ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಾರಿಕೊಕ್ಕಿನ ದೈತ್ಯ ಕಿಂಗ್‌ಫಿಶರ್‌

Last Updated 22 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮೀನುಗಳನ್ನು ಹೆಚ್ಚು ಬೇಟೆಯಾಡುವ ಹಕ್ಕಿ ಎಂದ ಕೂಡಲೇ ಕೊಕ್ಕರೆ ನೆನಪಾಗುತ್ತದೆ. ದೈತ್ಯಗಾತ್ರದ ಹಕ್ಕಿಗಳಲ್ಲಿ ಇವು ಕೂಡ ಒಂದು. ಕೊಕ್ಕರೆಯಂತೆಯೇ ಮೀನುಗಳನ್ನು ಚುರುಕಾಗಿ ಬೇಟೆಯಾಡುವ ಹಕ್ಕಿ ಕಿಂಗ್‌ಫಿಶರ್‌. ಇದನ್ನು ಪುಟ್ಟ ಗಾತ್ರದ ಕೊಕ್ಕರೆ ಎಂದೂ ಪರಿಗಣಿಸಲಾಗುತ್ತದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ದೈತ್ಯ ಕಿಂಗ್‌ಫಿಶರ್‌ (Giant Kingfisher) ಬಗ್ಗೆ ತಿಳಿಯೊಣ. ಇದರ ವೈಜ್ಞಾನಿಕ ಹೆಸರು ಮೆಗಾಸೆರಿಲ್ ಮ್ಯಾಕ್ಸಿಮಾ (Megaceryle maxima). ಇದು ಅಲ್‌ಸೆಡಿನಿಡೇ (Alcedinidae) ಕುಟುಂಬ ಮತ್ತು ಸೆರಿಲಿನೇ (Cerylinae) ಉಪಕುಟುಂಬಕ್ಕೆ ಸೇರಿದ ಹಕ್ಕಿ.

ಹೇಗಿರುತ್ತದೆ?

ಕಪ್ಪು, ಬಿಳಿ ಮತ್ತು ಕಂದು ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ತಲೆ, ಕತ್ತು, ಬೆನ್ನು, ರೆಕ್ಕೆಗಳು ಮತ್ತು ಬಾಲ ಸಂಪೂರ್ಣ ಕಪ್ಪು ಬಣ್ಣದಲ್ಲಿದ್ದು, ದೇಹದ ಮೇಲೆ ಬಿಳಿ ಚುಕ್ಕಿಗಳು ಮೂಡಿರುತ್ತವೆ. ಕುತ್ತಿಗೆ ಬಿಳಿ ಬಣ್ಣದಲ್ಲಿರುತ್ತದೆ. ತಲೆಯ ಮೇಲೆ ಕಪ್ಪು–ಬಿಳಿ ಮಿಶ್ರಿತ ಪುಕ್ಕದಿಂದ ಕೂಡಿದ ಸೊಗಸಾದ ಜುಟ್ಟು ಬೆಳೆದಿರುತ್ತದೆ. ರೆಕ್ಕೆಗಳ ಕೆಳ ಅಂಚುಗಳು ಮತ್ತು ಉದರಭಾಗ ಕಂದು ಬಣ್ಣದಲ್ಲಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ನೀಳವಾದ ಮತ್ತು ದೃಢವಾದ ಕೊಕ್ಕು ಕಪ್ಪು ಬಣ್ಣದಲ್ಲಿದ್ದು, ತುದಿಯಲ್ಲಿ ಬಿಳಿ ಬಣ್ಣದ ಚುಕ್ಕಿ ಇರುತ್ತದೆ. ಕಾಲುಗಳು ಚಿಕ್ಕದಾಗಿದ್ದು, ಬೂದು ಮತ್ತು ಕಪ್ಪು ಬಣ್ಣದಲ್ಲಿರುತ್ತವೆ. ಉಗುರುಗಳು ನೀಳವಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ.

ಎಲ್ಲಿದೆ?

ಆಫ್ರಿಕಾ ಖಂಡದ ಹಲವು ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ನದಿ, ಸರೋವರ, ಕೆರೆ, ಅಣೆಕಟ್ಟಗಳು ಬಳಿ ಇದು ಕಾಣಿಸಿಕೊಳ್ಳುತ್ತದೆ. ದಟ್ಟವಾಗಿ ಮರಗಳು ಬೆಳೆದಿರುವ ಪ್ರದೇಶ, ಸವನ್ನಾ ಹುಲ್ಲುಗಾವಲು ಪ್ರದೇಶ, ಸಮುದ್ರ ತೀರ, ಉಷ್ಣವಲಯದ ಕಾಡು, ಬತ್ತಿದ ನದಿ ತೀರ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಹಗಲೆಲ್ಲಾ ಚುರುಕಾಗಿದ್ದು, ಆಹಾರ ಅರಸುತ್ತಾ ಸುತ್ತುತ್ತದೆ. ನದಿ, ಕೆರೆ, ಕೊಳದ ಪಕ್ಕದಲ್ಲಿರುವ ಮರಗಳ ಮೇಲೆ ಕುಳಿತು ನೀರಿನಲ್ಲಿರುವ ಮೀನುಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿರುತ್ತದೆ. ಮೀನುಗಳು ಕಾಣಿಸಿಕೊಂಡ ಕೂಡಲೇ ಮರದ ಮೇಲಿಂದ ನೇರವಾಗಿ ನೀರಿನಲ್ಲಿ ಮುಳುಗಿ ಹಿಡಿಯುತ್ತದೆ. ನಂತರ ದಡಕ್ಕೆ ಬಂದು ತಿಂದು, ರೆಕ್ಕೆಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತದೆ. ಈ ಹಕ್ಕಿ ಸದಾ ಒಂಟಿಯಾಗಿರಲು ಇಷ್ಟಪಡುತ್ತದೆ. ಹೀಗಾಗಿ ನಿರ್ದಿಷ್ಟ ಗಡಿ ಗುರುತಿಸಿಕೊಂಡು ವಾಸಿಸುತ್ತದೆ.

ಆಹಾರ

ಇದು ಸಂಪೂರ್ಣ ಮಾಂಸಾಹಾರಿ ಹಕ್ಕಿ. ಮೀನು, ಕಪ್ಪೆ, ಏಡಿ ಇದರ ಪ್ರಮುಖ ಆಹಾರ. ಮೀನುಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಅಪರೂಪಕ್ಕೊಮ್ಮೆ ಪುಟ್ಟಗಾತ್ರದ ಸಸ್ತನಿಗಳು ಮತ್ತು ಕೀಟಗಳನ್ನು ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ವಯಸ್ಕ ಹಂತ ತಲುಪಿದ ಗಂಡು ಕಿಂಗ್‌ಫಿಶರ್‌ ಗಡಿ ಗುರುತಿಸಿಕೊಳ್ಳುವಾಗ ಹೆಣ್ಣು ಕಿಂಗ್‌ಫಿಶರ್‌ ಜೊತೆಯಾಗುತ್ತದೆ. ಎರಡೂ ಒಂಟಿಯಾಗಿ ಜೀವಿಸಿದರೂ ಸಂತಾನೋತ್ಪತ್ತಿ ಅವಧಿಯಲ್ಲಿ ಒಂದಾಗುತ್ತವೆ. ಜಿವನವಿಡೀ ಕೂಡಿ ಬಾಳುತ್ತವೆ.

ಜುಲೈಯಿಂದ ಜನವರಿಗೆ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಆಗಸ್ಟ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಈ ಅವಧಿಯಲ್ಲಿ ಎರಡೂ ಹಕ್ಕಿಗಳು ಕೂಡಿ, ಒಂದೇ ವಾರದಲ್ಲಿ ನದಿ, ಕೆರೆ ಸಮೀಪದಲ್ಲಿ ಬಿಲತೊಡಿ ಗೂಡು ನಿರ್ಮಿಸಿಕೊಳ್ಳುತ್ತವೆ.

ಹೆಣ್ಣು ಹಕ್ಕಿ 3–5 ಮೊಟ್ಟೆಗಳನ್ನು ಇಡುತ್ತದೆ. 25–27 ದಿನಗಳ ವರೆಗೆ ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಸಮಾನ ಕಾಳಜಿ ವಹಿಸಿ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಮೊಟ್ಟೆಯೊಡೆದು ಮರಿಗಳು ಹೊರಬಂದ ಮೇಲೆ ಮೊಟ್ಟೆಯ ಚಿಪ್ಪುಗಳನ್ನು ಗಂಡು ಕಿಂಗ್‌ಫಿಶರ್ ಗೂಡಿನಿಂದ ಹೊರಹಾಕುತ್ತದೆ. ಗಂಡು ಹಕ್ಕಿ ಮರಿಗಳಿಗೆ ಸುಮಾರು 30 ದಿನಗಳ ವರೆಗೆ ಆಹಾರ ಉಣಿಸಿ ಬೆಳೆಸುತ್ತವೆ. 37 ದಿನಗಳ ನಂತರ ಮರಿಗಳಿಗೆ ಸಂಪೂರ್ಣವಾಗಿ ಪುಕ್ಕ ಮೂಡುತ್ತದೆ. ನೀರಿನಲ್ಲಿ ಮುಳುಗಿ ಆಹಾರ ಹುಡುಕುವುದನ್ನು ಕಲಿಯುತ್ತವೆ. ನಂತರವೂ ಮೂರು ವಾರಗಳ ವರೆಗೆ ಹೆಣ್ಣು ಹಕ್ಕಿ ಆಹಾರ ಉಣಿಸುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಗೂಡಿಗಾಗಿ ಇದು 180 ಸೆಂ.ಮೀ ಉದ್ದ ಮತ್ತು 9–15 ಸೆಂ.ಮೀ ಅಗಲ ಇರುವಂತಹ ಬಿಲ ತೋಡುತ್ತದೆ. ಇದು 20–60 ಸೆಂ.ಮೀ ವ್ಯಾಸ ಇರುತ್ತದೆ.

* ನೀರಿನಲ್ಲಿರುವ ಮತ್ತು ನೆಲದ ಮೇಲೆ ವಾಸಿಸುವ ಎರಡೂ ಹಕ್ಕಿಗಳನ್ನು ಬೇಟೆಯಾಡುವುದಕ್ಕೆ ನೆರವಾಗುವಂತೆ ಇದರ ಕೊಕ್ಕು ರಚನೆಯಾಗಿದೆ.

* ಇತರೆ ಕಿಂಗ್‌ಫಿಶರ್‌ಗಳಿಗೆ ಹೋಲಿಸಿದರೆ ಇದರ ಕಾಲುಗಳು ಪುಟ್ಟದಾಗಿದ್ದು, ಪಾದಗಳು ದೊಡ್ಡಾಗಿರುತ್ತವೆ.

* ಇದರ ದೃಷ್ಟಿಶಕ್ತಿ ತೀಕ್ಷ್ಣವಾಗಿದ್ದು, ಮರದ ಮೇಲೆ ಇದ್ದುಕೊಂಡೇ ನೀರಿನಲ್ಲಿರುವ ಜೀವಿಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ.

* ಬೇಟೆಯಾಡಲು ನಿರ್ಧರಿಸಿದಾಗ ಸುತ್ತಮುತ್ತಲಿನ ಪ್ರದೇಶವನ್ನು ನೋಡಲು ಕಣ್ಣುಗಳನ್ನು ತಿರುಗಿಸುವ ಬದಲಿಗೆ ಕತ್ತನ್ನೇ ತಿರುಗಿಸುತ್ತಾ ಗಮನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT