ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಜಾಗೃತಿಯ ಸಸ್ಯ ಶ್ರಾವಣ

Last Updated 17 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

‘ಶ್ರಾವಣ’ ಎಂದರೆ ಹಬ್ಬಗಳ ಸಾಲು. ದೇವಾಲಯಗಳಲ್ಲಿ ವಿಶೇಷ ಪೂಜೆ. ಧಾರ್ಮಿಕ ಆಚರಣೆಗಳಿಗೂ ಕೊರತೆ ಇಲ್ಲ. ಇನ್ನು ಮಠಗಳಲ್ಲಿ ಗದ್ದುಗೆಗಳಿಗೆ ವಿಶೇಷ ಪೂಜೆ. ಆದರೆ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಇಂಥ ಶ್ರಾವಣವನ್ನು ‘ಪರಿಸರ ಜಾಗೃತಿ ಮಾಸ’ವನ್ನಾಗಿ ಆಚರಿಸುತ್ತಾರೆ. ತಿಂಗಳು ಪೂರ್ತಿ ಊರೂರು ಸುತ್ತಾಡುತ್ತಾ, ಭಕ್ತರ ಮನೆಗೆ ಭೇಟಿ ನೀಡುತ್ತಾ, ಅವರಲ್ಲಿ ‘ಪರಿಸರ ಜಾಗೃತಿ’ ಮೂಡಿಸುತ್ತಾರೆ.

600ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ 11ನೇ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರಿಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ. ಇದಕ್ಕೊಂದು ಉದಾಹರಣೆಯೇ ‘ಊರೂರಿಗೆ ಸಸ್ಯಶ್ರಾವಣ’ ಕಾರ್ಯಕ್ರಮ. ಪ್ರತಿಯೊಂದು ಮನೆಯಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬುದು ಕಾರ್ಯಕ್ರಮದ ಆಶಯ, ಸ್ವಾಮೀಜಿಯವರ ಅಪೇಕ್ಷೆ. ಇದೇ ಉದ್ದೇಶದೊಂದಿಗೆ ಅವರು ಶಿಗ್ಗಾವಿ ತಾಲೂಕಿನಲ್ಲಿರುವ ಹಳ್ಳಿಗಳಿಗೆ ಹೋಗುತ್ತಾರೆ. ಹಳ್ಳಿಗಳ ಮನೆ ಮನೆಗೆ ತೆರಳಿ, ಗಿಡಗಳನ್ನು ನೀಡುತ್ತಾರೆ. ‘ಇವುಗಳನ್ನು ನೆಟ್ಟು ನಿಮ್ಮ ಮಕ್ಕಳಂತೆ ಬೆಳೆಸಬೇಕು’ ಎಂದು ಕಿವಿಮಾತು ಹೇಳಿ, ಹಾರೈಸುತ್ತಾರೆ.

ಶ್ರಾವಣದಲ್ಲಿ ಶ್ರೀಗಳು ಮನೆಗೆ ಬರುತ್ತಾರೆಂದರೆ ಭಕ್ತರಲ್ಲಿ ಎಲ್ಲಿಲ್ಲದ ಸಂಭ್ರಮ. ಅವರು ಬಂದ ತಕ್ಷಣ ಭಕ್ತರು ತಂಬಿಗೆ ನೀರು ಹಿಡಿದು, ಪಾದ ತೊಳೆದು, ಊದುಬತ್ತಿ ಬೆಳಗಲು ಮುಂದಾಗುತ್ತಾರೆ. ಈ ವೇಳೆ ಅದನ್ನು ತಡೆಯುವ ಸ್ವಾಮೀಜಿ, ಪಾದ ತೊಳೆಯುವ ನೀರನ್ನು ಸಸಿಗೆ ಹಾಕಿಸಿ, ಊದುಬತ್ತಿಯನ್ನೂ ಅದೇ ಸಸಿಗೆ ಬೆಳಗುವಂತೆ ಸಲಹೆ ನೀಡುತ್ತಾ, ಮುಂದಿನ ಮನೆಗೆ ತೆರಳುತ್ತಾರೆ.

ಕಳೆದ ವರ್ಷದ ಫಲಶೃತಿ: ಕಳೆದ ವರ್ಷ ಸಸ್ಯ ಶ್ರಾವಣದ ಕಾರ್ಯಕ್ರಮದ ಅಂಗವಾಗಿ 10 ಗ್ರಾಮಗಳಿಗೆ ಸ್ವಾಮೀಜಿ ಭೇಟಿ ನೀಡಿದ್ದರು. ಪ್ರತಿ ಮನೆಗೂ ಭೇಟಿ ನೀಡಿ ನೇರಲ, ನೆಲ್ಲಿ, ಸಂಪಿಗೆ, ಪೇರಲ, ತುಳಸಿ, ಹುಣಸೆ, ಬೇವು, ಹೆಬ್ಬೇವು, ಸಾಗುವಾನಿ, ಸೀಲ್ವರ್, ತೇಗ, ಪತ್ರಿ, ಬನ್ನಿ ಹೀಗೆ ವಿವಿಧ ಬಗೆಯ 7 ಸಾವಿರಕ್ಕೂ ಅಧಿಕ ಸಸಿಗಳನ್ನು ನೀಡಿದ್ದರು. ಸಸಿಗಳನ್ನು ನೀಡಿದಾಗ ಸರಿಯಾಗಿ ಮಳೆ ಆಗಿರಲಿಲ್ಲ. ಆದರೂ ಇವುಗಳಲ್ಲಿ 4500 ಸಸಿಗಳು ಬೆಳೆಯುತ್ತಿವೆ.
‘ಈ ವರ್ಷ ಹದ ಮಳೆಯಾಗಿದೆ. ಗಿಡಗಳು ಬೆಳೆಯಲು ಪೂರಕ ವಾತಾವರಣವಿದೆ’ ಎಂಬ ಹುಮ್ಮಸ್ಸಿನಲ್ಲಿರುವ ಸ್ವಾಮೀಜಿ, ಹತ್ತು ಗ್ರಾಮಗಳಿಗೆ ಭೇಟಿ ನೀಡಿ, 8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸುವ ಕಾಯಕ ಆರಂಭಿಸಿದ್ದಾರೆ. ‘ಭೂಮಿಯ ತಾಪಮಾನ ಕಡಿಮೆ ಮಾಡುವುದಕ್ಕೆ ನಮ್ಮದೊಂದು ಪುಟ್ಟ ಪ್ರಯತ್ನ’ ಎನ್ನುವುದು ಶ್ರೀಗಳ ಅಭಿಪ್ರಾಯ.

ಶ್ರಾವಣದಲ್ಲಿ ಗಿಡಗಳನ್ನು ಕೊಟ್ಟು ಮತ್ತೆ ಮುಂದಿನ ವರ್ಷದವರೆಗೂ ವಿತರಿಸಿದ ಗಿಡಗಳ ಬಗ್ಗೆ ವಿಚಾರಿಸದಿದ್ದರೆ ‘ಸಸ್ಯ ಶ್ರಾವಣ’ ಯಶಸ್ವಿಯಾಗುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡಿರುವ ಪೂಜ್ಯರು, ಸಸಿಗಳನ್ನು ನೀಡಿದ ಗ್ರಾಮಗಳಿಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ. ಸಸಿಗಳ ಬಗ್ಗೆ ಕಾಳಜಿವಹಿಸುವಂತೆ ಎಚ್ಚರಿಸುತ್ತಿದ್ದಾರೆ. ಮಾತ್ರವಲ್ಲ, ಆಯಾ ಗ್ರಾಮದ ಜನರು ಸಿಕ್ಕಾಗ ಅವರಿಗೆ ‘ಆ ಗಿಡಗಳನ್ನು ಬೆಳೆಸಿದರೆ ಅದೇ ನೀವು ನನಗೆ ಕೊಡುವ ಕಾಣಿಕೆ’ ಎಂದು ಭಕ್ತರ ಮನದಲ್ಲಿ ಪರಿಸರ ಜಾಗೃತಿಯ ದೀಪ ಹೊತ್ತಿಸುವ ಕೆಲಸ ಮಾಡುತ್ತಿದ್ದಾರೆ.

ಶಿಗ್ಗಾವಿ ತಾಲೂಕಿನಲ್ಲಿ ನೂರು ಹಳ್ಳಿಗಳಿದ್ದು ಪ್ರತಿ ಶ್ರಾವಣದಲ್ಲಿ ಹತ್ತು ಗ್ರಾಮಗಳಿಗೆ ಈ ಕಾರ್ಯಕ್ರಮ ಮಾಡುವ ಮೂಲಕ ಹತ್ತು ವರ್ಷಗಳಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿ ಪರಿಸರಕ್ಕೆ ಕಾಣಿಕೆ ನೀಡುವ ಸಂಕಲ್ಪ ಸ್ವಾಮೀಜಿಯವರದ್ದು. ಇವರ ಈ ಸಸ್ಯ ಶ್ರಾವಣಕ್ಕೆ ಜನಪ್ರತಿನಿಧಿಗಳು, ಮಾಧ್ಯಮದವರು, ಕೃಷಿ ವಿಜ್ಞಾನಿಗಳು, ಕಲಾವಿದರು. ಹೀಗೆ ಬೇರೆ ಬೇರೆ ಕ್ಷೇತ್ರದವರೂ ಕೈಜೋಡಿಸಿದ್ದಾರೆ. ಈ ಬೆಂಬಲ ಮತ್ತಷ್ಟು ಕ್ಷೇತ್ರಗಳಿಗೆ ವಿಸ್ತರಣೆಯಾಗಬೇಕಿದೆ.ಸಹಕಾರ, ಮಾರ್ಗದರ್ಶನ: ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ, ಒಳಬಳ್ಳಾರಿಯ ತಾತನವರ ಆಶೀರ್ವಾದ, ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಮತ್ತು ಗದುಗಿನ ಜಗದ್ಗುರು ತೋಂಟದ ಸಿದ್ದಲಿಂಗ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದ್ದೇನೆ ಎಂದು ವಿನಮ್ರವಾಗಿ ಹೇಳುವ ಸಂಗನಬಸವ ಸ್ವಾಮೀಜಿ ‘ಸಮಾಜಕ್ಕಾಗಿ ನಾನು, ನನಗಾಗಿ ಸಮಾಜ ಅಲ್ಲ’ ಎನ್ನುತ್ತಾರೆ.

ಕೆರೆ ಹೂಳು ತೆಗೆಸಿದ ಜನನಾಯಕ!
ಶಿಗ್ಗಾವಿಯ ವಿರಕ್ತಮಠದ ಪಕ್ಕದಲ್ಲಿ ಹಿರೇಕೆರೆ ಇದೆ. ಈ ಕೆರೆಗೆ ನೀರು ಬಂದರೆ ಹಲವು ವರ್ಷ ನೀರಿನ ಕೊರತೆ ಇರುವುದಿಲ್ಲ. ಇದರಲ್ಲಿ ನೀರಿದ್ದರೆ ಎಲ್ಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ಉತ್ತಮವಾಗಿರುತ್ತದೆ. ಇದನ್ನು ಅರಿತ ಸ್ವಾಮೀಜಿ, ಎರಡು ವರ್ಷಗಳ ಹಿಂದೆ ಈ ಕೆರೆಯ ಹೂಳು ತೆಗೆಸಿದ್ದಾರೆ.

ಸರ್ಕಾರ, ಸಂಸ್ಥೆಗಳಿಗೆ ಕಾಯದೆ ಜೆಸಿಬಿ ತರಿಸಿ ಕೆಲಸ ಶುರು ಮಾಡಿದರು. ಒಂದು ಟ್ರ್ಯಾಕ್ಟರ್ ಹೂಳು ಕೊಂಡೊಯ್ಯಲು ₹50 ದರ ನಿಗದಿ ಮಾಡಿದರು. ಕೆರೆಯ ಮಣ್ಣು ಹೊಲಗಳಿಗೆ ಉತ್ತಮ ಎಂದು ಗೊತ್ತಿದ್ದ ರೈತರು ಮಣ್ಣಿಗಾಗಿ ಮುಗಿಬಿದ್ದರು. ಈ ಕೆಲಸ ಕಂಡು ಜೆಸಿಬಿ ಮಾಲೀಕರು, ತಾವೇ ವಾಹನಕ್ಕೆ ಡೀಸೆಲ್ ಹಾಕಿಸಿಕೊಂಡು ಕೆಲಸ ಮಾಡಿಸುವ ಮೂಲಕ ಸಹಕಾರ ನೀಡಿದರು. 20 ವರ್ಷಗಳಿಂದ ಹೂಳು ತುಂಬಿಕೊಂಡಿದ್ದ 28 ಎಕರೆ ವಿಸ್ತಾರದ ಕೆರೆ ಒಂದು ತಿಂಗಳಲ್ಲಿ ಹೂಳು ಖಾಲಿಯಾಯಿತು. ಮಣ್ಣು ಕೊಂಡಯ್ಯದ ರೈತರು ಕೊಟ್ಟ ಹಣದಲ್ಲೇ ಹೂಳು ತೆಗೆಸಿ, ಎಲ್ಲ ಖರ್ಚು ತೆಗೆದು ರೂ 1500 ರೂಪಾಯಿ ಉಳಿಯಿತು ! ಹೂಳು ತೆಗೆದ ಹಿರೇಕೆರೆ ತುಂಬಿದೆ. ಶಿಗ್ಗಾವಿಯ ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಕಾಣುತ್ತಿದೆ.

ಪೂಜ್ಯರ ಸಮಾಜಮುಖಿ ಚಿಂತನೆಗಳಿಗೆ ಕೈಜೋಡಿಸಲು ಸಂಪರ್ಕ ಸಂಖ್ಯೆ 9986280424

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT