ಬುಧವಾರ, ಸೆಪ್ಟೆಂಬರ್ 23, 2020
20 °C

ಟರ್ಕಿಯ ಹುತಾತ್ಮರು ಇಲ್ಲಿ ಮಲಗಿಹರು...

ರಹಮತ್‌ ತರಿಕೆರೆ Updated:

ಅಕ್ಷರ ಗಾತ್ರ : | |

Deccan Herald

ಟರ್ಕಿ ಪ್ರವಾಸಕ್ಕೆ ಹೊರಡುವ ಮುನ್ನ ಬಳ್ಳಾರಿ ದಂಡು ಪ್ರದೇಶದಲ್ಲಿರುವ ಟರ್ಕಿ ಸ್ಮಾರಕ ನೋಡಬೇಕಿನಿಸಿತು. ಅದೊಂದು ಚೂಪಾಗಿ ಕತ್ತರಿಸಿದ ಕೊಳವೆಯಾಕೃತಿಯ ರಚನೆ. ಪಕ್ಕದಲ್ಲಿ ಪಟಪಟಿಸುವ ಟರ್ಕಿಯ ಹಾಗೂ ಭಾರತದ ರಾಷ್ಟ್ರಧ್ವಜ; ಎಡಬದಿಗೆ ಎರಡು ಸಮಾಧಿ; ತಲೆದೆಸೆಯಲ್ಲಿರುವ ಬೂದುಗಲ್ಲ ಮೇಲೆ ಶಹೀತ್ ಕೋರ್ ಜನರಲ್ ಆಘಾಪಾಶಾ, ಶಹೀತ್ ಟರ್ಕ್ ಅಸ್ಕೇರಿ ಎಂಬ ಹೆಸರು; ಕೆಂಫಲಕದ ಮೇಲೆ ‘ಟರ್ಕಿಯ ಹುತಾತ್ಮರು ಇಲ್ಲಿ ಮಲಗಿಹರು. ಇವರನ್ನು, ಮೊದಲ ಮಹಾಯುದ್ಧದ ಕಾಲದಲ್ಲಿ, ಸೂಯೆಜ್ ಕಾಲುವೆಯ ರಣರಂಗದಿಂದ ಯುದ್ಧಕೈದಿಗಳಾಗಿ ಇಲ್ಲಿಗೆ ತರಲಾಯಿತು’ ಎಂಬರ್ಥವುಳ್ಳ ಟರ್ಕಿ-ಆಂಗ್ಲ ಬರಹ. ಯೂರೋಪ್‌ಗೆ ಲಗತ್ತಾಗಿರುವ ಟರ್ಕಿ, ಆಫ್ರಿಕಾ-ಏಷ್ಯಾಗಳನ್ನು ವಿಭಜಿಸುವ ಈಜಿಪ್ಟ್‌ನ ಸೂಯೆಜ್, ಕರ್ನಾಟಕದ ಬಳ್ಳಾರಿ-ಎತ್ತಣಿಂದೆತ್ತ ಸಂಬಂಧ? ಸೋಜಿಗವಾಯಿತು. ವಿಶ್ವಯುದ್ಧದ ಚರಿತ್ರೆ ಕೆದಕಲು, ದಾರುಣ ಕಥನವೊಂದು ತೆರೆದುಕೊಂಡಿತು.

ಮಹಾಯುದ್ಧ (1914-18) ಶುರುವಾಗಿದ್ದು, ಸೆರ್ಬಿಯಾ ಮತ್ತು ಆಸ್ಟ್ರೋ-ಹಂಗರಿಗಳ ನಡುವೆ, ಒಬ್ಬನ ಗಣ್ಯವ್ಯಕ್ತಿಯ ಕೊಲೆಯ ನೆಪದಲ್ಲಿ. ಮುಂದೆ ಒಂದೊಂದಾಗಿ 20ಕ್ಕಿಂತ ಹೆಚ್ಚು ದೇಶಗಳನ್ನು ಇದು ತನ್ನ ಸುಳಿಗೆ ಸೆಳೆದುಕೊಂಡಿತು. ಯುದ್ಧದಲ್ಲಿ ಇಂಗ್ಲೆಂಡ್, ಅದರ ವಸಾಹತುವಾಗಿದ್ದ ಭಾರತ, ರಷ್ಯಾ, ಫ್ರಾನ್ಸ್, ಬೆಲ್ಜಿಯಂ, ಅಮೆರಿಕ ಒಂದೆಡೆಯಿದ್ದರೆ, ಇನ್ನೊಂದೆಡೆ ಟರ್ಕಿ, ಜರ್ಮನಿ, ಆಸ್ಟ್ರಿಯಾ, ಹಂಗರಿ, ಬಲ್ಗೇರಿಯಾ. ಮನುಕುಲದ ಚರಿತ್ರೆಯಲ್ಲೇ ಅತಿ ಹೆಚ್ಚು ಜನರನ್ನು ಬಲಿಪಡೆದ ಈ ಕದನದಲ್ಲಿ ಇಂಗ್ಲೆಂಡ್ ಮತ್ತು ಅದರ ಮಿತ್ರರಾಷ್ಟ್ರಗಳು ಗೆದ್ದವು. ಆದರೆ ಎರಡೂ ಬಣಗಳು ಪರಸ್ಪರ ಎದುರಾಳಿ ಸೈನಿಕರನ್ನು ಬಂಧಿಸಿದ್ದವು. 1.5 ಲಕ್ಷ ಸೈನಿಕರನ್ನು ಬ್ರಿಟಿಷರು ಸೆರೆಹಿಡಿದಿದ್ದರೆ, 34000 ಬ್ರಿಟಿಷರು ಟರ್ಕಿಯ ಕಬ್ಜಾದಲ್ಲಿದ್ದರು. ಸಮಸ್ಯೆಯೆಂದರೆ ಅವರನ್ನು ಸೆರೆಯಲ್ಲಿಟ್ಟು ಸಾಕಲು ಯಾರಲ್ಲೂ ತಕ್ಕ ತಯಾರಿ ಇರಲಿಲ್ಲ.

ಇಂಗ್ಲೆಂಡ್ ಹಿಡಿದ ಸೈನಿಕರಲ್ಲಿ ಟರ್ಕರು, ಜರ್ಮನರು, ಆಸ್ಟ್ರಿಯನರು ಇದ್ದರು. ಅವರಲ್ಲಿ 8ಸಾವಿರ ಜನರನ್ನು ಅದು ವಸಾಹತುಗಳಾದ ಈಜಿಪ್ಟ್‌, ಭಾರತ, ಬರ್ಮಾಗಳಲ್ಲಿಡಲು (ಮ್ಯಾನ್ಮಾರ್) ನಿರ್ಧರಿಸಿತು. ಇದಕ್ಕಾಗಿ ರಾಜಸ್ಥಾನದ ಸುಮೇರಪುರ; ಆಗಿನ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಅಹಮದ್‍ನಗರ, ಬೆಳಗಾವಿ, ಬಳ್ಳಾರಿ, ಬಂಗಾಳದ ಕಟಾಪಹಾಡ್ ಹಾಗೂ ಬರ್ಮಾಗಳನ್ನು ಆರಿಸಲಾಯಿತು. ಅಹಮದ್‍ನಗರದಲ್ಲಿ ಜರ್ಮನ್-ಆಸ್ಟ್ರ್ರಿಯನ್ ಕೈದಿಗಳು; ಬೆಳಗಾವಿಯಲ್ಲಿ ಕ್ರೈಸ್ತ ನಾಗರಿಕರು ಮಹಿಳೆ ಮಕ್ಕಳು; ಸುಮೇರಪುರ ಬಳ್ಳಾರಿ ಬರ್ಮಾಗಳಲ್ಲಿ ಟರ್ಕಿ ಸೈನಿಕರು.

ಮೊದಲಿಗೆ ಹಲವೆಡೆ ಸೆರೆಸಿಕ್ಕವರನ್ನು ಇರಾಕಿನ ಬಂದರುಪಟ್ಟಣ ಬಸ್ರಾಕ್ಕೆ ತರಲಾಯಿತು. ಅಲ್ಲಿಂದ ಹಡಗುಗಳಲ್ಲಿ ಕರಾಚಿ ಬಂದರಿಗೂ, ಕರಾಚಿಯಿಂದ ರೈಲಿನಲ್ಲಿ ಕೋಲ್ಕತ್ತೆಗೂ, ಅಲ್ಲಿಂದ ಬರ್ಮಾಕ್ಕೂ ಒಯ್ಯಲಾಯಿತು. ಇನ್ನೊಂದು ತಂಡವನ್ನು, ಸುಮೇರಪುರ ಅಹಮದ್‍ನಗರ, ಬೆಳಗಾವಿ, ಬಳ್ಳಾರಿಗಳಿಗೆ ಸಾಗಿಸಲಾಯಿತು.

ವೈರುಧ್ಯವೆಂದರೆ, ರಣಭೂಮಿಯಲ್ಲಿ ಸತ್ತವರಿಗಿಂತ ಹೆಚ್ಚಿನವರು ಸಾಗಣೆಯಲ್ಲೂ ಶಿಬಿರಗಳಲ್ಲೂ ಪ್ರಾಣತೆತ್ತರು. ಕೈದಿಗಳನ್ನು ಸ್ಥಳದಿಂದ ಸ್ಥಳಕ್ಕೆ, ಹಡಗು-ಟ್ರಕ್ಕುಗಳಲ್ಲಿ, ನಡೆಸಿಕೊಂಡು ಕರೆದೊಯ್ಯುವಾಗ, ಗಾಯಾಳುಗಳು ಸೂಕ್ತ ಔಷಧಿ ಉಪಚಾರ ವಿಶ್ರಾಂತಿಯಿಲ್ಲದೆ ಹುಳಗಳಂತೆ ಸಾಯುತ್ತಿದ್ದರು. ಇದನ್ನು ಇತಿಹಾಸಕಾರರು ಸಾವಿನ ಮೆರವಣಿಗೆ ಎಂದಿರುವರು. ಆಹಾರವಿಲ್ಲದೆ, ಇದ್ದರೂ ಹೊಸಪ್ರದೇಶದ ಹವಾಮಾನಕ್ಕೂ ಊಟ ನೀರಿಗೂ ಹೊಂದಿಕೊಳ್ಳದೆ ಕೈದಿಗಳು ಕಾಯಿಲೆ ಬೀಳುತ್ತಿದ್ದರು. ಹಲವು ದೇಶಗಳಿಂದ ಬಂದವರನ್ನು ಒಟ್ಟಿಗೆ ಕೂಡಿಡುತ್ತಿದ್ದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದವು. ಆಮಶಂಕೆ ಸಾಮಾನ್ಯವಾಗಿತ್ತು. ಈಜಿಪ್ಟ್‌ನ ಶಿಬಿರಗಳಲ್ಲಂತೂ ಕಣ್ಣಿನ ಬೇನೆಯಿಂದ ಅನೇಕರು ಕುರುಡರಾದರು.

ಬಳ್ಳಾರಿಯ ಅಲ್ಲಿಪುರ ಜೈಲಿನಲ್ಲಿ 137 ಯುದ್ಧಕೈದಿಗಳನ್ನು ಇಡಲಾಗಿತ್ತು. ಅವರ ಸಾವಿನ ಬಗ್ಗೆ ಎರಡು ಅಭಿಪ್ರಾಯಗಳಿವೆ.
1. 1918ರ ಇನ್‍ಫ್ಲುಯೆಂಜಾ ಕಾಯಿಲೆಗೆ ಸಿಕ್ಕಿ ಎಲ್ಲರೂ ನಿಧನರಾದರು. 2. ಬ್ರಿಟಿಷರು ಕೈದಿಗಳ ಸಾಮೂಹಿಕ ಹತ್ಯೆ ಮಾಡಿದರು. ಸ್ಥಳೀಯ ಹಿರಿಕರ ಪ್ರಕಾರ, ಅಲ್ಲಿ ನೂರಾರು ಸಮಾಧಿಗಳಿದ್ದವು. ಕಡಿಮೆ ಆಳದಲ್ಲಿ ಹೂತಿದ್ದರಿಂದ ಕಂಕಾಲಗಳೂ ಹೊರಬಿದ್ದಿದ್ದವು. ಮುಂದೆ ಅವುಗಳ ಮೇಲೆ ವಿಮಾನ ನಿಲ್ದಾಣ ನಿರ್ಮಿಸಲಾಯಿತು. ಈಗ ರಕ್ಷಿಸಲಾಗಿರುವುದು ರಾಜವಂಶಜರೂ ಸೇನಾಧಿಕಾರಿಗಳೂ ಆಗಿದ್ದ ಇಬ್ಬರ ಸಮಾಧಿಗಳನ್ನು ಮಾತ್ರ. ಟರ್ಕಿಯು ಭಾರತದ ಜತೆ ಮಾತುಕತೆಯಾಡಿ, 1980ರಲ್ಲಿ ಈ ಸ್ಮಾರಕ ನಿರ್ಮಿಸಿತು. ಅಂದಿನಿಂದ ಆಗಸ್ಟ್ 15 ಹಾಗೂ ಜನವರಿ 26ರಂದು ಎರಡೂ ರಾಷ್ಟ್ರಗಳ ಬಾವುಟ ಹಾರಿಸಲಾಗುತ್ತಿದೆ.

ಬಳ್ಳಾರಿಯಲ್ಲಿದ್ದ ಟರ್ಕಿ ಕೈದಿಗಳ ಬಗ್ಗೆ ಸಿಕ್ಕುತ್ತಿರುವ ಪ್ರಮುಖ ದಾಖಲೆಯೆಂದರೆ, ಅಂತರರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆಯ ವರದಿ. ಯುದ್ಧದಲ್ಲಿ ಸೆರೆಸಿಕ್ಕ ನಾಗರಿಕರನ್ನು ಹಾಗೂ ಸೈನಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುವುದನ್ನು ತಿಳಿದು, ಜಿನೇವಾದಲ್ಲಿ (1917) ಒಂದು ಸಭೆ ಏರ್ಪಟ್ಟಿತು. ಅದರಲ್ಲಿ ಯುದ್ಧಕೈದಿಗಳ ಸ್ಥಿತಿಗತಿ ಅರಿಯಲು, ರೆಡ್‍ಕ್ರಾಸ್ ಸಮಿತಿಗಳು ಶಿಬಿರಗಳಿಗೆ ಭೇಟಿಕೊಡಬೇಕೆಂದು ನಿರ್ಧರಿಸಲಾಯಿತು. ಅದರಂತೆ ಈಜಿಪ್ಟ್‌, ಭಾರತ, ಬರ್ಮಾಗಳಿಗೆ ಒಂದು ತಂಡ ರಚಿಸಲಾಯಿತು. ಸ್ವೀಡನ್ನಿನ ಥೊರಮೆಯೆರ್, ಎಮಾನುಯಲ್ ಸ್ಕಾಶ್, ಡಾ.ಬ್ರಾಂಕ್‍ಹಾಡ್ ಸದಸ್ಯರಾಗಿದ್ದ ಈ ತಂಡ, ಬಳ್ಳಾರಿಗೆ 1917ರ ಮಾರ್ಚ್ 17ಕ್ಕೆ ಭೇಟಿ ನೀಡಿತ್ತು. ಕೈದಿಗಳಿಗೆ ಒದಗಿಸಲಾದ ವಸತಿ ಊಟ ಉಡುಪು ಔಷಧಿ ಸೌಲಭ್ಯ ಹಾಗೂ ಅವರ ದೈಹಿಕ ಮಾನಸಿಕ ಆರೋಗ್ಯದ ಬಗ್ಗೆ ವರದಿ ನೀಡಿತು.

ವರದಿಯಲ್ಲಿ ಸ್ವಾರಸ್ಯಕರ ಸಂಗತಿಗಳಿವೆ. ಯುದ್ಧಕೈದಿಗಳ ಸಾಮಾನ್ಯ ದೂರು, ಕುಟುಂಬಗಳಿಂದ ಯಾವ ಸುದ್ದಿಯೂ ತಲುಪುತ್ತಿಲ್ಲ ಎಂಬುದಾಗಿತ್ತು. ಹೆಚ್ಚಿನವರು ಜೈಲಿನ ಏಕತಾನತೆಯಿಂದಲೂ, ಯುದ್ಧದ ನಿಷ್ಫಲತೆ, ಅನಿಶ್ಚಿತ ಭವಿಷ್ಯ, ಕುಟುಂಬದಿಂದ ಅಗಲಿಕೆಗಳಿಂದ ಸ್ಥಿಮಿತ ಕಳೆದುಕೊಂಡು ಅರೆಹುಚ್ಚರಾಗಿದ್ದರು. ಕಷ್ಟಗಳನ್ನು ದುಪ್ಪಟ್ಟುಗೊಳಿಸಿ ಹೇಳುತ್ತಿದ್ದರು. ಯುದ್ಧವನ್ನು ಶಪಿಸುತಿದ್ದರು. ಸಣ್ಣಕಾರಣಕ್ಕೆ ತಮ್ಮಲ್ಲೇ ಜಗಳವಾಡುತ್ತಿದ್ದರು. ಬಿಸಿಲು ಮತ್ತು ಆಹಾರದ ಬಗ್ಗೆ ದೂರು ಸಾಮಾನ್ಯವಾಗಿತ್ತು. ರೈತಾಪಿ ಮೀನುಗಾರ ವ್ಯಾಪಾರ ಹಿನ್ನೆಲೆಯಿಂದ ಬಂದವರು, ಊರಲ್ಲಿ ಕಸುಬು ನಾಶವಾದ ಬಗ್ಗೆ ದುಃಖಿಸುತ್ತಿದ್ದರು. ಪ್ರಾರ್ಥನೆಗೆಂದು ಕೊಟ್ಟ ಕೋಣೆಯನ್ನು ಆಟವಾಡುವುದಕ್ಕೂ ಕಾಫಿಮನೆಗೂ ಬಳಸುತ್ತಿದ್ದರು. ಅವರಿಗೆ ಡೈಸ್ ಚೆಸ್ ಡೊಮೊನಿಸ್ ಆಟ ಪ್ರಿಯವಾಗಿದ್ದವು. ಹಾಲಿಲ್ಲದ ಟರ್ಕಿಶ್ ಕಾಫಿ ಕುಡಿತಿದ್ದರು. ಟರ್ಕಿ ಭಾಷೆಯ ಪುಸ್ತಕ ಕಳಿಸಲು ಕೇಳುತ್ತಿದ್ದರು.

ಈ ಗೋಳು ಭಾರತ-ಬರ್ಮಾ ಶಿಬಿರಗಳಲ್ಲಿದ್ದವರದ್ದು ಮಾತ್ರವಲ್ಲ. ಟರ್ಕಿಯ ಶಿಬಿರಗಳಲ್ಲಿದ್ದ ಇಂಗ್ಲೆಂಡ್-ಭಾರತೀಯ ಸೈನಿಕರದ್ದೂ ಆಗಿತ್ತು. ಸಮಿತಿಯು, ವರದಿಯ ಕೊನೆಯಲ್ಲಿ  ‘ಸ್ವದೇಶಕ್ಕೆ ಮರಳಿದ ಬಳಿಕ ಟರ್ಕಿಯ ಸೈನಿಕರು ಬ್ರಿಟಿಷ್‌ ಸರ್ಕಾರ ನಮ್ಮನ್ನು ಚೆನ್ನಾಗಿ ನೋಡಿಕೊಂಡಿತೆಂದು ಹೇಳುವರು ಎಂದು ನಂಬಿಕೆಯಿದೆ’ ಎಂದು ಆಶಾಭಾವನೆ ಪ್ರಕಟಿಸಿದೆ. ಆದರೆ ಬಳ್ಳಾರಿಯಲ್ಲಿದ್ದ ಯುದ್ಧಕೈದಿಗಳು ಸ್ವದೇಶಕ್ಕೆ ತೆರಳಿದರೇ? ಇದುವೇ ತಿಳಿಯದಾಗಿದೆ.

ಪರದೇಶಗಳಿಗೆ ಹೋಗಿ ಮಡಿದ ಸೈನಿಕ ಸಮಾಧಿ ಮತ್ತು ಯುದ್ಧಸ್ಮಾರಕಗಳು ಜಗತ್ತಿನಾದ್ಯಂತ ಇವೆ. ಶ್ರೀರಂಗಪಟ್ಟಣದ ಸ್ಮಾರಕದಲ್ಲಿ ನಾಲ್ಕನೇ ಮೈಸೂರು ಯುದ್ಧದಲ್ಲಿ ಮಡಿದ ಆಂಗ್ಲಸೈನಿಕರ ಹೆಸರುಗಳಿವೆ; ದೆಹಲಿಯ ಇಂಡಿಯಾ ಗೇಟ್ ಸ್ಮಾರಕದಲ್ಲಿ ಮೈಸೂರು ಸೈನಿಕ ಹೆಸರುಗಳಿವೆ. ಎಲ್ಲರೂ ಬ್ರಿಟಿಷರ ಸಾಮ್ರಾಜ್ಯ ವಿಸ್ತರಣ ಕದನಗಳಿಗೆ ಜೀವ ತೆತ್ತವರು. ಸೈನಿಕರ ಸಮಾಧಿ ಮತ್ತು ಯುದ್ಧಸ್ಮಾರಕಗಳು ಆಯಾ ರಾಷ್ಟ್ರ ಮತ್ತು ನಾಗರಿಕ ಸಮಾಜಗಳು, ಹುತಾತ್ಮರಿಗೆ ತೋರಿಸಿದ ಕೃತಜ್ಞತೆಯಂತೆ ಕಾಣುತ್ತವೆ. ಆದರೆ ಇವು ಯುದ್ಧಗಳನ್ನು ಯಾರು ಯಾಕಾಗಿ ಮಾಡಿಸುತ್ತಾರೆ, ಅವಕ್ಕೆ ಬಲಿಯಾಗುವ ಜನ ಯಾರು, ಅವರನ್ನು ಖಂಡಾಂತರಗಳಿಗೆ ಒಯ್ದು ಬಲಿಗೊಟ್ಟ ಬಳಿಕ ಅವರ ಕುಟುಂಬಗಳ ಕತೆ ಏನಾಯಿತು- ಇತ್ಯಾದಿ ಪ್ರಶ್ನೆಗಳನ್ನು ಮರೆಮಾಚುತ್ತವೆ. ಎಂತಲೇ ಮೃತ ಸೈನಿಕರನ್ನು ಹುತಾತ್ಮ ಪರಿಭಾಷೆಯಲ್ಲಿ ಹೊಗಳುವುದು ಯುದ್ಧಕ್ರೌರ್ಯದ ಮೇಲೆ ಮುಚ್ಚುವ ಪರದೆಯಂತೆ ತೋರುವುದು.

ಇದು ವಸಾಹತುಶಾಹಿ ದೇಶಗಳು ಮಾಡಿದ ಯುದ್ಧಗಳಿಗೆ ಮಾತ್ರವಲ್ಲ; ರಾಜರು ಸುಲ್ತಾನರು ಮಾಡಿದ ಯುದ್ಧಗಳಿಗೂ, ಧರ್ಮ ಸಂಸ್ಕಂತಿ ಭಾಷೆ ರಕ್ಷಣೆಯ ಹೆಸರಲ್ಲಿ ನಡೆಸುವ ಸಮಕಾಲೀನ ಬೀದಿಯುದ್ಧಗಳಿಗೂ ಅನ್ವಯವಾಗುತ್ತದೆ. ಯುದ್ಧದ ಬಳಿಕ ದೊರೆ ಅಧಿಕಾರಿ ಹಾಗೂ ದೇಶಗಳು ಶೌರ್ಯಗಾಥೆಗಳಾಗಿ ದಾಖಲಾಗುತ್ತವೆ. ಸತ್ತ ಸೈನಿಕರ ಮತ್ತು ಅನಾಥವಾದ ಕುಟುಂಬಗಳ ಕಥೆ, ವಿಸ್ಮೃತಿಯ ಕಸದಬುಟ್ಟಿಗೆ ಸೇರುತ್ತದೆ. ಸೈನಿಕರು, ಯಾವುದೇ ದೇಶ ಧರ್ಮ ಭಾಷೆಗೆ ಸೇರಿರಲಿ, ಮೂಲತಃ ಕುಟುಂಬಸ್ಥರು; ದೂರದಲ್ಲಿರುವ ಅವರ ಮಕ್ಕಳು ಹೆಂಡತಿ ತಂದೆ–ತಾಯಿ ಮಾಡಿರಬಹುದಾದ ನಿರೀಕ್ಷೆ, ಅನುಭವಿಸಿರಬಹುದಾದ ಸಂಕಟದ ನೆಲೆಯಲ್ಲಿ ನೋಡಿದರೆ, ಯುದ್ಧಗಳ ಅಮಾನುಷತೆ ಹೊಳೆಯುತ್ತದೆ.

ಕವಿ ನಿಸಾರರ ‘ಅನಾಮಿಕ ಆಂಗ್ಲರು’ ಕವನ ನೆನಪಾಗುತ್ತಿದೆ. ಸೈನಿಕರು ಸತ್ತು ಅಪರಿಚಿತ ದೇಶಗಳ ಮಣ್ಣಲ್ಲಿ ಮಲಗುವ ಅವಸ್ಥೆಯನ್ನು ಕುರಿತು ಅಚ್ಚರಿ-ವಿಷಾದ ಪಡುವ ಕವನವಿದು. ಈ ದುಗುಡವನ್ನು ರಂಗೂನಿನಲ್ಲಿ ಸಾಯಬೇಕಾದ ಮೊಗಲ್ ಚರ್ಕವರ್ತಿ ಬಹದೂರಷಾ ಜಫರ್, ತನ್ನ ಶೋಕಕಾವ್ಯದಲ್ಲಿ ತೋಡಿಕೊಂಡನು. ಬಳ್ಳಾರಿಯಲ್ಲಿ ಇರುವುದು ಅನಾಮಿಕ ಟರ್ಕರು. ಇವರಂತೆಯೇ ಅನಾಮಿಕ ಭಾರತೀಯರು-ಕನ್ನಡಿಗರು ಹೊರದೇಶಗಳಲ್ಲಿ ಇದ್ದಾರೆ-ಸಮಾಧಿಯಲ್ಲಿ ಮಣ್ಣಾಗಿ, ಯುದ್ಧ ಚರಿತ್ರೆಯಲ್ಲಿ ಒಂದು ಸಂಖ್ಯೆಯಾಗಿ, ಯುದ್ಧಕ್ರೌರ್ಯದ ಅದೃಶ್ಯ ಸ್ಮಾರಕವಾಗಿ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು