ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ವಾಯುಮಾಲಿನ್ಯ: ನಿರ್ಮಾಣ ಕಾರ್ಯಗಳ ದೂಳಿನಿಂದ ತಪ್ಪದು ಅಪಾಯ

Last Updated 6 ನವೆಂಬರ್ 2019, 6:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿ ಹಲವು ಬಗೆಯಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಅಂಶಗಳು ದಿನನಿತ್ಯ ಕಾಣುತ್ತಲೇ ಇರುತ್ತವೆ. ಈ ಪೈಕಿ ನಿರ್ಮಾಣ ಕಾರ್ಯಗಳಿಂದ ಉಂಟಾಗುತ್ತಿರುವ ದೂಳು ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತದೆ ಎಂಬುದನ್ನು ನಾವಿಲ್ಲಿ ತಿಳಿಯಲೇಬೇಕು.

ಇತ್ತೀಚಿಗೆ ಪ್ರಕಟಗೊಂಡ ಸಂಶೋಧನಾ ವರದಿ ಪ್ರಕಾರ ಬೆಂಗಳೂರಿನ ಸಾರಿಗೆ ವ್ಯವಸ್ಥೆಯೇ ವಾಯುಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡಿದೆ. ನಗರದ ಮಾಲಿನ್ಯಕ್ಕೆ ರಸ್ತೆಯಿಂದ ಹಾಗೂ ನಿರ್ಮಾಣ ಕಾರ್ಯಗಳಿಂದ ಉಂಟಾಗುತ್ತಿರುವ ದೂಳು ಶೇ 23ರಷ್ಟು ಪಾಲು ಪಡೆದಿದೆ.

ನಗರದಲ್ಲಿ ಹೆಚ್ಚುತ್ತಿರುವ ವಾಹನ ಹಾಗೂ ಸಂಚಾರ ದಟ್ಟಣೆ ನಿಭಾಯಿಸುವುದಕ್ಕಾಗಿ 2003 ರಿಂದ 2017ರ ನಡುವೆ 10 ಸಾವಿರ ಕಿಲೋಮೀಟರ್‌ಗೂ ಅಧಿಕ ರಸ್ತೆ ನಿರ್ಮಾಣ ಮಾಡಲಾಗಿದೆ. ವರದಿ ಪ್ರಕಾರ ನಗರ ಯೋಜನೆ ಹಾಗೂ ಸಾರ್ವಜನಿಕ ಸಾರಿಗೆ ಕ್ಷೇತ್ರವನ್ನು ಆಕ್ರಮಣಕಾರಿ ಕಾರ್ಯತಂತ್ರಗಳಿಲ್ಲದೆ ನಿಭಾಯಿಸಿದರೆ 2030ರೊಳಗೆ ಶೇ. 50ರಷ್ಟು ಹೆಚ್ಚುವರಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ.

ಸಿಮೆಂಟ್ ಹಾಗೂ ಮರಳಿನಿಂದಾಗಿ ವಾತಾವರಣದಲ್ಲಿ ಧೂಳಿನ ಕಣಗಳು ಸೇರಿ ನಗರವಾಸಿಗಳಲ್ಲಿ ಉಸಿರಾಟದ ಖಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ರೆಸ್ಪಿರೇಟರಿ ಡಿಸೀಸಸ್ ಅಂಡ್ ಸ್ಲೀಪ್ ಡಿಸಾರ್ಡರ್ಸ್ (ಬಿಐಆರ್‌ಡಿಎಸ್) ಸಲಹೆಗಾರ, ಶ್ವಾಸಕೋಶ ಶಾಸ್ತ್ರಜ್ಞ ಡಾ. ಸಂದೀಪ್ ಎಚ್.ಎಸ್.

ಕ್ಯಾನ್ಸರ್‌ಕಾರಕ ರಾಸಾಯನಿಕಗಳು

ನಿರ್ಮಾಣ ಕಾರ್ಯಗಳಲ್ಲಿ ಬಳಕೆಯಾಗುವಆಸ್ಬೆಟಸ್, ಸಿಲಿಕಾ, ಫಾರ್ಮಾಲ್ಡಿಹೈಡ್, ಡಿ-ಐಸೋಸೈನೇಟ್ ಮತ್ತು ಫ್ಲೇಮ್ ರೆಟಡ್ರಾನ್ಟ್ ಮುಂತಾದ ರಾಸಾಯನಿಕಗಳು ಕ್ಯಾನ್ಸರ್‌ಕಾರಕಗಳಾಗಿವೆ. 2.5 ಎಮ್‍ಎಮ್‍ಗಿಂತ ಕಡಿಮೆಯಿರುವ ಕಣಗಳು ಶ್ವಾಸಕೋಶದಲ್ಲಿ ಉರಿಯೂತವನ್ನುಂಟು ಮಾಡಬಹುದು. ರಸ್ತೆ ನಿರ್ಮಾಣದ ವೇಳೆ ಕಲ್ಲಿದ್ದಲು ಹಾಗೂ ಡಾಂಬಾರು ಹೆಚ್ಚಿನ ವಾಯುಮಾಲಿನ್ಯಕ್ಕೂ ಕಾರಣವಾಗುತ್ತವೆ.

ಮರಳಿನ ಕಣಗಳಿಂದ ಉಂಟಾಗುವ ಸಿಲಿಕಾ ರಾಸಾಯನಿಕಕ್ಕೆ ಒಡ್ಡಿಕೊಳ್ಳುವುದರಿಂದ ಫ್ರೈಬ್ರೋಸಿಸ್ ಮತ್ತು ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ. ನಿಯಮಿತವಾಗಿ ಇಂತಹ ಮಾಲಿನ್ಯಕಾರಕಗಳಿಂದಾಗಿ ಕ್ಷಯರೋಗಕ್ಕೂ ತುತ್ತಾಗುವ ಸಾಧ್ಯತೆಗಳಿವೆ. ಕಲ್ಲಿನ ಕೋರೆಗಳು ಮತ್ತು ಅಗೆಯುವ ಕಾರ್ಯಗಳಲ್ಲಿ ಸಿಲಿಕಾ ಕಣಗಳು ಬಿಡುಗಡೆಯಾಗುತ್ತವೆ’ ಎನ್ನುತ್ತಾರೆ ಬೆಂಗಳೂರಿನ ಆಸ್ಟರ್ ಸಿಎಮ್‍ಐ ಆಸ್ಪತ್ರೆ ಸಮಾಲೋಚಕ, ಶ್ವಾಸಕೋಶ ಶಾಸ್ತ್ರಜ್ಞ ಡಾ. ಸುನಿಲ್‍ಕುಮಾರ್ ಕೆ.

ಕಟ್ಟಡಗಳನ್ನು ನೆಲಸಮಗೊಳಿಸುವ ವೇಳೆ ಸೀಸ, ಪಾದರಸದಂತಹ ರಾಸಾಯನಿಕಗಳು ವಾಯುಮಂಡಲ ಮಾತ್ರವಲ್ಲದೆ ಜಲಸಂಪನ್ಮೂಲವನ್ನೂ ಮಾಲಿನ್ಯಗೊಳಿಸುತ್ತವೆ.

ವಿಕ್ರಮ್ ಆಸ್ಪತ್ರೆಯ ಎದೆಯ ತಜ್ಞವೈದ್ಯ ಡಾ. ವಸುನೇತ್ರ ಕಾಸರಗೋಡು ಅವರ ಪ್ರಕಾರ, ‘ನಿರ್ಮಾಣ ಕಾರ್ಯಗಳಿಂದ ಹೊರಹೊಮ್ಮುವ ಸಿಮೆಂಟ್ ಧೂಳು ಮತ್ತು ಸೂಕ್ಷ್ಮ ಕಣಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಈಗಾಗಲೇ ಗಾಳಿಯಲ್ಲಿ ಸೇರಿಕೊಂಡಿರುವ ಕಣಗಳನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಇದು ದೀರ್ಘಕಾಲದ ಬ್ರಾಂಕೈಟಿಸ್ ಮತ್ತು ಅಸ್ತಮಾ ರೋಗಗಳಿಗೆ ಕಾರಣವಾಗುತ್ತವೆ’.

ಧೂಮಪಾನಿಗಳಲ್ಲದ ಶೇ. 49ರಷ್ಟು ರೋಗಿಗಳಿಗೆ ಸಿಒಪಿಡಿ(ಕ್ರೋನಿಕ್ ಅಬ್‍ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್) ಖಾಯಿಲೆ ಬರುತ್ತದೆ. ಅತಿಸಣ್ಣ ಸೂಕ್ಷ್ಮ ಕಣಗಳಿಂದ ಇಂತಹ ಮಾಲಿನ್ಯಕಾರಕಗಳಿಂದ ಕಾಲಕ್ರಮೇಣ ಶ್ವಾಸಕೋಶದ ಸಮಸ್ಯೆ, ನಂತರ ಸಿಒಪಿಡಿಗೆ ಕಾರಣವಾಗಬಹುದು ಎನ್ನುತ್ತಾರೆ ಕರ್ನಾಟಕ ಪಲ್ಮನೋಲಜಿಸ್ಟ್ ಅಸೋಶಿಯೇಶನ್‍ನ ಜಂಟಿ ಕಾರ್ಯದರ್ಶಿ ಡಾ. ಸಂದೀಪ್.

ದೀರ್ಘಕಾಲದಲ್ಲಿ ಇದು ಶ್ವಾಸಕೋಶದ ಫೈಬ್ರೋಸಿಸ್, ಅಲರ್ಜಿಕ್ ಕಂಜಂಕ್ಟಿವಿಟಿಸ್, ದೀರ್ಘಕಾಲದ ಕೆಮ್ಮು, ಹೃದಯ, ಉಸಿರಾಟದ ತೊಂದರೆ, ಪಾರ್ಶ್ವವಾಯು, ಅಲ್‍ಝೈಮರ್, ಶ್ವಾಸಕೋಶದ ಕ್ಯಾನ್ಸರ್‌ಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವಿದೆ.

ಮಕ್ಕಳ ಶ್ವಾಸಕೋಶಗಳು 12 ವರ್ಷ ವಯಸ್ಸಿನವರೆಗೆ ಬೆಳೆವಣಿಗೆ ಕಾಣುತ್ತಿರುವುದರಿಂದಾಗಿ ದುರ್ಬಲವಾಗಿರುತ್ತದೆ. `ಭಾರತ ಹಾಗೂ ಅಮೆರಿಕದ ಮಕ್ಕಳಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ 6 ವರ್ಷದವರೆಗೆ ಹಾಗೂ 6 ರಿಂದ 12 ವರ್ಷಗಳವರೆಗೆ ಮಕ್ಕಳ ಶ್ವಾಸಕೋಶದ ಬೆಳವಣಿಗೆ ಒಂದೇ ರೀತಿಯಾಗಿರುತ್ತದೆ. ಆದರೆ ಭಾರತೀಯ ಮಕ್ಕಳಲ್ಲಿನ ಶ್ವಾಸಕೋಶದ ಬೆಳವಣಿಗೆಯು ಕುಸಿತಗೊಳ್ಳುತ್ತಿದೆ. ಇದಕ್ಕೆ ಕಾರಣ ವಾಯುಮಾಲಿನ್ಯ ಎನ್ನುತ್ತಾರೆ ಡಾ. ವಸುನೇತ್ರ ಕಾಸರಗೋಡು.

ಅವ್ಯವಸ್ಥೆ ನಿಯಂತ್ರಣ ಹೇಗೆ?

ನಿರ್ಮಾಣ ಕ್ಷೇತ್ರದಿಂದ ವಾಯುಮಾಲಿನ್ಯ ಉಂಟಾಗುವುದನ್ನು ತಡೆಯಲು ಸರ್ಕಾರ ಮಾನದಂಡಗಳನ್ನು ನಿಗದಿಪಡಿಸಿ ಕಡ್ಡಾಯಗೊಳಿಸಿದೆಯಾದರೂ ಈ ನಿಯಮಗಳನ್ನು ಕಠಿಣಗೊಳಿಸುವ ಅಗತ್ಯವಿದೆ.

ನಿರ್ಮಾಣ ಕಾರ್ಯಗಳನ್ನು ವೈಜ್ಞಾನಿಕಗೊಳಿಸಬೇಕು. ಅಂತಹ ಸ್ಥಳದಲ್ಲಿ ನಿರಂತರವಾಗಿ ನೀರು ಹಾಕಬೇಕಾಗುತ್ತದೆ. ಅಲ್ಲದೆ ರೆಡಿಮಿಕ್ಸ್ ತಂತ್ರಜ್ಞಾನದ ಕಾಂಕ್ರೀಟನ್ನೇ ಹೆಚ್ಚು ಉಪಯೋಗಿಸುವುದು ಇನ್ನೊಂದು ಮಾರ್ಗವಾಗಿದೆ. ಮರಳನ್ನು ಜಾಲರಿಗಳಿಂದ ಮುಚ್ಚಿಡುವುದು ಹಾಗೂ ವಿಷಕಾರಿಯಲ್ಲದ ಪೈಂಟ್‌ ಬಳಕೆ ಮಾಡಬೇಕು ಎಂದು ಹೇಳುತ್ತಾರೆ ಡಾ. ವಸುನೇತ್ರ ಕಾಸರಗೋಡು.

ಮಾಲಿನ್ಯ ತಡೆಯುವ ಉಸಿರಾಟಕಾರಕ, ಧೂಳು ನಿರೋಧಕ ಮುಖವಾಡ ಬಳಕೆ, ಮನೆಯೊಳಗೆ ಪ್ರವೇಶಿಸುವ ಧೂಳಿನ ಗಾಳಿ ತಡೆಯಲು ವೆಂಟಿಲೇಷನ್ ವ್ಯವಸ್ಥೆ, ಒಳಾಂಗಣ ಸಸ್ಯಗಳನ್ನು ಬೆಳೆಸುವುದು, ನಿರ್ಮಾಣ ಕಾರ್ಯಗಳು ನಡೆಯುತ್ತಿರುವ ರಸ್ತೆ ಬಿಟ್ಟು ಬೇರೆ ಮಾರ್ಗಗಳನ್ನು ಬಳಸುವುದು ಒಳ್ಳೆಯದು.

ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಪ್ರಕಾರ `ಇತ್ತೀಚಿಗೆ ಪ್ರತಿ 10 ಜನರಲ್ಲಿ 9 ಮಂದಿ ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಇದು ಪ್ರತಿವರ್ಷ 7 ದಶಲಕ್ಷ ಜನರನ್ನು ಕೊಲ್ಲುತ್ತಿದೆ. ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್, ಹೃದ್ರೋಗದಿಂದ ಸಾವು ಸಂಭವಿಸುವ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ವಾಯುಮಾಲಿನ್ಯವೇ ಕಾರಣ’ ಎಂದಿದೆ.

`ಮಾಲಿನ್ಯಕಾರಕಗಳ ಹರಡುವಿಕೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರ ಜತೆಗೆ ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸುವುದು ಪರಿಣಾಮಕಾರಿ ಪರಿಹಾರವಾಗಿದೆ’ ಎನ್ನುತ್ತಾರೆ ಡಾ. ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT