ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಹಕ್ಕಿ ‘ಕಂದು ಹೆಜ್ಜಾರ್ಲೆ’

Last Updated 3 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಜಲವಾಸಿ ಹಕ್ಕಿಗಳಲ್ಲಿ ವಿಚಿತ್ರ ಎನಿಸುವಂತಹ ಹಕ್ಕಿಗಳು ಕೆಲವು ಇವೆ. ಅಂತಹ ಹಕ್ಕಿಗಳಲ್ಲಿ ಹೆಜ್ಜಾರ್ಲೆ ಕೂಡ ಒಂದು. ಇದರಲ್ಲಿ ಹಲವು ಪ್ರಭೇದಗಳನ್ನೂ ಗುರುತಿಸಲಾಗಿದೆ. ಈ ಹಕ್ಕಿಯ ಕುರಿತು ಹಲವು ಕಥೆಗಳೂ ಇವೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಪರೂಪದ ಹಕ್ಕಿ ‘ಕಂದು ಹೆಜ್ಜಾರ್ಲೆ’ ಕುರಿತು ಮಾಹಿತಿ ಪಡೆಯೋಣ.

ಈ ಹಕ್ಕಿಯನ್ನು ಇಂಗ್ಲಿಷ್‌ನಲ್ಲಿ ಬ್ರೌನ್ ಪೆಲಿಕಾನ್ (Brown pelican) ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಪೆಲೆಕನಸ್ ಒಸಿಡೆಂಟಿಯಲ್ಸ್‌ (Pelecanus occidentalis). ಇದು ಪೆಲೆಕ್ಯಾನಿಡೇ (Pelecanidae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಪೆಲೆಕ್ಯಾಫಾರ್ಮ್ಸ್‌ (Pelecaniformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ದೈತ್ಯಗಾತ್ರದ ಹಕ್ಕಿಗಳಲ್ಲಿ ಒಂದಾಗಿ ಇದನ್ನೂ ಪರಿಗಣಿಸಲಾಗಿದೆ. ಕಂದು ಮತ್ತು ಕಪ್ಪು ಮಿಶ್ರಿತ ಪುಕ್ಕ ದೇಹವನ್ನು ಆವರಿಸಿರುತ್ತದೆ. ಜಲವಾಸಿ ಹಕ್ಕಿಗಳಿಗಿರುವಂತೆ ನೀಳವಾದ ಕತ್ತು ಇದ್ದು ಬಿಳಿ ಬಣ್ಣದಲ್ಲಿರುತ್ತದೆ. ಕತ್ತಿಗಿಂತಲೂ ನೀಳವಾದ ದೊಡ್ಡ ಕೊಕ್ಕು ಹೊಂದಿರುವುದು ಇದರ ವಿಶೇಷ. ಕೊಕ್ಕಿನ ಕೆಳಭಾಗದಲ್ಲಿ ಆಹಾರ ಶೇಖರಿಸಿ ಇಟ್ಟುಕೊಳ್ಳಲು ನೆರವಾಗುವಂತೆ ವಿಶೇಷ ಚೀಲ ರಚನೆಯಾಗಿರುತ್ತದೆ. ಕೊಕ್ಕು ಕೆಂಪು ಮತ್ತು ಬೂದು ಬಣ್ಣದಲ್ಲಿರುತ್ತದೆ.

ಬಾತುಕೋಳಿಗಳಿಗಿರುವಂತೆ ಪುಟ್ಟ ಕಾಲುಗಳಿದ್ದು, ಬೂದು ಬಣ್ಣದಲ್ಲಿರುತ್ತವೆ. ಪಾದಗಳಲ್ಲಿನ ಬೆರಳುಗಳು ಕೂಡಿಕೊಂಡಿರುತ್ತವೆ. ತಲೆ ಚಿಕ್ಕದಾಗಿದ್ದು, ಚಿನ್ನದ ಬಣ್ಣದ ಪುಕ್ಕದಿಂದ ಆವೃತವಾಗಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಂದು ಬಣ್ಣದಲ್ಲಿರುತ್ತವೆ.

ಎಲ್ಲಿದೆ?

ಅಮೆರಿಕ ಖಂಡಗಳ ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಗಲ್ಫ್‌ ಕಡಲ ತೀರಗಳಲ್ಲಿ ಈ ಹಕ್ಕಿಯನ್ನು ಕಾಣಬಹುದು. ವಲಸೆ ಹೋಗುವ ಪ್ರವೃತ್ತಿಯ ಹಕ್ಕಿಯಾಗಿದ್ದು, ಬೇಸಿಗೆ ಮತ್ತು ಚಳಿಗಾಲದಲ್ಲಿ ವಾಸಸ್ಥಾನ ಬದಲಾಯಿಸುತ್ತದೆ. ಕಡಲ ತೀರಗಳಲ್ಲೇ ವಾಸಿಸಲು ಇಷ್ಟಪಡುವ ಹಕ್ಕಿಯಾಗಿದ್ದು, ಚಂಡಮಾರುತಗಳು ಅಪ್ಪಳಿಸಿದಾಗ ಹರಿಯುವ ನದಿ ಪ್ರದೇಶಗಳಿಗೆ ವಾಸಸ್ಥಾನವನ್ನು ಬದಲಾಯಿಸುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ ದ್ವೀಪ ಪ್ರದೇಶಗಳಿಗೆ ಹೋಗುತ್ತದೆ.

ಜೀವನಕ್ರಮ ಮತ್ತು ವರ್ತನೆ

ಹಲವು ಸೇರಿ ಹೆಜ್ಜಾರ್ಲೆಗಳು ಗುಂಪಿನಲ್ಲಿ ವಾಸಿಸುತ್ತವೆ. ಹಗಲಿನಲ್ಲಿ ಹೆಚ್ಚು ಚುರುಕಾಗಿರುತ್ತವೆ. ಹುಣ್ಣಿಮೆ ದಿನಗಳಲ್ಲಿ ರಾತ್ರಿಯಲ್ಲೂ ಆಹಾರ ಅರಸಿ ಸುತ್ತುತ್ತವೆ. ಎರಡೂ ಪಾದಗಳನ್ನು ನೆಲಕ್ಕೆ ಊರಿ ವಿಶ್ರಾಂತಿ ಪಡೆಯುತ್ತದೆ. ಕೆಲವು ಹಕ್ಕಿಗಳು ದೇಹವನ್ನು ನೆಲಕ್ಕೆ ತಾಕಿಸಿಯೂ ವಿಶ್ರಾಂತಿ ಪಡೆಯುತ್ತವೆ. ನೀಳ ಕೊಕ್ಕನ್ನು ಬೆನ್ನಿನ ಮೇಲೆ ಇಟ್ಟು ಮಲಗುತ್ತದೆ. ಹೆಜ್ಜಾರ್ಲೆಗಳ ಪೈಕಿ, ನೇರವಾಗಿ ನೀರಿಗೆ ಹಾರಿ ಮೀನುಗಳನ್ನು ಕಬಳಿಸುವ ಸಾಮರ್ಥ್ಯ ಇದಕ್ಕಿದೆ. ನೀರಿನೊಳಗೆ ಈಜುವ ಸಾಮರ್ಥ್ಯವಿಲ್ಲದಿದ್ದರೂ ನೀಳಕೊಕ್ಕನ್ನು ನೀರಿನೊಳಗೆ ನೂಕಿ ಮೀನುಗಳನ್ನು ಹಿಡಿಯುತ್ತದೆ. ಗುಂಪಿನಲ್ಲಿ ವಾಸಿಸಿದರೂ ಗೂಡು ಕಟ್ಟಿಕೊಳ್ಳುವ ವಿಷಯದಲ್ಲಿ ಪ್ರತಿ ಪೆಲಿಕಾನ್ ನಿರ್ದಿಷ್ಟ ಗಡಿ ಗುರತಿಸಿಕೊಂಡಿರುತ್ತದೆ. ಅಪಾಯ ಎದುರಾದರೆ ‘ಹ್ರಾಹ್ರಾಹ್ರಾ’ ಎಂಬ ಸದ್ದು ಮಾಡುತ್ತಾ ಎಚ್ಚರಿಕೆ ನೀಡುತ್ತದೆ. ದೇಹದ ಭಂಗಿಗಳ ಮೂಲಕವೇ ಹೆಚ್ಚು ಸಂವಹನ ನಡೆಸುತ್ತವೆ.

ಆಹಾರ

ಇದು ಸಂಪೂರ್ಣ ಮಾಂಸಾಹಾರಿ ಹಕ್ಕಿ. ವಿವಿಧ ಬಗೆಯ ಮೀನುಗಳೇ ಇದರ ಪ್ರಮುಖ ಆಹಾರ. ಏಡಿ ಮತ್ತು ಜಲವಾಸಿ ಕೀಟಗಳನ್ನೂ ಭಕ್ಷಿಸುತ್ತದೆ. ಪುಟ್ಟ ಉಭಯವಾಸಿ ಜೀವಿಗಳು, ಸರೀಸೃಪಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿ

ಗುಂಪಿನಲ್ಲಿ ವಾಸಿಸಿದರೂ ಸಂತಾನೋತ್ಪತ್ತಿ ಅವಧಿಯಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳು ಒಂದು ಹಕ್ಕಿಯೊಂದಿಗೆ ಮಾತ್ರ ಜೊತೆಯಾಗುತ್ತವೆ. ಹೆಣ್ಣು ಹೆಜ್ಜಾರ್ಲೆಗಳ ಗಮನ ಸೆಳೆಯಲು ಗಂಡು ಹೆಜ್ಜಾರ್ಲೆ ರೆಕ್ಕೆಗಳನ್ನು ಅಗಲಿಸಿ, ವಿವಿಧ ಕಸರತ್ತುಗಳನ್ನು ನಡೆಸುತ್ತದೆ. ಹೆಣ್ಣಿಗೆ ಇಷ್ಟವಾದರೆ ಎರಡೂ ಸೇರಿ ಮರಗಳಲ್ಲಿ ಗೂಡು ಕಟ್ಟುತ್ತವೆ. ಸುರಕ್ಷಿತ ಪ್ರದೇಶವಾಗಿದ್ದರೆ, ನೆಲದ ಮೇಲೂ ಗೂಡು ಕಟ್ಟುತ್ತವೆ. ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಇದರ ಸಂತಾನೋತ್ಪತ್ತಿ ಅವಧಿಯಲ್ಲಿ ವ್ಯತ್ಯಾಸಗಳಿ. ಹೆಣ್ಣು ಹಕ್ಕಿ 2ರಿಂದ 3 ಮೊಟ್ಟೆಗಳನ್ನು ಇಡುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಹೆಜ್ಜಾರ್ಲೆಗಳು ಸೇರಿ ಸುಮಾರು 30 ದಿನಗಳ ವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತವೆ.

ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಪುಕ್ಕ ಮೂಡಿರುವುದಿಲ್ಲ. ಹೀಗಾಗಿ ಪೋಷಕ ಹಕ್ಕಿಗಳು ಮೀನುಗಳನ್ನು ಉಣಿಸಿ ಬೆಳೆಸುತ್ತವೆ. ಸುಮಾರು 60 ದಿನಗಳ ನಂತರ ಮರಿಗಳಿಗೆ ಸಂಪೂರ್ಣವಾಗಿ ಪುಕ್ಕ ಬೆಳೆಯುತ್ತದೆ. ಸುಮಾರು 70 ದಿನಗಳ ನಂತರ ಹಾರುವುದನ್ನು ಕಲಿಯುತ್ತವೆ. ಕೂಡಲೇ ಸ್ವತಂತ್ರವಾಗಿ ಜೀವಿಸಲು ಆರಂಭಿಸುತ್ತವೆ. 3ರಿಂದ 4 ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ನೀರಿನಲ್ಲಿ ಮುಳುಗಿದ ನಂತರ, ರೆಕ್ಕೆಗಳಿಗೆ ಸಮಸ್ಯೆಯಾಗದಂತೆ ದೇಹದಿಂದ ವಿಶೇಷ ರಾಸಾಯನಿಕಗಳನ್ನು ಸ್ರವಿಸುತ್ತದೆ.

* ಗಂಡುಹಕ್ಕಿ, ಹೆಣ್ಣು ಹೆಜ್ಜಾರ್ಲೆಯ ಮನ ಗೆಲ್ಲಲು ಒಮ್ಮೊಮ್ಮೆ ಮೂರು ವಾರಗಳ ಕಾಲ ಶ್ರಮಿಸುತ್ತದೆ.

* ಅಗಲವಾದ ಪಾದಗಳನ್ನು ಮೊಟ್ಟೆಗಳ ಮೇಲಿಟ್ಟು ಈ ಹಕ್ಕಿಗಳು ಕಾವು ಕೊಡುತ್ತವೆ. ಸಮಯಕ್ಕೆ ತಕ್ಕಂತೆ ಮೊಟ್ಟೆಗಳನ್ನು ತಿರುಗಿಸುತ್ತಾ ಕಾವು ಕೊಡುತ್ತವೆ.

* ಸುಮಾರು 30 ಅಡಿ ಎತ್ತರದಿಂದ ಇದು ನೀರಿಗೆ ಹಾರುವ ಸಾಮರ್ಥ್ಯ ಇದಕ್ಕಿದೆ.

* ಆಗಾಗ್ಗೆ ಕತ್ತನ್ನು ತಿರುಗಿಸುತ್ತಾ ವ್ಯಾಯಾಮಗಳನ್ನೂ ಈ ಹಕ್ಕಿ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT