ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ ಭೂಕುಸಿತ ದುರಂತದಲ್ಲಿ 226ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡು, 131 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಈ ದುರಂತದ ಸ್ಥಳ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಪ್ರಜಾವಾಣಿಯ ಹಿರಿಯ ವರದಿಗಾರ ವಿಕ್ರಂ ಕಾಂತಿಕೆರೆ ಸುತ್ತಾಡಿ ಬರೆದ ಲೇಖನ...
ಕೇರಳದ ಸಮುದ್ರದ ಕಿನಾರೆಯಲ್ಲಿರುವ ಕೋಯಿಕ್ಕೋಡ್ ಜಿಲ್ಲೆಯ ತಾಮರಶ್ಶೇರಿಯಿಂದ ಕತ್ತೆತ್ತಿ ನೋಡಿದರೆ ಎರಡು ಸಾವಿರ ಮೀಟರ್‌ಗಳಷ್ಟು ಎತ್ತರದಲ್ಲಿ ಕಾಣುವ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ ವಯನಾಡ್ ಜಿಲ್ಲೆ ಹಸಿರುಹೊದ್ದ ಸುಂದರ ಪ್ರದೇಶ. ‘ಪರಿಸರ ಪ್ರೇಮಿಗಳನ್ನೇ ಮಡಿಲಲ್ಲಿರಿಸಿಕೊಂಡಿರುವ ವಯನಾಡಿನಲ್ಲೇಕೆ ದುರಂತಗಳ ಸರಮಾಲೆ’ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಾತನಾಡುತ್ತಾ ಹೋದರೆ, ಯಾರ ಬಳಿಯೂ ಸಮರ್ಪಕ ಉತ್ತರವಿಲ್ಲ. ಪ್ರವಾಸೋದ್ಯಮ ಚಟುವಟಿಕೆ ಮತ್ತು ಮಾನವ ಹಸ್ತಕ್ಷೇಪದಂಥ ವಿಚಾರ ಎತ್ತಿದರೆ ಬಹುತೇಕರು ಸಿಡಿಮಿಡಿಗೊಳ್ಳುತ್ತಾರೆ. ಇಲ್ಲಿನ ದುರಂತದಲ್ಲಿ ಮಾನವ ಹಸ್ತಕ್ಷೇಪ ಇಲ್ಲ ಎನ್ನುವ ವಾದವನ್ನು ಮುಂದಿಡುವ ಅವರು, ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ಬಲವಾಗಿ ಪ್ರತಿಪಾದಿಸಲು ಹಲವು ನಿದರ್ಶನಗಳನ್ನು ನೀಡುತ್ತಾ ಹೋಗುತ್ತಾರೆ.
ಪುತ್ತುಮಲದಲ್ಲಿ ಭೂಕುಸಿತವನ್ನು ಕಣ್ಣಾರೆ ಕಂಡರೂ ಶಿಖರದ ತುದಿಯಲ್ಲಿ ಬದುಕುತ್ತಿರುವ ಶ್ರೀಕುಮಾರ್, ಅಪಾಯದ ಸೂಚನೆ ಸಿಕ್ಕಿದರೂ ಭರವಸೆಯಿಂದ ಬದುಕಲು ನಿರ್ಧರಿಸಿದ ಚೂರಲ್‌ಮಲ, ಮುಂಡಕ್ಕೈ, ಪುಂಜಿರಿಮಟ್ಟಂ ಗ್ರಾಮದ ನಿವಾಸಿಗಳ ಹಾಗೆಯೇ ಪರಿಸರದ ಒಡನಾಟದಲ್ಲೇ ಜೀವನ ನಡೆಸುವವರೇ ಇಲ್ಲಿನ ಬಹುತೇಕರು.
‘ನಾವು ಪ್ರಕೃತಿ ಸ್ನೇಹಿಗಳು, ನಮ್ಮನ್ನು ಅದು ಏನೂ ಮಾಡದು. ಮಾಡಿದರೂ ಪರವಾಗಿಲ್ಲ. ಬದುಕುವುದಾದರೆ ಪ್ರಕೃತಿಯ ಜೊತೆ, ಸಾಯುವುದಾದರೂ ಅದರ ಒಡಲಲ್ಲೇ...’ ಎಂದು ಶ್ರೀಕುಮಾರ್ ಪತ್ನಿ ಬಿಂದು ಹೇಳುವಾಗ ಅವರಲ್ಲಿ ಆತಂಕದ ಛಾಯೆ ಗೋಚರಿಸಲಿಲ್ಲ. ಮುಂಡಕ್ಕೈ ಭಾಗದ ಜನ ನದಿಯಲ್ಲಿ ಮಣ್ಣುಮಿಶ್ರಿತ ನೀರು ಕಂಡರೂ ಬೆದರದೆ ಮನೆಯಲ್ಲಿದ್ದದ್ದು ಕೂಡ ಇಂಥ ಭಾವದಿಂದಲೇ.
ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲ್ಲಿ ಬೃಹತ್ ಕಟ್ಟಡಗಳನ್ನು ಕಟ್ಟಿದವರು ಯಾರೂ ಇಲ್ಲ. ಹಾಗೆ ಮಾಡಲು ಇಲ್ಲಿ ಅವಕಾಶವೂ ಇಲ್ಲ. ಗುಡಿಸಲುಗಳಲ್ಲಿ ರೆಸಾರ್ಟ್, ಮನೆಗಳಲ್ಲೇ ವಾಸಿಸುವ ಹೋಂಸ್ಟೇ, ಸಾಮಾನ್ಯ ಕಂಬಗಳನ್ನು ಅಳವಡಿಸಿ ಮಾಡುವ ಜಿಪ್‌ಲೈನ್, ಜೈಂಟ್ ಸ್ವಿಂಗ್, ಪ್ರಕೃತಿಯ ಜೊತೆಗೂಡುವ ಪೀಕ್ ಟ್ರೆಕ್ಕಿಂಗ್, ಜಲಪಾತಗಳ ವೀಕ್ಷಣೆ ಇತ್ಯಾದಿಗಳಿಂದ ಪರಿಸರಕ್ಕೆ ಯಾವ ರೀತಿ ತೊಂದರೆ ಆಗುತ್ತದೆ ಎಂದು ಕೇಳುವವರೇ ಹೆಚ್ಚು.
‘ಹಾಗಿದ್ದರೆ ಇಲ್ಲಿ ಭೂಕುಸಿತಗಳಿಗೆ ಕಾರಣ ಏನು?’ ಎಂದು ಕೇಳಿದರೆ, ಜಾಗತಿಕ ತಾಪಮಾನ ಸೇರಿದಂತೆ ಪರಿಸರದಲ್ಲಿ ಒಟ್ಟಾರೆ ಬದಲಾವಣೆ ಮತ್ತು ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗಳತ್ತ ತಜ್ಞರು ಗಮನ ಸೆಳೆಯುತ್ತಾರೆ. ಹಿಮಾಲಯ ಹೊರತುಪಡಿಸಿ ಉಷ್ಣವಲಯದಲ್ಲಿ ನಡೆಯುವ ಶೇಕಡ 90ರಷ್ಟು ಭೂಕುಸಿತಗಳಿಗೆ ಅತಿಯಾದ ಮಳೆಯೇ ಪ್ರಮುಖ ಕಾರಣ. ಉಳಿದ ಶೇಕಡ 10ರಲ್ಲಿ ಭೂಕಂಪ, ಬೃಹತ್ ಸ್ಫೋಟ, ಗಣಿಗಾರಿಕೆ ಪ್ರಮುಖವಾಗುತ್ತವೆ ಎಂದು ಹೇಳುತ್ತಾರೆ.
‘ಮಳೆಯಿಂದಾಗುವ ಭೂಕುಸಿತವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ. ಮುಂಡಕ್ಕೈ, ವೆಳ್ಳರಿಮಲ, ಚೆಂಬ್ರ, ಎಳಂಬಿಲೇರಿ, ವಾವುಮಲ, ಬ್ರಹ್ಮಗಿರಿ, ಬಾಣಾಸುರದಲ್ಲಿ ಸಂಭವಿಸಬಹುದಾದ ಕುಸಿತಕ್ಕೂ ಮುತ್ತಙದಲ್ಲಿ ಸಂಭವಿಸಬಹುದಾದ ಕುಸಿತಕ್ಕೂ ವ್ಯತ್ಯಾಸವಿದೆ. ಏಕೆಂದರೆ ಮುತ್ತಙ ಇಳಿಜಾರು ಕಡಿಮೆ ಇರುವ ಸಮತಟ್ಟು ಪ್ರದೇಶ’ ಎಂದು ಕೇರಳ ಅರಣ್ಯ ಅಧ್ಯಯನ ಸಂಸ್ಥೆಯ ಸಂಶೋಧಕ ಅಲೆಕ್ಸ್ ಸಿ.ಜೆ. ಹೇಳುತ್ತಾರೆ.
ಇಳಿಜಾರು, ಸಾಪೇಕ್ಷ ಪರಿಹಾರ (ರಿಲೇಟಿವ್ ರಿಲೀಫ್), ಬಂಡೆಮೇಲಿನ ಮಣ್ಣಿನ ಪ್ರಮಾಣ, ಮಣ್ಣಿನ ಗುಣ ಮತ್ತು ನೀರಿನ ಹರಿವಿನ ಸಾಂದ್ರತೆ ಮುಂತಾದವು ಭೂಕುಸಿತಕ್ಕೆ ಕಾರಣವಾಗಬಲ್ಲವು. ಇದರಲ್ಲಿ ಮಾನವ ಹಸ್ತಕ್ಷೇಪದ ಸಾಧ್ಯತೆ ಇಲ್ಲ. ನೀರಿನ ಹರಿವಿನ ಹಾದಿಯನ್ನು ಪರಿಗಣಿಸದೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು, ತೊರೆಗಳನ್ನು ಕೃಷಿಗಾಗಿ ಮುಚ್ಚುವುದು, ರಬ್ಬರ್ ತೋಟಗಳಲ್ಲಿ ಹಳೆಯ ಮರಗಳನ್ನು ತೆಗೆದು ಹೊಸ ಗಿಡಗಳನ್ನು ನೆಡುವುದು, ಸ್ಫೋಟಕ ಬಳಸಿ ಬಂಡೆ ಒಡೆಯುವುದು ಮತ್ತು ಕಾಡಿಗೆ ಬೆಂಕಿ ಹಾಕುವುದು ಕುಸಿತಕ್ಕೆ ನೇರ ಅಥವಾ ಪರೋಕ್ಷ ಕಾರಣ ಆಗಬಹುದು ಎಂದು ಅಧ್ಯಯನದಲ್ಲಿ ತೊಡಗಿರುವವರು ಹೇಳುತ್ತಾರೆ. ಆದರೆ, ವಯನಾಡಿನಲ್ಲಿ ನಡೆದ ಭೂಕುಸಿತಗಳೆಲ್ಲವೂ ಮಾನವನ ಹೆಜ್ಜೆ ಗುರುತು ಇಲ್ಲದ ಬೆಟ್ಟಗಳ ಮೇಲಲ್ಲವೇ ಎಂಬ ಪ್ರಶ್ನೆಯ ಸುತ್ತ ಚರ್ಚೆ ಚೂರಲ್‌ಮಲ–ಮುಂಡಕ್ಕೈ ದುರಂತದ ನಂತರ ಜೋರಾಗಿದೆ.
‘ವಯನಾಡಿನಲ್ಲಿ ಇರುವುದು ಕೇವಲ 11 ಕಲ್ಲುಗಣಿಗಳು. ಜಿಲ್ಲೆಯ ಅಗತ್ಯಕ್ಕೆ ಬೇಕಾದ ಕಲ್ಲುಗಳ ಪೈಕಿ ಶೇಕಡ 12ರಷ್ಟನ್ನು ಮಾತ್ರ ಇಲ್ಲಿ ತೆಗೆಯಲಾಗುತ್ತದೆ. ಈ ಬಾರಿ ಭೂಕುಸಿತ ಸಂಭವಿಸಿದ ಮುಂಡಕ್ಕೈ, ಚೂರಲ್‌ಮಲ ಪ್ರದೇಶಗಳ 10.2 ಕಿಲೋಮೀಟರ್ ಸುತ್ತಮುತ್ತ ಗಣಿಗಳಿಲ್ಲ. ಅದಕ್ಕಿಂತಲೂ ದೂರ ಇರುವ ಗಣಿ ಭೂಕುಸಿತಕ್ಕೆ ಕಾರಣವಾಗಿರಬಹುದು ಎಂದು ಹೇಳಲು ವೈಜ್ಞಾನಿಕ ಪುರಾವೆಗಳು ಇಲ್ಲ’ ಎಂದು ಪರಿಸರ ಚಿಂತಕ ಟೆಡಿ ಅಟ್ಟಪ್ಪಾಡಿ ಹೇಳುತ್ತಾರೆ.
ಪ್ರವಾಸೋದ್ಯಮದ ಪಾತ್ರ
ಪ್ರವಾಸೋದ್ಯಮದಿಂದ ಇಲ್ಲಿ ಪರಿಸರಕ್ಕೆ ಯಾವ ಬಗೆಯ ಹಾನಿಯೂ ಆಗಲಿಲ್ಲ. ಇಲ್ಲಿನವರ ಬದುಕು ಬೆಳಗಿದ್ದೇ ಪ್ರವಾಸೋದ್ಯಮದಿಂದ ಎಂಬುದು ಬಹುತೇಕರ ಅಭಿಪ್ರಾಯ. ತಾಞಿಲೋಡ್‌ನಲ್ಲಿ ಫುಟ್‌ಬಾಲ್ ಆಡಲು ಸಿದ್ಧತೆ ನಡೆಸುತ್ತ ಗೆಳೆಯರನ್ನು ಕಾಯುತ್ತಿದ್ದ ಸಾದಿಕ್ ಮತ್ತು ಮುಹಮ್ಮದ್, ಗೂಡಂಗಡಿ ವ್ಯಾಪಾರಿ ಮುತ್ತಲಿಬ್ ಟಿ, ಸದಾ ಪ್ರವಾಸದಲ್ಲಿರುವ ಅಜಯ್ ವಯನಾಡ್, ಆಫ್ ರೋಡ್ ಜೀಪ್ ಚಾಲಕ ಸೈನುದ್ದೀನ್, ಮೇಪ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಸರ್ ಮತ್ತು ರಾಜು ಹೆಜಮಾಡಿ ಅವರು ಪ್ರವಾಸೋದ್ಯಮದಿಂದ ಊರು ಹಾಳಾಗಿದೆ ಅಥವಾ ಪ್ರಕೃತಿ ನಾಶವಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ.
‘ವಯನಾಡ್ ಜಿಲ್ಲೆಯ ಪರಿಸರದ ಮೇಲೆ ಬಿದ್ದಿರುವ ಆಘಾತಕ್ಕೆ ಶತಮಾನದ ಇತಿಹಾಸವಿದೆ. ಶೋಲಾ ಕಾಡು ಮತ್ತು ಹುಲ್ಲುಗಾವಲು ತುಂಬಿದ್ದ ವಯನಾಡಿನಲ್ಲಿ ವಾಣಿಜ್ಯ ಬೆಳೆಗಳನ್ನು ಪರಿಚಯಿಸಿದವರು ಬ್ರಿಟಿಷರು. ‘ಕ್ಲಿಯರ್ ಫೆಲ್ಲಿಂಗ್’ ಹೆಸರಿನಲ್ಲಿ ಮರಗಳನ್ನು ಕಡಿದು ಬೀಟೆಸಸಿಗಳನ್ನು ನೆಟ್ಟ ಅವರು, ಚಹಾ ಮತ್ತು ಕಾಫಿ ತೋಟಗಳನ್ನು ಬೆಳೆಸಿದರು. ಸ್ಥಳೀಯರು ಪ್ರಕೃತಿಗೆ ಯಾವ ತೊಂದರೆಯನ್ನೂ ಮಾಡಲಿಲ್ಲ. ಕಾರ್ಪೊರೇಟ್ ಕಂಪನಿಗಳು ಬೃಹತ್ ಕಟ್ಟಡಗಳನ್ನು ಕಟ್ಟಿದರು, ಗುಡ್ಡ ಅಗೆದರು. ಹೆಚ್ಚು ವಿಸ್ತಾರವಿಲ್ಲದ ಜಿಲ್ಲೆಯಲ್ಲಿ ಬಾಣಾಸುರ ಸಾಗರ ಮತ್ತು ತಾರಾಪುರ ಅಣೆಕಟ್ಟೆಗಳಿವೆ. ಅವುಗಳಲ್ಲಿ ನಿಂತ ನೀರಿನ ಒತ್ತಡವೂ ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತಿರಬಹುದು’ ಎಂದು ಲೇಖಕ, ಪರಿಸರವಾದಿ ಒ.ಕೆ.ಜೋಣಿ ಅಭಿಪ್ರಾಯ ಪಡುತ್ತಾರೆ.
ಪುತ್ತುಮಲ ಭೂಕುಸಿತಕ್ಕೆ ಕಾರಣ ಏನು?
‘ಪ್ರಕೃತಿ ಸೌಂದರ್ಯ ಸವಿಯುವುದಕ್ಕೇ ಇಲ್ಲಿಗೆ ಜನರು ಬರುತ್ತಾರೆ. ಇದರಿಂದ ನಾಡಿಗೆ ಅನುಕೂಲವೇ ಆಗಿದೆ. ಚಹಾ ತೋಟಗಳಲ್ಲಿ ದುಡಿಯುವವರಿಗೆ ಈಗಲೂ ಇಲ್ಲಿ ದಿನಕ್ಕೆ ₹ 450 ಸಿಗುತ್ತದೆ. ಅಲ್ಲಿಂದ ಹೊರಗೆ ಬಂದು ಪ್ರವಾಸಿಗಳಿಗೆ ನೆರವಾಗುವವರು ದಿನಕ್ಕೆ ಕನಿಷ್ಠ ₹ 1 ಸಾವಿರದಷ್ಟು ದುಡಿಯುತ್ತಾರೆ. ಆದ್ದರಿಂದ ಅವರ ಬದುಕು ಹಸನಾಗಿದೆ’ ಎಂದು ಹವ್ಯಾಸಿ ಛಾಯಾಗ್ರಾಹಕ, ಚಿಂತಕ ಅಜಯ್ ವಯನಾಡ್ ಪ್ರತಿಪಾದಿಸುತ್ತಾರೆ.
ಪ್ರಕೃತಿಯ ಮೇಲೆ ಅತ್ಯಾಚಾರ ಮಾಡಿ ಯಾವ ಅಭಿವೃದ್ಧಿಯನ್ನೂ ಇಲ್ಲಿ ಮಾಡಿಲ್ಲ. ಕೊಳವೆಬಾವಿ ಕೊರೆಯುವುದಕ್ಕೂ ಯಾರೊಬ್ಬರೂ ಮುಂದಾಗುತ್ತಿಲ್ಲ. ಆದ್ದರಿಂದ ದುರಂತಗಳಿಗೂ ಪ್ರವಾಸೋದ್ಯಮಕ್ಕೂ ತಾಳೆ ಹಾಕಬಾರದು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೌಲಭ್ಯಗಳಿಲ್ಲದ ಪುತ್ತುಮಲದಲ್ಲಿ ಭೂಕುಸಿತ ಉಂಟಾಗಲಿಲ್ಲವೇ? ಅದಕ್ಕೇನು ಕಾರಣ? ಎಂದು ಪ್ರಶ್ನಿಸುವವರೇ ಹೆಚ್ಚು.
ಮಳೆಯೇ ದುರಂತಕ್ಕೆ ಕಾರಣ?
ಚೂರಲ್‌ಮಲ, ಮುಂಡಕ್ಕೈ ಭಾಗದಲ್ಲಿ ಭೂಕುಸಿತ ಉಂಟಾಗಲು ಮಹಾಮಳೆಯೇ ಕಾರಣ ಎನ್ನುತ್ತಾರೆ ಈ ಭಾಗದ ಕುರಿತು ತಿಳಿವಳಿಕೆ ಇರುವ ಸೈನುದ್ದೀನ್ ಕುನಿಯೆ. ಜನವರಿ ಕೊನೆಯ ವಾರದಲ್ಲಿ ಕಾಫಿ ಕೊಯ್ಲು ಆದ ನಂತರ ‘ಪುದುಮಳ’ ಎಂಬ ಮಳೆಯೊಂದು ಬರುತ್ತದೆ. ನಾಲ್ಕು ಮಳೆ ಬಂದರೆ ಕಾಫಿ ಗಿಡಗಳು ಹೂ ಬಿಡುತ್ತವೆ. ಫೆಬ್ರುವರಿಯಲ್ಲಿ ಹೂ ಮುದುಡಿದರೆ ಕಾಯಿಗಳು ಚೆನ್ನಾಗಿ ಬೆಳೆಯುತ್ತವೆ. ಮತ್ತೆ ಜೂನ್‌ನಲ್ಲಿ ಮಳೆ ಆಗಬೇಕು. ಈ ಬಾರಿ ಎಲ್ಲ ಲೆಕ್ಕಾಚಾರವೂ ತಪ್ಪಿದೆ. ಜುಲೈ 15ರ ನಂತರವೇ ನಾವು ಮಳೆ ನೋಡಿದ್ದು. ಸಾಮಾನ್ಯವಾಗಿ ಮಳೆಗಾಲದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರುತ್ತಾರೆ. ಜೋರುಮಳೆಯ ಸಾಧ್ಯತೆ ಇದ್ದರೆ ಬೇರೆ ಕಡೆಗೆ ಹೋಗುತ್ತಾರೆ. ಈ ಬಾರಿ ಮಳೆಯಲ್ಲಿ ವ್ಯತ್ಯಯ ಆಗುತ್ತಿದ್ದ ಕಾರಣ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಏಕಾಏಕಿ ಧಾರಾಕಾರ ಮಳೆ ಬಂತು. ಅದು ಗುಡ್ಡ ಕುಸಿತಕ್ಕೆ ಕಾರಣವಾಯಿತು ಎಂದು ಅವರು ವಿವರಣೆ ನೀಡುತ್ತಾರೆ.
‘ವಾಸ್ತವದಲ್ಲಿ ವಯನಾಡಿನ ಬಗ್ಗೆ ಹೊರಜಗತ್ತು ಹೆಚ್ಚು ಆಸಕ್ತಿ ತಾಳಿದ್ದೇ 2019ರಲ್ಲಿ ಪುತ್ತುಮಲದಲ್ಲಿ ನಡೆದ ದುರಂತದ ನಂತರ. ಅಲ್ಲಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿತು. ಮೊದಲು 15 ಆಫ್ ರೋಡ್ ಜೀಪ್‌ಗಳು ಇದ್ದವು. ಎರಡು ವರ್ಷಗಳ ಹಿಂದೆ ಅವುಗಳ ಸಂಖ್ಯೆ 80 ಆಗಿತ್ತು. ಚೂಲರ್‌ಮಲ, ಮುಂಡಕ್ಕೈ ದುರಂತಕ್ಕೆ ಮೊದಲು 215 ಜೀಪ್‌ಗಳು ಇದ್ದವು. ಈಗ ಅವುಗಳ ಪೈಕಿ ಹೆಚ್ಚಿನವು ಕೊಚ್ಚಿಕೊಂಡು ಹೋಗಿವೆ. ಅನೇಕ ಚಾಲಕರೂ ಇಲ್ಲದಾಗಿದ್ದಾರೆ’ ಎಂದು ಹೇಳುತ್ತ ಅವರು ಕಣ್ಣೀರಾದರು.
ಕಾಡಿನ ಸಂಪರ್ಕದಿಂದ ದೂರ
ವಯನಾಡಿನಲ್ಲಿ ಹರಿಯುತ್ತಿರುವ ಹೆಚ್ಚಿನ ನದಿಗಳು ಹಿಂದೆ ಸಣ್ಣ ತೊರೆಗಳಾಗಿದ್ದವು. ಬಹುತೇಕ ತೊರೆಗಳು ಭೂಕುಸಿತದ ಪರಿಣಾಮವಾಗಿಯೇ ನದಿಯ ಸ್ವರೂಪ ಪಡೆದುಕೊಂಡಿವೆ. ಭೂಕುಸಿತಗಳು ಇಲ್ಲಿ ಕಣಿವೆಗಳನ್ನು ಸೃಷ್ಟಿಸಿದ್ದು, ಅವುಗಳು ನಂತರ ನದಿಗಳಾಗಿ ಹರಿಯತೊಡಗಿವೆ. ಮುಂಡಕ್ಕೈಯಿಂದ ಹರಿದು ಬರುತ್ತಿದ್ದ ಸಣ್ಣ ಝರಿ ಈಗ ವಿಸ್ತಾರವಾಗಿರುವುದು ಇಂಥ ಪ್ರಕ್ರಿಯೆಗೆ ಇತ್ತೀಚಿನ ಉದಾಹರಣೆ ಎನ್ನುತ್ತಾರೆ ಪರಿಸರ ಚಿಂತಕ ಜಗದೀಶ್ ವಿಲ್ಲೋಡಿ.
ಅರಣ್ಯ ನಿಯಮಗಳಿಂದಾಗಿ ಕಾಡು ಮತ್ತು ಮನುಷ್ಯನ ನಡುವಿನ ಅಂತರ ಹೆಚ್ಚಾದದ್ದು ಅಪಾಯಗಳನ್ನು ಮೊದಲೇ ಅರಿಯುವಲ್ಲಿ ವಿಫಲವಾಗುವುದಕ್ಕೆ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.
ದುರಂತದ ನೆಲದಲ್ಲಿ ಒಂದು ವಾರ ಸುತ್ತಾಡಿದೆ. ಹತ್ತಾರು ಜನರೊಂದಿಗೆ ಸಂವಾದಿಸಿದೆ. ಅವರಾರೂ ಪ್ರಕೃತಿಯನ್ನು ದೂರುವುದಿಲ್ಲ. ತಮ್ಮಿಂದಲೂ ಪರಸರಕ್ಕೆ ಧಕ್ಕೆ ಆಗಿಲ್ಲ ಎಂದು ಹೇಳುವುದನ್ನೂ ಮರೆಯುವುದಿಲ್ಲ. ಇಲ್ಲಿ ಪ್ರಕೃತಿ ಮತ್ತು ಮನುಷ್ಯರ ನಡುವೆ ಸಂಘರ್ಷವಿಲ್ಲ, ಸಹಬಾಳ್ವೆ ಇದೆ. ಆದರೂ ದುರಂತ ಸಂಭವಿಸಿದ್ದು ಮಾತ್ರ ಹವಾಮಾನ ವೈಪರೀತ್ಯದಿಂದಲೇ ಎಂದು ಈಗಲೂ ಬಲವಾಗಿ ಪ್ರತಿಪಾದಿಸುತ್ತಾರೆ.
ಮನುಷ್ಯರು ಇತಿಹಾಸದಿಂದ ಪಾಠ ಕಲಿಯುವ ಮನಸ್ಸು ಮಾಡಬೇಕು ಅಷ್ಟೆ.
(ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.)
(ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.)
ಇಲ್ಲಿ ಭೂಕುಸಿತಕ್ಕೆ ಮಳೆಯೇ ಪ್ರಮುಖ ಕಾರಣ. 2019ರಲ್ಲಿ ಪುತ್ತುಮಲದಲ್ಲಿ ದುರಂತ ಸಂಭವಿಸುವುದಕ್ಕೂ ಮೊದಲು ಧಾರಾಕಾರ ಮಳೆಯಾಗಿತ್ತು. ವಯನಾಡಿನಲ್ಲಿ ಭೂಕುಸಿತಗಳು ಸಹಜ. ಜನಸಂಖ್ಯೆ ಕಡಿಮೆ ಇರುವುದರಿಂದ ಮತ್ತು ಕಾಡು ಹೆಚ್ಚು ಇರುವುದರಿಂದ ಹೆಚ್ಚಿನ ಪ್ರಾಣಹಾನಿ ಆಗುವುದಿಲ್ಲ-ಜಗದೀಶ್ ವಿಲ್ಲೋಡಿ, ವಯನಾಡ್ ಪರಿಸರ ಅಧ್ಯಯನಕಾರ
ಪುಂಜಿರಿಮಟ್ಟಂನ ಆಚೆ ಜನವಸತಿ ಇಲ್ಲ. ಅಲ್ಲಿಯೂ ಆಗಾಗ ಗುಡ್ಡ ಕುಸಿತ ಉಂಟಾಗುತ್ತದೆ. ಈಚೆ ಭಾಗಕ್ಕೆ ಅದರಿಂದ ಯಾವ ತೊಂದರೆಯೂ ಆಗುತ್ತಿರಲಿಲ್ಲ. ನಮ್ಮ ಭಾಗಕ್ಕೆ ಪ್ರಕೃತಿ ಮಾತೆ ದ್ರೋಹ ಬಗೆಯಳು ಎಂಬ ವಿಶ್ವಾಸವೇ ಬದುಕಿಗೆ ಅಂತ್ಯ ಹಾಡಿದ್ದು ದುರದೃಷ್ಟಕರ-ಟೆಡ್ಡಿ ಅಟ್ಟಪ್ಪಾಡಿ ರೈತ ಪರಿಸರ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.