ಶನಿವಾರ, ಜುಲೈ 31, 2021
27 °C
ರೈನ್‌ಬೊ ಡ್ರೈವ್‌ ಬಡಾವಣೆ ನಿವಾಸಿಗಳ ಜಲ ಸ್ವಾವಲಂಬನೆ

ಈ ಬಡಾವಣೆಯಲ್ಲಿ ಹನಿ ನೀರಿಗೂ ಲೆಕ್ಕ!

ಪ್ರಜ್ವಲ್‌ ಸುವರ್ಣ Updated:

ಅಕ್ಷರ ಗಾತ್ರ : | |

Prajavani

ನೀರು ಎಲ್ಲ ಜೀವಿಗಳ ಮೂಲ ಜೀವಸೆಲೆ. ಅದರ ಮೇಲೆ ಎಲ್ಲ ಜೀವಿಗಳಿಗೂ ಸಮನಾದ ಹಕ್ಕಿದೆ. ಈ ನೈಸರ್ಗಿಕ ಸಂಪನ್ಮೂಲದ ಹಂಚಿಕೆಯಲ್ಲಿ ಯಾವುದೇ ಕಾರಣಕ್ಕೂ ತಾರತಮ್ಯ ಆಗಬಾರದು ಎನ್ನುವುದು ನಮ್ಮ ಪೂರ್ವಜರು ಹಾಕಿಕೊಟ್ಟ ಅಲಿಖಿತ ನಿಯಮ.

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ‘ರೈನ್‌ಬೊ ಡ್ರೈವ್’ ಬಡಾವಣೆಯಲ್ಲಿ ಕಳೆದ ಒಂದು ದಶಕದಿಂದ ನೀರಿನ ಸಂರಕ್ಷಣೆ ಮತ್ತು ನೀರಿನ ಹಂಚಿಕೆಯಲ್ಲಿ ಈ ನಿಯಮವನ್ನು ವ್ರತದಂತೆ ಪಾಲಿಸಲಾಗುತ್ತಿದೆ. ನಗರದಲ್ಲಿ ಜಲಕ್ಷಾಮ ಎದುರಾಗಿ, ಎಲ್ಲ ಕೊಳಾಯಿಗಳು ಒಣಗಿ ನಿಂತಾಗಲೂ ಈ ಬಡಾವಣೆಯಲ್ಲಿ ಈ ನಿಯಮ ಮಾತ್ರ ಬದಲಾಗಿಲ್ಲ.

ಇದೆಲ್ಲ ಹೇಗೆ ಸಾಧ್ಯ ಆಯ್ತು?

ಇದು ದಶಕದ ಹಿಂದಿನ ಕತೆ. ರೈನ್‌ಬೊ ಡ್ರೈವ್‌ ಬಡಾವಣೆಗೆ ಇನ್ನೂ ಕಾರ್ಪೊರೇಷನ್ ನೀರಿನ ಸಂಪರ್ಕ ಇರಲಿಲ್ಲ. ಆಗ ಎದುರಾದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಆರಂಭಿಸಿದರು ಇಲ್ಲಿ ನಿವಾಸಿಗಳು. ಆಗ ಹೊಳೆದದ್ದೇ ಮಳೆನೀರು ಸಂಗ್ರಹಿಸುವ ವಿಧಾನ. 2007ರಲ್ಲಿ ಆರಂಭವಾದ ಈ ಜಲಸಂರಕ್ಷಣೆ ಅಭಿಯಾನದ ಫಲವಾಗಿ ಇಂದು ಈ ಬಡಾವಣೆಯ ಪ್ರತಿ ಮನೆಯಲ್ಲೂ ಅಚ್ಚುಕಟ್ಟಾದ ಮಳೆನೀರು ಸಂಗ್ರಹ ವ್ಯವಸ್ಥೆ ಇದೆ. ಅಂದಿನಿಂದ ಒಂದೊಂದು ಮಳೆ ಹನಿಯೂ ವ್ಯರ್ಥವಾಗದೇ ಭೂಮಿಯ ಒಡಲು ಸೇರುತ್ತಿದೆ.

ಅಂದಾಜು 30 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ರೈನ್‌ಬೊ ಡ್ರೈವ್‌ ಬಡಾವಣೆಯಲ್ಲಿ 280 ಇಂಗುಬಾವಿಗಳಿವೆ. ‘ದೇಶದ ಬೇರೆಲ್ಲಿಯೂ ಇಷ್ಟು ಒತ್ತೊತ್ತಾಗಿ ಮಳೆನೀರು ಇಂಗುಗುಂಡಿಗಳು ನಿಮಗೆ ಕಾಣಸಿಗುವುದಿಲ್ಲ’ ಎನ್ನುತ್ತಾರೆ ಬಯೋಮ್–‌ ಎನ್ವಿರಾನ್‌ಮೆಂಟಲ್‌ ಸಲ್ಯೂಷನ್ಸ್‌ನ ಶುಭಾ ರಾಮಚಂದ್ರನ್‌. ಈ ಬಡಾವಣೆಯ ಬಹುತೇಕ ಮನೆಯಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿದ್ದು ಇದೇ ಸಂಸ್ಥೆ. ಸುಮಾರು ಹತ್ತು ವರ್ಷಗಳಿಂದ ಇಲ್ಲಿನ ನಿವಾಸಿಗಳೊಂದಿಗೆ ಸಂಸ್ಥೆಯ ಸಿಬ್ಬಂದಿ ಮತ್ತು ಶುಭಾ ನಿಕಟ ಸಂಪರ್ಕದಲ್ಲಿದ್ದಾರೆ. ಇದು ಜಲಸಂರಕ್ಷಣೆಗಾಗಿ ಬೆಸೆದುಕೊಂಡ ಸಂಬಂಧ.

ಅನುಷ್ಠಾನ ಸುಲಭದ್ದಾಗಿರಲಿಲ್ಲ   

‘ಇಂಥದೊಂದು ಸಮುದಾಯ ಆಧಾರಿತ ಯೋಜನೆ ಅನುಷ್ಠಾನ ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ಬಡಾವಣೆಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ತಂಡದ ರೀತಿ ಕೆಲಸ ಮಾಡಬೇಕಿತ್ತು. ನಿಜಕ್ಕೂ ಅದು ಸವಾಲಿನ ಕೆಲಸವಾಗಿತ್ತು. ಸಣ್ಣಪುಟ್ಟ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಜನರ ಸಹಭಾಗಿತ್ವ ಮತ್ತು ಸಹಕಾರ ಇಲ್ಲದೆ ಈ ಯೋಜನೆ ಯಶಸ್ಸು ಸಾಧ್ಯವಿರಲಿಲ್ಲ’ ಎಂದು ಶುಭಾ ಅವರು ಬಡಾವಣೆಯ ಮಳೆನೀರು ಕೊಯ್ಲು ಪಯಣದ ನೆನಪುಗಳನ್ನು ಬಿಚ್ಚಿಟ್ಟರು.

ಆಗ ಶುಭಾ ಮಾತಿಗೆ ಜೊತೆಯಾದವರು ರೈನ್‌ಬೊ ಡ್ರೈವ್‌ ನಿವೇಶನ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಕೆ.ಪಿ. ಸಿಂಗ್. ಈ ಬಡಾವಣೆಯ ಸಮುದಾಯ ಜಲಸಂರಕ್ಷಣೆ ಅಭಿಯಾನದ ಆರಂಭದ ದಿನದಿಂದಲೂ ಮುಂಚೂಣಿಯಲ್ಲಿದ್ದವರ ಪೈಕಿ ಸಿಂಗ್‌ ಕೂಡ ಒಬ್ಬರು.  

‘ನಮ್ಮ ಬಡಾವಣೆಯಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅನುಷ್ಠಾನ ಒಂದು ಸಾಮೂಹಿಕ ಮತ್ತು ಸಾಮಾಜಿಕ ಜವಾಬ್ದಾರಿ ಎಂಬ ಭಾವನೆ ಮೂಡಿಸುವುದು ನಮ್ಮ ಉದ್ದೇಶವಾಗಿತ್ತು. ಮನೆಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲು ತಕ್ಷಣಕ್ಕೆ ಹಣ ಪಾವತಿಸಲು ಸಾಧ್ಯವಾಗದ ಬಡಾವಣೆ ನಿವಾಸಿಗಳಿಂದ ಪೋಸ್ಟ್‌ ಡೇಟೆಡ್‌ ಚೆಕ್ ಪಡೆಯಲಾಯಿತು. ಜಾಗ ಇಲ್ಲದವರಿಗೆ ಮನೆಯ ಹೊರಗಡೆ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವ ಸೌಲಭ್ಯ ಮಾಡಿಕೊಡಲಾಯಿತು’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಂಡರು ಸಿಂಗ್.

ಸಂರಕ್ಷಣೆ ಮತ್ತು ಮರುಬಳಕೆ

ಮಳೆನೀರು ಕೊಯ್ಲು ಮತ್ತು ಜಲಮರುಪೂರಣ ರಚನೆಗಳನ್ನು ಮಾಡಿಸಿದರೂ, ಈ ಪ್ರದೇಶದ ಅಂತರ್ಜಲಮಟ್ಟ ಮೇಲೇರಲಿಲ್ಲ. 1,100 ಅಡಿ ಭೂಮಿ ಕೊರೆದರೂ ನೀರಿನ ಪಸೆ ಕಾಣಿಸಿಕೊಳ್ಳುತ್ತಿರಲಿಲ್ಲ. ಇದಕ್ಕೆ ಕಾರಣವೂ ಸ್ಪಷ್ಟವಾಗಿತ್ತು. ಜನರು ಎಷ್ಟು ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುತ್ತಿದ್ದರೋ, ಅದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಭೂಮಿಯಿಂದ ತೆಗೆದು ಬಳಸುತ್ತಿದ್ದರು. ಈ ಅಂತರ ಕಡಿಮೆ ಮಾಡಿ ಸಮತೋಲನ ಕಾಪಾಡುವುದು ಅಗತ್ಯವಿತ್ತು.

ಅದಕ್ಕಾಗಿಯೇ ಮೊದಲು ಪರಿಣಾಮಕಾರಿಯಾಗಿ ತ್ಯಾಜ್ಯನೀರು ಸಂಸ್ಕರಣೆ ಮತ್ತು ಮರುಬಳಕೆ ಹಾಗೂ ಬಳಸುವ ನೀರಿಗೆ ಕಡಿವಾಣ ಹಾಕಬೇಕು ಎಂಬ ತೀರ್ಮಾನ ತೆಗೆದುಕೊಂಡರು ಬಡಾವಣೆ ನಿವಾಸಿಗಳು. ಆದರೆ, ಈಗಾಗಲೇ ಬಡಾವಣೆಯಲ್ಲಿ ಎರಡು ಬೃಹತ್ ತ್ಯಾಜ್ಯನೀರು ಸಂಸ್ಕರಣಾ ಘಟಕಗಳಿದ್ದವು. ಅವುಗಳ ನಿರ್ವಹಣೆ ಬಲು ದುಬಾರಿಯಾಗಿತ್ತು. ‘ಮೊದಲು ಅವುಗಳನ್ನು ತೆಗೆದು ಕಡಿಮೆ ನಿರ್ವಹಣೆ, ಕಡಿಮೆ ಶಕ್ತಿ ಬೇಡುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಹೊಸದಾಗಿ ಸ್ಥಾಪಿಸಲು ನಿರ್ಧಾರ ತೆಗೆದುಕೊಂಡೆವು. ಅಂದಿನ ಸ್ಥಿತಿಯಲ್ಲಿ ನಮಗದು ಅನಿವಾರ್ಯವಾಗಿತ್ತು’ ಎನ್ನುತ್ತಾರೆ ಕೆ.ಪಿ. ಸಿಂಗ್‌.

‘ಫೈಟೊರಿಡ್‌ ಎಸ್‌ಟಿಪಿ’ ಮಾದರಿ

ತ್ಯಾಜ್ಯನೀರು ಸಂಸ್ಕರಣೆಗಾಗಿ ನ್ಯಾಷನಲ್‌ ಎನ್ವಿರಾನ್‌ಮೆಂಟಲ್ ಎಂಜಿನಿಯರಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್ (ಎನ್‌ಇಇಆರ್‌ಐ) ಸಿದ್ಧಪಡಿಸಿದ್ದ ಮಾದರಿ ಮತ್ತು ವಿನ್ಯಾಸಗಳು, ಬಡಾವಣೆಯವರ ಚಿಂತನೆಗೆ ಪೂರಕವಾಗಿತ್ತು. ಅದರಲ್ಲಿ ‘ಫೈಟೋರಿಡ್ ತ್ಯಾಜ್ಯನೀರು ಸಂಸ್ಕರಣಾ ಘಟಕ’ ಎಂಬ ಮಾದರಿ (ಸುಧಾರಿತ ಎಸ್‌ಟಿಪಿ ಘಟಕ) ಎಲ್ಲರಿಗೂ ಒಪ್ಪಿಗೆಯಾಯಿತು. ಇದರಲ್ಲಿದ್ದ ಜಲ್ಲಿ ಕಲ್ಲುಗಳ ಗ್ರಾವೆಲ್‌ ಫಿಲ್ಟರ್ ಮತ್ತು ಕ್ಲೋರಿನ್ ಅಂಶವನ್ನು‌ ಬೇರ್ಪಡಿಸಿ, ನೀರನ್ನು ಶುದ್ಧೀಕರಿಸುವ ಮೂರು ವಿಭಾಗಗಳುಳ್ಳ ಈ ಘಟಕದ ನಿರ್ವಹಣೆ ಕೂಡ ತುಂಬಾ ಸರಳವಾಗಿದೆ ಎನ್ನಿಸಿತು. ಈ ವಿಧಾನ ಅಳವಡಿಕೆಗೆ ಎಲ್ಲರೂ ಒಪ್ಪಿದರು.

ಮುಂದಿನ ಗುರಿ ನೀರು ಬಳಕೆಯಲ್ಲಿ ಮಿತವ್ಯಯ ಸಾಧಿಸುವುದು. ಅದಕ್ಕಾಗಿ ಕಾಲಕಾಲಕ್ಕೆ ನೀರಿನ ಶುಲ್ಕ ಪರಿಷ್ಕರಣೆ ಮತ್ತು ಬಳಕೆಯ ಮಿತಿಯನ್ನು ನಿಗದಿಪಡಿಸುವ ನಿರ್ಣಯವನ್ನು ಬಡಾವಣೆಯ ನಿವಾಸಿಗಳ ಸಭೆಯಲ್ಲಿ ಕೈಗೊಳ್ಳಲಾಯಿತು. ತಿಂಗಳಿಗೆ 25 ಸಾವಿರ ಲೀಟರ್‌ ನೀರು ಬಳಸಲು ಗರಿಷ್ಠ ಮಿತಿ ನಿಗದಿ. ‘ನಿಗದಿತ ಮಿತಿಗಿಂತ ಹೆಚ್ಚುವರಿಯಾಗಿ ನೀರು ಬಳಸಿದರೆ ಪ್ರತಿ ಸಾವಿರ ಲೀಟರ್‌ ನೀರಿನ ಮೇಲೆ ₹125 ದಂಡ ವಿಧಿಸುವ ನಿರ್ಧಾರ ಕೈಗೊಂಡರು. ಇದಾದ ನಂತರ ನೀರಿನ ಬಳಕೆಯಲ್ಲೂ ಗಣನೀಯ ಬದಲಾವಣೆ ಕಂಡುಬಂತು. ಆಗ ಪ್ರತಿ ಮನೆಯಲ್ಲಿ ಶುದ್ಧ ನೀರಿನ ಬಳಕೆ ತನ್ನಿಂದ ತಾನಾಗಿಯೇ ಕಡಿಮೆಯಾಯಿತು’ ಎಂದು ನೀರು ಉಳಿತಾಯಕ್ಕೆ ತೆಗೆದುಕೊಂಡ ಕಠಿಣ ಕ್ರಮಗಳನ್ನು ಸಿಂಗ್‌ ವಿವರಿಸಿದರು.

ಏರಿದ ಅಂತರ್ಜಲ ಮಟ್ಟ 

ಈ ಎಲ್ಲ ಕ್ರಮಗಳಿಂದಾಗಿ ಈಗ ಬಡಾವಣೆಯ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಸುಮಾರು 130 ಅಡಿಯಷ್ಟು ಏರಿಕೆಯಾಗಿದೆ. ಕಾಲೊನಿಯಲ್ಲಿದ್ದ ಎರಡು ಕೊಳವೆಬಾವಿಗಳು ಪ್ರತಿದಿನ 1.30 ಲಕ್ಷ ಲೀಟರ್ ನೀರು ನೀಡುವ ಸಾಮರ್ಥ್ಯ ಪಡೆದಿವೆ. ಸದ್ಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಲಾದ 80 ಸಾವಿರ ಲೀಟರ್ ನೀರನ್ನು ಬಡಾವಣೆಯ ಜನರು ಗಾರ್ಡನ್‌ ಮತ್ತು ಇತರ ಉದ್ದೇಶಗಳಿಗೆ ಬಳಸುತ್ತಿದ್ದಾರೆ. 

ಮಳೆನೀರು ಸಂಗ್ರಹ, ನೀರಿನ ಮಿತಬಳಕೆ, ತ್ಯಾಜ್ಯ ನೀರು ಸಂಸ್ಕರಣೆ, ಮಳೆನೀರು ಇಂಗುಗುಂಡಿ, ಜಲಮರುಪೂರಣ ಈ ಎಲ್ಲವನ್ನೂ ಅಳವಡಿಸಿಕೊಂಡಿರುವ ರೈನ್‌ಬೋ ಡ್ರೈವ್‌ ಬಡಾವಣೆ ನಿವಾಸಿಗಳು ಅನೇಕ ವರ್ಷಗಳಿಂದ ಟ್ಯಾಂಕರ್‌ ನೀರಿನ ಬಳಕೆ ನಿಲ್ಲಿಸಿದ್ದಾರೆ. ಕಡು ಬೇಸಿಗೆಯಲ್ಲೂ ಟ್ಯಾಂಕರ್‌ ನೀರಿಗೆ ಮೊರೆ ಹೋಗುವ ಪ್ರಮೇಯ ಬಂದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿಯ ನಿವಾಸಿಗಳು ಜಲ ಸ್ವಾವಲಂಬನೆ ಸಾಧಿಸಿದ್ದಾರೆ!

ಮಳೆ ನೀರು ಸಂಗ್ರಹ– ಕುರಿತ ಹೆಚ್ಚಿನ ಮಾಹಿತಿಗೆ ಬಯೋಮ್ ಕಚೇರಿ : 080– 4167 2790

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು