ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣ ಮೃಗದ ಪಡಿಪಾಟಲು

Published : 17 ಡಿಸೆಂಬರ್ 2023, 0:30 IST
Last Updated : 17 ಡಿಸೆಂಬರ್ 2023, 0:30 IST
ಫಾಲೋ ಮಾಡಿ
Comments

ಕೋಲಾರಕ್ಕೆ ಸಮೀಪದಲ್ಲಿ ಕೃಷ್ಣ ಮೃಗಗಳು ಹೆಚ್ಚಾಗಿದ್ದವು. ನಗರ ವಿಸ್ತರಣೆಯಾಗುತ್ತಾ ಬಂದಂತೆ ಅವುಗಳ ಪಡಿಪಾಟಲು ಈಗ ಹೆಚ್ಚಾಗಿದೆ. ಅವುಗಳನ್ನು ಸಂರಕ್ಷಿಸಿ ವನ್ಯಧಾಮ ಮಾಡುವ ಹಳೆಯ ಕೋರಿಕೆಗೆ ಸರ್ಕಾರ ಇನ್ನೂ ಕಿವಿಗೊಟ್ಟಿಲ್ಲ.

ಕೃಷ್ಣ ಮೃಗಗಳ ಸೌಂದರ್ಯಕ್ಕೆ ಮನಸೋಲದ ಜನರಿಲ್ಲ. ರಾಮಾಯಣದ ಸೀತೆಯೂ ಮಾಯಾಮೃಗಕ್ಕೆ ಆಸೆಪಟ್ಟವಳೇ. ಇವುಗಳು ಜೀವಿಸುವ ಪರಿಸರವು ಯಾವಾಗಲೂ ಸುಭಿಕ್ಷವಾಗಿರುತ್ತದೆ ಎನ್ನುವುದು ಜನರ ನಂಬಿಕೆ. ರೈತರು ಬೆಳೆಯುವ ಪೈರಿನ ಚಿಗುರುಗಳನ್ನು ಕಡಿದು ತಿಂದರೆ, ಆ ಬೆಳೆ ಸಮೃದ್ಧವಾಗುತ್ತದೆ ಎನ್ನುವ ನಂಬಿಕೆಯೂ ಉತ್ತರ ಕರ್ನಾಟಕದ ರೈತರಲ್ಲಿ ಇದೆ. ಹೀಗಾಗಿ ಇವುಗಳನ್ನು ಕೊಲ್ಲುವುದಿಲ್ಲ. ಇವುಗಳ ಮೂಲಸ್ಥಾನ ಭಾರತವೇ ಆದರೂ ನೇಪಾಳ ಹಾಗೂ ಪಾಕಿಸ್ತಾನ ಭಾಗಗಳಲ್ಲಿ ಈ ಬಂಗಾರದ ಚಿಗರಿಗಳನ್ನು (ಸೂರ್ಯರಶ್ಮಿ ಮೈಮೇಲೆ ಬಿದ್ದರೆ ಬಂಗಾರದಂತೆ ಇವು ಹೊಳೆಯುತ್ತವೆ) ಕಾಣಬಹುದು. ಹಿಂದೆ ನೂರಾರು ಸಂಖ್ಯೆಯಿಂದ ಕೂಡಿರುತ್ತಿದ್ದ ಅವುಗಳ ಗುಂಪುಗಳಲ್ಲಿ ಈಗ ಹತ್ತಿಪ್ಪತ್ತು ಕಂಡರೆ ಹೆಚ್ಚು.

ಕೋಲಾರದಿಂದ 35 ಕಿ.ಮೀ. ಹಾಗೂ ಬಂಗಾರಪೇಟೆಯಿಂದ ಕೇವಲ 12 ಕಿ.ಮೀ. ದೂರ ಸಾಗಿದರೆ ಈ ಕೃಷ್ಣ ಮೃಗಗಳನ್ನು 12 ಸಾವಿರ ಎಕರೆ ಜಾಗದಲ್ಲಿ ಕಾಣಬಹುದು. ಇವುಗಳ ವಾಸಸ್ಥಳವು ‘ಭಾರತ್ ಗೋಲ್ಡ್‌ಮೈನ್ಸ್ ಲಿಮೆಟೆಡ್‌’ಗೆ ಸೇರಿದೆ. ಸರ್ಕಾರವು ಅರಣ್ಯ ಇಲಾಖೆಯವರಿಗೆ ಈ ಸ್ಥಳವನ್ನು ಹಸ್ತಾಂತರಿಸಿದರೆ ಸಂರಕ್ಷಣಾ ಮೀಸಲು ಪ್ರದೇಶವೆಂದು ಮಾಡಬಹುದು ಎಂದು ಮಾಹಿತಿ ಕೊಟ್ಟವರು ಡಿ.ಸಿ.ಎಫ್. ಏಡುಕೊಂಡಲು.

ಕೋಲಾರದ ಚಿನ್ನದ ಗಣಿಯವರಿಂದ ಜಾಗವನ್ನು ವಶಪಡಿಸಿಕೊಂಡು ಕೃಷ್ಣ ಮೃಗ ವನ್ಯಧಾಮ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ 2017ರಲ್ಲಿ ಮನವಿ ಸಲ್ಲಿಸಲಾಗಿತ್ತೆನ್ನುವ ಸಂಗತಿಯೂ ಅವರಿಂದ ತಿಳಿಯಿತು. ಆದರೆ ಇದೇ ಸ್ಥಳದಲ್ಲಿ ಬಡಾವಣೆ ನಿರ್ಮಿಸುವ ಪ್ರಸ್ತಾವ ಇರುವುದು ವಿಷಾದನೀಯ.

ಕೃಷ್ಣ ಮೃಗಗಳಲ್ಲದೆ ನವಿಲು ಸೇರಿದಂತೆ ಪಕ್ಷಿ ಸಂಕುಲವೂ ಇಲ್ಲಿದೆ. ನರಿ, ಮುಳ್ಳುಹಂದಿ, ಕಾಡುಹಂದಿ, ಉಡ, ಮುಂಗುಸಿ, ಕಾಡುಮೊಲ ಮುಂತಾದವೂ ಕಾಣಿಸುತ್ತವೆ. ಆನೆಗೊಬ್ಬಳಿ, ಜಾಲಿ, ಲಂಟಾನ ಇತ್ಯಾದಿ ಗಿಡ–ಪೊದೆಗಳು ಕೂಡ ಕಂಡುಬರುತ್ತವೆ. ಕೃಷ್ಣ ಮೃಗಗಳಿಗೆ ಇದು ಒಂದು ಉತ್ತಮ ಪರಿಸರವಾಗಿದೆ. ನಗರ ಪ್ರದೇಶದಲ್ಲಂತೂ ವನ್ಯಧಾಮ ಎಲ್ಲಿಯೂ ಕಂಡುಬರುವುದಿಲ್ಲ. ಈ ಜಾಗವನ್ನು ಅರಣ್ಯ ಇಲಾಖೆಯವರು ಅಭಿವೃದ್ಧಿ ಪಡಿಸಿದರೆ ಒಂದು ವನ್ಯಧಾಮವಾಗುತ್ತದೆ. ಪ್ರವಾಸಿಗರಿಗೆ ಅದೇ ಪಿಕ್‌ನಿಕ್‌ ಸ್ಪಾಟ್ ಕೂಡ ಆಗುವುದರಲ್ಲಿ ಸಂಶಯವಿಲ್ಲ.

ನಗರ ಪ್ರದೇಶ ಹೀಗೆ ವಿಸ್ತರಣೆಯಾಗುವುದರಿಂದ ಹೊಲ ಗದ್ದೆಗಳು ಮಾಯವಾಗುತ್ತಿವೆ. ಕೃಷ್ಣ ಮೃಗಗಳಿಗೆ ವಲಸೆ ಹೋಗಲು ಕೂಡ ಹತ್ತಿರದಲ್ಲಿ ಸಮರ್ಪಕ ಪರಿಸರವೇ ಇಲ್ಲ. ದಾರಿ ಕಾಣದೆ ಅವು ನಗರ ಪ್ರದೇಶದ ಕಡೆ ಬರುತ್ತಿರುವುದರಿಂದ ಬೀದಿನಾಯಿಗಳ ಹಾವಳಿಗೆ ಸಿಲುಕುತ್ತಿವೆ. ಇವುಗಳ ಸಂತತಿ ನಶಿಸಿಹೋಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಮಧ್ಯ ಕರ್ನಾಟಕ ಭಾಗದ ಹರಿಹರದಿಂದ ಉತ್ತರ ಕರ್ನಾಟಕದ ಧಾರವಾಡದವರೆಗಿನ ಹಾದಿಯಲ್ಲಿ ಹೊಲಗಳಲ್ಲಿ ಹೆಚ್ಚಾಗಿ ಕೃಷ್ಣ ಮೃಗಗಳು ಕಾಣುತ್ತವೆ. ರೈತರ ಜಮೀನುಗಳಿಗೆ ಹೊಂದಿಕೊಂಡ ಕಾಡುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇವೆ. ಇವುಗಳು ದಿಢೀರನೆ ಎತ್ತರಕ್ಕೆ ನೆಗೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. 80 ಸೆಂ.ಮೀ. ಎತ್ತರದವರೆಗೂ ಬೆಳೆಯಬಲ್ಲ ಇವು ಸರಾಸರಿ 40 ಕೆ.ಜಿ. ತೂಗುತ್ತವೆ. ರಾಣೆಬೆನ್ನೂರಿನಿಂದ 4 ಕಿ.ಮೀ. ದೂರದ ವನ್ಯಧಾಮದಲ್ಲಿ ಕೃಷ್ಣ ಮೃಗಗಳನ್ನು ನೋಡಿ ಆನಂದಿಸಬಹುದು.

ಅರಣ್ಯ ಇಲಾಖೆ ಎಚ್ಚೆತ್ತು 10,000 ಎಕರೆ ಕುರುಚಲು ಕಾಡಿನ ಜಾಗದಲ್ಲಿ ಇವುಗಳಿಗೆ ಮೇವಾಗಿ ಗರಿಕೆ, ಹುರುಳಿ, ಜೋಳ, ನವಣೆ, ಹೆಸರು, ಅಲಸಂದೆ, ಬಿತ್ತನೆ ಕಾರ್ಯ ಮಾಡಿ ನೀರಿನ ಟ್ಯಾಂಕ್‌ಗಳಲ್ಲಿ ಕುಡಿಯಲು ನೀರಿನ ವ್ಯವಸ್ಥೆಯನ್ನೂ ಮಾಡಿದರೆ, ಕೋಲಾರದಲ್ಲಿ ಬಂಗಾರದ ಚಿಗರಿಗಳ ಜಿಗಿತ ಇನ್ನಷ್ಟು ಹೆಚ್ಚಾಗಲಿದೆ. 

ಬೀದಿನಾಯಿಯ ಉಪಟಳ
ಬೀದಿನಾಯಿಯ ಉಪಟಳ
ಕೃಷ್ಣ ಮೃಗಗಳ ಹಿಂಡಿನ ಗಾತ್ರವೇ ಈಗ ಕಡಿಮೆಯಾಗಿದೆ
ಕೃಷ್ಣ ಮೃಗಗಳ ಹಿಂಡಿನ ಗಾತ್ರವೇ ಈಗ ಕಡಿಮೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT