ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಬದಲಿಸಿಕೊಳ್ಳುವ ‘ಗಿಳಿ ಮೀನು’

Last Updated 3 ಜುಲೈ 2018, 10:35 IST
ಅಕ್ಷರ ಗಾತ್ರ

ಸಮುದ್ರದಲ್ಲಿ ವಿಶಿಷ್ಟ ಎನಿಸುವಂತಹ ಅಪರೂಪದ ಜೀವಿಗಳನ್ನು ಕಾಣಬಹುದು. ಇಲ್ಲಿ ಕಾಣಸಿಗುವ ಮತ್ಸ್ಯ ಪ್ರಭೇದಗಳಲ್ಲಿ ಹಲವು ವಿಶೇಷ ಎನಿಸುವಂತಿವೆ. ಅಂತಹವುಗಳಲ್ಲಿ ಗಿಳಿ ಮೀನು ಕೂಡ ಒಂದು. ವಿಶಿಷ್ಟ ರೂಪ ಮತ್ತು ಕಾರ್ಯವಿಧಾನದಿಂದ ಗಮನ ಸೆಳೆಯುವ ಈ ಜಲಚರವನ್ನು ಇಂಗ್ಲಿಷ್‌ನಲ್ಲಿ ಪ್ಯಾರಟ್ ಫಿಷ್‌ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ‘ಸ್ಕೇರಿಡೇ’ (skeridae). ಇಂದಿನ ಮತ್ಸ್ಯ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?
ಇದರಲ್ಲಿ ಈವರೆಗೆ 90 ವಿಧದ ತಳಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ವಾಸಸ್ಥಾನಗಳಿಗೆ ತಕ್ಕಂತೆ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ. ಇದರ ದೇಹವು, ಹಸಿರು, ಕೆಂಪು, ಹಳದಿ, ನೀಲಿ ಮುಂತಾದ ವಿವಿಧ ಬಣ್ಣಗಳಲ್ಲಿ ಕಂಗೊಳಿಸುತ್ತಿರುತ್ತದೆ. ಗಿಳಿಯ ಕೊಕ್ಕಿನ ರೀತಿಯಲ್ಲಿ ಇದರ ಮೂತಿಯಿದ್ದು, ಪುಟ್ಟದಾದ ಬಲಿಷ್ಠ ಹಲ್ಲುಗಳನ್ನು ಹೊಂದಿರುತ್ತದೆ. ರಾತ್ರಿಯ ವೇಳೆ ದೇಹದಿಂದ ರಾಸಾಯನಿಕಗಳನ್ನು ಸ್ರವಿಸುತ್ತದೆ. ಇದರಿಂದ ದೇಹದ ವಾಸನೆಯನ್ನು ಇತರ ಪರಭಕ್ಷಕ ಪ್ರಾಣಿಗಳು ಗ್ರಹಿಸಲು
ಸಾಧ್ಯವಾಗುವುದಿಲ್ಲ.

ಎಲ್ಲೆಲ್ಲಿವೆ?
ಉಷ್ಣವಲಯದ ಹಾಗೂ ಉಪ ಉಷ್ಣವಲಯದ ಸಾಗರಗಳ ತೀರ ಪ್ರದೇಶಗಳು ಇವುಗಳ ವಾಸಸ್ಥಾನಕ್ಕೆ ಯೋಗ್ಯವಾಗಿವೆ. ದೊಡ್ಡ ಹವಳದ ದಿಬ್ಬಗಳು ಮತ್ತು ಜಲವಾಸಿ ಸಸ್ಯಗಳ ಪೊದೆಗಳಲ್ಲಿ ವಾಸಿಸುತ್ತವೆ. ಇಂಡೋ–ಪೆಸಿಫಿಕ್ ಸಾಗರ ವಲಯ, ಅಟ್ಲಾಂಟಿಕ್ ಸಮುದ್ರ, ಕೆರೇಬಿಯನ್ ಸಮುದ್ರ, ಹಿಂದು ಮಹಾಸಾಗರ, ದಕ್ಷಿಣ ಅಮೆರಿಕ ಹಾಗೂ ಆಸ್ಟ್ರೇಲಿಯಾದ ಕಡಲ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ವರ್ತನೆ ಮತ್ತು ಜೀವನಕ್ರಮ
ಇದು ತನ್ನ ವಿಶಿಷ್ಟವಾದ ಆಹಾರ ಕ್ರಮದಿಂದ ಜೈವಿಕ ವಿಘಟನೆ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹವಳಗಳು ಮತ್ತು ಸಣ್ಣ, ಪುಟ್ಟ ಕಲ್ಲುಗಳನ್ನು ಹಲ್ಲುಗಳಿಂದ ಪುಡಿ ಮಾಡಿ ಸಣ್ಣ ಚೂರುಗಳಾಗಿ ಹೊರಹಾಕುತ್ತದೆ. ಈ ಮೂಲಕ ಸಮುದ್ರ ತೀರದ ಬಂಡೆಗಳಲ್ಲಿ ಸೇರಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತದೆ. ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ಸಣ್ಣ ಮೀನುಗಳು ಗುಂಪಿನ ಮಧ್ಯಭಾಗದಲ್ಲಿ ಇದ್ದು, ದೊಡ್ಡ ಗಾತ್ರದ ಗಂಡು ಮೀನುಗಳು ಗುಂಪಿನ ಹೊರಭಾಗದಲ್ಲಿ ಇರುತ್ತವೆ. ಗಂಡು ಮೀನುಗಳು ಹಾಗೂ ಹೆಣ್ಣು ಮೀನುಗಳು ಗುಂಪಿನಲ್ಲಿ ಪ್ರಾಬಲ್ಯ ಮೆರೆಯಲು ಪ್ರಯತ್ನಿಸುತ್ತಿರುತ್ತವೆ.

ಆಹಾರ
ಇದು ಮಿಶ್ರಾಹಾರಿ ಜಲಚರ. ಹವಳದ ದಿಬ್ಬಗಳನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಳ್ಳುವುದಲ್ಲದೇ, ಹೆಚ್ಚಾಗಿ ಹವಳಗಳು ಹಾಗೂ ಬಂಡೆಗಳ ಮೇಲೆ ಇರುವ ಪಾಚಿಯನ್ನು ತನ್ನ ಚೂಪಾದ ಕೊಕ್ಕಿನಿಂದಕಿತ್ತು ತಿನ್ನುತ್ತದೆ. ತನ್ನ ಜೀವಿತಾವಧಿಯ ಶೇ 80 ರಷ್ಟು ಸಮಯವನ್ನು ಆಹಾರ ಹುಡುಕುವುದಕ್ಕಾಗಿಯೇ ಕಳೆಯುತ್ತದೆ. ಆಹಾರಕ್ಕಾಗಿ ಸಾಗರದಲ್ಲಿ ಹಲವು ಮೈಲಿಗಳಷ್ಟು ದೂರ ಸಾಗುತ್ತದೆ.

ಸಂತಾನೋತ್ಪತ್ತಿ
ಆಳವಿಲ್ಲದ ಸಮುದ್ರದ ತೀರ ಪ್ರದೇಶಗಳಲ್ಲಿ ಮೊಟ್ಟೆಯಿಡುತ್ತದೆ. ಒಂದು ಬಾರಿಗೆ ಸಾವಿರಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ನೀರಿನ ಮೇಲೆ ತೇಲುತ್ತವೆ. ಕೆಲವು ದಿನಗಳ ನಂತರ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಹವಳ ದಿಬ್ಬಗಳ ಸುತ್ತಾ ಈಜಾಡಲು ಆರಂಭಿಸುತ್ತವೆ. ವಯಸ್ಕ ಹಂತಕ್ಕೆ ತಲುಪಿದ ನಂತರ, ಕೆಲವು ಹೆಣ್ಣು ಮೀನುಗಳು ಗಂಡಾಗಿ ಬದಲಾಗುತ್ತವೆ ಎಂದು ಸಂಶೋಧಕರು ಗುರುತಿಸಿದ್ದಾರೆ.

ಈಲ್‌ಗಳು, ಶಾರ್ಕ್‌ ಮುಂತಾದ ಪರಭಕ್ಷಕ ಪ್ರಾಣಿಗಳು ಇವುಗಳನ್ನು ಹೆಚ್ಚಾಗಿ ಭಕ್ಷಿಸುತ್ತವೆ. ಅತಿಯಾದ ಮೀನುಗಾರಿಕೆಯಿಂದ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕೆಲವು ದೇಶಗಳಲ್ಲಿ ಇದನ್ನು ಆಹಾರಕ್ಕಾಗಿ ಬಳಸುತ್ತಾರೆ.

***

ವಿಶೇಷ

* ಒಂದು ಗಿಳಿ ಮೀನು ವರ್ಷದಲ್ಲಿ 90 ಕೆ.ಜಿಯಷ್ಟು ಹವಳಗಳನ್ನು ಅಗಿದು ತಿನ್ನುತ್ತವೆ.

* ಊಸರವಳ್ಳಿಯಂತೆ ದೇಹದ ಬಣ್ಣವನ್ನು ಬದಲಿಸುತ್ತಿರುತ್ತದೆ.

* ಹೆಣ್ಣು ಮೀನು ಗಂಡಾಗಿ ಲಿಂಗ ಬದಲಾವಣೆ ಮಾಡಿಕೊಳ್ಳುವುದರಿಂದ ಲಿಂಗ ಸಮತೋಲನವನ್ನು ಕಾಪಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT