ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಗ್ರಾಮದಲ್ಲಿ ಅಭಿವೃದ್ಧಿ ‘ಪರ್ವ’

ಕಮ್ಮತ್ತೂರುಗೆ ಶುಕ್ರದೆಸೆ; ಕನಸು ನನಸಾಗುವ ಕಾಲ ಸನ್ನಿಹಿತ
Last Updated 24 ಜೂನ್ 2018, 12:29 IST
ಅಕ್ಷರ ಗಾತ್ರ

ಸಂಡೂರು: ಗಣಿಗಾರಿಕೆಯಿಂದ ನಲುಗಿ ಹೋಗಿರುವ ತಾಲ್ಲೂಕಿನ ಕಮ್ಮತ್ತೂರು (ದೇವಗಿರಿ ಹಳ್ಳಿ) ಗ್ರಾಮವನ್ನು ಸ್ಮಯೊರ್ ಕಂಪನಿ ದತ್ತು ಪಡೆದು, ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮುಂದಾಗಿರುವುದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.


ಮೊದಲ ಹಂತದಲ್ಲಿ ಸ್ಮಯೊರ್‌, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌.ಎಂ.ಡಿ.ಸಿ.) ಹಾಗೂ ಜೆ.ಎಸ್‌.ಡಬ್ಲ್ಯೂ ಅನುದಾನದಲ್ಲಿ ಶ್ರೀ ಕುಮಾರಸ್ವಾಮಿ ದೇಗುಲದಿಂದ ದೇವಗಿರಿಯ ವರೆಗೆ ಸಿ.ಸಿ. ರಸ್ತೆ ನಿರ್ಮಾಣವಾಗಲಿದೆ. ಇದಾದ ಬಳಿಕ ಸ್ಮಯೊರ್‌, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, 24 ಗಂಟೆ ವಿದ್ಯುತ್‌ ಪೂರೈಕೆ, ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಿದೆ.


ಗಣಿ ಪ್ರದೇಶಗಳಿಂದ ಆವೃತವಾಗಿರುವ ಗ್ರಾಮದಲ್ಲಿ ಒಟ್ಟು 350 ಮನೆಗಳಿವೆ. ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ಇಡೀ ಗ್ರಾಮ ದೂಳಿನಿಂದ ನಲುಗಿ ಹೋಗಿತ್ತು. ಅನೇಕ ಜನ ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದರು. ಮಳೆಗಾಲದಲ್ಲಿ ಗ್ರಾಮದ ರಸ್ತೆಗಳು ಕೆಸರಿನ ಗದ್ದೆಗಳಾಗಿ ಬದಲಾಗುತ್ತಿದ್ದವು. ಇನ್ನುಳಿದ ಕಾಲದಲ್ಲಿ ದೂಳಿನ ಅಬ್ಬರ. ಈ ಭಾಗದಲ್ಲಿ ಓಡಾಡುವವರು ಮುಖಗವುಸು ಹಾಕಿಕೊಳ್ಳದೆ ಓಡಾಡುತ್ತಿರಲಿಲ್ಲ. ಒಂದು ಹಂತದಲ್ಲಿ ಇಡೀ ಊರನ್ನೇ ತೆರವು ಮಾಡಲು ಸರ್ಕಾರ ಮುಂದಾಗಿತ್ತು. ಜನ ಸಂಗ್ರಾಮ ಪರಿಷತ್‌ ಹಾಗೂ ಗ್ರಾಮಸ್ಥರ ಹೋರಾಟದಿಂದ ಗಣಿಗಾರಿಕೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ತಡವಾಗಿಯಾದರೂ ಗಣಿ ಕಂಪನಿಗಳೇ ಎಚ್ಚೆತ್ತುಕೊಂಡು ಊರ ಉದ್ಧಾರಕ್ಕೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.


‘25 ಕಿ.ಮೀ. ದೂರದಲ್ಲಿರುವ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕೆಂದರೆ ಹರಸಾಹಸ ಪಡಬೇಕು. ರಸ್ತೆ ಅಷ್ಟರಮಟ್ಟಿಗೆ ಹಾಳಾಗಿದೆ. ಈಗ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಗ್ರಾಮಸ್ಥರಿಗೆ ಬಹಳ ಅನುಕೂಲವಾಗಲಿದೆ’ ಎನ್ನುತ್ತಾರೆ ಗ್ರಾಮಸ್ಥ ಎಂ. ಪೆನ್ನಪ್ಪ.


‘ವಿಜಯನಗರ ಅರಸರ ಕಾಲದಲ್ಲಿ ನಮ್ಮೂರಿನಲ್ಲಿ ಲೋಹವನ್ನು ಕರಗಿಸಿ ಆಯುಧಗಳನ್ನು ತಯಾರಿಸುತ್ತಿದ್ದರು ಎನ್ನುವುದಕ್ಕೆ ಅನೇಕ ಕುರುಹುಗಳಿವೆ. ಕುಮಾರಸ್ವಾಮಿ ದೇಗುಲದ ಸೇವಾಕರ್ತರಾಗಿರುವ ಗ್ರಾಮಸ್ಥರು ಇಂದಿಗೂ ದೇವಸ್ಥಾನಕ್ಕೆ ಗಣಿಯಿಂದ ಕುಮಾರಸ್ವಾಮಿ ಕಣಿಯನ್ನು (ವಿಭೂತಿ) ತೆಗೆದುಕೊಂಡು ಹೋಗುತ್ತಾರೆ. ಇಂಥಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಊರು ಗಣಿಗಾರಿಕೆಯಿಂದ ನಲುಗಿ ಹೋಗಿದೆ. ಆದರೆ, ಗಣಿ ಕಂಪನಿಗಳ ಭರವಸೆಯಿಂದ ಜನ ಸಂತಸಗೊಂಡಿದ್ದಾರೆ’ ಎಂದರು.
–ವಿ.ಎಂ. ನಾಗಭೂಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT