ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಾನ್ವೇಷಣೆ: ಗೆದ್ದಲು ಹುಳು ಹೊಟ್ಟೆಯ ಸೂಕ್ಷ್ಮಜೀವಿಗಳು

Last Updated 17 ಜುಲೈ 2022, 19:30 IST
ಅಕ್ಷರ ಗಾತ್ರ

ತೋಟದಲ್ಲೊಂದು ಮರ ಬಿದ್ದಿದೆಯೇ? ತೆಗೆಯಬೇಕೆನ್ನುವಷ್ಟರಲ್ಲಿ ಗೆದ್ದಲು ಹತ್ತಿದೆ. ಹಳೆ ಮನೆಯ ಮರದ ತೊಲೆಗಳಲ್ಲಿ ಗೆದ್ದಲು ಹಿಡಿದಿದೆ. ಕಿಟಕಿ, ಬಾಗಿಲುಗಳನ್ನೂ ಬಿಟ್ಟಿಲ್ಲ. ಜೀವಂತವಿರುವ ಮರದ ತೊಗಟೆಯ ಮೇಲೆ ಮಣ್ಣಿನ ಕಣಗಳನ್ನು ಅಂಟಿಸಿದೆಯಲ್ಲಾ ಗೆದ್ದಲು. ಅಲ್ಲಲ್ಲಿ ಸಣ್ಣ, ದೊಡ್ಡ ಗುಡ್ಡಗಳಂತೆ ಕಾಣುವ ನೆಲದಿಂದ ಮೇಲೆದ್ದಿರುವ ಗೆದ್ದಲು ಗೂಡುಗಳು. ಇದೆಲ್ಲಾ ಸಾಮಾನ್ಯ ದೃಶ್ಯಗಳು. ಎಲ್ಲರೂ ನೋಡಿರುತ್ತೀರಿ. ಆದರೆ , ಅದರ ವಿಶೇಷಗಳು ಗೊತ್ತೇ?

ಅಮೆರಿಕದಲ್ಲಿ ಮರಮುಟ್ಟುಗಳನ್ನು ತಿನ್ನುವ ಗೆದ್ದಲು ಹುಳುಗಳಿಂದಾಗುವ ಆನಾಹುತ ಅಲ್ಲಿ ಸಂಭವಿಸುವ ಪ್ರವಾಹ, ಬೆಂಕಿ ಮತ್ತು ಭೂಕಂಪನಗಳಿಂದಾಗುವ ಆನಾಹುತಕ್ಕಿಂತ ಹೆಚ್ಚು ಎಂದು ಕಂಡುಹಿಡಿಯಲಾಗಿದೆ. ಅಲ್ಲಿ ವರ್ಷಕ್ಕೆ ಗೆದ್ದಲು ಹುಳುಗಳಿಂದಾಗುವ ನಷ್ಟ 500 ಕೋಟಿ ಡಾಲರ್‌ಗಳು!

ಅಬ್ಬಬ್ಬಾ ಇಷ್ಟೊಂದು ಶಕ್ತಿಶಾಲಿಯೇ ಈ ತುಚ್ಛಕೀಟ. ಪ್ರಪಂಚದಲ್ಲಿ ಸುಮಾರು 1,200 ಪ್ರಭೇದಗಳ ಗೆದ್ದಲು ಹುಳುಗಳಿವೆ. ಇವು ಮಣ್ಣಿನಲ್ಲಿರುವ ಜೈವಿಕ ಅಂಶಗಳು, ಸತ್ತು ಬಿದ್ದ ಮರ ಮತ್ತು ಮರಗಳ ಭಾಗಗಳನ್ನು ತಿಂದು ಜೀರ್ಣಿಸುತ್ತವೆ. ಪರಿಸರದಲ್ಲಿ ಪೋಷಕಾಂಶಗಳ ಮರುಪೂರಣಕ್ಕೆ ಮರಗಳ ಕೊಳೆಯುವಿಕೆ ಮತ್ತು ಜೀರ್ಣವಾಗುವಿಕೆ ಅತೀ ಮುಖ್ಯ. ಈ ಪ್ರಕ್ರಿಯೆ ಜೈವಿಕ ಭೂರಸಾಯನ ಚಕ್ರದ ಅವಿಭಾಜ್ಯ ಅಂಗ. ಮರದಲ್ಲಿ ಹೇರಳವಾಗಿರುವ ಸೆಲ್ಯುಲೊಸ್ ಮತ್ತು ಲಿಗ್ನಿನ್ನ್ ಎಂಬ ಬಹುಶರ್ಕರ (ಸಕ್ಕರೆ) ಅಂಶಗಳನ್ನು ಗೆದ್ದಲು ಹುಳುಗಳು ಬಳಸಿ ಕೊಳ್ಳುತ್ತವೆ.

ಸಾಮೂಹಿಕ ಜೀವನಶೈಲಿ ಅಳವಡಿಸಿಕೊಂಡಿರುವ ಗೆದ್ದಲು ಹುಳುಗಳು ಸಹಸ್ರ ಸಂಖ್ಯೆಯಲ್ಲಿ ಕೂಡು ಜೀವನ ನಡೆಸುತ್ತವೆ. ತನ್ನ ಬಲಿಷ್ಠ ಕೊಂಡಿಗಳಿಂದ ಮರವನ್ನು ಕತ್ತರಿಸುವ ಕೆಲಸವನ್ನು ಕೆಲಸಗಾರ ಗೆದ್ದಲು ಹುಳುಗಳು ಮಾಡುತ್ತವೆ.

ಗೆದ್ದಲು ಹುಳುಗಳ ಹೊಟ್ಟೆಯಲ್ಲೊಂದು ಬ್ರಹ್ಮಾಂಡವೇ ಅಡಗಿದೆ. ಎಂತಹ ದೊಡ್ಡ ಮರವೇ ಆಗಿದ್ದರೂ ಈ ಹುಳುಗಳು ಅದನ್ನು ಚೂರುಚೂರಾಗಿ ಕತ್ತರಿಸಿ ತಮ್ಮ ಹೊಟ್ಟೆಗೆ ಸೇರಿಸುತ್ತವೆ. ಇಷ್ಟು ಸಣ್ಣ ಹೊಟ್ಟೆ ಜಗತ್ತಿನ ಅತಿ ಉನ್ನತ ಜೈವಿಕ ಕ್ರಿಯಾಕಾರಿ (Bioreactor) ಆಗಿದೆ.

ಗೆದ್ದಲು ಹುಳುಗಳು ತಿಂದ ಮರದ ಪುಡಿಗಳಲ್ಲಿನ ಸೆಲ್ಯುಲೋಸನ್ನು ಜೀರ್ಣಿಸುವ ಕ್ಷಮತೆ ಈ ಹುಳುಗಳಲ್ಲಿಲ್ಲ. ಆದರೆ ಅವುಗಳು ಹೊಟ್ಟೆಯಲ್ಲಿ ಕೋಟಿಗಳ ಲೆಕ್ಕ ದಲ್ಲಿರುವ ವಿಶೇಷ ಸೂಕ್ಷ್ಮಜೀವಿ ಸಮೂಹ ಮರದ ಪುಡಿಗಳಲ್ಲಿ ಅಡಗಿರುವ ಸೆಲ್ಯುಲೊಸ್ ಅನ್ನು ಜೀರ್ಣಿಸಲು ಅಗತ್ತವಿರುವ ಕಿಣ್ವಗಳನ್ನು ಸ್ರವಿಸಿ ಮರವನ್ನು ಸಂಪೂರ್ಣವಾಗಿ ಕರಗಿಸುತ್ತವೆ. ಈ ಸೂಕ್ಷ್ಮಜೀವಿಗಳು ಗೆದ್ದಲಿನ ಹೊಟ್ಟೆಯಲ್ಲಿರುವ ಶೇ 95ರಷ್ಟು ಸೆಲ್ಯುಲೋಸನ್ನು ಕೇವಲ 24 ಗಂಟೆಗಳ ಒಳಗೆ ಸರಳವಾಗಿ ಬಳಸುವಂತಹ ಸಕ್ಕರೆಯನ್ನಾಗಿ ಪರಿವರ್ತಿಸುವ ಕ್ಷಮತೆ ಹೊಂದಿವೆ. ಈ ಸೂಕ್ಷ್ಮಜೀವಿ ಸಮೂಹದಲ್ಲಿ ದಂಡಾಣುಗಳು (ಬ್ಯಾಕ್ಟೀರಿಯಾ) ಮತ್ತು ಪ್ರೊಟೊಜೊವಾ (ಏಕಕೋಶವಿರುವ ಅಕಶೇರುಕ ಜೀವಿಗಳು) ಎಂಬ ಸೂಕ್ಷ್ಮ ಪ್ರಾಣಿಗಳಿದ್ದು ಇದ್ದು, ಸುಮಾರು 200ಕ್ಕೂ ಹೆಚ್ಚು ಪ್ರಭೇದಗಳನ್ನು ಗುರುತಿಸಲಾಗಿದೆ.

ಗೆದ್ದಲು ಹುಳುಗಳ ಕರುಳಿನಲ್ಲಿ ಕಂಡುಬಂದ ಸೂಕ್ಷ್ಮ ಜೀವಿಗಳು ಮತ್ತೆಲ್ಲೂ ಕಾಣಸಿಗದಂತಹ ವಿಶೇಷ ಜೀವಿಗಳು. ಇಲ್ಲಿರುವ ಸೂಕ್ಷ್ಮಜೀವಿಗಳನ್ನು ಫರ್ಮಿಕ್ಯೂಟ್ಸ್, ಪ್ರೋಟಿಯೊಬ್ಯಾಕ್ಟೀರಿಯಾ, ಸ್ಪಿರೊಕೀಟ್ಸ್, ಕ್ಯಾಂಡಿಡ್ಯಾಟಸ್ ಮತ್ತು ಬ್ಯಾಕ್ಟಿರೊಡೈಟಿಸ್ ಗುಂಪುಗಳಿಗೆ ಸೇರಿಸಲಾಗಿದೆ.

ಇವು ಮರದಲ್ಲಿರುವ ಸೆಲ್ಯುಲೋಸನ್ನು ಜೀರ್ಣಿಸಲು ಅವಶ್ಯವಿರುವ ಸೆಲ್ಯುಲೇಸ್ ಎಂಬ ಕಿಣ್ಣಗಳನ್ನು ಉತ್ಪಾದಿಸಿ, ತಮ್ಮ ಜೀವಕೋಶದಿಂದ ಹೊರಗೆ ಸೂಸಿ ಮತ್ತು ಅಲ್ಲಿರುವ ಮರದ ಕಣಗಳನ್ನು ಸಂಪೂರ್ಣವಾಗಿ ಕರಗಿಸುತ್ತವೆ. ಆಗ ಬಿಡುಗಡೆಯಾಗುವ ಪೋಷಕಾಂಶಗಳನ್ನು ಗೆದ್ದಲು ಹುಳುಗಳು ಬಳಸಿಕೊಂಡು ತಮ್ಮ ಜೀವನಕ್ಕೆ ಬೇಕಾದ ಶಕ್ತಿಯನ್ನು ಪಡೆಯುತ್ತವೆ. ಇಂತಹ ಸೂಕ್ಷ್ಮಜೀವಿಗಳಲ್ಲಿಲ್ಲದಿದ್ದರೆ ಗೆದ್ದಲು ಹುಳುಗಳು ತಿಂದ ಮರದ ಚಕ್ಕೆಗಳಲ್ಲಿ ಅಡಗಿರುವ ಸಂಕೀರ್ಣ ಪೋಷಕಾಂಶಗಳನ್ನು ಉಪಯೋಗಿಸಲು ಆಗುವುದಿಲ್ಲ. ಮೊದಲು ಮರವನ್ನು ಪುಡಿ ಮಾಡಿ ಚೆನ್ನಾಗಿ ಆರೆಯುವ ಕೆಲಸ ಗೆದ್ದಲು ಹುಳುಗಳದ್ದಾಗಿದ್ದರೆ ಅದನ್ನು ಜೀರ್ಣಿಸಿ ಅದರಲ್ಲಡಗಿರುವ ಪೋಷಕಾಂಶಗಳನ್ನು ತಾವು ಉಂಡು ಗೆದ್ದಲು ಹುಳುಗಳಿಗೂ ಉಣ ಬಡಿಸುವ ಕೆಲಸ ಸೂಕ್ಷ್ಮಜೀವಿಗಳದ್ದು. ಇದಲ್ಲವೇ ‘ಸಹಬಾಳ್ವೆ‘?.

ಒಂದು ಪ್ರಾಣಿಪ್ರಭೇದ ಮತ್ತು ನೂರಾರು ಬಗೆಯ ಸೂಕ್ಷ್ಮಜೀವಿಗಳು ಸಹಜೀವನ ನಡೆಸುವುದರಿಂದ ಮಾತ್ರ ಪರಿಸರದಲ್ಲಿ ಎಲ್ಲಾ ಕೆಲಸಗಳು ನಿರ್ದಿಷ್ಟ ಮತ್ತು ಸೂಕ್ತ ರೀತಿಯಲ್ಲಿ ನಡೆಯುತ್ತಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಇವರಿಗೆ ಹೇಳಿಕೊಟ್ಟವರಾರು? ನಮಗಂತೂ ಇವುಗಳಿಂದ ಒಂದು ಪಾಠ ಕಲಿತಂತಲ್ಲವೇ? ಬೇರೆ ಬೇರೆ ಜೀವಿಗಳ ಗುಂಪಿಗೆ ಮತ್ತು ತುಚ್ಛವೆಂದು ಕಾಣುವ ಜೀವಿಗಳಲ್ಲಿ ಇರುವ ಸಹಜೀವನ ತತ್ವ, ವಿಕಾಸದ ಉನ್ನತ ಶ್ರೇಣಿಯಲ್ಲಿರುವ ಮಾನವನಿಗೇಕಿಲ್ಲಾ?

ಭೂಮಿಯಲ್ಲಿ ಪ್ರತಿವರ್ಷ 20 ಸಾವಿರ ಕೋಟಿ ಟನ್‌ಗಳಷ್ಟು ಆಹಾರಕ್ಕೆ ಬಳಸಲಾಗದ ಸೆಲ್ಯುಲೋಸ್ ಇರುವ ಜೀವರಾಶಿಯ ಉತ್ಪನ್ನವಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದನ್ನು ಇಂಧನ ಮೂಲವಾಗಿ ಬಳಸಲು ಸೆಲ್ಯುಲೋಸನ್ನು ಜೀರ್ಣಿಸುವುದು ಅತಿ ಅವಶ್ಯಕ. ಹಾಗಾಗಿ ಗೆದ್ದಲು ಹುಳುಗಳ ಹೊಟ್ಟೆಯಿಂದ ಸೂಕ್ಷ್ಮ ಜೀವಿಗಳನ್ನು ಹೊರತೆಗೆದು ಪ್ರಯೋಗಶಾಲೆಯಲ್ಲಿ ಸೂಕ್ತವಾದ ಪೋಷಕಾಂಶಗಳನ್ನು ನೀಡಿ ಬೆಳೆಸಲಾಗಿದೆ. ನಂತರ ದೊಡ್ಡ ಕಾರ್ಖಾನೆಗಳಲ್ಲಿ ಅವುಗಳು ಸ್ರವಿಸುವ ಕಿಣ್ವಗಳ ಉತ್ಪಾದಿಸುವ ಸಂಶೋಧನೆ ಜೈವಿಕ ತಂತ್ರಜ್ಞಾನದ ಪ್ರಯೋಗಶಾಲೆಗಳಲ್ಲಿ ನಡೆಯುತ್ತಿದೆ. ಪ್ರಕೃತಿಯ ಅರಿವು ಅವಕಾಶದ ದ್ವಾರಗಳನ್ನು ತೆಗೆದಿಡುವುದು ತಾನೇ?

(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT