ಬುಧವಾರ, ಡಿಸೆಂಬರ್ 8, 2021
28 °C
ಪ್ರಕೃತಿ ಮಡಿಲು

PV Web Exclusive | ಪ್ರಕೃತಿ ಮಡಿಲು | ಟೀಚರ್‌ ಹೇಳಿದರಷ್ಟೇ ಕೇಳೋದು... !

ಆರ್. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ನೀರು ಚೆಲ್ಲಬೇಡ ಮಗು.. ಗಿಡದ ಎಲೆ ಕೀಳಬೇಡ ಪುಟ್ಟ... ಹೀಗೆಂದು ಪೋಷಕರು ಸಾವಿರ ಬಾರಿ ಹೇಳಿದರೂ ಉಹೂಂ... ಮಕ್ಕಳು ಕೇಳುವುದೇ ಇಲ್ಲ. ಅದೇ ಅವರ ಟೀಚರ್ ನೀರು, ಗಿಡ-ಮರದ ಮಹತ್ವ ಹೇಳಿಕೊಟ್ಟ ಮೇಲೆ ನೋಡಿ.... 'ಅಷ್ಟೊಂದು ನೀರು ಏಕೆ, ಸ್ವಲ್ಪ ತೆಗೆದುಕೊಳ್ಳಿ. ನೀರು ಚೆಲ್ಲಬೇಡಿ, ಗಿಡ-ಮರ ಕಡಿಯಬಾರದು. ಅವು ನಮಗೆ ಉಸಿರಾಡಲು ಆಕ್ಸಿಜನ್ ಕೊಡುತ್ತವೆ....' ಎಂದು ಪೋಷಕರಿಗೇ ಬೋಧಕರಾಗಿಬಿಡುತ್ತಾರೆ. ಅದೇ ಶಿಕ್ಷಕರ ಮಾತಿನ ಶಕ್ತಿ...

ಗಿಡದ ಎಲೆ ನೋಡಿ, ಅದರ ಕಾಂಡ ನೋಡಿ.. ನಾಳೆ ಅದರ ರಚನೆ ಬಗ್ಗೆ ನನಗೆ ಹೇಳಬೇಕು... ಇಂತಹ ಸಾಮಾನ್ಯ ಕೆಲಸವನ್ನು ಶಿಕ್ಷಕರು ಮಕ್ಕಳಿಗೆ ಹೇಳಿದರೆ ಸಾಕು ನೋಡಿ, ಮುಗಿಯಿತು... ಎಲೆ, ಕಾಂಡ, ಸಸಿ–ಗಿಡಗಳು ಇರುವೆಲ್ಲಿಗೆ ಮುಗ್ಧ ಹಾಗೂ ಯುವ ಮನಸ್ಸುಗಳು ಓಡಿಹೋಗುತ್ತವೆ. ಅಷ್ಟೇ ಅಲ್ಲ, ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಮೂಡುತ್ತದೆ. ಇನ್ನಿಲ್ಲದಂತೆ ಪ್ರಶ್ನೆಗಳನ್ನು ಪೋಷಕರನ್ನೂ ಕೇಳಿ, ನಾಳೆ ಶಿಕ್ಷಕರಿಗೆ ಅದನ್ನು ತೋರಿಸಲು, ಕಂಡಿದ್ದನ್ನೆಲ್ಲ ಹೇಳಲು, ಮೂಡಿದ ಪ್ರಶ್ನೆಗಳನ್ನೆಲ್ಲ ಕೇಳಲು ಎಲ್ಲ ರೀತಿಯ ಸಿದ್ಧತೆಯನ್ನು ಮಕ್ಕಳು ಮಾಡಿಕೊಳ್ಳುತ್ತಾರೆ. ಇದು ಶಿಕ್ಷಕರ ಮಾತಿಗಿರುವ ತಾಕತ್ತು... ನಿಜ, ಮಕ್ಕಳಿಗೆ ಯಾವುದರಲ್ಲಾದರೂ ಆಸಕ್ತಿ ಮೂಡಬೇಕಾದರೆ ಟೀಚರ್ರೇ ಹೇಳಬೇಕು. ಅವರು ಹೇಳಿದರಷ್ಟೇ ಕೇಳೋದು, ಅಲ್ಲವೇ? 

ಪಠ್ಯ ಅಷ್ಟೇ ಅಲ್ಲ, ಸಾಮಾಜಿಕ ಜವಾಬ್ದಾರಿ ಮೂಡಿಸುವಲ್ಲಿಯೂ ಶಿಕ್ಷಕರ ಪಾತ್ರವೇ ಪ್ರಮುಖ.  ಎಳೆಯ ಮನಸ್ಸುಗಳಲ್ಲಿ ಪರಿಸರ ಬಗ್ಗೆ ಕಾಳಜಿ ಮೂಡಿಸುವ ಬೀಜವನ್ನು ಶಿಕ್ಷಕರೇ ಬಿತ್ತಬೇಕು. ಅವರ ಮಾತುಗಳು ಹಾಗೂ ಪರಿಸರವನ್ನು ತೋರಿಸುವ ಬಗೆಯಿಂದಲೇ ಮಕ್ಕಳು ಅದರತ್ತ ಆಸಕ್ತಿ ಮೂಡಿಸಿಕೊಳ್ಳುವ ಜೊತಗೆ ಕಾಳಜಿಯನ್ನೂ ಹೊಂದುತ್ತಾರೆ. ಮೊದಲು ಟೀಚರ್ ಮಾತು ಎಂದು ಪಾಲಿಸುವವರು, ಮುಂದೆ ಅದೇ ಹವ್ಯಾಸ, ಅಭ್ಯಾಸವೂ ಆಗಿಹೋಗುತ್ತದೆ. ಇಂತಹ ಹೆಗಲು ಮೃದುವಾಗಿದ್ದಾಗಲೇ ಸಾಮಾಜಿಕ ಜವಾಬ್ದಾರಿಯನ್ನು ಹೊರುವ ತಾಲೀಮು ನೀಡಿ, ಉತ್ತೇಜಿಸುವುದೇ ಶಿಕ್ಷಕ. ಶಿಕ್ಷಕರು ಸಣ್ಣ-ಪುಟ್ಟ ಅಧ್ಯಯನಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದರೂ ನಮ್ಮ ಪರಿಸರದ ಅವನತಿ ಕಡಿಮೆಯಾಗುತ್ತದೆ.

ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಪರಿಸರ ವಿಷಯದಲ್ಲೇ  ಪರಿಣತಿ ಹೊಂದಿ, ಅದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಯಶ ಸಾಧಿಸಿದ ಶಿಕ್ಷಕರ ಸಾಧನೆಯನ್ನು ಇಲ್ಲಿ ವಿವರಿಸಲಾಗುತ್ತಿದೆ. ತುಮಕೂರಿನಲ್ಲಿರುವ ಶಿಕ್ಷಕರಾದ ರಾಮಕೃಷ್ಣಪ್ಪ ಹಾಗೂ ಬಿ.ವಿ. ಗುಂಡಪ್ಪ ಅವರ ಈ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾನ್ಯತೆ ಹೊಂದಿರುವ ಸಿ.ಪಿ.ಆರ್. ಪರಿಸರ ಶಿಕ್ಷಣ ಕೇಂದ್ರ (C. P. R. Environmental Education Centre (CPREEC) ವತಿಯಿಂದ ‘ಗ್ರೀನ್ ಟೀಚರ್’ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ಸಾಧನೆ ಮತ್ತಷ್ಟು ಶಿಕ್ಷಕರನ್ನು ಉತ್ತೇಜಿಸುವ ಕಾರ್ಯವೂ ಹೌದು.  ಶಿಕ್ಷಕರು ಅತ್ಯಂತ ಸರಳ ಮಾರ್ಗದಲ್ಲಿ ಮಕ್ಕಳಿಗೆ ಹೇಗೆ ಪರಿಸರದ ಶಿಕ್ಷಣ, ಅರಿವು ಮೂಡಿಸಬಹುದು ಎಂಬುದನ್ನೂ ಇಲ್ಲಿ ವಿವರಿಸಿದ್ದಾರೆ.

ರಾಮಕೃಷ್ಣಪ್ಪ

37 ವರ್ಷ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದವರು. ಸಂತಸ ಕಲಿಕೆ (joy of learning), ಪರಿಸರ ಪಯಣ (ecological activities), ಖಗೋಳ ಯಾನ (cosmic voyage) ಮುಂತಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡಿ ಯಶಸ್ಸು ಕಂಡ ತುಮಕೂರು ವಿಜ್ಞಾನ ಕೇಂದ್ರದ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಖ್ಯಾತ ವಿಜ್ಞಾನಿ ಪ್ರೊ. ಮಾಧವ ಗಾಡ್ಗಳ್‌ ಅವರ ಜೊತೆ ಜೀವ ವೈವಿಧ್ಯ ದಾಖಲಾತಿಯನ್ನು ಮಾಡಿದ್ದಾರೆ.


ರಾಮಕೃಷ್ಣಪ್ಪ

ತುಮಕೂರಿನ ವೆಂಕಟಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಹ ಶಿಕ್ಷಕರಾಗಿದ್ದಾಗ ಅವರ ಕೆಲಸವನ್ನು ಗುರುತಿಸಿ ಸಿ.ಪಿ.ಆರ್. ಪರಿಸರ ಶಿಕ್ಷಣ ಕೇಂದ್ರ ವತಿಯಿಂದ 'ಹಸಿರು ಶಿಕ್ಷಕ ಪ್ರಶಸ್ತಿ' ಯನ್ನು 2005ರಲ್ಲಿ  ನೀಡಲಾಗಿದೆ. ಈ ಪ್ರಶಸ್ತಿಯಿಂದ ಬಂದ ಹಣವನ್ನು ಠೇವಣಿ ಇಟ್ಟು ಅದರಲ್ಲಿ ಬಂದ ಹಣದಿಂದ ಪ್ರತಿ ವರ್ಷ  ಒಬ್ಬ ಶಿಕ್ಷಕರಿಗೆ ಪ್ರಶಸ್ತಿ ನೀಡುತ್ತಿದ್ದಾರೆ. ನಿವೃತ್ತರಾದ ನಂತರ, ಸಹಜ ಬೇಸಾಯ, ಸರ್ಕಾರಿ ಶಾಲೆಗಳ ಸಬಲೀಕರಣ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ತಮ್ಮಡಿಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ರಾಜಸ್ಥಾನದಲ್ಲಿ ಡಾ. ರಾಜೇಂದ್ರ ಸಿಂಗ್ ಮಾಡಿದಂತೆ ಜೋಹಾಡ್‌ಗಳನ್ನು ನಿರ್ಮಾಣ ಮಾಡಿ ಮಳೆ ನೀರು ಇಂಗಿಸುವ ಮತ್ತು ಬೆಟ್ಟವನ್ನು ಹಸಿರಾಗಿರುವ ಪ್ರಯತ್ನದಲ್ಲಿದ್ದಾರೆ. ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷೆ ಎನ್. ಇಂದಿರಮ್ಮ, ಅಲ್ಲಿನ ಸ್ವಾಮೀಜಿ, ಸಹಜ ಬೇಸಾಯ ಶಾಲೆಯ ಸಂಚಾಲಕರಾದ ಸಿ. ಯತಿರಾಜು ಮತ್ತು ಡಾ. ಮಂಜುನಾಥ್ (ಕೃಷಿ ವಿಜ್ಞಾನಿ) ಅವರ ಸಹಕಾರದೊಂದಿಗೆ ಪರಿಸರವನ್ನು ಹಸಿರಾಗಿಡುವ ಕೆಲಸ ಮಾಡುತ್ತಿದ್ದಾರೆ.

ವಿಜ್ಞಾನ ಶಿಕ್ಷಕರು ಇತರ ಶಿಕ್ಷಕರಿಗಿಂತ ಭಿನ್ನ...

ವಿಜ್ಞಾನ ಶಿಕ್ಷಕರು ಇತರ ಶಿಕ್ಷಕರ ವಿಧಾನ ಹಾಗೂ ಆಲೋಚನೆಯಲ್ಲಿ ಭಿನ್ನವಾಗಿರುತ್ತಾನೆ ಎನ್ನುತ್ತಾರೆ ರಾಮಕೃಷ್ಣಪ್ಪ. ಅವರ ಪ್ರಕಾರ....

ವಿಜ್ಞಾನ ಶಿಕ್ಷಕರಿಗೆ ಅದರಲ್ಲೂ ಜೀವ ವಿಜ್ಞಾನ ಶಿಕ್ಷಕರಿಗೆ ಕಲಿಸುವ ಅವಕಾಶಗಳು ಹೇರಳ ಮತ್ತು ಸ್ವಯಂ ಕಲಿಕೆಗೆ ಸಾಧ್ಯತೆ ಹೆಚ್ಚು. ಪರಿಸರ ಶಿಕ್ಷಣದಲ್ಲಂತೂ ಜೀವ ವಿಜ್ಞಾನ ಶಿಕ್ಷಕ ಕೇವಲ ಬೋಧಕ ಅಲ್ಲವೇ ಅಲ್ಲ. ಆತ ಅನುವುದಾರ (Facilitator). ಅಂದರೆ ಕಲಿಕೆಗೆ ಮಾರ್ಗದರ್ಶಕ. ಮಕ್ಕಳಿಗೆ ನೋಡುವ, ಕೇಳುವ, ಮುಟ್ಟುವ, ಪರಿಶೀಲಿಸುವ, ತೀರ್ಮಾನಿಸುವ ಮುಂತಾದ ಕಲಿಕಾ ತಂತ್ರಗಳ ಮೂಲಕ ಕಲಿಕೆಯಲು ಅನುವು ಮಾಡಿಕೊಡುತ್ತಾನೆ.

ಜೀವ ವಿಜ್ಞಾನ ಶಿಕ್ಷಕ ತರಗತಿ ಒಳಗೆ ಕಲಿಸುವುದಕ್ಕಿಂತ ಹೆಚ್ಚು ತರಗತಿ ಕೊಠಡಿ ಹೊರಗೆ ಪರಿಣಾಮಕಾರಿಯಾಗಿ ಕಲಿಸಬಹುದು. ಪರಿಸರದ ಅರ್ಥ/ ವ್ಯಾಖ್ಯೆಯನ್ನು ಕೊಠಡಿ ಒಳಗೆ ಕಂಠಶೋಷಣೆ ಮಾಡುವುದರ ಬದಲು, ಹೊರಗೆ ಮಕ್ಕಳನ್ನು ಕರೆತಂದು ತಾವು ಕಾಣುವುದನ್ನೆಲ್ಲ ಪಟ್ಟಿ ಮಾಡಲು ಹೇಳಿ, ಪಟ್ಟಿಯನ್ನು ಕ್ರೋಡೀಕರಿಸಲು ಹೇಳಿದರೆ ಮಕ್ಕಳಿಗೆ ಖುಷಿಯಾಗುತ್ತೆ.

ಸಸ್ಯ ಭಾಗಗಳನ್ನು ಕಪ್ಪು ಹಲಗೆಯ ಮೇಲೆ ಚಿತ್ರ ಬರೆದು ವಿವರಿಸುವುದರ ಬದಲು ಸಸ್ಯಗಳ ಬಳಿಯಲ್ಲಿಯೇ ಮಕ್ಕಳನ್ನು ನಿಲ್ಲಿಸಿ, ಅದರ ಭಾಗಗಳನ್ನು ಹೇಳಿ ಎಂದರೆ ಅವರ ಕಲಿಕಾ ಗ್ರಹಿಕೆ ಹೆಚ್ಚಾಗುತ್ತದೆ.

ಪರಿಸರ ಶಿಕ್ಷಣದಲ್ಲಿ ಶಿಕ್ಷಕರು ತರಕಾರಿ, ಹೂವುಗಳು, ಹಣ್ಣುಗಳು, ಕಾಳುಗಳು ಸೇರಿದಂತೆ ಅನೇಕ ವಸ್ತುಗಳನ್ನು ಸಂಗ್ರಹಿಸಿ ತರಲು ಹೇಳಿ- ಕಲಿಸಬಹುದು.

ಪರಿಸರ ಶಿಕ್ಷಕರು ಮಕ್ಕಳಿಗೆ ಕ್ಷೇತ್ರ ಭೇಟಿಗಳಿಗೆ ಅವಕಾಶ ಕಲ್ಪಿಸಿದರೆ ಪರಿಣಾಮಕಾರಿ. ಹೊಲ, ತೋಟ, ಗುಂಡುತೋಪು, ಕೆರೆ, ಗೋಕಟ್ಟೆ, ಮಾರುಕಟ್ಟೆ, ಅಂಗಡಿಗಳಿಗೆ ಕರೆದೊಯ್ಯಬಹುದು.

ಪರಿಸರ ಶಿಕ್ಷಕಣದಲ್ಲಿ ಶಿಕ್ಷಕ ಅನೇಕ ಚಿಕ್ಕ ಅಧ್ಯಯನಗಳನ್ನು ಮಾಡಿಸಿ, ಕಲಿಕೆಗೆ ಜೀವಂತಿಕೆ ಕೊಡಬಹುದು. ಉದಾಹರಣೆಗೆ; ನೀರಿರುವ ಕೊಳದ ಅಧ್ಯಯನ; ಒಂದು ಪುಟ್ಟ ಕಾಡಿನ ಚಾರಣ; ಒಂದು ಮರದ ಅಧ್ಯಯನ.

ಅಧ್ಯಯನವನ್ನು ಕ್ರಮಬದ್ಧವಾಗಿ ಮಾಡಿಸಬೇಕು. ‘ವೈಜ್ಞಾನಿಕ ವಿಧಾನ’ವನ್ನು ಮಕ್ಕಳಿಗೆ ಕಲಿಸಬೇಕು. ಅಂದರೆ, ‘ವಿಜ್ಞಾನ ಮನಸ್ಸನ್ನು’ ಹುಟ್ಟು ಹಾಕುವ ಕೆಲಸ ಮಾಡಿ, ವಿಜ್ಞಾನಿಗಳ ಸಂತತಿ ಬೆಳಸುವುದು. ಉದಾಹರಣೆಗೆ; ವಿದ್ಯಾರ್ಥಿಗಳ ನಾಲ್ಕು ಗುಂಪು ರಚಿಸುವುದು. 1ನೇ ತಂಡ- ಮರದ ಜೀವ ವೈವಿಧ್ಯತೆಯ ವಿಷಯಗಳನ್ನು ಪಟ್ಟಿ (ಎಲೆ, ಹೂ..) ಮಾಡುವುದು. 2ನೇ ತಂಡ- ಗಣತಾತ್ಮಕ ಅಂಶಗಳನ್ನು ಪಟ್ಟಿ (ಎತ್ತರ, ಸುತ್ತಳತೆ) ಮಾಡುವುದು. 3ನೇ ತಂಡ- ದೂರದಲ್ಲಿ ಕುಳಿತು ಮರದ ಚಿತ್ರ ಬಿಡಿಸುವುದು. 4ನೇ ತಂಡ- ಮರದ ಬಗ್ಗೆ ಒಂದು ಸಣ್ಣ ಕತೆ/ಕವನ ಬರೆಯಲಿ. 30 ನಿಮಿಷ ಸಾಕು, 10 ನಿಮಿಷ ಮಾತುಕತೆ. 40 ನಿಮಿಷದ ಅವಧಿಯಲ್ಲಿ ಅಧ್ಯಯನ ಮುಕ್ತಾಯ.

ಶಿಕ್ಷಕ ‘ಪರಿಸರ ಶಿಕ್ಷಣ’ದಲ್ಲಿ ‘ತಾನು ಮತ್ತು ತನ್ನ ಪರಿಸರ’ ಬಗ್ಗೆ ಮಕ್ಕಳಿಗೆ ಚಟುವಟಿಕೆಗಳ ಮೂಲಕ ಎಚ್ಚರ ನೀಡುವುದು. ತಾನು- ತನ್ನ ದೇಹದ ಪರಿಚಯ; ತನ್ನ ಕುಟುಂಬದ ಸಂಬಂಧಗಳು. ತನ್ನ ಪರಿಸರ- ತನ್ನ ಮನೆ; ತನ್ನ ಹೊಲ/ತೋಟ; ತನ್ನ ಶಾಲೆ; ತನ್ನ ಊರು; ತನ್ನೂರಿನ ಕೆರೆ/ ಕಾಡು.. ಇವುಗಳ ಪರಿಚಯ ಮಾಡಿಕೊಡುವುದರಿಂದ ಮಕ್ಕಳಿಗೆ ಪರಿಸರ ಪ್ರೀತಿ, ತನ್ನೂರಿನ ಬಗ್ಗೆ ಅಭಿಮಾನ ಬೆಳೆಯುತ್ತದೆ.

ಶಿಕ್ಷಕರು ‘ವರ್ಷಾವಧಿಯಲ್ಲಿ’  ಓಝೋನ್ ದಿನ, ಪರಿಸರ ದಿನ, ಆಹಾರ ದಿನ, ಭೂಮಿ ದಿನ, ಹೊಗೆ ರಹಿತ ದಿನ... ಇತ್ಯಾದಿ ದಿನಗಳ ಸಂದರ್ಭದಲ್ಲಿ ಮಕ್ಕಳಲ್ಲಿ ಉದಾಹರಣೆಯೊಂದಿಗೆ ಅರಿವು ಮೂಡಿಸಬೇಕು.

ಪರಿಸರ ಶಿಕ್ಷಣದಲ್ಲಿ ಶಿಕ್ಷಕರು ನೈಸರ್ಗಿಕ ಅನಾಹುತಗಳ ಬಗ್ಗೆ ಮಾತನಾಡುತ್ತಾ, ಪರಿಸರ ಸಂರಕ್ಷಣೆ ಮಾಡಲು ಪ್ರೇರೇಪಿಸುತ್ತಾನೆ.  ಉದಾಹರಣೆಗೆ; ಪ್ರವಾಹ, ಬರ, ಸುನಾಮಿ, ಕಾಡ್ಗಿಚ್ಚು ಇತ್ಯಾದಿ.

ಶಿಕ್ಷಕರು ಅಂತಿಮವಾಗಿ ಪರಿಸರ ಶಿಕ್ಷಣದಲ್ಲಿ ಪರಿಸರ ಪೂರಕ ಜೀವನ ಕಟ್ಟಿಕೊಳ್ಳಲು ಮಾರ್ಗದರ್ಶಕನಾಗಿರುತ್ತಾನೆ. ನೀರು, ಕಾಗದ, ಉಡುಪುಗಳ ಮಿತ ಬಳಕೆ. ಪ್ಲಾಸ್ಟಿಕ್ ಅನ್ನು ವಿವೇಚನೆಯಿಂದ ಬಳಸುವ ಅರಿವನ್ನು ಮಕ್ಕಳಲ್ಲಿ ಬೆಳೆಸಿ, ಅನುಷ್ಠಾನಗೊಳಿಸುವಲ್ಲಿ ಪರಿಸರ ಶಿಕ್ಷಕ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಾನೆ.


ಮಕ್ಕಳಿಗೆ ಪರಿಸರದ ಶಿಕ್ಷಣ ನೀಡುತ್ತಿರುವ ಶಿಕ್ಷಕ ಬಿ.ವಿ. ಗುಂಡಪ್ಪ

ಬಿ.ವಿ. ಗುಂಡಪ್ಪ

ಸುಮಾರು 28 ವರ್ಷಗಳಿಂದ ಪರಿಸರ ಶಿಕ್ಷಣದಲ್ಲಿ ಸಾವಿರಾರು ಮಕ್ಕಳಿಗೆ ಅರಿವು ಮೂಡಿಸುತ್ತಿದ್ದಾರೆ ಬಿ.ವಿ. ಗುಂಡಪ್ಪ. ಅವರು ತುಮಕೂರು ಜಿಲ್ಲೆಯ ನಾಗವಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಹ ಶಿಕ್ಷಕರಾಗಿದ್ದಾಗ 2011ರಲ್ಲಿ ಇವರಿಗೆ ಸಿ.ಪಿ.ಆರ್. ಪರಿಸರ ಶಿಕ್ಷಣ ಕೇಂದ್ರ ವತಿಯಿಂದ 'ಹಸಿರು ಶಿಕ್ಷಕ ಪ್ರಶಸ್ತಿ'ಯನ್ನು ನೀಡಲಾಗಿದೆ. ಇದೀಗ, ತುಮಕೂರಿನ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರದಲ್ಲಿ ಉಪ-ಪ್ರಾಂಶುಪಾಲರಾಗಿದ್ದಾರೆ.

ಪರಿಸರದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಹಣ ಅಗತ್ಯ ಇಲ್ಲ. ಸಮಯ ಮಾಡಿಕೊಳ್ಳಬೇಕಾಗಿಯೂ ಇಲ್ಲ. ಶನಿವಾರ, ಭಾನುವಾರ ಹಾಗೂ ರಜಾದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮನೆಯಲ್ಲಿದ್ದು ವಾಟ್ಸ್ ಆ್ಯಪ್, ಫೇಸ್ ಬುಕ್ , ಟಿ.ವಿ. ಎಂದು ಕಾಲಹರಣ ಮಾಡುವ ಬದಲು ಮಕ್ಕಳನ್ನು ಕ್ಷೇತ್ರ ಅಧ್ಯಯನಕ್ಕೆ ಕರೆದೊಯ್ಯಬೇಕು. ವಿದ್ಯಾರ್ಥಿಗಳಿಗೆ ಅದನ್ನು ಮನದಟ್ಟು ಮಾಡಿಕೊಡಬೇಕೆಂಬ ಕಾಳಜಿ ಹಾಗೂ ಗುರಿ ಶಿಕ್ಷಕರಲ್ಲಿ ಇದ್ದರೆ ಸಾಕು...

...ತಮ್ಮ ಶಾಲೆಯಷ್ಟೇ ಅಲ್ಲ, ಕರೆದೆಡೆಗೆ ಹೋಗಿ ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು, ಮಾಹಿತಿ, ಉತ್ತೇಜನ ನೀಡುವ ಹಿರಿಯ ಶಿಕ್ಷಕ  ಜಿ.ವಿ. ಗುಂಡಪ್ಪ ಅವರ ಮಾತಿದು.

ಅವರ ಪ್ರಕಾರ... 

ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಶಿಕ್ಷಕರಿಗೆ ಸಿಗುವಷ್ಟು ಅವಕಾಶ ಬೇರೆ ಯಾರಿಗೂ ಸಿಗುವುದಿಲ್ಲ. ಏಕೆಂದರೆ, ಶಿಕ್ಷಕರ ಕೈಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿರುತ್ತಾರೆ. ಅವರು ಮುಗ್ಧಮನಸ್ಸಿನವರಾಗಿರುತ್ತಾರೆ. ಈ ಸಂದರ್ಭದಲ್ಲಿ ನಾವು ಯಾವ ರೀತಿ ಮಾರ್ಗದರ್ಶನ ಮಾಡುತ್ತೇವೋ ಅದೇ ರೀತಿ ಅವರು ಬೆಳೆಯುತ್ತಾ ಹೋಗುತ್ತಾರೆ. ಈ ವಯಸ್ಸಿನ ಮಕ್ಕಳು ಶಿಕ್ಷಕರ ಮಾತನ್ನು ಕೇಳುತ್ತಾರೆ. ಕಾಲೇಜಿಗೆ ಹೋದ ಮೇಲೆ ಅವರ ಮಾನಸಿಕ ಸ್ಥಿತಿ ಬೇರೆಯಾಗುತ್ತದೆ. 5ರಿಂದ 10ನೇ ತರಗತಿವರೆಗಿನ ಮಕ್ಕಳಲ್ಲಿ ಪರಿಸರ ಬಗ್ಗೆ ಕಾಳಜಿ, ಅರಿವು ಮೂಡಿಸಿದರೆ ಅವರು ತಮ್ಮ ಸುತ್ತಲಿನ ಜನರನ್ನೂ ಪ್ರೀತಿಸುತ್ತಾರೆ. ಪ್ರಾಣಿ, ಸಸ್ಯ, ಕೀಟ, ಮಣ್ಣು, ನೀರು ಹೀಗೆ ಎಲ್ಲವನ್ನೂ ಪ್ರೀತಿಸಲು ಮತ್ತು ಅನುಕರಣೆ ಮಾಡಲು ಅವರು ಉತ್ಸುಕರಾಗಿರುತ್ತಾರೆ.

ದಟ್ಟ ಕಾಡಿಗೇ ಹೋಗಬೇಕಿಲ್ಲ...

ಮಕ್ಕಳನ್ನು ತರಗತಿಯಿಂದ ಹೊರಗೆ ಕರೆದುಕೊಂಡು ಬಂದು, ಅವರಿಗೆ ಬಾಹ್ಯ ಪ್ರಪಂಚವನ್ನು ತೋರಿಸಿದರೆ, ಅವರಲ್ಲಿ ಮೂಡುವ ಕುತೂಹಲ, ಉಂಟಾಗುವ ಆನಂದಕ್ಕೆ ಸಾಟಿಯೇ ಇಲ್ಲ. ತರಗತಿ ಕೊಠಡಿಯೊಳಗೆ ಪಾಠ ಹೇಳುವಾಗ ಅಷ್ಟೊಂದು ಸ್ವಾರಸ್ಯ ಇರುವುದಿಲ್ಲ. ಫೀಲ್ಡ್‌ನಲ್ಲಿ ಅಂದರೆ ಕ್ಷೇತ್ರ ಅಧ್ಯಯನಕ್ಕೆ ಕರೆದೊಯ್ದರೆ; ಉದಾಹರಣೆಗೆ ಒಂದು ಕೆರೆಗೆ ಕರೆದುಕೊಂಡು ಹೋಗಿ ಅಲ್ಲಿರುವ ಕಪ್ಪೆಗಳು, ಮೀನುಗಳು, ಜಲಚರ ಜೀವಿಗಳನ್ನು ತೋರಿಸಿದರೆ ಅವರಿಗೆ ಆನಂದವಾಗುತ್ತದೆ. ಗಿಡ-ಮರಗಳಿರುವ ಬೇಲಿಗೆ ಕರೆದುಕೊಂಡು ಹೋದರೆ ಪಕ್ಷಿಗಳನ್ನು ತೋರಿಸಿದರೆ, ಅವುಗಳ ಹಾರಾಟ, ಬಣ್ಣದಿಂದ ಅವರು ಪ್ರೇರಿತರಾಗಿರುತ್ತಾರೆ. ಪರಿಸರ ಅಧ್ಯಯನ ಎಂದರೆ ದಟ್ಟ ಕಾಡಿಗೇ ಕರೆದುಕೊಂಡು ಹೋಗಬೇಕಾಗಿಲ್ಲ. ಒಂದು ಕೆರೆ, ಒಂದು ಮರದ ಹತ್ತಿರ ಕರೆದುಕೊಂಡು ಹೋಗಬಹುದು. ಅರಳಿಮರ, ಆಲದ ಮರದ ಹತ್ತಿರ ಕರೆದೊಯ್ದು ಅಲ್ಲಿಗೆ ಬರುವ ಪಕ್ಷಿಗಳು, ಮರದ ಕಾಂಡದಲ್ಲಿರುವ ಇರುವೆಗಳು, ಜೇಡಗಳನ್ನು ತೋರಿಸಬೇಕು. ಇದರಿಂದ ಮಕ್ಕಳು ಹೆಚ್ಚು ಸ್ಫೂರ್ತಿದಾಯಕರಾಗುತ್ತಾರೆ. ಸುತ್ತಲಿನ ತೋಟ, ಹೊಲಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಪರಿಸರದ ಬಗ್ಗೆ ಅರಿವು ಮೂಡಿಸಬಹುದು. ತರಗತಿಯ ಬೋಧನೆಗಿಂತಲೂ ಕ್ಷೇತ್ರ ಅಧ್ಯಯನಕ್ಕೆ ಹೆಚ್ಚು ಒತ್ತು ಅಗತ್ಯ.  ಶಿಕ್ಷಕರು ಇಂತಹ ಸಣ್ಣ-ಪುಟ್ಟ ಅಧ್ಯಯನಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದರೂ ನಮ್ಮ ಪರಿಸರದ ಅವನತಿ ಕಡಿಮೆಯಾಗುತ್ತದೆ. ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲೇ ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಶಿಕ್ಷಕರ ಆದ್ಯ ಕರ್ತವ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು