ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಕ ಉಳಿಸಿ: ಸಿರುಗುಪ್ಪದಲ್ಲಿ ನಿರ್ಮಾಣ ಚಟುವಟಿಕೆ ಸ್ಥಗಿತಕ್ಕೆ ಆಗ್ರಹ

ಅಳಿವಿನಂಚಿನಲ್ಲಿ ಇರುವ ಹೆಬ್ಬಕಗಳು ಬೇರೆಡೆ ಹೋಗುವ ಎಚ್ಚರಿಕೆ
Last Updated 16 ಜೂನ್ 2020, 11:44 IST
ಅಕ್ಷರ ಗಾತ್ರ

ಮುಂಬೈ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಪರಿಸರ, ವನ್ಯಜೀವಿ ಸಂರಕ್ಷಕ ಡಾ.ಎಂ.ಕೆ.ರಂಜಿತ್‌ಸಿನ್ಹಾ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸಿರುಗುಪ್ಪದ ಹಚ್ಚೊಳ್ಳಿ–ರಾರಾವಿ ಪ್ರದೇಶವುಅಳಿವಿನಂಚಿನಲ್ಲಿರುವ ಹೆಬ್ಬಕಗಳ(ಗ್ರೇಟ್‌ ಇಂಡಿಯನ್‌ ಬಸ್ಟರ್ಡ್) ಆವಾಸಸ್ಥಾನ ಹಾಗೂ ಸಂತಾನೋತ್ಪತ್ತಿ ಕೇಂದ್ರವಾಗಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್‌ ಅವರಿಗೆ ಪತ್ರ ಬರೆದಿರುವ ಸಿನ್ಹಾ, ‘ವಿಶ್ವದಲ್ಲಿ ಇಂಥ ಹಕ್ಕಿಗಳ ಸಂಖ್ಯೆ ಪ್ರಸ್ತುತ 100ಕ್ಕಿಂತ ಕಡಿಮೆ ಇದೆ. ಹೀಗಾಗಿ ತಕ್ಷಣ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಕಾಮಗಾರಿಗಳ ಬಗ್ಗೆ ಪುನರ್‌ಪರಿಶೀಲನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಹೆಬ್ಬಕಗಳ ಆವಾಸಸ್ಥಾನದಲ್ಲಿ ಯಾವುದೇ ಕಂಪನಿಗಳು ಅಥವಾ ಇಲಾಖೆಗಳು ವಿದ್ಯುತ್‌ ಸರಬರಾಜು ಕಂಬಗಳು, ಸೌರಶಕ್ತಿ ಘಟಕಗಳು ಅಥವಾ ಗಾಳಿಯಂತ್ರಗಳನ್ನು ನಿರ್ಮಾಣ ಮಾಡಬಾರದು ಎಂದು ನಾವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಆದರೆ, ದುರದೃಷ್ಟವಶಾತ್‌ ಅರಣ್ಯ ಇಲಾಖೆಯೇ ಸಿರುಗುಪ್ಪದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ. ಒಂದು ವೇಳೆ ಹೆಬ್ಬಕಗಳು ಈ ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಹೋದರೆ ಅರಣ್ಯ ಇಲಾಖೆಯೇ ಹೊಣೆ’ ಎಂದು ಸಿನ್ಹಾ ಹೇಳಿದರು.

‘ನಾವು ಹೆಬ್ಬಕಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಿದ್ದೇವೆ. ಹೆಬ್ಬಕಗಳಿಗೆ ದಕ್ಷಿಣ ಭಾರತದ ಏಕೈಕ ನೆಲೆಯಾದ ಬಳ್ಳಾರಿಯಲ್ಲಿ ಬೃಹತ್‌ ವೀಕ್ಷಣಾ ಗೋಪುರಗಳ ನಿರ್ಮಾಣವಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ಗಿಡಗಳನ್ನು ನೆಡಲು ಗುಂಡಿಗಳನ್ನು ತೆಗೆಯಲಾಗಿದೆ. ಹೆಬ್ಬಕಗಳು ಕಾಡಿನಿಂದ ದೂರ ಇರಲು ಬಯಸುತ್ತವೆ ಬದಲಾಗಿ ಹುಲ್ಲುಗಾವಲಿನ ಪ್ರದೇಶದಲ್ಲಿ ವಾಸಿಸುತ್ತವೆ. ನಿರ್ಮಾಣ ಚಟುವಟಿಕೆಗಳ ಕಾರಣದಿಂದ ಹೆಬ್ಬಕಗಳು ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಆ ಪ್ರದೇಶದಲ್ಲಿ ಅವುಗಳು ಬದುಕುಳಿಯುವುದು ಅನುಮಾನವಾಗಿದೆ’ ಎಂದು ರಂಜಿತ್‌ಸಿನ್ಹಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT