ಬುಧವಾರ, ಮೇ 12, 2021
25 °C

ಹೀಗಿದೆ ನೋಡಿ ನಮ್ಮ ಕೆ.ಆರ್. ಮಾರುಕಟ್ಟೆ...

ಮಂಜುಶ್ರೀ ಎಂ. ಕಡಕೋಳ, ಚಿತ್ರಗಳು: ಸತೀಶ್ ಬಡಿಗೇರ್ Updated:

ಅಕ್ಷರ ಗಾತ್ರ : | |

ದೂಳು ತುಂಬಿದ ಮೆಟ್ಟಿಲುಗಳು, ಗಲೀಜು ಶೌಚಾಲಯಗಳು, ಚಾಲನೆ ಕಾಣದ ಲಿಫ್ಟ್‌ ಮತ್ತು ಬಿಬಿಎಂಪಿಗೆ ಹಿಡಿಶಾಪ ಹಾಕುವ ವ್ಯಾಪಾರಿಗಳು..

–ಕೃಷ್ಣ ರಾಜೇಂದ್ರ ಮಾರುಕಟ್ಟೆ (ಕೆ.ಆರ್. ಮಾರ್ಕೆಟ್‌) ಅರ್ಥಾತ್ ಸಿಟಿ ಮಾರ್ಕೆಟ್‌ನ ತಾಜಾ ದೃಶ್ಯಗಳಿವು. 

ವ್ಯಾಪಾರಿಗಳು ಮತ್ತು ಗ್ರಾಹಕರ ಅನುಕೂಲಕ್ಕೆ 1998ರಲ್ಲಿ ಕೆ.ಆರ್. ಮಾರುಕಟ್ಟೆ ಎನ್ನುವ ಆಧುನಿಕ ಕಟ್ಟಡ ಸೌಲಭ್ಯ ರೂಪುಗೊಂಡಿತು. ಆದರೆ, ವ್ಯಾಪಾರಿ ಮತ್ತು ಗ್ರಾಹಕ ಸ್ನೇಹಿ ಮೂಲಸೌಕರ್ಯಗಳ ಕೊರತೆ ಇದನ್ನು ಬಹುವಾಗಿ ಕಾಡಿದೆ.

ದೂಳು ತುಂಬಿದ ಮೆಟ್ಟಿಲುಗಳ ಬದಿಯಲ್ಲೇ ಮಹಿಳೆಯರು ಹೂ ಕಟ್ಟುವ ಕಾಯಕದಲ್ಲಿದ್ದರೆ, ಎರಡನೇ ಮಹಡಿಯಲ್ಲಿ ಟೂಲ್ಸ್ ಅಂಗಡಿಗಳ ಸಮೂಹವಿದೆ. ಖಾಲಿ ಇರುವ ಮಳಿಗೆಗಳಿಗೆ ವ್ಯಾಪಾರದ ಭಾಗ್ಯವೇ ಇಲ್ಲ! 

ಶೌಚಾಲಯ: ಮಹಿಳೆಯರ ಮತ್ತು ಪುರುಷರ ಶೌಚಾಲಯದ ಕಥೆ ಮಾತ್ರ ಕೇಳಲೇಬೇಡಿ. ಮುರಿದು ಹೋಗಿರುವ ವಾಷ್ ಬೇಸಿನ್, ಬಾಗಿಲೇ ಇಲ್ಲದ ಶೌಚಾಲಯಕ್ಕೆ ₹5 ಪಾವತಿಸಿಯೇ ಹೋಗಬೇಕು. 

‘ಹೊಸ ಕಟ್ಟಡ ಕಟ್ಟುವಾಗ ಇದನ್ನು ಸಿಂಗಪುರ ಮಾದರಿಯಲ್ಲಿ ಮಾಡಲಾಗುತ್ತದೆ ಅಂದಿದ್ರು. ಈಗ ನೋಡಿ ಹೇಗಿದೆ ಅವಸ್ಥೆ. ಮಾರ್ಕೆಟ್ ಕ್ಲೀನ್ ಆಗಿದ್ದರೆ ವ್ಯಾಪಾರಿಗಳೂ ಬರ್ತಾರೆ, ಜನರೂ ಬರ್ತಾರೆ. ಇಲ್ಲಿನ ಲಿಫ್ಟ್ ಆರಂಭವೇ ಆಗಿಲ್ಲ. ಹೀಗಿದ್ದರೆ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಸಾಗಿಸುವುದು ಹೇಗೆ? ಕೆಲವರು ಕೂಲಿ ಇಟ್ಟುಕೊಳ್ಳುತ್ತಾರೆ. ಎಲ್ಲರೂ ಹಾಗೆ ಮಾಡಲು ಸಾಧ್ಯವೇ? ನಗರದ ಇತರ ಕಾಂಪ್ಲೆಕ್ಸ್ ಎಷ್ಟು ಕ್ಲೀನ್ ಆಗಿವೆ. ಇಲ್ಲಿ ಅದು ಏಕೆ ಸಾಧ್ಯವಿಲ್ಲ?’ ಅಂತ ಪ್ರಶ್ನಿಸುತ್ತಾರೆ ಜನರಲ್ ಸ್ಟೋರ್‌ವೊಂದರ ಮಾಲೀಕ ನವಾಬ್ ಜಾನ್. 

ನಿಯಮ ಓಕೆ, ಒತ್ತುವರಿ ಯಾಕೆ?

ಒತ್ತುವರಿ ಮಾಡಬಾರದು ಎಂಬ ನಿಯಮ ಸರಿ. ಆದರೆ, ಪುಟ್ಟ ಪುಟ್ಟ ಅಂಗಡಿಯವರು ತಮ್ಮ ವಸ್ತುಗಳನ್ನು ಎಲ್ಲಿ ಇಡಬೇಕು. ಈಗ ನನ್ನ ಮಳಿಗೆಯನ್ನೇ ನೋಡಿ. ಇದು 4x5 ಅಡಿ ಜಾಗದಲ್ಲಿದೆ. ಇಷ್ಟರಲ್ಲಿ ಎಲ್ಲವನ್ನು ಹೇಗಿಟ್ಟು ಕೊಳ್ಳಬೇಕು? ಆ ಕಡೆ ಈ ಕಡೆ ತಿರುಗಲೂ ಆಗದು. ಕನಿಷ್ಠ 2 ಅಡಿ ಹೆಚ್ಚು ಜಾಗ ಸಿಕ್ಕಿದ್ದರೆ, ನಮಗೂ, ಗ್ರಾಹಕರಿಗೂ ಅನುಕೂಲವಾಗುತ್ತಿತ್ತು’ ಎನ್ನುತ್ತಾರೆ ಎಸ್.ಎಲ್.ವಿ. ಅಜ್ಜಿ ಕುಂಕುಮ ಅಂಗಡಿಯ ಸುನೀತಾ ರಾಜ್. 

ಬೀದಿ ವ್ಯಾಪಾರಿಗಳ ಅಳಲು

‘ಅನಧಿಕೃತ ಮಳಿಗೆ ತೆರವುಗೊಳಿಸಲಷ್ಟೇ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಬಿಬಿಎಂಪಿ ಬೀದಿಬದಿ ವ್ಯಾಪಾರಿಗಳನ್ನೂ ಗುರಿ ಪಡಿಸಿರುವುದು ಎಷ್ಟು ಸರಿ ಎನ್ನುವುದು ಸೊಪ್ಪಿನ ವ್ಯಾಪಾರಿ ಶಂಕರ್ ಪ್ರಶ್ನೆ. 

ಮಾರುಕಟ್ಟೆಯ ಅವ್ಯವಸ್ಥೆ ಸುಧಾರಿಸಲು ಬಿಬಿಎಂಪಿ ಮುಂದಾಗಿದೆ ಎನ್ನುವುದು ಸರಿ. ಆ ಕಾಮಗಾರಿ ಪೂರ್ಣಗೊಳ್ಳಲು ಎರಡು ವರ್ಷವಾದರೂ ಬೇಕು. ಅಲ್ಲಿಯವರೆಗೂ ಬೀದಿವ್ಯಾಪಾರಿಗಳಿಗೆ ಪರ್ಯಾಯವೇನು? ಮಾರುಕಟ್ಟೆಯನ್ನು ಸ್ಮಾರ್ಟ್ ಮಾಡುವಾಗ ವೆಡಿಂಗ್ ಪ್ಲಾಜಾ ಮಾಡುವುದಾಗಿ ಹೇಳಿದ್ದಾರೆ. ಅದರ ಸಾಧಕ–ಬಾಧಕಗಳನ್ನೂ ಚರ್ಚಿಸಬೇಕಲ್ಲವೇ? ಬಡವರು, ಮಧ್ಯಮವರ್ಗದವರು ಮಾರುಕಟ್ಟೆಗಿಂತ ಬೀದಿಬದಿ ವ್ಯಾಪಾರಿಗಳ ಬಳಿಯೇ ತರಕಾರಿ ಖರೀದಿಸುತ್ತಾರೆ. ಇಲ್ಲಿ ವ್ಯಾಪಾರಿಗಳಷ್ಟೇ ಅಲ್ಲ ಗ್ರಾಹಕರ ಹಿತರಕ್ಷಣೆಯೂ ಇದೆ ಎನ್ನುವುದು ಬೀದಿಬದಿ ವ್ಯಾಪಾರಿಗಳ ಪ್ರತಿಪಾದನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು