7

ಕ್ಲೀನ್ ಕಾವೇರಿ

Published:
Updated:

ಕಾವೇರಿ ನದಿ ದಂಡೆಯಲ್ಲಿ ನಿಂತಿದ್ದ ಜೆಸಿಬಿ ತನ್ನ ಉದ್ದನೆಯ ಮೂತಿಯಿಂದ ನದಿಯೊಳಗಿದ್ದ ಹಸಿರು ಬಳ್ಳಿಗಳನ್ನು ಬಾಚಿಕೊಂಡು ಟ್ರ್ಯಾಕ್ಟರ್‌ಗೆ ತುಂಬಿಸುತ್ತಿತ್ತು. ಅತ್ತ ಕಡೆ ಜೀವರಕ್ಷಕ ದಿರಿಸು ತೊಟ್ಟ ಯುವಕರ ತಂಡ ತೆಪ್ಪಗಳಲ್ಲಿ ಕುಳಿತು ಹುಟ್ಟು ಹಾಕುತ್ತಾ, ನೀರಿನಲ್ಲಿದ್ದ ತ್ಯಾಜ್ಯವನ್ನು ತೆಪ್ಪಕ್ಕೆ ತುಂಬಿಕೊಳ್ಳುತ್ತಿತ್ತು. ಹಸಿರು ಕೈಗವಸು ಧರಿಸಿದ ಯುವಕರು, ತೆಪ್ಪದಲ್ಲಿ ತ್ಯಾಜ್ಯವನ್ನು ಟ್ರ್ಯಾಕ್ಟರ್‌ಗೆ ತುಂಬಿಸುತ್ತಿದ್ದರು!

ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಕಾವೇರಿ ನದಿಯಲ್ಲಿ ಪ್ರತಿ ಭಾನುವಾರ ಹೀಗೆ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ನದಿಯ ಆಸುಪಾಸಿನಲ್ಲಿರುವ ಸ್ಥಳಗಳ ವಿವಿಧ ಯುವಕ ಸಂಘಗಳು, ಸಂಸ್ಥೆಗಳು ನದಿ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿವೆ. ಕೆಲವು ಸ್ವಾಮೀಜಿಗಳು, ರೈತ ಮುಖಂಡರೂ ‘ಕ್ಲೀನ್ ಕಾವೇರಿ’ ಶ್ರಮದಾನಕ್ಕೆ ಬೆಂಬಲವಾಗಿ ನಿಂತಿದ್ದಾರೆ.

‘ಕಾವೇರಿ ನದಿ ಕಲುಷಿತವಾಗುತ್ತಿದೆ. ಸ್ನಾನಕ್ಕೂ ಯೋಗ್ಯವಿಲ್ಲದಂತಾಗಿದೆ’ – ಕೆಲವು ದಿನಗಳ ಹಿಂದೆ ಹೊರಬಿದ್ದ ಈ ಮಾಹಿತಿಯಿಂದ ಆತಂಕಗೊಂಡ ಸಂಘಟಕರು ನದಿ ಸ್ವಚ್ಛತೆಯ ಚರ್ಚೆ ಶುರು ಮಾಡಿದರು. ಗಂಜಾಂನ ಬಿಜಿಎಸ್‌ ಬಾಯ್ಸ್ ಬಳಗ, ಅಭಿನವ ಭಾರತ್‌ ತಂಡ, ಕೃಷ್ಣರಾಜೇಂದ್ರ ಸೊಸೈಟಿ ಸ್ಥಳೀಯ ಪರಿವರ್ತನ ಕಾಲೇಜಿನ ಚೈತನ್ಯ ದಳ, ಚಾಮರಾಜನಗರ ಜಿಲ್ಲೆ ಪಣ್ಣೇದಹುಂಡಿಯ ಯುವಕರು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಮಂದಿ ಸ್ವಚ್ಛತೆಗೆ ಸಂಕಲ್ಪ ಮಾಡಿದರು. ನದಿಗೆ ಇಳಿದರು. ಶ್ರಮದಾನ ಶುರುವಾಯಿತು. ಈಗಾಗಲೇ ಮೂರ್ನಾಲ್ಕು ಭಾವನುವಾರಗಳಿಂದ ನದಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ.

ಆಳ ಇರದ ಕಡೆ ನೂರಾರು ಮಂದಿ ಸ್ವಯಂ ಸೇವಕರು ‘ಮಾನವ ಸರಪಳಿ’ ರಚಿಸಿಕೊಂಡು, ತ್ಯಾಜ್ಯವನ್ನು ಕೈಯಿಂದ ಕೈಗೆ ಸಾಗಿಸಿ, ನದಿಯಿಂದ ಹೊರಕ್ಕೆ ಹಾಕುತ್ತಿದ್ದಾರೆ. ಸ್ವಯಂ ಸೇವಕರಿಗೆ ಆಗಾಗ್ಗೆ ನದಿ ನೀರಿನ ಆಳದ ಸ್ಥಳದಲ್ಲಿ ಹಗ್ಗಗಳನ್ನು ಕಟ್ಟಿ, ‘ಅಲ್ಲಿಗೆ ಹೋಗಬೇಡಿ’ ಎಂಬ ಎಚ್ಚರಿಕೆ ಮಾರ್ಗದರ್ಶನವೂ ಕೇಳುತ್ತಿರುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ನುರಿತ ಈಜುಗಾರರ ತಂಡವೂ ಜತೆಗಿರುತ್ತದೆ. ಸ್ವಚ್ಛತಾ ಕಾರ್ಯದ ಸುತ್ತಲೂ ಈಜು ತಜ್ಞರ ಕಣ್ಗಾವಲು ಇದ್ದು, ನದಿ ಸ್ವಚ್ಛತೆಗೆ ನೀಡಿದಷ್ಟೇ ಸ್ವಯಂ ಸೇವಕರ ರಕ್ಷಣೆಗೂ ಆದ್ಯತೆ ನೀಡಿದ್ದಾರೆ.

ನದಿ ಸ್ವಚ್ಛತಾ ಕಾರ್ಯದ ಖರ್ಚನ್ನು ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮೀಶ್‌ ಹಾಗೂ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಭಾನುಪ್ರಕಾಶ್‌ ಶರ್ಮಾ ಭರಿಸಿದ್ದಾರೆ. ಸ್ಥಳೀಯ ಪುರಸಭೆ ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳನ್ನು ಪೂರೈಸಿವೆ.

ಈಗ ಶ್ರೀರಂಗಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ಹೊಸ ಸೇತುವೆ ಮತ್ತು ವೆಲ್ಲೆಸ್ಲಿ ಸೇತುವೆಗಳ ನಡುವಿನ ನದಿಯ ಭಾಗದಲ್ಲಿ ಸ್ವಚ್ಛತಾ ಕಾರ್ಯ ಭಾಗಶಃ ಮುಗಿದಿದೆ. ಸ್ವಯಂ ಸೇವಕರ ಶ್ರಮದಾನದ ಫಲವಾಗಿ 300 ಮೀಟರ್‌ ಉದ್ದ, ಅಷ್ಟೇ ಅಗಲದ ನದಿ ಪ್ರದೇಶ ಸ್ವಚ್ಛಗೊಂಡಿದೆ. ‘ಪಟ್ಟಣದ ಸುತ್ತಲೂ ಹರಿಯುವ ಕಾವೇರಿ ನದಿಯ ಉಳಿದ ಭಾಗವನ್ನೂ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸ್ವಚ್ಛಗೊಳಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಸ್ವಚ್ಛತಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ಭಾನುಪ್ರಕಾಶ್‌ ಶರ್ಮಾ.

ಯುವಕರ ಶ್ರಮದಾನಕ್ಕೆ ತಂಜಾವೂರಿನ ರಮಾನಂದ ಸ್ವಾಮೀಜಿ, ಗಂಜಾಂ ಆದಿಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ, ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮೀಶ್‌, ಪುರಸಭೆ ಸದಸ್ಯ ಎಸ್‌. ಪ್ರಕಾಶ್‌, ಡಾ.ಕೆ.ವೈ. ಶ್ರೀನಿವಾಸ್‌, ಸಾಹಿತಿ ಕುಂತಿಬೆಟ್ಟ ಚಂದ್ರಶೇಖರಯ್ಯ...ಹೀಗೆ ಹಲವು ‌ಪ್ರಮುಖರು ಕೈ ಜೋಡಿಸಿದ್ದಾರೆ.

ಕಸದ ತೊಟ್ಟಿಯಾಗುತ್ತಿದೆ ಕಾವೇರಿ!

ಕಾವೇರಿ ನದಿಗೆ ಕೊಡಗು, ಮೈಸೂರು, ಮಂಡ್ಯ ಮಾತ್ರವಲ್ಲದೆ ಅದು ಬಂಗಾಳಕೊಲ್ಲಿ ಸೇರುವವರೆಗೆ ಮಲಿನ ನೀರು ಸೇರುತ್ತಿದೆ. 40 ವರ್ಷಗಳ ಹಿಂದೆ ಜನರು ಬೊಗಸೆಯಲ್ಲಿ ನದಿ ನೀರನ್ನು ಕುಡಿಯುತ್ತಿದ್ದರು. ನೀರು ಅಷ್ಟು ತಿಳಿಯಾಗಿತ್ತು. ಈಗ ನದಿಯ ದಡದಲ್ಲಿ ಕುಳಿತು ಹಣಕೊಟ್ಟು ತಂದ ಬಿಸ್ಲರಿ ನೀರು ಕುಡಿಯುವ ಸ್ಥಿತಿ ಬಂದಿದೆ ಎಂಬುದು ಶ್ರೀರಂಗಪಟ್ಟಣದ ಆಸುಪಾಸಿನ ನಿವಾಸಿಗಳ ಆತಂಕದ ನುಡಿ.

ಕಾವೇರಿಯ ನೀರು ಕೊಡಗು ಜಿಲ್ಲೆಯಲ್ಲಿ ‘ಬಿ’ ದರ್ಜೆಯಲ್ಲಿದೆ. ಆದರೆ ಶ್ರೀರಂಗಪಟ್ಟಣದ ಬಳಿ ಅದು ’ಡಿ’ ದರ್ಜೆಗಿಳಿದಿದೆ. ಕೊಳಚೆ ನೀರಿನ ಮೂಲಕ ‘ಕ್ಯಾಡ್ಮಿಯಂ’ ನಂತಹ ಜೀವಘಾತಕ ರಾಸಾಯನಿಕ ಕಾವೇರಿ ನದಿಯ ಒಡಲು ಸೇರುತ್ತಿರುವುದು ಆಘಾತ ಹುಟ್ಟಿಸಿದೆ ಎನ್ನುತ್ತಾರೆ ತಜ್ಞರು.

ನದಿಯಲ್ಲಿ ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ, ಹೋಮದ ತ್ಯಾಜ್ಯ, ಮಡಕೆ ಚೂರು, ಬಟ್ಟೆ, ಅನ್ನದ ಉಂಡೆ, ಬಗೆ ಬಗೆಯ ಧಾನ್ಯ, ಬಾಳೆ ಎಲೆಗಳು, ಹಳೆಯ ಬಟ್ಟೆಗಳನ್ನು ನದಿಗೆ ಎಸೆಯುತ್ತಿದ್ದಾರೆ. ನೀರು ಮಲಿನವಾಗಿ ಕಳೆ ಗಿಡಗಳು ಬೆಳೆಯಲು ಕಾರಣವಾಗಿದೆ. ಈಗ ಸ್ವಚ್ಛಗೊಳಿಸಿರುವ ಕಾವೇರಿ ಪರಿಶುದ್ಧವಾಗಿ ಉಳಿಯಬೇಕಾದರೆ, ‘ಕ್ಲೀನ್ ಗಂಗಾ’ದಂತಹ ಯೋಜನೆಗಳ ಅಗತ್ಯವಿದೆ ಎನ್ನುತ್ತಾರೆ ಹೋರಾಟಗಾರ ಚಂದ್ರಮೋಹನ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !