ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬೆಂಗಳೂರಿನ ಅಂಚಿನಲ್ಲೂ ಚಿರತೆಗಳಿವೆ!

Last Updated 9 ಸೆಪ್ಟೆಂಬರ್ 2020, 8:56 IST
ಅಕ್ಷರ ಗಾತ್ರ
ADVERTISEMENT
""
""

ನಗರದ ಅಂಚಿನಲ್ಲಿರುವ ನಮ್ಮ ಮನೆ ಸುರಕ್ಷಿತ. ಕಳ್ಳಕಾಕರ ಭಯವಿಲ್ಲ. ಗೇಟೆಡ್‌ಕಮ್ಯುನಿಟಿ ಬೇರೆ. ಸುತ್ತಮುತ್ತ ಹಿರಿಯ ನಾಗರೀಕರು, ಸಮಾನಮನಸ್ಕರು. ತಂಟೆ ತಕರಾರಿಲ್ಲ ಎನ್ನುತ್ತಾ ನಿವೃತ್ತ ವಿಂಗ್‌ ಕಮಾಂಡರ್‌ ಮುತ್ತಣ್ಣ ಅವರು ಸೂರ್ಯ ಇಳಿಯುವಾಗ ಸಂಜೆ ವಾಕಿಂಗ್‌ಗೆ ಹೊರಟರು. ಅವರು ಹೊರಟ ಒಂಬತ್ತೇ ನಿಮಿಷದಲ್ಲಿ ಅದೇ ದಾರಿಯಲ್ಲಿ ಬೇಟೆಗೆ ಹೊರಟಿತು ಚಿರತೆ.

ಇದು ಬೆಂಗಳೂರಿನ ಹೊರ ವಲಯದ ಕನಕಪುರ ರಸ್ತೆ ಮತ್ತು ನೈಸ್‌ ರಸ್ತೆಗೆ ಅಂಟಿಕೊಂಡಂತಿರುವ ಹಿರಿಯರ ಮನೆಯಿರುವ ಗೇಟೆಡ್‌ ಕಮ್ಯುನಿಟಿಯೊಂದರ ನೈಜಕಥೆ. ಈ ಕಥೆ ಬಯಲಾಗಿದ್ದುನೇಚರ್‌ ಕನ್ಸರ್‌ವೇಶನ್‌ ಫೌಂಡೇಷನ್ ಇರಿಸಿದ್ದ ಕ್ಯಾಮರಾ ಟ್ರ್ಯಾಪ್‌ನಿಂದ.

ಬೇಟೆಗೆ ಹೊರಟ ಚಿರತೆ ಮುತ್ತಣ್ಣ ಅವರ ಮೇಲೆ ದಾಳಿ ನಡೆಸಿತಾ? ಎನ್ನುವ ಪ್ರಶ್ನೆ ಏಳುತ್ತದೆ. ಖಂಡಿತ ಇಲ್ಲ. ಇಲ್ಲಿ ಚಿರತೆ ಇದೆ ಎನ್ನುವುದೇ ಇಲ್ಲಿಯ ನಿವಾಸಿಗಳಿಗೆ ಗೊತ್ತೇ ಇರಲಿಲ್ಲ.

ನೇಚರ್‌ ಕನ್ಸರ್‌ವೇಶನ್‌ ಫೌಂಡೇಷನ್ ಬೆಂಗಳೂರಿನ ಅಂಚಿನಲ್ಲಿ 2014ರಿಂದ 19ರವರೆಗೆ ಕ್ಯಾಮರಾ ಇರಿಸಿ ಚಿರತೆ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದೆ. ಇದರಲ್ಲಿ ಚಿರತೆಯ ಜೊತೆಯಲ್ಲಿ ಅಪರೂಪದ ಪ್ರಾಣಿಗಳ ಸಹ ಇರುವುದು ಪತ್ತೆಯಾಗಿದೆ. ಚಿರತೆ ಇರುವಿಕೆಯೇ ಗೊತ್ತಾಗದಂತೆ ಮನುಷ್ಯನ ಜೊತೆ ಸಹಬಾ‌ಳ್ವೆ ನಡೆಸುತ್ತಿವೆ.

ಬೆಂಗಳೂರಿನ ಅಂಚಿನಲ್ಲಿರುವ ಕೆಲ ಗೇಟೆಡ್ ಕಮ್ಯುನಿಟಿಗಳ ಸುತ್ತಮುತ್ತಲುಜನರ ಓಡಾಟ ನಿಂತ ನಂತರ ಚಿರತೆಗಳು ತಮ್ಮ ಕಾರ್ಯಚಟುವಟಿಕೆಪ್ರಾರಂಭಿಸುತ್ತವೆ.

ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಿರುವ ಕನಕಪುರ ರಸ್ತೆಯ ರೋರಿಚ್‌ ಎಸ್ಟೇಟ್ ಮತ್ತು ಸುವಿಧಾಗೇಟೆಡ್‌ ಕಮ್ಯುನಿಟಿ, ಬಡಮಾನವಂತೆ ಕಾವಲ್‌, ಯು.ಎಂ.ಕಾವಲ್‌, ವ್ಯಾಲಿ ಸ್ಕೂಲ್‌, ಬನ್ನೇರುಘಟ್ಟ ರಸ್ತೆಯ ಗೊಲ್ಲಹಳ್ಳಿ ಗುಡ್ಡ, ಮಾಗಡಿ ರಸ್ತೆ,ಹೆಸರಘಟ್ಟ ಮತ್ತು ಬನ್ನೇರುಘಟ್ಟದಲ್ಲಿ ಹಾಕಿದ ಕ್ಯಾಮರಾಗಳಿಗೆ 90 ಚಿರತೆ ಸಿಕ್ಕಿ ಬಿದ್ದಿವೆ. ಬೆಂಗಳೂರಿನ ಸುತ್ತಮುತ್ತ ಸುಮಾರು 50 ಮತ್ತು ಬನ್ನೇರುಘಟ್ಟದಲ್ಲಿ 40 ಚಿರತೆಗಳು ಪತ್ತೆಯಾಗಿವೆ.

ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಿರುವ ರೋರಿಚ್‌ ಎಸ್ಟೇಟ್‌, ಬಿ.ಎಂ.ಕಾವಲ್‌, ಸುವಿಧಾ, ವ್ಯಾಲಿ ಸ್ಕೂಲ್‌ ಬಳಿ ಚಿರತೆಗಳು ಪತ್ತೆಯಾಗಿವೆ. ಬಂಡೆಗಳ ಸಂದಿಯಲ್ಲಿ, ಪೊದೆಗಳಲ್ಲಿ ಸಂತಾನ ಅಭಿವೃದ್ಧಿ ಮಾಡಿ ನಾಯಿ, ಕುರಿ, ಮೇಕೆ, ಜಿಂಕೆ ಇಲ್ಲವೇ ಹಂದಿ ತಿಂದು ಜೀವನ ಸಾಗಿಸುತ್ತಿವೆ.

ಕನಕಪುರ ರಸ್ತೆಯ ಒಳಗಿರುವ ತುರಹಳ್ಳಿ ಅರಣ್ಯದಲ್ಲಿ ಒಂದೇ ಒಂದು ಚಿರತೆ ಪತ್ತೆಯಾಗಲಿಲ್ಲ ಎನ್ನುವ ನೇಚರ್‌ ಕನ್ಸರ್‌ವೇಶನ್‌ ಫೌಂಡೇಷನ್‌ನ ಪರಿಸರ ವಿಜ್ಞಾನಿ ಸಂಜಯ್ ಗುಬ್ಬಿ, ‘ಬಹುಶಃ ಇಲ್ಲಿ ವಸತಿ ಹೆಚ್ಚಾಗಿ ಚಿರತೆ ಬೇರೆ ಕಡೆ ಸ್ಥಳಾಂತರ ಆಗಿರಬಹುದು. ಅದೇ ಹಳ್ಳಿಯ ವಾತಾವರಣ ಇರುವ ಹೆಸರುಘಟ್ಟದ ಜೋಳದ ಹೊಲದ ನಡುವಲ್ಲೂ ಇವುಗಳ ಸಂತತಿ ಪತ್ತೆಯಾಗಿದೆ‘ ಎಂದು ಹೇಳುವರು.

ಕಲ್ಲು ಬಂಡೆಗಳು ಇದ್ದ ಕಡೆ ಚಿರತೆ ಬದುಕುತ್ತಿದ್ದವು. ನೈಸ್‌ ರಸ್ತೆ ನಿರ್ಮಾಣ ಮಾಡಿದಾಗ ಸಾಕಷ್ಟು ಕಡೆ ಬಂಡೆ ಒಡೆದಿದ್ದಾರೆ. ರಾತ್ರಿ ವೇಳೆ ನೈಸ್‌ ರಸ್ತೆಯಲ್ಲಿ ವಾಹನಗಳಿಗೆ ಚಿರತೆ ಬಲಿಯಾಗಿವೆ. ನಗರೀಕರಣ ಹೆಚ್ಚಾದಂತೆ ಹಳ್ಳಿ ಕಡೆ ವಲಸೆ ಹೋಗುತ್ತಿವೆ. ಕೆಲವು ಹೊರ ವಲಯದಲ್ಲಿ ಮನುಷ್ಯನ ಜೊತೆ ಬದುಕುತ್ತಿವೆ. ಆದರೆ ಜನರ ಮೇಲೆ ಬಿದ್ದ ಉದಾಹರಣೆಯಿಲ್ಲ. ಸುವಿಧಾದಲ್ಲಿ ಮೂರು ಅನಿವಾಸಿ ಚಿರತೆಗಳಿವೆ. ಅಲ್ಲಿ ಇರುವವರಿಗೆ ಇವು ಯಾವುದೇ ತೊಂದರೆ ನೀಡಿಲ್ಲ. ಅಲ್ಲಿಯ ನಿವಾಸಿಗಳಿಗೂ ಇದು ಗೊತ್ತು. ವ್ಯಾಲಿ ಸ್ಕೂಲ್‌ನಲ್ಲೂ ಚಿರತೆಗಳಿವೆ. ಈ ಎರಡೂ ಕಡೆ ಅಲ್ಲಿಯ ಭದ್ರತಾ ಸಿಬ್ಬಂದಿಗೆ ಚಿರತೆ ಹೆಜ್ಜೆ ಗುರುತು ಪತ್ತೆ ಮಾಡುವ ತರಬೇತಿ ನೀಡಿದ್ದೇವೆ ಎನ್ನುವರು ಗುಬ್ಬಿ.

ವ್ಯಾಲಿ ಸ್ಕೂಲ್‌ ಮತ್ತು ಸುವಿಧಾದಲ್ಲಿ ನೋಟಿಸ್‌ ಬೋರ್ಡ್‌ನಲ್ಲೇ ಚಿರತೆಯ ಬಗ್ಗೆ ಮಾಹಿತಿ ನೀಡುವ ಕೆಲಸವನ್ನುನೇಚರ್‌ ಕನ್ಸರ್‌ವೇಶನ್‌ ಫೌಂಡೇಷನ್ ಮಾಡಿದೆ. ನಾಯಿ ಹೆಜ್ಜೆ ಗುರುತಿಗೂ ಚಿರತೆ ಹೆಜ್ಜೆ ಗುರುತಿಗೂ ಇರುವ ವ್ಯತ್ಯಾಸದ ಮಾಹಿತಿ ನೀಡಲಾಗಿದೆ. ಇಂತಹ ಕೆಲಸ ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುತ್ತದೆ.

2016ರಲ್ಲಿ ಚಿರತೆಯು ವಿಬ್‌ಗಯಾರ್‌ ಶಾಲೆಗೆ ನುಗ್ಗಿತ್ತು. ಅರಿವಳಿಕೆ ನೀಡಲು ಹೋಗಿದ್ದ ಗುಬ್ಬಿ ಅವರಿಗೆ ಕಚ್ಚಿದ ಉದಾಹರಣೆ ಬಿಟ್ಟರೆ ನಗರದ ಅಂಚಿನಲ್ಲೂ ಜನರಿಗೆ ತೊಂದರೆ ನೀಡಿದ ಉದಾಹರಣೆಯಿಲ್ಲ. 1997ರಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಪಕ್ಕದ ಎಲ್‌ ಅಂಡ್‌ ಟಿ ಆವರಣದಲ್ಲಿ ಕಾಣಿಸಿಕೊಂಡಿತ್ತು.

ಚಿರತೆಗಳಲ್ಲದೆ ಬೆಂಗಳೂರಿನ ಸುತ್ತಮುತ್ತ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸಾರಂಗ, ಕಡವೆ, ಕಾಡು ಕುರಿ, ನೀರು ನಾಯಿ, ಕಾಡು ಬೆಕ್ಕು, ಬೂದು ಮುಂಗುಸಿ, ಪುನುಗು ಬೆಕ್ಕು, ಮರಬೆಕ್ಕು, ಮೊಲ ಮತ್ತು ಕಾಡು ಹಂದಿ ಸಹ ಪತ್ತೆಯಾಗಿವೆ.

ಇತ್ತೀಚೆಗೆ ಮುಂಬೈನ ವಸತಿ ಗೃಹದ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗುವುದು ಸಿಸಿಟಿವಿ ಯಿಂದ ಪತ್ತೆಯಾಗಿತ್ತು. ಇಂತಹ ಎಷ್ಟೋ ಘಟನೆಗಳು ಬೆಂಗಳೂರು ಸುತ್ತ ನಡೆದಿದೆ. ಆದರೆ ಮನುಷ್ಯನ ಮೇಲೆ ಎರಗಿದ ಘಟನೆ ನಡೆದಿಲ್ಲ. ನಗರವಾಸಿ ಚಿರತೆಗಳು ಸಹ ಮನುಷ್ಯನಂತೆ ಸಂಘ ಜೀವಿಗಳಾಗುತ್ತಿವೆ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT