ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಪ್ರತಿ ನಾಲ್ಕರಲ್ಲಿ ಒಂದು ಮಗುವಿಗೆ ಜೀವ ಜಲ ಕೊರತೆ!

ಸಂಕಷ್ಟಕ್ಕೆ ಸಿಲುಕಲಿವೆ 60 ಕೋಟಿ ಮಕ್ಕಳು
Last Updated 22 ಮಾರ್ಚ್ 2017, 8:50 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: 2040ರ ವೇಳೆಗೆ ಜಗತ್ತಿನ ಪ್ರತಿ ನಾಲ್ಕರಲ್ಲಿ ಒಂದು ಮಗುವಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಂದಾಜು 60 ಕೋಟಿ ಮಕ್ಕಳು ನೀರಿನ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ(ಯುನಿಸೆಫ್‌) ವರದಿ ತಿಳಿಸಿದೆ.

‘ಪ್ರಪಂಚದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವಂತೆ ನೀರಿನ ಬೇಡಿಕೆ ಹಾಗೂ ಬಳಕೆಯೂ ಹೆಚ್ಚಾಗಿದ್ದು, ಸಂಪನ್ಮೂಲ ಲಭ್ಯತೆ  ಕುಂಠಿತಗೊಳ್ಳುತ್ತಿದೆ. ಸದ್ಯ ಜಗತ್ತಿನ 36 ದೇಶಗಳು ನೀರಿಗಾಗಿ ಅತಿಯಾದ ಸಂಕಷ್ಟ ಸ್ಥಿತಿಯಲ್ಲಿವೆ. ಇದರೊಂದಿಗೆ ಸತತ ಬರ, ಸಮುದ್ರ ಮಟ್ಟದ ಹೆಚ್ಚಳ, ಹಿಮ ಕರಗುವಿಕೆ ಹಾಗೂ ಹವಾಮಾನ ವೈಪರೀತ್ಯದ ಪ್ರಭಾವವೂ ಭೀಕರ ಪರಿಣಾಮ ಉಂಟುಮಾಡಲಿದ್ದು, ನೀರಿನ ಪುನರ್ಬಳಕೆಗೆ ಒತ್ತು ನೀಡಬೇಕು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಂಥೋನಿ ಲೇಕ್‌ ಅವರು, ‘ನೀರಿಲ್ಲದೆ ಜೀವಿಗಳ ಬೆಳವಣಿಗೆ ಸಾಧ್ಯವಿಲ್ಲ. ಆದರೆ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಜೀವ ಜಲದ ಕೊರತೆ ಎದುರಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳ ಆರೋಗ್ಯ ಕ್ಷೀಣಿಸುತ್ತಿದ್ದು ತೀವ್ರ ಪರಿಣಾಮಗಳು ಉಂಟಾಗಲಿವೆ’ ಎಂದು  ಕಳವಳ ವ್ಯಕ್ತಪಡಿಸಿ, ‘ನಾವು ಸಾಮೂಹಿಕವಾಗಿ ತುರ್ತು ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ’ ಎಂದು ಎಚ್ಚರಿಸಿದ್ದಾರೆ.

ಪ್ರತಿನಿತ್ಯ 66.3 ಕೋಟಿ ಜನರು ಜಲ ಸಂಪನ್ಮೂಲ ಬಳಕೆಯ ಕೊರತೆ ಅನುಭವಿಸುತ್ತಿದ್ದು, ನಿತ್ಯ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 800 ಮಕ್ಕಳು ಕಲುಷಿತ ನೀರಿನ ಸೇವನೆಯಿಂದ ಅತಿಸಾರ ಮತ್ತಿತರೆ ಖಾಯಿಲೆಗಳಿಗೊಳಗಾಗಿ ಸಾವಿಗೀಡಾಗುತ್ತಿದ್ದಾರೆ.

ಯುನಿಸೆಫ್‌ ವರದಿಯ ಪ್ರಕಾರ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ನೀರಿಗಾಗಿ ಜನರು ಮೈಲುಗಳಷ್ಟು ದೂರಕ್ಕೆ ಹೋಗಿ ನೀರು ಸಂಗ್ರಹಿಸುವ ಸ್ಥಿತಿ ಜೀವಂತವಾಗಿದೆ. ನೀರಿನ ಕೊರತೆ ಹಾಗೂ ಕಲುಷಿತ ನೀರಿನ ಬಳಕೆಯ ಕಾರಣದಿಂದಾಗಿ ಮಕ್ಕಳು ಭೀಕರ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸರ್ಕಾರಗಳು ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು  ಸಂಕಷ್ಟದಲ್ಲಿರುವ ಪ್ರದೇಶಗಳ ಕಡೆಗೆ ವಿಶೇಷ ಗಮನಹರಿಸಬೇಕು ಎಂದು ಯುನಿಸೆಫ್‌ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT