ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಅತಿಥಿ: ಬಿಸಿಲಿಗೆ ಸದಾ ಹೊಳೆಯುವ ಸುರಂಗ ಹಾವು

ಹಲವು ವಿಶೇಷತೆಗಳ ಉರಗ, ಕುಂದುತ್ತಿರುವ 'ಬಿಲ್ಲುಮರಿ' ಸಂತತಿ
Last Updated 29 ಜನವರಿ 2022, 19:31 IST
ಅಕ್ಷರ ಗಾತ್ರ

ಯಳಂದೂರು:ಕರುನಾಡಿನ ಘಟ್ಟ ಪ್ರದೇಶ ಮತ್ತು ಬಯಲಿನಲ್ಲಿ ಬಿಸಲಿಗೆ ಸದಾ ಮಿನುಗುವ ಉರಗ ಪ್ರಬೇಧ
ಸುರಂಗದ ಹಾವು. ಹಗಲಿನಲ್ಲಿ ಸದಾ ಕ್ರಿಯಾಶೀಲ. ವೃಕ್ಷವಾಸಿ. ವೇಗ ಮತ್ತು ನಿಖರವಾಗಿ ಗುರಿ ಮುಟ್ಟಿ ಬೇಟೆ ಪ್ರಾಣಿಯನ್ನು ಭಕ್ಷಿಸುವ ಇವುಗಳ ಸಂತತಿ ಈಗ ಅಳಿವಿನಂಚಿನಲ್ಲಿದೆ.

ತಾಲ್ಲೂಕಿನ ಚಳಿ ಮತ್ತು ಬಿಸಿಲು ವಾತಾವರಣದಲ್ಲಿ ಸುರಂಗದ ಹಾವು ಕಂಡುಬರುತ್ತದೆ. ದಟ್ಟಪೊದೆಗಳಲ್ಲಿ ಹಾಗೂ ಹಗಲಿನ ಸಮಯ ಮರವೇರಿ ವಿಶ್ರಮಿಸುತ್ತವೆ. ತೆಳ್ಳನೆಯ ನೀಳವಾದ ಶರೀರ.ನಯವಾದ ಪೊರೆಯ ಹುರುಪೆ, ತುಸು ಚಪ್ಪಟೆಯಾದ, ಉದ್ದ ತಲೆ, ದೊಡ್ಡದಾದ ದುಂಡುಕಣ್ಣು ಮತ್ತು ಪಾಪೆ. ಉದ್ದವಾದ ಬಾಲ ಮರವೇರಲು ಸಹಾಯಕವಾಗಿದೆ. ದೇಹ ಕಂದು ಇಲ್ಲವೇ ತಿಳಿಹಳದಿ ಬಣ್ಣಗಳಿಂದ ಕೂಡಿದ ಸುಂದರ ಹಾವು ಇದು. ಸದಾ ಮನುಷ್ಯರಿಂದ ದೂರು ಇರುವ ಈ ಹಾವಿಗೆ ಇಲಿಗಳೇ ಪ್ರಧಾನ ಆಹಾರ.

ಶರೀರ ವೈವಿಧ್ಯಶರೀರದ ಪಾರ್ಶ್ವಗಳಲ್ಲಿ ಹಾಲಿನ ಕೆನೆ ಬಣ್ಣ ಕಂಡುಬರುತ್ತದೆ. ತಲೆಯ ಎರಡು ಕಡೆಯೂ
ಮೂಗಿನ ನೇರಕ್ಕೆ ದಟ್ಟ ಕಪ್ಪುವರ್ಣದ ಗೆರೆ ಕಣ್ಣು ಕುತ್ತಿಗೆ ತನಕ ಲಂಬಿಸಿದೆ.ಕೆಳತುಟಿ ಮತ್ತು ಮೇಲ್ದುಟಿ ಫಲಗಳು ಕೆನೆಬಣ್ಣ ಹೊಂದಿದ್ದು, ನೆತ್ತಿಯೂ ದಟ್ಟ ಕಂಚಿನಬಣ್ಣ ಹೊಂದಿದೆ. ಶರೀರದ ತಳಭಾಗ ಬಿಳಿ ಇಲ್ಲವೇ ತಿಳಿಹಳದಿ ಬಣ್ಣದಿಂದ ಕೂಡಿರುತ್ತದೆ.

’ಗಂಡಿಗಿಂತ ಹೆಣ್ಣು ಹಾವುಗಳು ದೊಡ್ಡವು. 150 ಸೆಂ.ಮೀ. ಉದ್ದ ಇರುತ್ತವೆ. ವಿಷಕಾರಿ ಅಲ್ಲ ಹಗಲಿನಲ್ಲಿಸದಾ ಸಂಚಾರಿ. ಪೊದೆ ಸಸ್ಯ ಮತ್ತು ನೀಳ ಮರಗಳಲ್ಲಿ ಕಂಡುಬರುವ ಹಲ್ಲಿ, ಓತಿಕ್ಯಾತ, ಮರಗಪ್ಪೆ, ನೆಲಗಪ್ಪೆಗಳ ಮರಿ, ಹಕ್ಕಿಮರಿಗಳನ್ನು ಭಕ್ಷಿಸುತ್ತವೆ. ಚುರುಕಾದ ಜೀವಿಗಳು. ಇಲಿಗಳನ್ನು ಹಿಡಿಯುವ ಸಂದರ್ಭದಲ್ಲಿ ನೇರವಾಗಿ ಮರದಿಂದ ಧುಮುಕುತ್ತವೆ. ಕೆಣಕಿದರೆನೀಳವಾದ ಕುತ್ತಿಗೆಯನ್ನು ಉಬ್ಬಿಸಿ ಬೆದರಿಸುತ್ತವೆ. ಸೌಮ್ಯ ಸ್ವಭಾವ ಹೊಂದಿದ್ದರೂ, ತಕ್ಷಣಕ್ಕೆ ಒಗ್ಗಿಸಿಕೊಳ್ಳುವುದು ಕಷ್ಟ. ಕೃಷಿಯಲ್ಲಿ ಬಳಕೆಯಾಗುವ ಅತಿಯಾದ ಕೀಟ ನಾಶಕದಿಂದ ಇವುಗಳ ಆವಾಸವೂ ಕಿರಿದಾಗಿದೆ‘ ಎಂದು ಹೇಳುತ್ತಾರೆ ಸ್ನೇಕ್ ಮಹೇಶ್.

ಭಾರತದಲ್ಲಿ ನಾಲ್ಕು ಜಾತಿ ಗುರುತು

ತಾಲ್ಲೂಕಿನಲ್ಲಿ ಈಗ ಮುಂಜಾನೆ ಮಂಜು, ಚಳಿ ಹಾಗೂ ಇಬ್ಬನಿ ವಾತಾವರಣ ಕಂಡು ಬರುತ್ತಿದೆ. ಬಿಸಿಲು ನಿಧಾನವಾಗಿ ನೆಲ ತೋಯಿಸುತ್ತದೆ. ಈ ವೇಳೆ ಈ ಹಾವುವೃಕ್ಷಗಳಿಂದ ಜಿಗಿಯುತ್ತ ದೇಹವನ್ನು ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುತ್ತವೆ.

ಇವುಗಳವಂಶಾಭಿವೃದ್ಧಿ ಸಮಯ ಜನವರಿ-ಜುಲೈ. ಗಂಡು-ಹೆಣ್ಣು ಮಿಲನವಾದ ನಂತರ ಪಕ್ಷಿಗಳ ಗೂಡು, ಇಲ್ಲವೇ ಮರದ ಪೊಟರೆಗಳಲ್ಲಿ 5-12 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ಮರಿಗಳು 20 ರಿಂದ 30 ಸೆಂ.ಮೀ. ಉದ್ದ ಇರುತ್ತದೆ. ಇವುಗಳಲ್ಲಿ 10 ಜಾತಿಯ ಹಾವುಗಳಿದ್ದು, ದೇಶದಲ್ಲಿ ನಾಲ್ಕು ಮಾತ್ರ ಕಂಡು ಬರುತ್ತವೆ. ಗ್ರಾಮೀಣ ಭಾಗಗಳಲ್ಲಿ 2 ಪ್ರಬೇಧಗಳನ್ನು ಗುರುತಿಸಲಾಗಿದೆ.

’ಸ್ಥಳೀಯರು ಸುರಂಗದ ಹಾವು, ಕಂಚುಬೆನ್ನಿನ ಮರಹಾವು, ಬಿಲ್ಲುಮುರಿ ಹೆಸರಿನಿಂದ ಗುರುತಿಸುತ್ತಾರೆ. ಹಿಂದಿಯಲ್ಲಿ 'ಗೂಬ್ರಾ, ಇಂಗ್ಲಿಷ್‌ನಲ್ಲಿ 'ಕಾಮನ್ ಬ್ರಾಂಝ್ ಬ್ಯಾಕ್ ಟ್ರೀ ಸ್ನೇಕ್, 'ಡೆಂಡ್ರೆಲಾಫಿಸ್ ಪಿಕ್ಟಾಸ್' ಮತ್ತು 'ಡೆಂಡ್ರೆಲಾಫಿಸ್ ಟ್ರಿಸ್ಟಿಸ್' ವೈಜ್ಞಾನಿಕ ಹೆಸರಿನ ಉರಗಗಳು ನಮ್ಮ ಸುತ್ತಮುತ್ತ ಕಂಡುಬರುತ್ತವೆ‘ ಎಂದು ಮಾಹಿತಿ ನೀಡುತ್ತಾರೆಉರುಗ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT