ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದು ಮುಖದ ಪ್ರಾಣಿ 'ವಲ್ಲಬೀ'

Last Updated 14 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹೊಟ್ಟೆಚೀಲದ ಪ್ರಾಣಿ ಎಂದ ಕೂಡಲೇ ನೆನಪಾಗುವುದು ಕಾಂಗರೂ. ಕಾಂಗರೂಗಳಲ್ಲಿ ನೂರಕ್ಕೂ ಹೆಚ್ಚು ಪ್ರಭೇಧಗಳನ್ನು ಗುರುತಿಸಲಾಗಿದೆ. ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳಲ್ಲಿ ವಿವಿಧ ಕಾಂಗರೂಗಳು ಕಾಣಸಿಗುತ್ತವೆ. ವಲ್ಲಬೀ ಕೂಡ ಕಾಂಗರೂ ಪ್ರಭೇದ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಅಪರೂಪದ ಕಾಂಗರೂ ಮುದ್ದು ಮುಖದ ವಲ್ಲಬೀ (Pretty Faced Wallaby) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಮ್ಯಾಕ್ರೊಪಸ್‌ ಪ್ಯಾರೀ (Macropus parryi). ಇದು ಮ್ಯಾಕ್ರೊಪೊಡಿಡೇ (Macropodidae) ಕುಟುಂಬಕ್ಕೆ ಸೇರಿದ್ದು, ಡಿಪ್ರೊಟೊಡೊಂಟಿಯಾ (Diprotodontia) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.ಹೇಗಿರುತ್ತದೆ?

ಕಂದು, ಕಪ್ಪು, ಬಿಳಿ, ಕಪ್ಪು ಮತ್ತು ಬೂದು ಬಣ್ಣದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಬೆನ್ನು, ಕತ್ತು ಕಂದು ಬಣ್ಣದಲ್ಲಿದ್ದರೆ, ಕುತ್ತಿಗೆ, ಎದೆ, ಉದರ ಭಾಗ ತೆಳು ಬೂದು ಬಣ್ಣದಲ್ಲಿರುತ್ತವೆ. ತಲೆ ದೊಡ್ಡದಾಗಿದ್ದು, ಎಲೆಯಾಕಾರದ ದೊಡ್ಡಗಾತ್ರದ ಕಿವಿಗಳು ಸದಾ ಸೆಟೆದುಕೊಂಡಿರುತ್ತವೆ. ಹಣೆ ಗಾಢ ಕಂದುಬಣ್ಣದಲ್ಲಿದ್ದರೆ, ಮೂತಿ ಮತ್ತು ಮೂಗು ಕಪ್ಪು ಬಣ್ಣದಲ್ಲಿದ್ದು, ಮೂತಿ ನೀಳವಾಗಿರುತ್ತದೆ. ಕೆನ್ನೆಗಳ ಭಾಗ ಬಿಳಿ ಬಣ್ಣದಲ್ಲಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಬಾಯಿ ಪುಟ್ಟದಾಗಿರುತ್ತದೆ. ಹೀಗಾಗಿಯೇ ಇದನ್ನು ಮುದ್ದು ಮುಖದ ವಲ್ಲಬೀ ಎನ್ನುತ್ತಾರೆ. ಬಾಲ ನೀಳವಾಗಿದ್ದು, ದೃಢವಾಗಿರುತ್ತದೆ.

ಹೇಗಿರುತ್ತದೆ?

ಕಂದು, ಕಪ್ಪು, ಬಿಳಿ, ಕಪ್ಪು ಮತ್ತು ಬೂದು ಬಣ್ಣದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಬೆನ್ನು, ಕತ್ತು ಕಂದು ಬಣ್ಣದಲ್ಲಿದ್ದರೆ, ಕುತ್ತಿಗೆ, ಎದೆ, ಉದರ ಭಾಗ ತೆಳು ಬೂದು ಬಣ್ಣದಲ್ಲಿರುತ್ತವೆ. ತಲೆ ದೊಡ್ಡದಾಗಿದ್ದು, ಎಲೆಯಾಕಾರದ ದೊಡ್ಡಗಾತ್ರದ ಕಿವಿಗಳು ಸದಾ ಸೆಟೆದುಕೊಂಡಿರುತ್ತವೆ. ಹಣೆ ಗಾಢ ಕಂದುಬಣ್ಣದಲ್ಲಿದ್ದರೆ, ಮೂತಿ ಮತ್ತು ಮೂಗು ಕಪ್ಪು ಬಣ್ಣದಲ್ಲಿದ್ದು, ಮೂತಿ ನೀಳವಾಗಿರುತ್ತದೆ. ಕೆನ್ನೆಗಳ ಭಾಗ ಬಿಳಿ ಬಣ್ಣದಲ್ಲಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಬಾಯಿ ಪುಟ್ಟದಾಗಿರುತ್ತದೆ. ಹೀಗಾಗಿಯೇ ಇದನ್ನು ಮುದ್ದು ಮುಖದ ವಲ್ಲಬೀ ಎನ್ನುತ್ತಾರೆ. ಬಾಲ ನೀಳವಾಗಿದ್ದು, ದೃಢವಾಗಿರುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಹಗಲಿನಲ್ಲಿ ಚುರುಕಾಗಿರುವ ಪ್ರಾಣಿ. ಮುಂಜಾನೆ ಮತ್ತು ಸಂಜೆ ಹೆಚ್ಚು ಚುರುಕಾಗಿರುತ್ತದೆ. ಕತ್ತಲಾದ ಮೇಲೂ ಕೆಲವೊಮ್ಮೆ ಆಹಾರ ಅರಸುತ್ತಾ ಸುತ್ತುವುದುಂಟು. ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ಒಂದು ಗುಂಪಿನಲ್ಲಿ ಗರಿಷ್ಠ 50 ವಲ್ಲಬೀಗಳು ಇರುತ್ತವೆ. ಪ್ರತಿ ಗುಂಪು ಸುಮಾರು 110 ಹೆಕ್ಟೇರ್ ಪ್ರದೇಶದಲ್ಲಿ ಗಡಿ ಗುರುತಿಸಿಕೊಂಡು ವಾಸಿಸುತ್ತವೆ.

ಪ್ರತಿಯೊಂದು ವಲ್ಲಬೀ ಸ್ವತಂತ್ರವಾಗಿ ಆಹಾರ ಹುಡುಕುತ್ತಾ ತಿರುಗಿದರೂ ಮಧ್ಯಾಹ್ನದ ವೇಳೆಗೆ ತಂಪಾದ ಪ್ರದೇಶಗಳಲ್ಲಿ ಎಲ್ಲವೂ ಕೂಡುತ್ತವೆ. ಆಹಾರ ಹುಡುಕುವಾಗ ಒಂದರ ಗಡಿಯಲ್ಲಿ ಒಂದು ಪ್ರವೇಶಿಸಿದರೂ ಆಕ್ರಮಣಕಾರಿ ವರ್ತನೆಯನ್ನು ಹೆಚ್ಚಾಗಿ ತೋರುವುದಿಲ್ಲ. ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ಗುಂಪು ರಚನೆಯಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ದೇಹದ ಭಂಗಿಗಳ ಮೂಲಕವೇ ಹೆಚ್ಚು ಸಂವಹನ ನಡೆಸುತ್ತವೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು ಇದರ ಪ್ರಮುಖ ಆಹಾರ. ವಿವಿಧ ಗಿಡಿಗಳ ಚಿಗುರೆಲೆಗಳು, ಕೆರೆ, ಸರೋವರ, ನದಿಗಳ ತೊರೆಗಳಲ್ಲಿ ಬೆಳೆಯುವ ಕೆಲವು ಬಗೆಯ ಗಿಡಗಳ ಎಲೆಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿ

ಗುಂಪಿನಲ್ಲಿರುವ ಪ್ರಬಲ ಗಂಡು ವಲ್ಲಬೀಗಳು ಹೆಣ್ಣು ವಲ್ಲಬೀಗಳ ಮೇಲೆ ಹಕ್ಕು ಸಾಧಿಸುತ್ತವೆ. ಹೆಣ್ಣು ವಲ್ಲಬೀ 34ರಿಂದ 38 ದಿನಗಳ ವರೆಗೆ ಗರ್ಭ ಧರಿಸಿಜನವರಿಯಲ್ಲಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಜೋಯ್ (Joey) ಎನ್ನುತ್ತಾರೆ. ಮರಿ 9 ತಿಂಗಳವರೆಗೆ ತಾಯಿಯ ಹೊಟ್ಟೆಚೀಲದಲ್ಲೇ ಬೆಳೆಯುತ್ತದೆ. ಚೀಲದಿಂದ ಹೊರಬಂದರೂ 18 ತಿಂಗಳ ವರೆಗೆ ತಾಯಿಯ ಜೊತೆಯಲ್ಲೇ ಬೆಳೆಯುತ್ತದೆ. ನಂತರ ಸ್ವತಂತ್ರವಾಗಿ ಜೀವಿಸಲು ಆರಂಭಿಸುತ್ತದೆ. ಇತರೆ ವಲ್ಲಬೀಗಳು ಮರಿಗಳನ್ನು ನಿರ್ದಿಷ್ಟ ಅವಧಿ ವರೆಗೆ ಮಾತ್ರ ಚೀಲದಲ್ಲಿ ಇಟ್ಟುಕೊಂಡು ಬಲವಂತವಾಗಿ ಹೊರಹಾಕುತ್ತವೆ. ಆದರೆ ಈ ವಲ್ಲಬೀ ಮಾತ್ರ ಮರಿ ತಾನಾಗಿಯೇ ಹೊರಗೆ ಬರುವವರೆಗೂ ಚೀಲದಲ್ಲೇ ಹೊತ್ತುಕೊಂಡು ಸಾಕುತ್ತದೆ. ಮರಿಗಳು 2 ವರ್ಷದ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಗಂಡು ವಲ್ಲಬೀಯನ್ನು ಜ್ಯಾಕ್‌, ಬೂಮರ್‌ ಎನ್ನುತ್ತಾರೆ. ಹೆಣ್ಣು ವಲ್ಲಬೀಯನ್ನು ಜಿಲ್ ರೂ ಎನ್ನುತ್ತಾರೆ.

* ಇದರ ಗುಂಪನ್ನು ಟ್ರೂಪ್, ಮಾಬ್, ಹರ್ಡ್ ಎನ್ನುತ್ತಾರೆ.

* ಇದರ ಬಾಲ ದೇಹದಷ್ಟೇ ನೀಳವಾಗಿದ್ದು, ದೇಹದ ಸಮತೋಲನ ಕಾಪಾಡಲು ನೆರವಾಗುತ್ತದೆ.

* ವಲ್ಲಬೀಗಳಲ್ಲಿ ಈ ವರೆಗೆ 30 ಪ್ರಭೇದಗಳನ್ನು ಗುರುತಿಸಲಾಗಿದೆ.

* ಕಾಡು ನಾಯಿಗಳು, ನರಿಗಳು ಇವನ್ನು ಹೆಚ್ಚಾಗಿ ಬೇಟೆಯಾಡುತ್ತವೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ಉದ್ದ-65–93 ಸೆಂ.ಮೀ

ದೇಹದ ತೂಕ-7–26 ಕೆ.ಜಿ.

ಓಡುವ ವೇಗ-40 ಕಿ.ಮೀ/ಗಂಟೆಗೆ

ಸರಾಸರಿ ಜೀವಿತಾವಧಿ-10 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT