ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಕಾಳ್ಗಿಚ್ಚಿನ ಕೆನ್ನಾಲಿಗೆ; ಕಾಡಿನ ಬೆಂಕಿಯ ಬಗ್ಗೆ ಇರಲಿ ಎಚ್ಚರ

Last Updated 7 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೇಸಿಗೆ ಸಮೀಪಿಸಿತು ಎಂದರೆ ಹತ್ತು ಹಲವು ಚಿಂತೆಗಳ ಜತೆಗೆ ಕಾಳ್ಗಿಚ್ಚಿನ ಚಿಂತೆಯೂ ಜಗತ್ತನ್ನು ಕಾಡಲು ಆರಂಭಿಸುತ್ತದೆ. ಕೆಲವು ಸಂದರ್ಭದಲ್ಲಿ ಕಾಳ್ಗಿಚ್ಚು ಒಂದು ನೈಸರ್ಗಿಕ ಕ್ರಿಯೆ ಆಗಿದ್ದರೂ, ಒಂದು ಹಂತವನ್ನು ಮೀರಿದರೆ ಅದರ ಪರಿಣಾಮ ಭೀಕರವಾಗುತ್ತದೆ. ಇದರಲ್ಲಿ ಮಾನವನ ಪಾಲೂ ಸಾಕಷ್ಟು ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತನ್ನು ಕಾಡುತ್ತಿರುವ ಪ್ರಮುಖ ಆತಂಕಗಳಲ್ಲಿ ಅದು ಒಂದೆನಿಸಿದೆ. 2019–20ರಲ್ಲಿ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಳ್ಗಿಚ್ಚಿನ ಭೀಕರತೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಕಳೆದ 16 ವರ್ಷಗಳಲ್ಲಿ ಉಪಗ್ರಹದ ಮೂಲಕ ತೆಗೆದಿರುವ ಚಿತ್ರಗಳನ್ನು ವಿಶ್ಲೇಷಿಸಿದಾಗ, ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷವೂ ಸುಮಾರು 340 ಕೋಟಿ ಹೆಕ್ಟೇರ್‌ನಷ್ಟು ಅರಣ್ಯವು ಬೆಂಕಿಗೆ ಆಹುತಿಯಾಗಿರುವುದು ಕಂಡುಬರುತ್ತದೆ ಎಂದು ವರದಿಗಳು ಹೇಳಿವೆ. ಇದರಲ್ಲಿ ಹೆಚ್ಚಾಗಿ ಪ್ರಾಥಮಿಕ ಹಂತದ ಕಾಡುಗಳೇ ನಾಶವಾಗುತ್ತಿವೆ. ಇದರ ಪರಿಣಾಮವು ಒಟ್ಟಾರೆ ಹವಾಗುಣದ ಮೇಲಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

2020ನೇ ವರ್ಷವಂತೂ ಕಾಳ್ಗಿಚ್ಚಿನ ವರ್ಷ ಎಂಬಂತಾಗಿತ್ತು. ಭೂಮಿಯ ಯಾವ ಖಂಡವನ್ನೂ ಬಿಡದಂತೆ ಕಾಳ್ಗಿಚ್ಚು ಕಾಡಿತ್ತು. 2019–20ರಲ್ಲಿ ಆಸ್ಟ್ರೇಲಿಯಾ ಒಂದರಲ್ಲೇ ಸುಮಾರು 1.9 ಕೋಟಿ ಹೆಕ್ಟೇರ್‌ನಷ್ಟು ಅರಣ್ಯ ಕಾಳ್ಗಿಚ್ಚಿಗೆ ಆಹುತಿಯಾಗಿದೆ. ಅದು ಬಿಡುಗಡೆ ಮಾಡಿರುವ ಇಂಗಾಲದ ಆಕ್ಸೈಡ್‌, ಬಲಿ ತೆಗೆದುಕೊಂಡಿರುವ ಪ್ರಾಣಿ ಸಂಕುಲ ಅಗಾಧವಾದುದು. ಸಾವಿರಾರು ಮನೆಗಳು ನಾಶವಾದವು. ಪ್ರಾಣಹಾನಿಯಾಯಿತು, ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡರು.

ಇಂಡೊನೇಷ್ಯಾದಲ್ಲಿ ಕಳೆದ ವರ್ಷ 16.5 ಲಕ್ಷ ಹೆಕ್ಷೇರ್‌ನಷ್ಟು ಅರಣ್ಯ ಕಾಳ್ಗಿಚ್ಚಿಗೆ ಬಲಿಯಾಗಿದೆ. ಅದರಲ್ಲಿ ಶೇ 76ರಷ್ಟು ಕಾಡು, ಒಂದು ಕಾಲದಲ್ಲಿ ದಟ್ಟ ಅರಣ್ಯವಾಗಿತ್ತು. ಮತ್ತೆ ಮತ್ತೆ ಬೆಂಕಿಗೆ ಆಹುತಿಯಾಗಿ, ಇತ್ತೀಚಿನ ವರ್ಷಗಳಲ್ಲಿ ಅದು ಕುರುಚಲು ಕಾಡಾಗಿ ಪರಿವರ್ತನೆಯಾಗಿದೆ. ಸೈಬೀರಿಯಾ, ರಷ್ಯಾದಲ್ಲೂ ಹವಾಮಾನ ಬದಲಾವಣೆಯ ಪರಿಣಾಮ ಕಾಳ್ಗಿಚ್ಚಿನ ಸಂಖ್ಯೆ ಹೆಚ್ಚುತ್ತಿದೆ.

ಕಾಳ್ಗಿಚ್ಚಿನ ಪರಿಣಾಮಗಳು ಕುತೂಹಲಕರ ಎಂದು ವಿಜ್ಞಾನಿಗಳು ಹೇಳುತ್ತಾರೆ. ಶತಮಾನಗಳಿಂದ ಪ್ರವಾಹವನ್ನು ಕಾಣದಿರುವ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಹಗಳು ಸಂಭವಿಸುತ್ತಿವೆ. ಇದಕ್ಕೂ ಕಾಳ್ಗಿಚ್ಚಿಗೂ ಸಂಬಂಧವಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.

ಜಾಗತಿಕ ಮಟ್ಟದಲ್ಲಿ ಉತ್ಪಾದನೆಯಾಗುವ ಶೇ 5ರಷ್ಟು (200 ಕೋಟಿ ಟನ್‌ನಷ್ಟು) ಇಂಗಾಲದ ಆಕ್ಸೈಡ್‌ ಅನ್ನು ಅಮೆಜಾನ್‌ ಮಳೆಕಾಡುಗಳು ಹೀರಿಕೊಳ್ಳುತ್ತವೆ. ಆದರೆ, ಹವಾಮಾನ ಬದಲಾವಣೆಯು ಈ ಕಾಡುಗಳ ಮೇಲೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆಜಾನ್‌ ಕಾಡಿನಲ್ಲೂ ಕಾಳ್ಗಿಚ್ಚಿನ ಪ್ರಮಾಣ ಹೆಚ್ಚಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ, ಅಮೆಜಾನ್‌ ಕಾಡು ಇಂಗಾಲವನ್ನು ಹೀರುವ ಬದಲು ಇಂಗಾಲವನ್ನು ಬಿಡುಗಡೆ ಮಾಡುವ ಕಾಡುಗಳಾಗಿ ಪರಿವರ್ತನೆಯಾಗುವ ಅಪಾಯ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಉತ್ತರಾಖಂಡವು ಕಾಳ್ಗಿಚ್ಚಿನಿಂದ ಸುದ್ದಿಯಾಗುತ್ತಿದೆ. ರಾಜ್ಯದ ಕನಿಷ್ಠ 40 ಕಡೆಗಳಲ್ಲಿ ಬೆಂಕಿ ವೇಗವಾಗಿ ಹರಡುತ್ತಿದೆ. ಗರ್ವಾಲ್‌ ಮತ್ತು ಕುಮಾವ್‌ ಪ್ರದೇಶದ ನೈನಿತಾಲ್‌, ಅಲ್ಮೋರಾ, ಟೆಹರಿ ಹಾಗೂ ಪುರಿ ಜಿಲ್ಲೆಗಳಲ್ಲಿ ಭಾರಿ ಹಾನಿ ಆಗಿರುವುದಾಗಿ ವರದಿಯಾಗಿದೆ. 500 ಹೆಕ್ಟೇರ್‌ಗೂ ಹೆಚ್ಚು ಅರಣ್ಯಕ್ಕೆ ಹಾನಿಯಾಗಿದೆ.

ನೆಲಬೆಂಕಿ, ಮರ ಬೆಂಕಿ, ನೆಲದಡಿಯ ಬೆಂಕಿ
ನೆಲಬೆಂಕಿ, ಮರ ಬೆಂಕಿ, ನೆಲದಡಿಯ ಬೆಂಕಿ

ಕಾಳ್ಗಿಚ್ಚಿನ ಬಗೆಗಳು

1. ನೆಲಬೆಂಕಿ: ಕಾಡಿನ ನೆಲದ ಮೇಲ್ಮೈನಲ್ಲಿರುವ ಉದುರೆಲೆ, ಪೊದೆಗಳು, ಸಣ್ಣಪುಟ್ಟ ಗಿಡಗಳು, ಕಟ್ಟಿಗೆಗಳಿಗೆ ಮಾತ್ರ ಹತ್ತಿಕೊಳ್ಳುವ ಬೆಂಕಿ ಇದು. ಇದು ವೇಗವಾಗಿ ಹರಡುತ್ತದೆ. ಆದರೆ ಅರಣ್ಯ ಸಂಪತ್ತು ನಾಶವಾಗುವುದಿಲ್ಲ. ಭಾರತದಲ್ಲಿ ಸಂಭವಿಸುವ ಕಾಳ್ಗಿಚ್ಚಿನಲ್ಲಿ ನೆಲಬೆಂಕಿಯ ಪ್ರಮಾಣ ಹೆಚ್ಚು. ಇದು ಕಾಡು ಸಮೃದ್ಧವಾಗಿ ಬೆಳೆಯಲು ನೆರವಾಗುತ್ತದೆ. ಆದರೆ ಈ ಬೆಂಕಿಯನ್ನು ನಿಯಂತ್ರಿಸುವಲ್ಲಿ ಬಹಳಷ್ಟು ತೊಡಕುಗಳಿವೆ. ವೇಗವಾಗಿ ಹರಡುವುದರಿಂದ, ಬೆಂಕಿ ನಿಯಂತ್ರಣಕ್ಕೆ ಮುಂದಾಗುವವರು ಬೆಂಕಿಗೆ ಆಹುತಿಯಾಗುವ ಅಪಾಯ ಹೆಚ್ಚು. ಆದರೆ, ಬೆಂಕಿ ಒಂದೇ ದಿಕ್ಕಿನಲ್ಲಿ ಹರಡುವ ಕಾರಣ, ಪ್ರಾಣಿಗಳು ತಪ್ಪಿಸಿಕೊಳ್ಳಲು ಸಾಕಷ್ಟು ಸಮಯಾವಾಕಾಶ ದೊರೆಯುತ್ತದೆ

2. ಮರ ಬೆಂಕಿ: ಮರಗಳ ಎಲೆ, ರೆಂಬೆ-ಕೊಂಬೆಗಳ ಭಾಗದಲ್ಲಿ ಹತ್ತಿಕೊಳ್ಳುವ ಬೆಂಕಿ ಇದು. ಬಿರುಬೇಸಿಗೆಯಲ್ಲಿ ಮರಗಳು ಒಂದಕ್ಕೊಂದು ತಿಕ್ಕಿ, ಬೆಂಕಿ ಹತ್ತಿಕೊಳ್ಳುವ ಅಪಾಯವೂ ಇರುತ್ತದೆ. ಗಾಳಿಯ ವೇಗ ಹೆಚ್ಚು ಇರುವ ಎತ್ತರದ ಸ್ಥಳದಲ್ಲಿ ಬೆಂಕಿ ಇರುವ ಕಾರಣ, ಒಂದು ಮರದಿಂದ ಮತ್ತೊಂದು ಮರಕ್ಕೆ ಅತ್ಯಂತ ತ್ವರಿತವಾಗಿ ಬೆಂಕಿ ಹರಡುತ್ತದೆ. ಅರಣ್ಯ ನಾಶವೂ ಆಗುತ್ತದೆ.ಇದರ ನಿಯಂತ್ರಣ ಸಾಧ್ಯವೇ ಇಲ್ಲ ಎನ್ನಬಹುದು. ಮರಬೆಂಕಿಯು ಕೆಳಕ್ಕೆ ಇಳಿಯುತ್ತಾ ನೆಲಬೆಂಕಿಯನ್ನೂ ಸೃಷ್ಟಿಸುತ್ತದೆ. ಇದು ನೆಲಬೆಂಕಿಯಾಗಿ ಪರಿವರ್ತನೆಯಾದಾಗ ಮಾತ್ರ ನಿಯಂತ್ರಣ ಸಾಧ್ಯ. ಇಂತಹ ಬೆಂಕಿಯಿಂದ ಪ್ರಾಣಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ. ಬೆಂಕಿ ನಿಯಂತ್ರಣಕ್ಕೆ ಹೋಗುವ ಸಿಬ್ಬಂದಿಯೂ ಬೆಂಕಿಗೆ ಆಹುತಿಯಾಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಇದರಲ್ಲಿ ಅರಣ್ಯ ನಾಶ ಅತ್ಯಧಿಕವಾದರೂ, ಒಂದೇ ಮಳೆ ಋತುವಿನಲ್ಲಿ ಹಸಿರು ಮತ್ತೆ ಚಿಗುರೊಡೆಯುತ್ತದೆ

3. ನೆಲದಡಿಯ ಬೆಂಕಿ: ಕಾಡಿನ ನೆಲದ ಅಡಿಯಲ್ಲಿರುವ ವಸ್ತುಗಳಿಗೆ ಹತ್ತಿಕೊಂಡಿರುವ ಬೆಂಕಿ. ಹುಲ್ಲುಹಾಸು, ತರಗೆಲೆ, ಪೊದೆಗಳ ಕೆಳಗೆ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಸಾವಯವ ಗೊಬ್ಬರದಂತಹ ವಸ್ತುವಿಗೆ, ಮರಗಿಡಗಳ ಬೇರುಗಳಿಗೆ ಈ ಬೆಂಕಿ ಹತ್ತಿಕೊಂಡಿರುತ್ತದೆ. ಗೊಬ್ಬರದಲ್ಲಿರುವ ಮಿಥೇನ್‌ನಿಂದ ಈ ಬೆಂಕಿ ಉರಿಯುತ್ತದೆ. ಇದು ಅತ್ಯಂತ ಕಡಿಮೆ ವೇಗದಲ್ಲಿ ಹರಡುತ್ತದೆ. ಅಲ್ಲದೆ, ಬರಿಗಣ್ಣಿಗೆ ಈ ಬೆಂಕಿ ಕಾಣುವುದೂ ಇಲ್ಲ. ಹೀಗಾಗಿ ಇದು ಅತ್ಯಂತ ಅಪಾಯಕಾರಿ, ನಿಯಂತ್ರಣ ಕಷ್ಟಸಾಧ್ಯ. ಈ ರೀತಿಯ ಬೆಂಕಿಯಿಂದ ಅರಣ್ಯ ಸಂಪೂರ್ಣವಾಗಿ ನಾಶವಾಗುತ್ತದೆ. ಮತ್ತೆ ಹಸಿರು ತಲೆಎತ್ತಲು ಹತ್ತಾರು ವರ್ಷ ಬೇಕಾಗುತ್ತದೆ

ಕಾಳ್ಗಿಚ್ಚಿಗೆ ಕಾರಣಗಳು
ಭಾರತವೂ ಸೇರಿದಂತೆ ಜಗತ್ತಿನ ಎಲ್ಲೆಡೆ ಕಾಣಿಸಿಕೊಳ್ಳುವ ಕಾಳ್ಗಿಚ್ಚಿಗೆ ಮನುಷ್ಯನ ಚಟುವಟಿಕೆಗಳೇ ಪ್ರಮುಖ ಕಾರಣ ಎಂದು ಹಲವು ಅಧ್ಯಯನಗಳು ಸ್ಪಷ್ಟಪಡಿಸಿವೆ. ನೈಸರ್ಗಿಕ ಕಾರಣದಿಂದ ಬೆಂಕಿ ಹತ್ತಿಕೊಳ್ಳುವ ಪ್ರಮಾಣ ಅತ್ಯಂತ ಕಡಿಮೆ

ಉತ್ತರಾಖಂಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಳ್ಗಿಚ್ಚನ್ನು ನಿಯಂತ್ರಿಸಲು ಶ್ರಮಿಸಿದರು
ಉತ್ತರಾಖಂಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಳ್ಗಿಚ್ಚನ್ನು ನಿಯಂತ್ರಿಸಲು ಶ್ರಮಿಸಿದರು

ಕೃತಕ ಕಾರಣಗಳು

* ಹೊಲಗಳಲ್ಲಿ ಹಚ್ಚಿರುವ ಬೆಂಕಿ ಕಾಡಿಗೆ ವ್ಯಾಪಿಸುವುದು

* ಜನರು ಬೀಡಿ-ಸಿಗರೇಟು ಹಚ್ಚಿ ಬಿಸಾಡುವ ಬೆಂಕಿ ಕಡ್ಡಿ

* ಕಾಡಿನಲ್ಲಿ ಸುರಿಯಲಾದ ತ್ಯಾಜ್ಯಗಳಲ್ಲಿ ಇರುವ ರಾಸಾಯನಿಕ ವಸ್ತುಗಳಿಂದ ಬೆಂಕಿ ಹತ್ತಿಕೊಳ್ಳುವುದು

* ಕಾಡಿನ ಸಮೀಪ ಪಟಾಕಿಗಳನ್ನು ಸಿಡಿಸುವುದು

* ಕಾಡಿನಲ್ಲಿ ಅಡುಗೆ ಮಾಡುವುದು, ಫೈರ್‌ಕ್ಯಾಂಪ್ ಮಾಡುವುದು

* ಕಾಡನ್ನು ಹಾದುಹೋಗಿರುವ ಹೈಟೆನ್ಶನ್ ತಂತಿಗಳಲ್ಲಿ ಕಿಡಿ ಉಂಟಾಗಿ ಬೆಂಕಿ ಹತ್ತಿಕೊಳ್ಳುವುದು

* ಕಾಡಿನಲ್ಲಿ ಸಂಚರಿಸುವ ವಾಹನಗಳ ಸೈಲೆನ್ಸರ್‌ ಬಿಸಿಯಿಂದ ಒಣಹುಲ್ಲಿಗೆ ಬೆಂಕಿ ಹತ್ತಿಕೊಳ್ಳುವುದು

* ಕಾಡಿನಲ್ಲಿ ನಡೆಯುವ ವಿವಿಧ ನಿರ್ಮಾಣ ಕಾಮಗಾರಿಗಳಿಂದ

* ಬುಡಕಟ್ಟು ಜನರು ವಸತಿ ಪ್ರದೇಶಗಳಿಂದ

ನೈಸರ್ಗಿಕ ಕಾರಣಗಳು

* ಸಿಡಿಲು ಬಡಿದು ಮರಗಳಿಗೆ ಬೆಂಕಿ ಹತ್ತಿಕೊಳ್ಳುವುದು

* ವಿಪರೀತ ಬಿಸಿಲಿನಲ್ಲಿ ಮರಗಳು ಒಂದಕ್ಕೊಂದು ತಿಕ್ಕಿ, ಬೆಂಕಿ ಹತ್ತಿಕೊಳ್ಳುವುದು

* ಕಲ್ಲುಗಳು ಉರುಳಿ, ಕಿಡಿ ಉಂಟಾಗಿ ಬೆಂಕಿ ಹತ್ತಿಕೊಳ್ಳುವುದು

* ಅಗ್ನಿಪರ್ವತ ಸ್ಫೋಟದಿಂದ ಬೆಂಕಿ ಹತ್ತಿಕೊಳ್ಳುವುದು

ಮಾನವ ನಿರ್ಮಿತ ಘಟನೆಗಳೇ ಹೆಚ್ಚು
ಕಾಳ್ಗಿಚ್ಚಿನ ಸಮಸ್ಯೆ ಕರ್ನಾಟಕವನ್ನೂ ಬಿಟ್ಟಿಲ್ಲ. ರಾಜ್ಯದ ಚಾಮರಾಜನರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಂದ ಆಗಾಗ ಕಾಳ್ಗಿಚ್ಚಿನ ವರದಿಗಳು ಬರುತ್ತಲೇ ಇರುತ್ತವೆ. ಬಂಡಿಪುರ, ನಾಗರಹೊಳೆ ಅರಣ್ಯದಲ್ಲಿ ಇತ್ತೀಚೆಗೆ ಕಾಣಿಸಿದ್ದ ಬೆಂಕಿಯು ಅಪಾರ ಪ್ರಮಾಣದ ನಷ್ಟವನ್ನು ಉಂಟುಮಾಡಿತ್ತು.

ರಾಜ್ಯದಲ್ಲಿ ನೈಸರ್ಗಿಕ ಕಾಳ್ಗಿಚ್ಚಿನ ಘಟನೆಗಳು ತೀರಾ ವಿರಳ. ಇಲ್ಲಿ ಮಾನವ ನಿರ್ಮಿತ ಘಟನೆಗಳೇ ಹೆಚ್ಚು ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜ್ಯದಲ್ಲಿ ಸುಮಾರು ಮೂರುಲಕ್ಷ ಎಕರೆ ಅರಣ್ಯ ಪ್ರದೇಶವನ್ನು ‘ಅತಿ ಹೆಚ್ಚು’ ಕಾಳ್ಗಿಚ್ಚು ಸಂಭವನೀಯ ಪ್ರದೇಶವೆಂದು ಗುರುತಿಸಲಾಗಿದೆ. ಇಲ್ಲಿ 13 ವರ್ಷಗಳಲ್ಲಿ 50ಕ್ಕೂ ಹೆಚ್ಚು ಬೆಂಕಿ ಘಟನೆಗಳು ಸಂಭವಿಸಿವೆ. ಇನ್ನುಳಿದಂತೆ 7.6 ಲಕ್ಷ ಎಕರೆ ಪ್ರದೇಶವನ್ನು ‘ಹೆಚ್ಚು ಸಂಭವನೀಯ’ ಪ್ರದೇಶವೆಂದು ಗುರುತಿಸಲಾಗಿದೆ.

ಈ ಹೆಚ್ಚು ಅಪಾಯಕಾರಿ ಪ್ರದೇಶಗಳೆಲ್ಲವೂ ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಜನವರಿ ವೇಳೆಗೆ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದಂತೆ, ಇಲ್ಲಿ ಕಾಳ್ಗಿಚ್ಚಿನ ಅಪಾಯ ಹೆಚ್ಚುತ್ತದೆ. ಅರಣ್ಯ ಸಿಬ್ಬಂದಿ ಅತಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ವರದಿಗಳು ಹೇಳಿವೆ.

ಜೀವ ಸಂಕುಲದ ಸಂಕಷ್ಟ
ಕಾಳ್ಗಿಚ್ಚಿನಿಂದ ಮೊದಲು ತೊಂದರೆಗೆ ಈಡಾಗುವುದು ಸಸ್ಯಸಂಕುಲ ಮತ್ತು ಪ್ರಾಣಿಗಳು. ಕಾಳ್ಗಿಚ್ಚಿನಿಂದ ಕೆಲವು ಪ್ರಾಣಿಗಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದಾದರೂ, ಇನ್ನೂ ಕೆಲವು ಬದುಕುಳಿಯುವ ಸಾಧ್ಯತೆ ಕಡಿಮೆ.

ಒಂದೊಂದು ಪ್ರಾಣಿಯೂ ತನ್ನದೇ ರಕ್ಷಣಾ ತಂತ್ರಗಾರಿಕೆಯನ್ನು ಹೊಂದಿರುತ್ತದೆ. ದೊಡ್ಡ ಪ್ರಾಣಿಗಳು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡು ಓಡಬಲ್ಲವು. ಮತ್ತೊಂದು ಜಾಗದಲ್ಲೂ ಅವು ಹೊಂದಿಕೊಳ್ಳಬಲ್ಲವು. ಆದರೆ, ಉಭಯಚರಗಳು ಮತ್ತು ಸರೀಸೃಪಗಳು ಕಿಚ್ಚಿನಲ್ಲಿ ಕರಗಿ ಹೋಗುತ್ತವೆ. ಅವುಗಳ ಆವಾಸಸ್ಥಾನ ಒಮ್ಮೆ ನಾಶವಾಯಿತೆಂದರೆ, ಸಂತತಿ ಮತ್ತೆ ಏಳಿಗೆ ಕಾಣುವುದು ಕಷ್ಟ. ಅವುಗಳ ಮೊಟ್ಟೆ ಹಾಗೂ ಮರಿಗಳು ಬೆಂಕಿಯಲ್ಲಿ ಸುಟ್ಟುಹೋಗಬಹುದು.

ಪಕ್ಷಿಗಳಿಗೂ ಕಂಟಕ: ಪಕ್ಷಿಗಳೂ ಇಂತಹದ್ದೇ ಸಂಕಷ್ಟ ಎದುರಿಸುತ್ತವೆ. ಅವು ಬೆಂಕಿಯಿಂದ ಪಾರಾಗಲು ಆಗಸದಲ್ಲಿ ಹಾರಿ, ಜೀವ ಉಳಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆತಮ್ಮ ಗೂಡು, ಮರಿ, ಮೊಟ್ಟೆಗಳ ಆಸೆ ಕೈಬಿಡಬೇಕಾಗುತ್ತದೆ. ಅಗ್ನಿ ಅವಘಡದಲ್ಲಿ ಬಸವನ ಹುಳು ರೀತಿಯ ಜೀವಿಗಳು ಬೇಗನೇ ದಿಗಿಲಿಗೆ ಈಡಾಗುತ್ತವೆ. ತಪ್ಪಿಸಿಕೊಳ್ಳಲು ಸಮಯವೇ ಸಿಗದೆ ಅವು ಅಗ್ನಿಗಾಹುತಿಯಾಗುತ್ತವೆ.

ಆವಾಸಸ್ಥಾನ ನಾಶ: ಅಗ್ನಿ ಅವಘಡದಲ್ಲಿ ಬದುಕಿದ ಜೀವಿಗಳು ನಿಟ್ಟುಸಿರು ಬಿಡುವಂತಿಲ್ಲ. ತಮ್ಮ ಆವಾಸಸ್ಥಾನ ನಾಶವಾಗಿದ್ದು ಒಂದು ಕಡೆಯಾದರೆ, ಹೊಸ ಪ್ರದೇಶದಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಸಮಸ್ಯೆಗೆ ಅವು ಸಿಲುಕಿಕೊಳ್ಳುತ್ತವೆ. ಎಲೆ, ಬಳ್ಳಿ, ನೀರಿನ ಸೆಲೆ, ಮರಗಳನ್ನೇ ಆಶ್ರಯಿಸಿದ್ದ ಜೀವಿಗಳಿಗೆ ಹೊಸ ಜಾಗವು ಇನ್ನೊಂದು ಅಗ್ನಿಪರೀಕ್ಷೆಯನ್ನು ಒಡ್ಡುತ್ತದೆ.

ಕಾಳ್ಗಿಚ್ಚಿನಲ್ಲಿ ಗಾಯಗೊಂಡರೆ, ತನ್ನ ಬಳಗವನ್ನು ಕಳೆದುಕೊಂಡರೆ ಬದುಕೇ ದುಸ್ತರವಾಗುತ್ತದೆ. ಹೊಸ ಜಾಗದಲ್ಲಿ ಈಗಾಗಲೇ ಇರುವ ಜೀವಿಗಳ ಜೊತೆ ಮತ್ತೊಂದು ಸುತ್ತಿನ ಯುದ್ಧಕ್ಕೆ ಅವು ಸಿದ್ಧವಾಗಬೇಕಿರುತ್ತದೆ. ಕಾಡಂಚಿನ ಭಾಗಗಳಲ್ಲಿ ಮಾನವ–ಪ್ರಾಣಿ ಸಂಘರ್ಷ ತಲೆದೋರುತ್ತದೆ. ಪರಿಸರ ಅಸಮತೋಲನ ಉಂಟಾಗುತ್ತದೆ.

ಮಾನವನಿಗೂ ಅಪಾಯ: ಕಾಡನ್ನು ನಂಬಿಕೊಂಡು ಅರಣ್ಯದಂಚಿನಲ್ಲಿ ಬದುಕುವ ಜನರ ಜೀವನಕ್ಕೂ ಕಾಳ್ಗಿಚ್ಚು ತೊಂದರೆ ಉಂಟು ಮಾಡುತ್ತದೆ. ತಮ್ಮ ಆದಾಯದ ಮೂಲ ಕಳೆದುಕೊಳ್ಳುವ, ತಮ್ಮ ನೆಲೆಯನ್ನು ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT