ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸೆಲೂನ್ ಶಾಪ್ಗಳಿಗೂ ಭಾರೀ ಬೇಡಿಕೆ ಇದೆ. ಭಾನುವಾರವಂತೂ ಕ್ಯೂನಲ್ಲಿ ಕೂತುಕೊಂಡು, ಕಾಯ್ದು, ಹೇರ್ಕಟಿಂಗ್, ಗಡ್ಡ ಕೆರೆಸಿಕೊಳ್ಳೋದು ಮಾಮೂಲಾಗಿಬಿಟ್ಟಿದೆ. ಕಾಯಕವೇ ಕೈಲಾಸ ಅಂತ ತಿಳಿದೋನು ಬೆಂಗಳೂರಿನಂತಹ ಊರಲ್ಲಿ ಹಣ ಮಾಡಬಹುದು. ಏನೋ ಹೇಳಲಿಕ್ಕೆ ಹೋದವನು ಮತ್ತೆಲ್ಲಿಗೋ ಹೋಯ್ತು. ಇರಲಿ ಈಗ ಹೇಳುತ್ತಿರುವುದು ತಲೆ ಚವುರದ ಕಥೆ.

ನಾನು ಹೈಸ್ಕೂಲ್ನಲ್ಲಿ ಓದುತ್ತಿದ್ದಾಗ ನಾನೇ ಅನುಭವಿಸಿದ ಘಟನೆ. ಒಂದು ಕಾಲಕ್ಕೆ ಕ್ಷೌರ ಮಾಡುವುದನ್ನು ಕ್ಷೌರಿಕರು ಮಾತ್ರ ಮಾಡುತ್ತಿದ್ದರು. ಈಗ ಯಾವುದೇ ವೃತ್ತಿಯನ್ನು ಯಾರೇ ಮಾಡಿದರೂ ಅಡ್ಡಿ ಇಲ್ಲ. ದುಡಿಯುವ ಮನಸ್ಸು ಮುಖ್ಯ. ನಮ್ಮೂರಲ್ಲಿ ಹಿಂದಿನಿಂದಲೂ ಕ್ಷೌರಿಕರಿಗೆ ನೆಲೆ ಇರಲಿಲ್ಲ. ಕುಂಬಾರರು, ಆಚಾರರು ಯಾಕೋ ಏನೋ ನಮ್ಮೂರಿನಲ್ಲಿ ಇಲ್ಲಿಯವರೆಗೂ ತಳವೂರಲಿಕ್ಕೆ ಸಾಧ್ಯವಾಗಿಲ್ಲ.

ನಮ್ಮ ಅಜ್ಜಿ ಹೇಳುತ್ತಿದ್ದ ಪ್ರಕಾರ ಆಚಾರರಿಗೆ ನಮ್ಮೂರು ಒಗ್ಗಿ ಬರುವುದಿಲ್ಲ. ಅದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಒಕ್ಕಲಿಗರು, ಲಿಂಗಾಯತರು, ದಲಿತರು ಮಾತ್ರ ಊರಿನಲ್ಲಿ ವಾಸವಿರುವುದು. ಹಾಗಾಗಿ, ಕ್ಷೌರಿಕರೂ ಮನೆ ಕಟ್ಟಿಕೊಂಡು ವಾಸವಿದ್ದವರಲ್ಲ. ತಿಂಗಳಿಗೊಮ್ಮೆ, ವಾರಕೊಮ್ಮೆ ಮಾತ್ರ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ನಮ್ಮ ಜನ ದಶವಾರದ ಸಂತೆಗೆ ಹೋಗುತ್ತಿದ್ದರು. ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಮಾಕಳಿಯಿಂದ ಕ್ಷೌರಿಕರು ಬಂದು ಹೇರ್ಕಟಿಂಗ್, ಮುಖ ಚೌರ ಮಾಡುತ್ತಿದ್ದರು.

ದಲಿತರಾದ ನಮಗೆ ಯಾರೂ ಬಂದು ಕೂದಲು ಕತ್ತರಿಸುವ ಕುಶಲ ಕಲೆಯನ್ನು ಮಾಡುತ್ತಿರಲಿಲ್ಲ. ಒಕ್ಕಲಗೇರಿಯ ಜನರಿಗೆ ಎಲ್ಲೆಂದರಲ್ಲಿ ಚೌರ ಮಾಡುತ್ತಿದ್ದ ಕ್ಷೌರಿಕ ರಸ್ತೆಬದಿ ಕುಂಡಿಗೆ ಒಂದು ಕಲ್ಲು ಸಿಕ್ಕರೆ ಸಾಕು ಕೂತುಕೊಂಡು ಕ್ಷೌರ ಮಾಡುತ್ತಿದ್ದ. ಆ ಭಾಗ್ಯವೂ ಇಲ್ಲದ ದಲಿತರು ಬೇರೆ ಊರುಗಳಿಗೆ ಹೋಗಲೇಬೇಕಾಗಿತ್ತು. ಮೊಂಡ ಕತ್ತಿಯನ್ನು ಮಸೆದು ಚೆನ್ನಾಗಿ ಹರಿತ ಮಾಡಿಕೊಂಡು ಕೆತ್ತುತ್ತಿದ್ದ ದೃಶ್ಯ ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ.

ನಮ್ಮೂರಿಗೆ ಸಮೀಪವಿರುವ ಮಾಕಳಿ ದೊಡ್ಡ ಊರು. ನವ ನಾಗರಿಕತೆ ತುಂಬಿಕೊಂಡಿರುವ ಊರು. ದನಗಳಿಗೆ ಹೋರಿ ಕೊಡಿಸಲಿಕ್ಕೂ ಸುತ್ತಳ್ಳಿಯ ಜನ ಮಾಕಳಿಗೆ ಹೋಗಬೇಕಾಗಿತ್ತು. ಈ ಮಾಕಳಿಯಲ್ಲಿ ಕ್ಷೌರಿಕರವೂ, ಅಗಸರವೂ ಬೆರಳೆಣಿಕೆಯ ಮನೆಗಳಷ್ಟೇ ಇದ್ದವು. ನಮ್ಮೂರಿಗೆ ವರ್ತನೆ ಮಾಡಿಕೊಂಡು ಈ ಇಬ್ಬರೂ ಜಾತಿಯವರೂ ಒಪ್ಪಂದದಂತೆ ಬಂದು ತಮ್ಮ ಸೇವೆ ಮಾಡುತ್ತಿದ್ದರು. ಹಬ್ಬದ ದಿನಗಳಲ್ಲಿ ಪಂಜು ಹಿಡಿಯುವುದು, ದೇವರಿಗೆ ನಡೆಮುಡಿ ಹಾಸುವುದು ಹಾಗೂ ಊರ ಹೆಂಗಸರ ಹೊರಗಡೆ ಆದ ಬಟ್ಟೆಗಳನ್ನು ತೊಳೆಯುವುದು ಅಗಸರ ಕೆಲಸವಾಗಿತ್ತು. ಕ್ಷೌರಿಕರು ಮತ್ತು ಅಗಸರು ವರ್ಷಕ್ಕೆ ಒಂದು ಸಾರಿ ಬಂದು ರಾಗಿ ಹುಲ್ಲಿನ ತೆನೆಯ ಸಮೇತವಾಗಿ ಪ್ರತಿ ಮನೆಯಿಂದ ತೆಗೆದುಕೊಂಡು ಹೋಗುವಂತೆ ಮೊದಲೇ ಯಜಮಾನರು ತೀರ್ಮಾನ ಮಾಡುತ್ತಿದ್ದರು. ಹಿಂದಿನಿಂದಲೂ ಈ ಅಲಿಖಿತ ನಿಯಮ ಮುಂದುವರಿದಿತ್ತು.

ದಶವಾರದ ಸಂತೆ ಅದು ನಮ್ಮೂರಿಗೆ ಹತ್ತು ಕಿಲೋಮೀಟರ್ ಅಂತರದಲ್ಲಿತ್ತು. ವಾರಕ್ಕೊಮ್ಮೆ ಸಾವಿರಾರು ಜನರು ಸೇರುತ್ತಿದ್ದರು. ಸಂತೆ ಅಂದ್ರೆ ನೀವೇ ಕಲ್ಪಿಸಿಕೊಳ್ಳಿ. ಕುರಿ, ಕೋಳಿ, ಮೇಕೆ, ಸೂಜಿ, ಮೂಗುದಾರ ಹೀಗೆ ಕೃಷಿಕರಿಗೆ ಬೇಕಾದ ಎಲ್ಲಾ ಸಾಮಾನುಗಳು ದೊರೆಯುತ್ತಿದ್ದವು. ಕಡ್ಲೆಪುರಿಯಿಂದ ಹಿಡಿದು ಅವರೆಕಾಳು, ಅಡುಗೆ ಪದಾರ್ಥಗಳು, ತಿನ್ನುವ ಪದಾರ್ಥಗಳು ಸಿಗುತ್ತಿದ್ದವು. ದಿನಸಿ ಪದಾರ್ಥ, ಉಪ್ಪು, ಹುಣಿಸೆಹಣ್ಣು, ಜೀರಿಗೆ, ಮೆಣಸಿನಕಾಯಿ, ಗಾಳ, ನೇಗಿಲು, ಉಪ್ಗಡಲೆ ಹೀಗೆ ಎಲ್ಲವೂ ಸಿಗುತ್ತಿದ್ದ ಸಂತೆಯಾಗಿತ್ತು. ಕಟಿಂಗ್ ಎನ್ನುವ ಶಬ್ದ ತುಂಬಾ ನಿಧಾನವಾಗಿ ನಮ್ಮೂರನ್ನು ಪ್ರವೇಶ ಮಾಡಿತು.

ತಲೆಚವುರ, ತಲೆಕಟಿಂಗ್ ಎಂತಲೇ ಪರ್ಯಾಯವಾಗಿ ಕರೆಯುತ್ತಿದ್ದರು. ಎದುರಿಗೆ ಯಾರಾದರೂ ಕ್ಷೌರ ಮಾಡಿಸಿಕೊಂಡವರು ಸಿಕ್ಕರೆ ‘ಏನ್ ತಲೆ ಕಟಿಂಗ್ ಗಿಟಿಂಗ್ ಮಾಡಿಸಿಕೊಂಡಿದ್ದೀಯಾ’ ಅಂತನ್ನುವರು. ಕಟಿಂಗ್ ಮಾಡಿಸ್ಕೊಂಡು ಬಂದ ಮೇಲೆ ತೊಟ್ಟಿದ್ದ ಬಟ್ಟೆಯನ್ನು ಕಳಚಿ ಸ್ನಾನ ಮಾಡಬೇಕಾಗಿತ್ತು ಅಥವಾ ತಲೆ ತೊಳೆದುಕೊಳ್ಳಬೇಕಾಗಿತ್ತು. ನಾವು ಸ್ನಾನ ಮಾಡಲಿಕ್ಕೆ ಸೋಮಾರಿ. ಬಗ್ಗಿಕೊಂಡೇ ತಲೆ ಮಾತ್ರ ತೊಳೆದುಕೊಂಡು ನೀರನ್ನು ಉಳಿತಾಯ ಮಾಡುತ್ತಿದ್ದೆವು.

ಪುಟ್ಟಸ್ವಾಮಿ ಸಂತೆಯಲ್ಲಿ ನಮ್ಮ ಜನರಿಗೆ ಮಾತ್ರ ಚವುರ ಮಾಡುತ್ತಿದ್ದ. ನಮ್ಮ ಬಾದರಾಯಣ ಸಂಬಂಧಿ ವ್ಯಕ್ತಿಯಾದ ಆತ ಅಬ್ಬೂರಿನಿಂದ ಬರುತ್ತಿದ್ದ. ನಮ್ಮದೇ ಜನಾಂಗದವನು ಅಂತ ಮೊದಲೇ ಹೇಳಿಕಳಿಸುತ್ತಿದ್ದರು.

ಈತ ದಲಿತರಿಗೆ ಮಾತ್ರ ಚವುರ ಮಾಡುತ್ತಿದ್ದ ಕರುಣಾಳು. ನಿಜವಾದ ಕ್ಷೌರಿಕರು ನಮ್ಮ ತಲೆಯನ್ನು ಮೂಸಿಯೂ ನೋಡುತ್ತಿರಲಿಲ್ಲ. ಸಂತೆ ನಡೆಯುವ ಸ್ವಲ್ಪ ಅಂತರದಲ್ಲಿ ಮರದ ಕೆಳಗಡೆ ಕೂರಿಸಿಕೊಂಡು ಚವುರ ಮಾಡುತ್ತಿದ್ದ ಪುಟ್ಟಸ್ವಾಮಿಯೂ ಅಷ್ಟು ಇಷ್ಟು ಅಂತ ಹಠ ಮಾಡದೆ ಕೊಟ್ಟಷ್ಟು ತೆಗೆದುಕೊಂಡು ತನ್ನ ಕೆಲಸ ಮಾಡುತ್ತಿದ್ದ.

ಚಿಕ್ಕ ಹುಡುಗರಿಗೆ ರಿಯಾಯಿತಿ ಇತ್ತು. ಪುಟ್ಟಸ್ವಾಮಿಯ ಕಣ್ಣುಗಳೇ ಸುತ್ತಮುತ್ತಲ ಕನ್ನಡಿಯಾಗಿತ್ತು. ಸರಿ ತಪ್ಪನ್ನೆಲ್ಲಾ ಅವನೇ ಹೇಳಬೇಕಾಗಿತ್ತು. ಅವನೂ ಅಷ್ಟೆ, ಅಷ್ಟೇನೂ ನುರಿತ ಕೈಯಾಗಿಲ್ಲದ ಕಾರಣ ಒಂದು ಅಂದಾಜಿನಂತೆ ತಲೆಕೂದಲನ್ನು ಕತ್ತರಿಸುವುದನ್ನು ಅವನ ತಂದೆಯಿಂದ ಕಲಿತಿದ್ದ. ಗೊತ್ತಿಲ್ಲದ ಆ ಉನ್ನತ ವಿದ್ಯೆ ಬಗ್ಗೆ ಉಸಾಬರಿಗೆ ಹೋದವನಲ್ಲ. ಒಂದೇ ಒಂದು ನಾಟಿ ಸ್ಟೈಲ್ ಎಂದರೆ ಸಿಜರ್ ಕಟಿಂಗ್ ಮಾತ್ರ ಬಳಕೆಯಲ್ಲಿತ್ತು. ತಲೆಯ ಹಿಂದೆ ಹಾಕುತ್ತಿದ್ದ ಮಿಷನ್ನಿಂದ ಬರುತ್ತಿದ್ದ ಶಬ್ದ ಒಂದು ರೀತಿ ಖುಷಿ ಕೊಡುತ್ತಿತ್ತು.

ಅಪ್ಪನ ಜೊತೆಯಲ್ಲಿ ಸಂತೆಗೆ ಬಂದಾಗ, ಪುಟ್ಟಸ್ವಾಮಿಯನ್ನು ಕುರಿತು ‘ಗೆಡ್ಗೆ ಹೊಡಿ’ ಎಂದು ಹೇಳುತ್ತಿದ್ದ. ಒಂದು ಸಾರಿ ತಲೆಕೂದಲಿಗೆ ಕತ್ತರಿ ಬಿದ್ದರೆ ಕಡಿಮೆ ಎಂದರೂ ಮೂರು ತಿಂಗಳು ಸಂತೆ ಕಡೆ ತಲೆ ಹಾಕುವಂತಿರಲಿಲ್ಲ. ಹೀಗೆ ಸಂತೆಗೆ ಹೋಗುವ ನೆಪದಲ್ಲಿ ಗಂಡಸರೂ ತಮ್ಮ ಕೂದಲನ್ನು ಕತ್ತರಿಸಿಕೊಂಡು ಸ್ಮಾರ್ಟ್ ಆಗುತ್ತಿದ್ದರು. ಬಹಳ ವರ್ಷ ಈ ಪದ್ಧತಿ ಮುಂದುವರಿದಿತ್ತು. ವಯಸ್ಸಾದವರು, ನಡೆಯಲು ಆಗದವರು, ಮುದುಕರು ಸಂತೆಗೆ ಹೋಗುವುದು ಕಷ್ಟವಾಗುತ್ತಾ ಬಂತು. ಕಾಯಿಲೆ ಬಿದ್ದ ಮುದುಕರಿಗೆ ಇದರಿಂದ ತೊಂದರೆಯಾಯಿತು. ಹಿರಿಯರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದರು. ನಾವೂ ಒಕ್ಕಲಗೇರಿಯವರಂತೆ ವರ್ಷಕ್ಕೆ ಇಷ್ಟು ಅಂತ ಕೊಡೋದು ಅಥವಾ ದುಡ್ಡು ಕೊಟ್ಟು ಮಾಡಿಸಿಕೊಳ್ಳೋದು. ಎರಡರಲ್ಲಿ ಒಂದು ಎಂದು ನಿಗದಿ ಮಾಡಿದರು. ಅಬ್ಬೂರು ಪುಟ್ಟಸ್ವಾಮಿ ಇದಕ್ಕೆ ದೂಸರಾ ಮಾತನಾಡದೆ ಒಪ್ಪಿದ. ಕರುಳಬಳ್ಳಿಯ ಜನ, ಜನಾಂಗಕ್ಕೆ ಜನಾಂಗವೇ ಗತಿ ಎಂದು ಅರಿತ ಪುಟ್ಟಸ್ವಾಮಿ ಊರಿಗೆ ಬಂದು ಕಟಿಂಗ್ ಮಾಡಲು ಒಪ್ಪಿದ.

ಕೇರಿಯಲ್ಲಿ ಒಬ್ಬರ ಮನೆಯ ಪಡಸಾಲೆ ನಿಗದಿಯಾಯಿತು. ಅಲ್ಲಿ ಕ್ಷೌರ ಮಾಡುವುದು, ಇದಕ್ಕೆ ಬಾಡಿಗೆ ಬಾನಾಸು ಯಾವುದೂ ಇಲ್ಲ ಅಂತಲೂ, ಜಾಗ ಕೊಟ್ಟವನಿಗೆ ಸ್ವಲ್ಪ ರಿಯಾಯಿತಿಯಲ್ಲಿ ಕೂದಲು ಕತ್ತರಿಸಿಕೊಡುವುದು ಎಂದೂ ತೀರ್ಮಾನವಾಯಿತು. ಅದರಂತೆ ನಡೆಯುತ್ತಿತ್ತು. ದೀಪಾವಳಿ ಆದ ಮೇಲೆ ಪುಟ್ಟಸ್ವಾಮಿ ಎರಡು ತಿಂಗಳು ನಮ್ಮೂರ ಕಡೆ ತಲೆ ಹಾಕಲಿಲ್ಲ. ಯಾರ ಜೊತೆಯೋ ಜಗಳ ಮಾಡಿಕೊಂಡು ‘ನಾನು ಇನ್ಮೇಲೆ ನಿಮಗೆ ತಲೆ ಚವುರ ಮಾಡಲ್ಲ. ನಿಮ್ಮೂರಿಗೂ ಕಾಲಿಡಲ್ಲ’ ಅಂತ ಕಡ್ಡಿ ಮುರದಂಗೆ ಕಂಡೀಷನ್ ಹಾಕಿ ಹೋದವನು ಮತ್ತೆ ಬರಲೇ ಇಲ್ಲ. ವಯಸ್ಸಾದ ಮುದುಕರು, ಮಧ್ಯವಯಸ್ಸಿನವರು, ಗಡ್ಡ– ಮೀಸೆ ಬೆಳೆಸಿಕೊಂಡು ಆದಿಮಾನವನಂತೆ ಕಾಣತೊಡಗಿದರು. ರಾತ್ರಿ ಹೊತ್ತು ಹೆಂಗಸರು ತಮ್ಮ ಗಂಡಂದಿರನ್ನು ನೋಡಲು ಹೆದರುತ್ತಿದ್ದರು!

ನಾನಾದರೂ ಸ್ಕೂಲಿಗೆ ಹೋಗಬೇಕು. ಅನ್ಯಮಾರ್ಗವಿಲ್ಲದೆ ಅಪ್ಪನೇ ಕತ್ತರಿ ತೆಗೆದುಕೊಂಡು ಅಂಗೈ ಅಗಲದ ಕನ್ನಡಿಯ ಚೂರನ್ನು ಇಟ್ಟು ತಲೆಗೂದಲ ಮೇಲೆ ಕತ್ತರಿ ಆಡಿಸಿ ಶಿಕಾರಿ ಮಾಡಿದ್ದ. ಕೇರಿಯಲ್ಲಿ ಸುಮಾರು ಜನ ಹೀಗೆಯೇ ತಮ್ಮ ಓದುವ ಮಕ್ಕಳಿಗೆ ತಾವೇ ಕಟಿಂಗ್ ಮಾಡಿದ್ದನ್ನು ನೋಡಿದ್ದ ಅಪ್ಪ ನಾನೂ ಒಂದು ಕೈ ನೋಡೇ ಬಿಡೋಣವೆಂದು ಮಾಡಿದ. ಒಂದರ್ಧ ತಾಸು ಆಯ್ತು. ಯಾವ ಶೈಲಿಗೂ ಬರದ ರೀತಿಯಲ್ಲಿ ಕೊಚ್ಚಾಕಿದ್ದ. ಮಾರನೇ ದಿನವೇ ಸೋಮವಾರವಾಗಿತ್ತು. ಸ್ಕೂಲಿಗೆ ಬ್ಯಾಗ್ ಏರಿಸಿಕೊಂಡು ಹೊರಟೆ. ನನ್ನ ನೋಡಿದ ಹುಡುಗರೆಲ್ಲಾ ಗೊಳ್ ಎಂದು ನಕ್ಕರು. ತಲೆಕೂದಲು ಕತ್ತರಿಸಿದ ಪರಿ ಅವರಿಗೆ ವಿಚಿತ್ರವಾಗಿ ಕಂಡಿರಬೇಕು. ಅದಕ್ಕಾಗಿ ಅವರು ‘ಇಲಿ ಕುರುಕಿದ ಹಾಗೆ’ ಅಂತ ಹೊಸ ಉಪಮೆಯನ್ನ ಕೊಟ್ಟರು. ಸ್ಕೂಲಿಗೆ ಹೋಗುವಷ್ಟೊತ್ತಿಗೆ ಇದ್ದ ಅಲ್ಪಸ್ವಲ್ಪ ಮರ್ಯಾದೆಯನ್ನೂ ಜಾಲಾಡಿದರು. ಅಪಹಾಸ್ಯ, ಅವಮಾನದ ಸಂತೆಯಲ್ಲಿ ಮುಳುಗೇಳುವಂತೆ ಮಾಡಿದ್ದರು. ಇಂತಹ ಸಮಯದಲ್ಲಿ ಒಂದು ಟೋಪಿಯಾದರೂ ಇದ್ದಿದ್ದರೆ ಅಪಹಾಸ್ಯಕ್ಕೆ ಗುರಿಯಾಗುತ್ತಿರಲಿಲ್ಲವೇನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.