ಮಂಗಳವಾರ, ಫೆಬ್ರವರಿ 25, 2020
19 °C

ಕಪ್ಪು–ಬಿಳಿ ಪುಕ್ಕದ ಕಿಂಗ್‌ಫಿಶರ್‌

ಪಕ್ಷಿ ಪ್ರಪಂಚ Updated:

ಅಕ್ಷರ ಗಾತ್ರ : | |

Prajavani

ಬಹುತೇಕ ಪಕ್ಷಿ ಪ್ರಿಯರಿಗೆ ಪರಿಚಯವಿರುವ ಹಕ್ಕಿಗಳಲ್ಲಿ ಕಿಂಗ್‌ಫಿಶರ್ ಕೂಡ ಒಂದು. ಕನ್ನಡದಲ್ಲಿ ಇದನ್ನು ಮಿಂಚುಳ್ಳಿ, ನೀರು ಮುಳುಕ, ಜಾಲಗಾರ ಹಕ್ಕಿ ಎನ್ನುತ್ತಾರೆ. ವಿಶ್ವದ ವಿವಿಧ ಭೂಭಾಗಗಳಲ್ಲಿ ಹಲವು ಕಿಂಗ್‌ಫಿಶರ್ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಚಿತ್ತಾಕರ್ಷಕ ದೇಹರಚನೆಯ ಪೀಡ್ ಕಿಂಗ್‌ಫಿಶರ್‌ (Pied Kingfisher) ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಕಪ್ಪು ಮತ್ತು ಬಿಳಿ ಬಣ್ಣದ ಆಕರ್ಷಕ ಪುಕ್ಕ ದೇಹವನ್ನು ಆವರಿಸಿರುತ್ತದೆ. ಕೆನ್ನೆಗಳು, ಗಲ್ಲ,  ಮತ್ತು ಉದರ ಭಾಗ ಬಿಳಿ ಬಣ್ಣದಲ್ಲಿದ್ದರೆ, ಎದೆ ಮತ್ತು ಉದರದ ಮೇಲೆ ಕಪ್ಪು ಬಣ್ಣದ ಪಟ್ಟಿಗಳೂ ಇರುತ್ತವೆ. ಬೆನ್ನು, ಕತ್ತು, ರೆಕ್ಕೆಗಳು ಮತ್ತು ಬಾಲ ಬಹುತೇಕ ಕಪ್ಪು ಬಣ್ಣದಲ್ಲಿದ್ದು, ಅಲ್ಲಲ್ಲಿ ಬಿಳಿ ಬಣ್ಣದ ಮಚ್ಚೆಗಳೂ ಇರುತ್ತವೆ. ಬಾಲ ನೀಳವಾಗಿರುತ್ತದೆ. ತಲೆ ದೊಡ್ಡದಾಗಿದ್ದು, ತಲೆಯ ಹಿಂಭಾಗದ ಕೂದಲು ಸೆಟೆದುಕೊಂಡಿರುತ್ತವೆ. ಕಣ್ಣುಗಳು ಮಧ್ಯಮಗಾತ್ರದಲ್ಲಿದ್ದು, ಗಾಢ ಕಂದು ಬಣ್ಣದಲ್ಲಿರುತ್ತವೆ. ದೃಢವಾದ ಕೊಕ್ಕು ಕಪ್ಪು ಬಣ್ಣದಲ್ಲಿದ್ದು, ನೀಳವಾಗಿರುತ್ತದೆ. ಕಾಲುಗಳು ಪುಟ್ಟದಾಗಿದ್ದು, ಗಾಢ ಕಪ್ಪು ಬಣ್ಣದಲ್ಲಿರುತ್ತವೆ. ಹೆಣ್ಣು ಮತ್ತು ಗಂಡು ಹಕ್ಕಿಗಳ ದೇಹರಚನೆಯಲ್ಲಿ ಹೆಚ್ಚಿನ ವ್ಯತ್ಯಾಸಗಳು ಇರುವುದಿಲ್ಲ.

ಎಲ್ಲಿದೆ?

ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಹಲವು ರಾಷ್ಟ್ರಗಳಲ್ಲಿ ಈ ಹಕ್ಕಿಯ ಸಂತತಿ ವಿಸ್ತರಿಸಿದೆ. ನದಿಪಾತ್ರಗಳು, ನೀರಾವರಿ ಪ್ರದೇಶಗಳು, ಕೃಷಿಭೂಮಿ, ನೀರು ಹರಿಯುವ ತೊರೆಗಳು,  ನದಿ ಕಣಿವೆ ಪ್ರದೇಶಗಳಲ್ಲಿ ಈ ಹಕ್ಕಿ ಹೆಚ್ಚಾಗಿ ವಾಸಿಸುತ್ತದೆ. ವಿಸ್ತಾರವಾದ ಜೌಗುಭೂಮಿ ಮತ್ತು ಉಷ್ಣವಲಯದ ಕಾಡುಗಳಲ್ಲೂ ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಹಗಲಿನಲ್ಲಿ ಮಾತ್ರ ಹೆಚ್ಚು ಚುರುಕಾಗಿರುವ ಹಕ್ಕಿ. ಬಹುತೇಕ ಒಂಟಿಯಾಗಿ ಜೀವಿಸಲು ಇಷ್ಟಪಡುವ ಈ ಕೊಕ್ಕರೆ, ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಸಂಗಾತಿಯೊಂದಿಗೆ ಕಾಣಿಸಿಕೊಳ್ಳುತ್ತದೆ. ಪ್ರತಿ ಕಿಂಗ್‌ಫಿಶರ್‌ ವಿಶಿಷ್ಟ ಶಬ್ದಗಳನ್ನು ಹೊರಡಿಸುತ್ತಾ ಗಡಿ ಗುರುತಿಸಿಕೊಂಡಿರುತ್ತವೆ.  ಆಹಾರಕ್ಕಾಗಿ ಹೊಳೆಗಳ ಬದಿಯಲ್ಲಿರುವ ಮರಗಳ ಮೇಲೆ ಸದಾ ಕುಳಿತಿರುತ್ತದೆ. ನೇರವಾಗಿ ಹಾರಿಬಂದು ನೀರಿನಲ್ಲಿ ಮುಳುಗಿ ಮೀನುಗಳನ್ನು ಕಬಳಿಸುತ್ತದೆ. ದೇಹಕ್ಕೆ ಬೇಕಾಗುವಷ್ಟು ಆಹಾರ ದೊರೆತರೆ ಒಂದೆಡೆ ಕುಳಿತು ವಿಶ್ರಾಂತಿ ಪಡೆಯುತ್ತದೆ. ಇದು ವಲಸೆ ಹೋಗುವ ಪ್ರವೃತ್ತಿಯ ಹಕ್ಕಿಯಲ್ಲ.

ಆಹಾರ

ಇದು ಬಹುತೇಕ ಮಾಂಸಾಹಾರಿ ಹಕ್ಕಿ. ವಿವಿಧ ಬಗೆಯ ಮೀನುಗಳೆ ಇದರ ಪ್ರಮುಖ ಆಹಾರ. ಜಲವಾಸಿ ಕೀಟಗಳು, ಉಭಯವಾಸಿಗಳು, ಕಠಿಣಚರ್ಮಿಗಳು ಮತ್ತು ಮೃದ್ವಂಗಿಗಳನ್ನು ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ಜನಿಸಿದ ಒಂದು ವರ್ಷದ ನಂತರ ಈ ಹಕ್ಕಿ ವಯಸ್ಕ ಹಂತ ತಲುಪುತ್ತದೆ. ಈ ಹಂತದಲ್ಲಿ ಗಂಡು ಕಿಂಗ್‌ಫಿಶರ್‌ಗಳು ಹೆಣ್ಣು ಹಕ್ಕಿಯ ಗಮನ ಸೆಳೆಯಲು ರೆಕ್ಕೆಗಳನ್ನು ಅಗಲಿಸಿ, ವಿವಿಧ ಕಸರತ್ತಗಳನ್ನು ಪ್ರದರ್ಶಿಸುತ್ತವೆ. ಕೆಲವು ಹಕ್ಕಿಗಳು ಹೆಣ್ಣಿಗೆ ಆಹಾರವನ್ನೂ ಒದಗಿಸಿ ಗಮನ ಸೆಳೆಯುತ್ತವೆ.

ಹೆಣ್ಣಿಗೆ ಇಷ್ಟವಾದರೆ ಗಂಡು ಹಕ್ಕಿಯೊಂದಿಗೆ ಕೂಡಿ ಬಾಳುತ್ತದೆ. ಎರಡೂ ಸೇರಿ ನೀರು ಇರುವಂತಹ ಪ್ರದೇಶಗಳ ಸನಿಹದಲ್ಲಿ ನೆಲದಲ್ಲಿ ಬಿಲತೋಡಿ ಗೂಡು ನಿರ್ಮಿಸಿಕೊಳ್ಳುತ್ತವೆ. ಕೆಲವೊಮ್ಮೆ ಸುತ್ತಲೂ ದಟ್ಟವಾಗಿ ಹುಲ್ಲು ಬೆಳೆದಿರುವ ಪ್ರದೇಶಗಳಲ್ಲೂ ಗೂಡು ನಿರ್ಮಿಸುತ್ತವೆ.

ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಇವು ಸಂತಾನೋತ್ಪತ್ತಿ ನಡೆಸುತ್ತದೆ. ಹೆಣ್ಣು ಹಕ್ಕಿ 4ರಿಂದ 5 ಮೊಟ್ಟೆಗಳನ್ನು ಇಟ್ಟರೆ, ಎರಡೂ ಸೇರಿ ಸುಮಾರು 18 ದಿನಗಳವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಈ ಅವಧಿಯಲ್ಲಿ ಗಂಡುಹಕ್ಕಿ, ಹೆಣ್ಣು ಹಕ್ಕಿಗೆ ಆಹಾರ ಪೂರೈಸಿ ಕಾಳಜಿ ತೋರುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಎರಡೂ ಹಕ್ಕಿಗಳು ಸೇರಿ ಆಹಾರ ಉಣಿಸಿ ಬೆಳೆಸುತ್ತವೆ. ಸುಮಾರು ಮೂರು ವಾರಗಳ ವರೆಗೆ ಮರಿಗಳು ಪೋಷಕ ಹಕ್ಕಿಗಳ ಆರೈಕೆಯಲ್ಲೇ ಬೆಳೆಯುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಹೆಚ್ಚುಕಾಲ ಹಾರುವ ಸಾಮರ್ಥ್ಯವಿರುವ ದೊಡ್ಡಗಾತ್ರದ ಹಕ್ಕಿಗಳಲ್ಲಿ ಇದು ಕೂಡ ಒಂದು.

* ಪ್ರಸ್ತುತ ಸುಮಾರು 17 ಲಕ್ಷ ಪೀಡ್‌ ಕಿಂಗ್‌ಫಿಶರ್‌ಗಳು ಇವೆ ಎಂದು ಅಂದಾಜಿಸಲಾಗಿದೆ.

* ದಕ್ಷಿಣ ಆಫ್ರಿಕಾದ ನೈಜೀರಿಯಾದಲ್ಲಿ ಈ ಹಕ್ಕಿಯನ್ನು ಪಳಗಿಸಿ ಸಾಕುಹಕ್ಕಿಯಾಗಿ ಬೆಳೆಸಿಕೊಳ್ಳಲಾಗುತ್ತದೆ.

* ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಕಂಗೊಳಿಸುವುದರಿಂದ ಇದಕ್ಕೆ ಪೀಡ್‌ ಕಿಂಗ್‌ಫಿಶರ್‌ ಎಂದು ಹೆಸರಿಡಲಾಗಿದೆ. ಪೀಡ್‌ ಎಂದರೆ ಬಣ್ಣ ಬಣ್ಣದ ಎಂದು ಅರ್ಥ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 70 ರಿಂದ100 ಗ್ರಾಂ, ದೇಹದ ಉದ್ದ -25 ರಿಂದ 29 ಸೆಂ.ಮೀ,  ಹಾರುವ ವೇಗ-40 ಕಿ.ಮೀ/ಗಂಟೆಗೆ, ಜೀವಿತಾವಧಿ-

4 ವರ್ಷ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು