ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಸಾವಿರಕ್ಕೂ ಅಧಿಕ ಹೊಂಗೆ ಮರ: ಕಾಂಕ್ರೀಟ್ ರಸ್ತೆಯಲ್ಲಿ ಚಿಗುರಿದ ಹಸಿರು

ನಿಸರ್ಗ ಬಳಗ ಪರಿಸರ ವೇದಿಕೆ ಪರಿಶ್ರಮ: ಹಸಿರಿನಿಂದ ಕಂಗೊಳಿಸುವ ಹೊಂಗೆ ಮರಗಳು
Last Updated 20 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬಾದಾಮಿ: ಇಲ್ಲಿನ ವಿದ್ಯಾನಗರ, ಚಾಲುಕ್ಯ ನಗರ, ಲಕ್ಷ್ಮಿನಗರ, ಗಾಂಧಿ ನಗರ, ಆನಂದ ನಗರ, ಜಯನಗರ, ಟಿಪ್ಪುನಗರದ ಕಾಂಕ್ರೀಟ್ ರಸ್ತೆ ಅಗೆದು2017ರಲ್ಲಿ ನೆಡಲಾದ ಹೊಂಗೆ ಮರಗಳು ಬೆಳೆದು ಹೂವು, ಕಾಯಿಯ ಹಂತದಲ್ಲಿವೆ. ಬೇಸಿಗೆಯಲ್ಲಿ ನೆತ್ತಿ ಸುಡುವ ಬಿರು ಬಿಸಿಲಿನ ಬೇಗೆಯನ್ನು ತಪ್ಪಿಸಿಕೊಳ್ಳಲು ಜನರು ಹೊಂಗೆ ಮರದ ಕೆಳಗೆ ನಿಂತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದಾರೆ.

ರಾಜ್ಯ ಹೆದ್ದಾರಿ ರಸ್ತೆಯ ಅಭಿವೃದ್ಧಿಗೆ 2012ರಲ್ಲಿ ರಸ್ತೆ ಪಕ್ಕದ ಬೃಹದಾಕಾರದ ಬೇವಿನ ಮರಗಳನ್ನು ತೆಗೆಯಲಾಯಿತು. ಪಟ್ಟಣದ ಸಮೀಪದ ಬೆಟ್ಟದ ಬಿಸಿಗಾಳಿ, ಗಿಡಗಳಿಲ್ಲದೇ ಬಿಸಿಲಿನ ತಾಪ
ಅಧಿಕವಾಗಿ ಜನರು ತತ್ತರಿಸುವಂತಾಗಿತ್ತು.

‘ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಪಟ್ಟಣವನ್ನು ಹಸಿರು ನಗರವನ್ನಾಗಿ ಮಾಡಬೇಕೆಂಬ ಛಲ ತೊಟ್ಟು ಸಮಾನ ಮನಸ್ಕರ 40 ಸದಸ್ಯರೊಂದಿಗೆ ನಿಸರ್ಗ ಬಳಗ ಪರಿಸರ ವೇದಿಕೆಯನ್ನು ಕಟ್ಟಿಕೊಂಡು ವಿವಿಧ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಅಗೆದು 12 ಸಾವಿರಕ್ಕೂ ಅಧಿಕ ಹೊಂಗೆ ಮರಗಳನ್ನು ನೆಟ್ಟದ್ದು ಈಗ ಫಲ ಸಿಕ್ಕಿದೆ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್.ವಾಸನ ಹೇಳಿದರು.

‘ಮಳೆಗಾಲ ಆರಂಭದ ಜೂನ್‌ ತಿಂಗಳಿಂದ ಆಗಸ್ಟ್‌ ವರೆಗೆ ಪಟ್ಟಣದ ವಿವಿಧ ಬಡಾವಣೆ, ರಸ್ತೆ ಬದಿ, ಶಾಲಾ ಕಾಲೇಜು ಆವರಣ, ಮತ್ತು ಗ್ರಾಮೀಣ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗುವುದು. ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದು ನಿಸರ್ಗ ಬಳಗ, ಅಧಿಕಾರಿಗಳ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಗಿಡಗಳನ್ನು ನೆಡುವುದು. ಗಿಡಗಳು ಬೆಳೆದಂತೆ ಪ್ರತಿ ಭಾನುವಾರ ನಿಸರ್ಗ ಬಳಗದ ಸದಸ್ಯರೊಂದಿಗೆ ಗಿಡಗಳಿಗೆ ನೀರು ಹಾಕುವುದು, ಗಿಡಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುವುದು’ ಎಂದು ಅವರು ಹೇಳಿದರು.

‘ಮಿತವಾಗಿ ನೀರನ್ನು ಬಳಸಿ ಮತ್ತು ಪ್ಲಾಸ್ಟಿಕ್ ಬಳಕೆ ಬೇಡ ಎಂದು ಅಭಿಯಾನ ಮಾಡಲಾಗಿದೆ. ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬಳಕೆ ಶೇ 90 ರಷ್ಟು ಕಡಿಮೆಯಾಗಿತ್ತು. ಆದರೆ ಪ್ಲಾಷ್ಟಿಕ್ ಬಳಕೆ ನಿಷೇಧದ ಕುರಿತು ಪುರಸಭೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ವಾಸನ ಅಸಮಾಧಾನ ವ್ಯಕ್ತಪಡಿಸಿದರು.

ನಿಸರ್ಗ ಬಳಗಕ್ಕೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ನಿಸರ್ಗ ಬಳಗ ಪರಿಸರ ವೇದಿಕೆಯನ್ನು ಪ್ರಜಾವಾಣಿ ಗುರುತಿಸಿ 2023 ರ ‘ ಪ್ರಜಾವಾಣಿ ಸಾಧಕರು ’ ಪ್ರಶಸ್ತಿ ನೀಡಿ ಸನ್ಮಾನಿಸಿದೆ ಎಂದು ಎಸ್.ಎಚ್. ವಾಸನ ಸಂತಸ ವ್ಯಕ್ತಪಡಿಸಿ ಪ್ರಜಾವಾಣಿ ಪತ್ರಿಕೆಗೆ ಅಭಿನಂದಿಸಿದರು.

‘ಕಾಂಕ್ರೀಟ್ ರಸ್ತೆ ಅಗೆದು ಗಿಡಗಳನ್ನು ನೆಟ್ಟು ಬೆಳೆಸಿದ್ದು ಇಂದು ನಮಗೆ ಹೊಂಗೆ ಮರಗಳು ನೆರಳು ಕೊಡುತ್ತಿವೆ’ ಎಂದು ವಿದ್ಯಾ ನಗರದ ನಿವಾಸಿ ರವಿ ದೊಡ್ಡನಿಂಗಪ್ಪನವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT