಿ ಎಂಬ ಅಂಗವೇ ಇರುವುದಿಲ್ಲ. ಸಾಯುವ ತನಕ ಆಹಾರ ಸೇವನೆಯನ್ನೂ ಮಾಡುವುದಿಲ್ಲ. ಮತ್ತೇನಿದರ ಕೆಲಸ? ಮತ್ತೆ ಹೇಗೆ ಇದು ಬದುಕುತ್ತದೆ ಎಂಬ ಕುತೂಹಲ ನಮಗೆಲ್ಲರಿಗೂ ಬರುತ್ತದೆ.

ಹೌದು, ಇದು ಬದುಕುವುದೇ ಹೆಣ್ಣಿನ ಜತೆಗಿನ ಮಿಲನಕ್ಕಾಗಿ! ಮಿಲನವೇ ಇದರ ಮೂಲ ಉದ್ದೇಶ. ಇದಕ್ಕೆ ಸಹಾಯ ಮಾಡಲು ವಿಶೇಷವಾಗಿ ರೂಪುಗೊಂಡಿರುವ ‘ಆಂಟಿನಾ’ ನೋಡುವುದಕ್ಕೆ ಗರಗಸದ ಚೂಪು ಹಲ್ಲುಗಳ ಹಾಗೆ.

ಸುಮಾರು ಕಿಲೊ ಮೀಟರ್‌ಗಳ ದೂರದಿಂದ ಹೆಣ್ಣು ಪತಂಗ ಹೊರಸೂಸುವ ಫೆರಮೋನ್‌ಗಳನ್ನು ಗ್ರಹಿಸಿ ಅಲ್ಲಿಯತನಕ ಹುಡುಕಿಕೊಂಡು ಹೋಗಿ (ಅದೂ ರಾತ್ರಿ ಮಾತ್ರ ಹಾರುವುದು. ಬೆಳಗ್ಗೆ ಕಡಿಮೆ) ಹೆಣ್ಣು ಪತಂಗದೊಡನೆ ಮಿಲನವಾದ ನಂತರ ಇದರ ಜೀವನ ಸಾರ್ಥಕ ಹಾಗೂ ಅಂತ್ಯದ ಕ್ಷಣಗಣನೆ.

ಲಾರ್ವಾವಸ್ಥೆಯ ಸಮಯದಲ್ಲಿ ಶೇಖರವಾಗುವ ಕೊಬ್ಬಿನ ಅಂಶ ಹೊಟ್ಟೆಯ ಆಸುಪಾಸಿನಲ್ಲಿ ಇರುತ್ತದೆ. ಅದು ಗೂಡಿನಿಂದ (ಕಕೂನ್) ಹೊರ ಜಗತ್ತಿಗೆ ಬಂದಾಗ ರೆಕ್ಕೆಗಳನ್ನು ಪಡೆದು ಬಾಯಿಯನ್ನು ಪಡೆಯದೆ ಬಂದಿರುತ್ತದೆ. ಇದರ ಜೀವಿತಾವಧಿ ಬಹಳ ಕಡಿಮೆ. ಸುಮಾರು ಒಂದು ವಾರ ಅಥವಾ ಎರಡು ವಾರ!

ಶೇಖರವಾಗಿರುವ ಕೊಬ್ಬಿನ ಶಕ್ತಿಯೇ ಇದು ಹಾರಲು, ಜೀವಿಸಲು ಮೂಲಾಧಾರ. ಹಾಗಾಗಿ ಇದರ ಒಂದೊಂದು ರೆಕ್ಕೆ ಬಡಿತಕ್ಕೂ ಬೆಲೆ ತೆರುವುದು. ಮಿತಿಯಾದ ಶಕ್ತಿ ಬಳಕೆಯು ಇದರ ಜವಾಬ್ದಾರಿ.

‘Attacus atlas’ ಎಂಬ ವೈಜ್ಞಾನಿಕ ಹೆಸರು. ಅಟ್ಲಾಸ್ ಪತಂಗದ ರೆಕ್ಕೆಗಳಿಗೆ ಹೋಲಿಸಿದರೆ ಹೊಟ್ಟೆಯ ಭಾಗ ತುಂಬಾ ಚಿಕ್ಕದು. ಹೆಣ್ಣು ಪತಂಗ ಗಂಡಿಗಿಂತ ಗಾತ್ರದಲ್ಲಿ ದೊಡ್ಡದು. ಈ ವ್ಯತ್ಯಾಸವನ್ನು ಲೆಪೆಡಾಪ್ಟರಾಗಳಲ್ಲಿ (leps) ಸಾಮಾನ್ಯವಾಗಿ ಗಮನಿಸಬಹುದು. ಕಾಡುಗಳಲ್ಲಿ ಮಾತ್ರ ಕಾಣುವ ಇವುಗಳಲ್ಲಿ ಹೆಣ್ಣು ಗೂಡಾವಸ್ಥೆಯಿಂದ ಹೊರಬಂದಾಗ ಗಾಳಿಯ ಚಲನೆ ಉತ್ತಮವಾಗಿರುವ ಕಡೆ ಆವಾಸವನ್ನು ಹುಡುಕುತ್ತದೆ. ಇದರ ಹಿಂದಿನ ಸೋಜಿಗವೆಂದರೆ ತಾನು ಹೊರಬಿಡುವ ಪೆರಮೋನ್‌ಗಳು ಉತ್ತಮವಾಗಿ ಹರಡಿ, ಚಲಿಸಿ ಗಂಡಿಗೆ ತಲುಪಬೇಕು ಹಾಗೂ ಆ ಗಂಡು ತನ್ನನ್ನು ಹುಡುಕಿಕೊಂಡು ಬಂದು ಮಿಲನವಾಗಬೇಕು, ಸಂತತಿ ಮುಂದುವರೆಯಬೇಕು ಎಂಬುದು.

ಇಂತಿಪ್ಪ ಪತಂಗದ ನಾನಾ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಡೈಸಿಗೆ ಅದನ್ನು ಅಲ್ಲಿಂದ ಎಬ್ಬಿಸಿ, ಅದು ಹಾರುವಾಗ ಅದರ ಅಂದವನ್ನು ನೋಡುವ ಮನಸ್ಸಾಯಿತು.

‘ಏ ಬೇಡ ಮಾರಾಯ್ತಿ, ಅದು ವಿಶ್ರಾಂತಿ ಮಾಡ್ತಿದೆ’
‘ಹೆದುರುಪುಕ್ಲ ಅದು ‘ಮಾತ್’ ಕಣಪ್ಪಾ ಕಚ್ಚಲ್ಲಾ’
‘ಆದ್ರೂ ಬೇಡ್ವೆ...‌’ ಎಂಬ ನನ್ನ ಗೋಳನ್ನ ಸಹಿಸುತ್ತಾ, ಮನ್ನಿಸುತ್ತಾ,
‘ಸರಿ ಓಕೆ...’ ಎಂದೇಳುತ್ತಾ ನೋಡುತ್ತಿದ್ದಳು. ಇವತ್ತಿನ ಪಯಣದ ಸಾರ್ಥಕ ಭಾವ ಅವಳ ಮುಖದಲ್ಲಿತ್ತು. ಅಂಗೈ ಹಿಡಿದಿದ್ದ ಕೈಯಲ್ಲಿ ಉತ್ಸಾಹದ ಒಲವಿತ್ತು... ಜೊತೆಗೆ ಬೆವರೂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT