ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕಾಲದಲ್ಲಿ ಸುರಕ್ಷಿತ ಪ್ರವಾಸ

Last Updated 2 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸುಮಾರು ಏಳೆಂಟು ತಿಂಗಳುಗಳಿಂದ ಮನೆಯೊಳಗೇ ಕುಳಿತು ಜಡ್ಡುಗಟ್ಟಿದ ಮೈಮನಕ್ಕೆ ಸ್ವಲ್ಪ ಹೊರಗೆ ಸುತ್ತಾಡಬೇಕು ಎಂಬ ಆಸೆ ಮೂಡುವುದು ಸಹಜ. ಆತಂಕದ ನಡುವೆ ಒಮ್ಮೆಲೆ ಹೊರಟುಬಿಡುವುದು ಸಾಧ್ಯವೇ? ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ, ಸರಿಯಾದ ಯೋಜನೆ ಹಾಕಿಕೊಂಡು ಹೊರಟರೆ ಒಂದು ಒಳ್ಳೆಯ ತಾಣವನ್ನು ಒಂದು ದಿನದೊಳಗೆ ಸುತ್ತಾಡಿ ಬರಲು ಸಾಧ್ಯವಿದೆ.

ಪ್ರವಾಸೋದ್ಯಮವೂ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಕೊಡಗು-ಚಿಕ್ಕಮಗಳೂರು ಭಾಗಗಳಲ್ಲಿ ಯುವಕರು ಬೈಕ್‌ಗಳಲ್ಲಿ ಸುತ್ತಾಡುವುದನ್ನು ಕಾಣಬಹುದು. ಮೊದಲೆಲ್ಲಾ ಗುಂಪಾಗಿ ಬರುತ್ತಿದ್ದ ಇವರು ಈಗ ಒಂಟಿಯಾಗಿ ಸುತ್ತುವುದನ್ನೇ ಇಷ್ಟಪಡುತ್ತಿದ್ದಾರೆ.

ಕೋವಿಡ್‌ ಕಾಲದಲ್ಲಿ ಜನನಿಬಿಡ ಪ್ರದೇಶಗಳ ಬದಲಾಗಿ ನಿಸರ್ಗ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಈಗಿನ ಟ್ರೆಂಡ್‌. ಏಕೆಂದರೆ ವಿಶಾಲ ಜಾಗವಿರುತ್ತದೆ. ಅಂತರ ಕಾಯ್ದುಕೊಳ್ಳುವ ಕಿರಿಕಿರಿ, ಟ್ರಾಫಿಕ್‌ ಜಂಜಾಟ ಇರುವುದಿಲ್ಲ. ಹೀಗಾಗಿ ಕುಟುಂಬದ ಜತೆ ಪ್ರವಾಸ ಹೋಗುವವರು ಇಂಥ ತಾಣಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಲ್ಪ ಹುಮ್ಮಸ್ಸಿನವರಾಗಿದ್ದರೆ ಲಘು ಚಾರಣ ಮಾಡಬಹುದಾದ ತಾಣಗಳಿಗೂ ಹೋಗುವುದಿದೆ.

ಕೋವಿಡ್‌ ಆತಂಕ, ವೃತ್ತಿಯ ಒತ್ತಡದ ನಡುವೆ ಆಗಾಗ ಲಘು ಪ್ರವಾಸ ಹೋಗಿಬರುವ ಮಂಗಳೂರಿನ ಕೃಷ್ಣಮೋಹನ ಅವರು ನೀಡುವ ಕೆಲವು ಟಿಪ್ಸ್‌ ಹೀಗಿವೆ.

ಸ್ಥಳದ ಆಯ್ಕೆ: ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಸ್ಥಳದಿಂದ ನೂರು- ನೂರೈವತ್ತು ಕಿಲೋಮೀಟರ್‌ ಒಳಗಿನ ತಾಣವನ್ನೇ ಆಯ್ಕೆ ಮಾಡುವುದು ಉತ್ತಮ. ಒಂದು ದಿನದ ಒಳಗೆ ಹೋಗಿ ಬರಬಹುದಾದ ಸಾಧ್ಯತೆಯನ್ನು ಆಯ್ಕೆ ಮಾಡಿ. ಖ್ಯಾತಿ ಇಲ್ಲದ ಅಪರೂಪದ ಜಾಗಗಳಿಗೆ ಭೇಟಿ ಕೊಡಬಹುದು.

ವಾರದ ಮಧ್ಯ ಭಾಗ ಉತ್ತಮ: ವಾರಾಂತ್ಯದಲ್ಲಿ ಸಾಮಾನ್ಯವಾಗಿ ಜನದಟ್ಟಣೆ ಹೆಚ್ಚು ಇರುತ್ತದೆ. ಆದ್ದರಿಂದ ವಾರದ ಮಧ್ಯ ಭಾಗ ಸೂಕ್ತ.

ಹಿರಿಯರ ಕಾಳಜಿ ಇರಲಿ: ತೀರಾ ವಯಸ್ಸಾದವರು, ಹತ್ತು ವರ್ಷಗಳ ಒಳಗಿನ ಮಕ್ಕಳನ್ನು ಕರೆದೊಯ್ಯುವುದಿದ್ದರೆ ಅವರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.

ಸ್ವಂತ ವಾಹನದಲ್ಲೇ ಹೋಗಿ: ಸ್ವಂತ ವಾಹನ ಅಥವಾ ಟ್ಯಾಕ್ಸಿ ಮಾಡಿಕೊಂಡು ಹೋಗುವುದು ಉತ್ತಮ. ಸಾರ್ವಜನಿಕ ಸಾರಿಗೆಯಲ್ಲಿ ಹೋಗಿ ಆತಂಕ ಅನುಭವಿಸುವ ಸಂದರ್ಭ ತಪ್ಪುತ್ತದೆ.

ಮನೆಯ ಆಹಾರ: ನಿಸರ್ಗ ತಾಣಗಳಿಗೆ ಹೋಗುವಾಗ ಮನೆಯಲ್ಲೇ ಸಿದ್ಧಪಡಿಸಿದ ಆಹಾರ, ನೀರು ಒಯ್ಯುವುದು ಸೂಕ್ತ. ಏಕೆಂದರೆ ನೀವು ಹೋಗುವ ಎಲ್ಲ ತಾಣಗಳಲ್ಲಿ ನಿಗದಿತ ಮಾರ್ಗಸೂಚಿ ಪ್ರಕಾರ ಸ್ವಚ್ಛತೆ ನಿರ್ವಹಿಸುವ ಹೋಟೆಲ್‌ಗಳು ಸಿಗುವ ಖಾತ್ರಿ ಇರುವುದಿಲ್ಲ. ಆಹಾರದಲ್ಲೂ ಸ್ವಚ್ಛತೆ ಮುಖ್ಯ ಅಲ್ಲವೇ.

ಜನಜಂಗುಳಿ ಮಧ್ಯೆ ಸ್ನಾನ ಸಲ್ಲದು: ನದಿ, ಹಳ್ಳ ಕಂಡ ತಕ್ಷಣ ಈಜು, ಸ್ನಾನ ಮಾಡಲು ಇಷ್ಟವಾಗುವುದುಂಟು. ಸದ್ಯದ ಸ್ಥಿತಿಯಲ್ಲಿ ಜನ ಸೇರಿರುವ ಕಡೆ ಅದು ಬೇಡ.

ಸಿಕ್ಕ ವಸ್ತುಗಳನ್ನೆಲ್ಲಾ ಮುಟ್ಟಬೇಡಿ: ಸುಮ್ಮನೆ ಅಲ್ಲಲ್ಲಿ ಹಾಕಿರುವ ಅಲಂಕಾರಿಕ ವಸ್ತುಗಳು, ತಡೆಬೇಲಿ, ಆಸನಗಳನ್ನು ತೀರಾ ಅನಿವಾರ್ಯ ಹೊರತುಪಡಿಸಿ ಮುಟ್ಟಲೇಬೇಡಿ. ಎಲ್ಲಾದರೂ ಬಟ್ಟೆ ಖರೀದಿಸಿದರೆ ಅಲ್ಲೇ ಧರಿಸಿ ನೋಡುವ ಪ್ರಯತ್ನವೂ ಬೇಡ. ಸ್ವಚ್ಛ ಮಾಡಿದ ಬಳಿಕವೇ ಉಪಯೋಗಿಸಿ.

ಮಾಸ್ಕ್, ಸ್ಯಾನಿಟೈಸರ್‌ ಜೊತೆಗಿರಲಿ: ಧರಿಸಿರುವ ಮಾಸ್ಕ್‌ ಮಾತ್ರವಲ್ಲದೇ ಒಂದೆರಡು ಹೆಚ್ಚುವರಿ ಮಾಸ್ಕ್ ಜತೆಗಿರಲಿ. ಕೊಳೆಯಾದಾಗ ಬೇರೊಂದನ್ನು ಬಳಸಬಹುದು.

ಹೀಗೆ ಸದ್ಯದ ಸ್ಥಿತಿಯಲ್ಲಿ ಎಷ್ಟು ಕಾಳಜಿ ವಹಿಸಿದರೂ ಸಾಲದು. ಹಾಗೆಂದು ಆತಂಕದಲ್ಲಿ ಮನೆಯೊಳಗೇ ಕೂರುವುದೂ ಅಸಾಧ್ಯ. ಹಾಗಾಗಿ ನಿಮ್ಮ ಪ್ರವಾಸ ಸುರಕ್ಷಿತವಾಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT