ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲೂ ‘ಟ್ರಿಣ್‌ ಟ್ರಿಣ್‌’

Last Updated 31 ಜುಲೈ 2018, 9:11 IST
ಅಕ್ಷರ ಗಾತ್ರ

ನಗರದಲ್ಲಿನ ಸಾರಿಗೆ ವ್ಯವಸ್ಥೆ ಸುಧಾರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ, ಜಾರಿ ಮಾಡುತ್ತಿವೆ. ಮೆಟ್ರೊ ಮಾರ್ಗ ನಿರ್ಮಾಣ, ಬಿಎಂಟಿಸಿ ಸೇವೆ ಸುಧಾರಣೆ, ಕ್ಯಾಬ್, ಆಟೊ, ಸಬ್‌ಅರ್ಬನ್‌ ರೈಲು ಸೇವೆಗಳ ವಿಸ್ತರಣೆಗೆ ಅನುವು ಮಾಡಿಕೊಡುತ್ತಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತಿದೆ ಎಂದು ಒಂದು ವರ್ಗ ಹೇಳಿದರೆ, ಮಾಲಿನ್ಯ, ಸಂಚಾರ ದಟ್ಟಣೆ ಕಡಿಮೆಯೇ ಆಗುತ್ತಿಲ್ಲ ಎಂದು ಮತ್ತೊಂದು ಸಮೂಹ ಆರೋಪಿಸುತ್ತಿದೆ.

ಮಾಲಿನ್ಯ ಮತ್ತು ದಟ್ಟಣೆ ಉಂಟು ಮಾಡದ, ಮೈ–ಕೈನಿಂದ ಕಸರತ್ತು ಪಡೆದು ಆರೋಗ್ಯದ ಭಾಗ್ಯ ಕಲ್ಪಿಸುವ ಸಂಚಾರದ ದಾರಿಯೊಂದು ಇದೆ. ಅದು ನಮಗೆಲ್ಲರಿಗೂ ತಿಳಿದಿರುವಂತೆ ಸೈಕಲ್‌ ಸವಾರಿ. ಇದನ್ನು ಮತ್ತೊಮ್ಮೆ ಪ್ರವರ್ಧಮಾನಕ್ಕೆ ತರುವ ಪ್ರಯತ್ನಕ್ಕೆ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಕೈಹಾಕಿದೆ. ಅದಕ್ಕಾಗಿಸಾರ್ವಜನಿಕ ಬೈಸಿಕಲ್‌ ಹಂಚಿಕೆ (ಪಿಬಿಎಸ್‌) ಯೋಜನೆ ಜಾರಿಗೆ ಮುಂದಾಗಿದ್ದು ಇದರ ರೂಪರೇಷೆಗಳನ್ನು ತಯಾರಿಸಿದೆ. ಇದರ ಅಧಿಕೃತ ಅನುಷ್ಠಾನಕ್ಕೆ ಬಿಬಿಎಂಪಿಯ ಅನುಮೋದನೆಮಾತ್ರ ಬಾಕಿಯಿದೆ.

ಈ ಯೋಜನೆಯ ಭಾಗವಾಗಿರುವ ಆಯ್ದ ಕಂಪನಿಗಳು ನಗರದಲ್ಲಿ ಈಗಾಗಲೇ ಪಿಬಿಎಸ್‌ ಸೇವೆಯನ್ನುಪ್ರಾಯೋಗಿಕವಾಗಿ ಆರಂಭಿಸಿವೆ. ಅವುಗಳ ಉಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.

ಪಿಬಿಎಸ್‌ ಮತ್ತು ಪಡೆಯುವ ಬಗೆ: ಸರಳವಾಗಿ ಹೇಳಬೇಕೆಂದರೆ ಪಿಬಿಎಸ್ ಎಂದರೆ ಸೈಕಲ್‌ಗಳನ್ನು ಬಾಡಿಗೆ ಪಡೆಯುವುದು. ಇಲ್ಲಿ ಕೆಲವು ಕಂಪನಿಗಳು ಇಂತಿಷ್ಟು ಸೈಕಲ್‌ಗಳನ್ನು ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ನಿಲ್ಲಿಸಿರುತ್ತವೆ. ಬೇಕಾದವರು ಅವುಗಳನ್ನು ಹತ್ತಿ, ಪೆಡಲ್‌ಗಳನ್ನು ಒತ್ತಿಕೊಂಡು ಹೋಗಬೇಕಾದ ಸ್ಥಳ ತಲುಪಬಹುದು. ಈ ಸೈಕಲ್‌ ಸವಾರಿ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಿಬಿಎಸ್‌ ಸೇವೆ ನೀಡುವ ಕಂಪನಿಯ ಆ್ಯಪ್‌ ಇರಬೇಕು. ಆ್ಯಪ್‌ನಲ್ಲಿ ಲಾಗ್‌ ಇನ್‌ ಆಗಿ ಸೈಕಲ್‌ ಮೇಲಿನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ಆಗ ಸೈಕಲ್‌ನ ಬೀಗ ಸ್ವಯಂಚಾಲಿತವಾಗಿ ತೆರೆದುಕೊಂಡು, ಸೇವೆಗೆ ಸಿದ್ಧವಾಗುತ್ತದೆ. ನಿರ್ದಿಷ್ಟ ಗಮ್ಯ ತಲುಪಿದ ಬಳಿಕ ಲಾಕ್‌ ಒತ್ತಿ, ಬೇರೊಬ್ಬರು ಅದೇ ಸೈಕಲ್‌ ಬಳಸಲು ಅನುವು ಮಾಡಿಕೊಡಬಹುದು.

ಸೈಕಲ್‌ ಹಬ್‌ಗಳು: ಈ ಸೇವೆ ಸದ್ಯಕ್ಕೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ನಗರದ ಆಯ್ದ ಪ್ರದೇಶಗಳಲ್ಲಿ ಲಭ್ಯವಿದೆ. ಇದನ್ನು 200ಕ್ಕೂ ಹೆಚ್ಚು ಪ್ರದೇಶಗಳಿಗೆ ವಿಸ್ತರಿಸಲು ಡಲ್ಟ್‌ರೂಪರೇಷೆ ರೂಪಿಸಿದೆ.ಪ್ರಮುಖ ಬಸ್‌ ನಿಲ್ದಾಣ ಹಾಗೂ ಮೆಟ್ರೊ ನಿಲ್ದಾಣಗಳ ಬದಿಯಲ್ಲಿಯೇ ಸೈಕಲ್‌ ಹಬ್‌ಗಳನ್ನು ರಚಿಸಿ, ಸೂಚನಾ ಫಲಕಗಳನ್ನು ಅಳವಡಿಸಲು ಯೋಜಿಸಿದೆ. ನೀವು ಸಂಚಾರ ಆರಂಭಿಸುವ ಪ್ರದೇಶದಲ್ಲಿ ಪಿಬಿಎಸ್‌ಸೈಕಲ್‌ಗಳು ಇವೆಯೇ ಎಂಬುದನ್ನು ಆಯಾ ಆ್ಯಪ್‌ನಲ್ಲಿನ ಜಿಪಿಎಸ್‌ ಮೂಲಕ ತಿಳಿಯಬಹುದು.

ಶುಲ್ಕ: ಈ ಸೇವೆಗೆ ದರ ನಿಗದಿ ಮಾಡುವ ಆಯ್ಕೆಯನ್ನು ಕಂಪನಿಗಳಿಗೆ ನೀಡಲಾಗಿದೆ. ಸ್ಪರ್ಧಾತ್ಮಕ ದರಗಳು ಸಹ ಸಾರ್ವಜನಿಕರಿಗೆ ಹೊರೆ ಎನಿಸಿದರೆ, ಕಡಿವಾಣ ಹಾಕಲು ಡಲ್ಟ್‌ ನಿರ್ಧರಿಸಿದೆ. ಸದ್ಯ ಪ್ರಾಯೋಗಿಕ ಸೇವೆ ನೀಡುತ್ತಿರುವ ಕಂಪನಿಗಳು ಪ್ರತಿ ಅರ್ಧ ಗಂಟೆಗೆ ಇಷ್ಟು, ದಿನಕ್ಕೆ ಗರಿಷ್ಠ ಎರಡು ಗಂಟೆ ಸೈಕಲ್‌ ಬಳಕೆಗೆ ತಿಂಗಳಿಗೆ ಇಂತಿಷ್ಟು ಎಂದು ದರ ನಿಗದಿ ಮಾಡಿವೆ. ಈ ಮಾಹಿತಿ ಆಯಾ ಆ್ಯಪ್‌ಗಳಲ್ಲಿ ಲಭ್ಯವಿದೆ. ಅವರು ವಿಧಿಸುವ ದರ ಹಿಡಿಸಿದರೆ ಸೈಕಲ್‌ ಪಡೆದು ಸಾಗಬಹುದು.

ಸೈಕಲ್‌ ಬಳಕೆ ಬಾಡಿಗೆಯ ಮೊತ್ತವನ್ನು ರಿಚಾರ್ಜ್‌ ಮಾಡಿಸಿಕೊಳ್ಳುವ ಮತ್ತು ಆನ್‌ಲೈನ್‌ ಮೂಲಕ ಪಾವತಿಸುವ ಆಯ್ಕೆಗಳು ಆಯಾ ಆ್ಯಪ್‌ಗಳಲ್ಲಿ ಇವೆ.

ಈ ಯೋಜನೆ ಸಫಲವಾಗುವುದೇ?: ಸೈಕಲ್ ಬಳಕೆ ಉತ್ತೇಜಿಸಲುಡಲ್ಟ್‌, ಮೆಟ್ರೊ ರೈಲು ನಿಗಮದ ಸಹಯೋಗದೊಂದಿಗೆ ಅಟ್‌ಕ್ಯಾಗ್‌ (ಆಟೋಮೇಟೆಡ್‌ ಬೈಸಿಕಲ್ ಶೇರಿಂಗ್ ಸಿಸ್ಟಮ್‌) ಅನ್ನು 2012ರಲ್ಲಿ ಜಾರಿ ಮಾಡಿತ್ತು. ಆದರೆ ಜನರು ತಮ್ಮ ವಾಹನಗಳಿಂದ ಇಳಿದು ಆ ಪೆಡಲ್‌ಗಳ ಮೇಲೆ ಕಾಲಿರಿಸಲೇ ಇಲ್ಲ. ಆದ್ದರಿಂದ ಆ ಸೈಕಲ್‌ಗಳು ಗುಜರಿ ಅಂಗಡಿ ಸೇರಿದವು. ಹಾಗಾಗಿನಮ್ಮ ಮೂಗುಗಳಿಗೆ ವಾಹನಗಳ ಹೊಗೆ ಸೇರುತ್ತಲೇ ಇದೆ.

***
ವರ್ಷಕ್ಕೆ ಕೇವಲ ₹ 50 ಶುಲ್ಕ
ವಯಸ್ಕರು, ಮಹಿಳೆಯರು ಮತ್ತು ಮಕ್ಕಳಿಗೆ ಹೊಂದುವ ವಿನ್ಯಾಸದ ಸೈಕಲ್‌ಗಳನ್ನು ಸೇವೆಗೆ ನೀಡಲು ಕಂಪನಿಗಳೊಂದಿಗೆ ಒಪ್ಪಂದವಾಗಿದೆ. ನಗರದ ಪ್ರತಿ 400 ಮೀ. ಅಂತರದಲ್ಲಿ ಒಂದು ಸೈಕಲ್‌ ಹಬ್‌ ಗುರುತಿಸಲು ನಿರ್ಧರಿಸಲಾಗಿದೆ. ಸೈಕಲ್‌ಗಳನ್ನು ಟೆಂಡರ್‌ ಶ್ಯೂರ್‌ ಪಾದಚಾರಿ ಮಾರ್ಗದಲ್ಲೂ ಓಡಿಸಲು ಹಸಿರು ನಿಶಾನೆ ತೋರಲಾಗಿದೆ. ಪಿಬಿಎಸ್‌ ಸೇವೆ ನೀಡುವ ಕಂಪನಿಗಳು ಪ್ರತಿ ಸೈಕಲ್‌ಗೆ ವಾರ್ಷಿಕವಾಗಿ ₹ 50 ಶುಲ್ಕವನ್ನು ಡಲ್ಟ್‌ಗೆ ಕಟ್ಟಲಿವೆ.

***
ಸೈಕಲ್‌ಗಳಲ್ಲಿ ಜಿಪಿಎಸ್‌ ಅಳವಡಿಸಿರುವುದರಿಂದ, ಅವುಗಳನ್ನು ಕಳ್ಳತನ ಮಾಡುವವರು ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ.
–ಎನ್‌.ಮುರುಳಿಕೃಷ್ಣ,ವಿಶೇಷ ಅಧಿಕಾರಿ, ನಗರ ಭೂ ಸಾರಿಗೆ ನಿರ್ದೇಶನಾಲಯ
***


ಸೈಕಲ್‌ ಸೇವಾದಾರ ಆ್ಯಪ್‌ಗಳಿವು
*Yulu bikes pvt ltd
*Zoomcar Pedl
*Mobycy
*Smart Bike Mobility Pvt. Ltd
*Yaana Bikes

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT