ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಪ್ಪಾಗದ ಹುಣಸೆ ತೋಪಿನಲ್ಲಿ..

Last Updated 23 ಜುಲೈ 2019, 3:56 IST
ಅಕ್ಷರ ಗಾತ್ರ

ಅಂದು ಫೇಸ್‌ಬುಕ್‌ನ ಗೋಡೆಯ ಮೇಲೆ ಕಣ್ಣಾಡಿಸುತ್ತಿದ್ದೆ. ಒಂದು ಪೋಸ್ಟ್ ನಲ್ಲಿ ‘410 ವರ್ಷದ ಹಳೆ ಹುಣಸೆ ಮರದ ತೋಪಿನಲ್ಲಿ’ ಅಂತ ಹೆಡ್ಡಿಂಗ್ ಇತ್ತು. ‘ಇಷ್ಟು ಹಳೆಯ ಮರಗಳ ತೋಪು ಇನ್ನೂ ಇದೆಯಾ ? ಎಲ್ಲಿರಬಹುದು?’ ಎಂದು ಆ ಪೋಸ್ಟ್ ಅನ್ನು ಇನ್ನಷ್ಟು ವಿಸ್ತಾರವಾಗಿ ಓದಿದೆ. ಬೆಂಗಳೂರಿಗೆ ಸಮೀಪ, ದೇವನಹಳ್ಳಿ ಪಕ್ಕದ ನಲ್ಲೂರಿನಲ್ಲಿದೆ ಎಂದು ಗೊತ್ತಾಯಿತು. ಅದು ಭಾರತದ ಮೊದಲ ಜೀವವೈವಿಧ್ಯ ಪಾರಂಪರಿಕ ತಾಣ ಎಂಬ ಮಾಹಿತಿ ಸಿಕ್ಕಿತು.

ಮಾಹಿತಿ ಹಿಡಿದುಕೊಂಡು, ಮರುದಿನವೇ, ಗೆಳೆಯನ ಜತೆ ಬೈಕ್ ಏರಿ ಹೊರಟೆ. ದೇವನಹಳ್ಳಿ ತಲುಪಿದ ಮೇಲೆ ಮುಂದಿನ ದಾರಿ ಗೊತ್ತಾಗಲಿಲ್ಲ. ಟೀ ಅಂಗಡಿಯವರನ್ನು ನಲ್ಲೂರಿನ ದಾರಿ ಕೇಳಿದೆ,‘ಈ ದಾರಿಯಲ್ಲೇ ಮುಂದೆ ಹೋಗಿ, ಅಲ್ಲಿ ಕಾಣುವುದೇ ನಲ್ಲೂರು’ ಎಂದರು. ‘ಅಲ್ಲಿ ಹುಣಸೆ ತೋಪು ಎಲ್ಲಿದೆ’ ಎಂದಾಗ, ‘ನೀವು ಹುಣಸೆ ತೋಪು ನೋಡಬೇಕಾ? ಹಾಗಿದ್ದರೆ ಊರಿಗೆ ಹೋಗಬೇಡಿ, ಇಲ್ಲೇ ಮುಂದೆ ಕಾಣುತ್ತಿದೆಯಲ್ಲ ಅದೇ ಹುಣಸೆ ತೋಪು’ ಎಂದರು.

ಅದೇ ದಾರಿಯಲ್ಲಿ ಹೋದಾಗ, ಅಲ್ಲಿ ಕಂಡಿದ್ದು ನಾಲ್ಕೇ ಹುಣಸೆಮರ. ಉಳಿದಿದ್ದೆಲ್ಲ ಜಾಲಿ ಮರಗಳ ತೋಪು. ‘ದಾರಿ ತಪ್ಪಿದೆವೇನೋ’ ಎನ್ನಿಸಿತು. ಬೈಕ್ ನಿಲ್ಲಿಸಿ, ಮುಂದೆ ಹೆಜ್ಜೆ ಹಾಕಿದೆವು. ಮತ್ತೂ ಜಾಲಿ ಮರಗಳ ತೋಪು ಕಂಡಿತು. ನಡುವೆ ಬೋರ್ಡ್‌ ಕಾಣಿಸಿತು. ಹತ್ತಿರಕ್ಕೆ ಹೋಗಿ ನೋಡಿದೆ. ‘155 ನೇ ಮರಕ್ಕೆ 410 ವರ್ಷವಾಗಿದೆ’ ಎಂದು ಬರೆದಿತ್ತು. ಸ್ವಲ್ಪ ಕುತೂಹಲ ಮೂಡಿತು. ಈ ವೇಳೆ ಪಕ್ಕದ ಗಂಗಾದೇವಿ ದೇವಸ್ಥಾನದ ಬಳಿ ಖಾಕಿ ಬಟ್ಟೆ ತೊಟ್ಟು ಕುಳಿತಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ಮಾಹಿತಿ ಕೇಳಿದೆವು. ‘ನಾನು ಈ ಹುಣಸೆ ತೋಪಿಗೆ ಸೆಕ್ಯೂರಿಟಿ. ಬನ್ನಿ ಆ ಮರಗಳನ್ನು ತೋರಿಸುತ್ತೇನೆ’ ಎಂದರು. ‘ಪರವಾಗಿಲ್ಲ ಅವು ಎಲ್ಲಿವೆ ಹೇಳಿ ನಾವೇ ನೋಡಿ ಬರುತ್ತೇವೆ’ ಎಂದೆವು. ‘ಇನ್ನಷ್ಟು ಒಳಗಡೆ ಹೋಗಿ’ ಎಂದು ಕೈ ತೋರಿದರು.

ಅವರು ಬೆರಳು ತೋರಿಸಿದ ದಿಕ್ಕಿನಲ್ಲಿ ನಡೆದೆವು. ನಾವು ಹುಡುಕುತ್ತಿದ್ದ 410 ವರ್ಷಗಳ ಹುಣಸೆ ಮರ ಸಿಗಲಿಲ್ಲ. ಜಾಲಿ ಗಿಡಗಳ ನಡುವೆ 245, 270 ಎಂದು ನಂಬರ್‌ ತೂಗು ಹಾಕಿಕೊಂಡ ಹುಣಸೆ ಮರಗಳು ಕಂಡವು. ಅನಿವಾರ್ಯವಾಗಿ ಸೆಕ್ಯುರಿಟಿ ಮೊರೆ ಹೋದೆವು. ಅವರು ನಮ್ಮನ್ನು ನೋಡಿ ಕಿಸಕ್ಕನೆ ನಕ್ಕು, ‘ಬನ್ನಿ’ ಎಂದು ಕರದೊಯ್ದರು. ಅವರ ಹೆಸರು ಮುನಿರಾಜು.

ನಾವು ಹುಡುಕುತ್ತಿದ್ದ ಹುಣಸೆ ಮರಗಳ ಜತೆಗೆ, ನಾವು ನಿಂತಿದ್ದ ತಾಣದ ಬಗ್ಗೆ ಮುನಿರಾಜು ವಿವರಿಸುತ್ತಾ ಹೊರಟರು. ‘ಇದು ನಲ್ಲೂರು ಪುರಾತನ ಹುಣಸೆ ಮರಗಳ ತೋಪು. ಇದಕ್ಕೆ ಜೀವ ವೈವಿಧ್ಯ ಪಾರಂಪರಿಕ ತಾಣ ಎನ್ನುತ್ತಾರೆ. ಇಲ್ಲಿರುವ ಅನೇಕ ಮರಗಳಿಗೆ ಕನಿಷ್ಠ ಎಂದರೂ 300 ವರ್ಷ’- ಎಂದರು.

‘ಈ ತೋಪು ಒಟ್ಟು 53 ಎಕರೆ ಇದೆ. ಇದು ಚನ್ನಕೇಶವ ದೇವಸ್ಥಾನ. ಚೋಳರ ಕಾಲದಲ್ಲಿ ನಿರ್ಮಿಸಿದ್ದು‘ ಎಂದು ಹೇಳುತ್ತಾ ಅವರು ಬೇಲಿ ಒಳಗೆ ನುಗ್ಗುತಿದ್ದರು. ‘ಬನ್ನಿ ಸಾರ್ ಒಳಗೆ’ ಎಂದು ಕೂಗಿದರು. ‘ನೀವೇನು ಹುಣಸೆ ಮರ ತೋರಿಸುತ್ತೀರೋ, ಯಾವುದಾದರೂ ಕಾಡಿಗೆ ಕರ್ಕೊಂಡು ಹೋಗುತ್ತಿದ್ದೀರೋ’ ಎಂದು ಕೇಳಿದೆವು. ‘ಸಾರ್, ಸರಿಯಾಗಿ ಮೇಂಟೇನ್ ಆಗದಿದ್ದಕ್ಕೆ ಹಿಂಗೆಲ್ಲ ಬೇಲಿ ತರಹ ಬೆಳ್ಕಂಬಿಟ್ಟಿದೆ ಸರ್. ಇಲ್ಲಿಗೆ ಬಂದವರೆಲ್ಲ ತೋಪನ್ನು ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಏನೂ ಆಗಿಲ್ಲ. ಬಹುಶಃ, ಅವರ ಮಾತನ್ನು ಕೇಳಿಸಿಕೊಂಡೇ ಈ ಮರಗಳು ಇನ್ನೂ ಬದುಕಿರಬೇಕೇನಪ್ಪಾ’ ಎಂದು ಮುನಿರಾಜು ತಮಾಷೆ ಮಾಡುತ್ತಾ ಮಾಡುತ್ತಾ ಬೇಲಿಯಲ್ಲಿ ನಮ್ಮನ್ನು ನುಗ್ಗಿಸಿದರು.

‘ಇದೇ ನೋಡಿ 410 ವರ್ಷದ ಹುಣಸೆ ಮರ’ ಎಂದರು. ಕೊನೆಗೂ ನಾವು ಹುಡುಕುತ್ತಿದ್ದ ಹುಣಸೆ ಮರ ಸಿಕ್ಕಿತು. ಖುಷಿಯಾಯಿತು. ಆ ಮರದ ಪೂರ್ಣ ಫೋಟೊ ತೆಗೆಯಲು ಪ್ರಯತ್ನಿಸಿದೆ. ಸುತ್ತಲೂ ಬೇಲಿ ಇದ್ದಿದ್ದರಿಂದ ಸಾಧ್ಯವಾಗಲಿಲ್ಲ. ‘ಇಡೀ ಮರವನ್ನು ಫೋಟೊ ತೆಗೆಯಬೇಕು ಏನು ಮಾಡುವುದು ಸಾರ್’ ಎಂದಾಗ ಅಲ್ಲಿ ಇನ್ನೂ ಒಂದು ಮರವಿದೆ ಬನ್ನಿ ಎಂದು ಕರೆದುಕೊಂಡು ಹೋದರು.

ಮುನಿರಾಜು ತೋರಿಸಿದ ಒಂದೊಂದು ಹುಣಸೆ ಮರವೂ ದಢೂತಿ ಗಾತ್ರದವು. ಅಂದಾಜು 25-30 ಅಡಿ ಸುತ್ತಳತೆ ಇರಬಹುದು. ಬೇರುಗಳು ಇಡೀ ಭೂಮಿಯನ್ನು ಹರಡಿ, ಮತ್ತೆ ರೆಂಬೆಗಳಾಗಿ ಚಿಗುರಿ ಮರವಾಗುತ್ತಿದ್ದವು. ಅಲ್ಲಿವರೆಗೂ ನಾವು ಅಂದುಕೊಂಡಿದ್ದು, ಹುಣಸೆ ಬೀಜ ಬಿದ್ದು, ಸುತ್ತಲೂ ಮರಗಳು ಹುಟ್ಟಿರಬಹುದು ಎಂದು. ಆದರೆ, ಆಲದ ಮರದಂತೆ ಹುಣಸೆ ಮರವೂ ಬೇರುಗಳ ಮೂಲಕ ಬೆಳೆಯುತ್ತವೆ ಎಂಬುದನ್ನು ಮನಿರಾಜು ಹೇಳಿದರು. ಸುತ್ತಲಿನ ಮರಗಳ ಬೇರುಗಳನ್ನು ಗಮನಿಸಿದಾಗ, ಅವರು ಹೇಳಿದ್ದು ನಿಜ ಎನ್ನಿಸಿತು. ಪ್ರತಿ ಮರದಲ್ಲೂ 20-30ಗಂಟುಗಳು ಕಂಡವು.

ಪಕ್ಕದಲ್ಲಿ ಮರವೊಂದು ಕೊಳೆತು ಬಿದ್ದಂತೆ ಕಂಡಿತು. ಅದರ ಸುತ್ತಲೂ ಮರಗಳು ಬೆಳೆದಿದ್ದವು, ‘ನೋಡಿ ಈ ಮರಕ್ಕೆ ಸಿಡಿಲು ಬಡಿದು ಎರಡು ಭಾಗವಾಗಿದೆ. ತಾನು ಸಾಯುತ್ತಾನೆ ಎಂದು ಗೊತ್ತಾದ ಮೇಲೆ ಸುತ್ತಲೂ ಹತ್ತು ಮರಗಳನ್ನು ಬಿಟ್ಟುಕೊಂಡಿದೆ. ಕೆಲವರು ಬಂದು ಈ ಮರಗಳ ಬೀಜಗಳನ್ನು ತೆಗೆದುಕೊಂಡು ಹೋಗುತ್ತಾರೆ’ ಎಂದು ಹುಣಸೆ ಮರದ ಶಕ್ತಿಯನ್ನು ಮುನಿರಾಜು ಉಲ್ಲೇಖಿಸಿದರು. ‘ಈ ಜಾತಿಯ ಮರಗಳು ಇಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಇಲ್ಲಿ 300 ಮರಗಳಿವೆ. ಅದರಲ್ಲಿ 200 ವರ್ಷದಿಂದ 410 ವರ್ಷದ ಮರಗಳು ಇವೆ’ಎಂದು ಅವರು ವಿವರಿಸಿದರು.

ಇಂಥ ಅಪರೂಪದ ತಾಣ ನೋಡಲು ಪ್ರವಾಸಿಗರೇನೋ ಬರುತ್ತಾರೆ. ಆದರೆ, ಇಲ್ಲಿನ ಜಾಲಿಮುಳ್ಳುಗಳ ಮೆಳೆ ನೋಡಿ ಬೇಸರಪಟ್ಟುಕೊಂಡು ವಾಪಸ್ ಹೋಗಿಬಿಡುತ್ತಾರೆ. ಸ್ವಲ್ಪ ಕುತೂಹಲವಿರುವವರು ಮುನಿರಾಜು ಅವರ ಸಹಾಯ ಪಡೆದು ಸುತ್ತಾಡುತ್ತಾರಂತೆ.

‘ನಾನೇನೋ ಕೇಳಿದವರಿಗೆ ಮಾಹಿತಿ ನೀಡುತ್ತೇನೆ. ಆದರೆ, ಕೆಲವು ಈ ಜಾಲಿಮೆಳೆ ನೋಡಿಯೇ ಮಾಹಿತಿ ಪಡೆಯದೆ ವಾಪಸ್ ಹೋಗುತ್ತಾರೆ’ ಎಂದು ಹೇಳುವಾಗ ಅವರ ಮುಖದಲ್ಲಿ ಬೇಸರದ ಗೆರೆ ಮೂಡಿತ್ತು. ಅವರು ಹೀಗೆ ಹೇಳುತ್ತಿದ್ದಾಗಲೇ ತೋಪು ನೋಡಲು ಬಂದಿದ್ದ ಪ್ರವಾಸಿಗರ ಗುಂಪೊಂದು ಮುನಿರಾಜು ಅವರನ್ನು ‘410 ವರ್ಷದ ಮರಗಳ ಎಲ್ಲಿವೆ’ ಎಂದು ಕೇಳಿದರು. ಮುನಿರಾಜು ನಮ್ಮತ್ತ ನೋಡಿದರು. ‘ನೋಡಿದ್ರಾ, ನಾನು ಹೇಳಿದ್ದಕ್ಕೆ ಸಾಕ್ಷಿ ಸಿಕ್ತಾ’ ಎನ್ನುವಂತಿತ್ತು ಅವರ ನೋಟ. ಅಷ್ಟೇ ಅಲ್ಲ, ಈ ತೋಪುನಲ್ಲಿ ಹಳೆಯ ಮರಗಳ ಕಥೆ ಹೇಳಲು ಮುನಿರಾಜು ಅವರಂತಹ ಗೈಡ್‌ಗಳ ಅಗತ್ಯವನ್ನೂ ಸಾರಿ ಹೇಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT