ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಉತ್ತರಾಖಂಡ: ಪರ್ಯಾಯ ಆಡಳಿತದ ಪರಿಪಾಟ

Last Updated 14 ಜನವರಿ 2022, 4:20 IST
ಅಕ್ಷರ ಗಾತ್ರ

20 ವರ್ಷಗಳ ಕಡಿಮೆ ಅವಧಿಯಲ್ಲಿ ಉತ್ತರಾಖಂಡವು 10 ಮುಖ್ಯಮಂತ್ರಿಗಳನ್ನು ಕಂಡಿದೆ. ಎನ್‌.ಡಿ.ತಿವಾರಿ ಅವರನ್ನು ಹೊರತುಪಡಿಸಿದರೆ, ಬೇರಾವ ಮುಖ್ಯಮಂತ್ರಿಯೂ ಅವಧಿ ಪೂರ್ಣಗೊಳಿಸಲು ಆಗಿಲ್ಲ. ಇದು ರಾಜ್ಯದ ರಾಜಕೀಯ ಅಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗುತ್ತಾ ಬಂದಿವೆ. ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿರುವುದು, ರಾಜ್ಯದಲ್ಲಿ ಬಿಜೆಪಿ ಮತ್ತೆ ಚುಕ್ಕಾಣಿ ಹಿಡಿಯಲು ಅಡ್ಡಿಯಾಗಬಹುದು ಎಂಬ ಅಭಿಪ್ರಾಯವಿದೆ. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸಹ ಹಲವು ಮುಖ್ಯಮಂತ್ರಿಗಳನ್ನು ಬದಲಿಸಿದ ಇತಿಹಾಸ ಹೊಂದಿದೆ.

2000ನೇ ಇಸ್ವಿಯಲ್ಲಿಉತ್ತರ ಪ್ರದೇಶ ವಿಭಜನೆಯಾಗಿ ಹೊಸ ರಾಜ್ಯ ಉತ್ತರಾಖಂಡ ಜನ್ಮ ತಳೆದಾಗ, ಬಿಜೆಪಿ ಸರ್ಕಾರ ರಚಿಸಿತ್ತು. ನಿತ್ಯಾನಂದ ಸ್ವಾಮಿ ಅವರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಇವರ ಅಲ್ಪಕಾಲದ ಅಡಳಿತದ ಬಳಿಕ, ಭಗತ್‌ಸಿಂಗ್ ಕೋಶಿಯಾರಿ ಮುಖ್ಯಮಂತ್ರಿಯಾದರು.2002ರಲ್ಲಿ ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಗದ್ದುಗೆ ಏರಿತು. 2002ರಿಂದ 2007ರವರೆಗೆ ಎನ್‌.ಡಿ. ತಿವಾರಿ ಪೂರ್ಣಾವಧಿ ಅಧಿಕಾರ ನಡೆಸಿದರು. ಕಾಂಗ್ರೆಸ್ ಅನ್ನು ಸೋಲಿಸಿದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ನಿವೃತ್ತ ಮೇಜರ್ ಜನರಲ್ ಬಿ.ಸಿ. ಖಂಡೂರಿ ಅಧಿಕಾರಕ್ಕೆ ಬಂದರು. ಆದರೆ 2012ರಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ 32 ಹಾಗೂ ಬಿಜೆಪಿ 31 ಸ್ಥಾನ ಗೆದ್ದವು. ಬಿಎಸ್‌ಪಿ, ಕ್ರಾಂತಿದಳ, ಮೂವರು ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿತು.

ಈ ಅವಧಿಯಲ್ಲಿ ಕಾಂಗ್ರೆಸ್‌ನಲ್ಲೂ ಹಲವು ಮುಖ್ಯಮಂತ್ರಿಗಳು ಬಂದುಹೋದರು. ವಿಜಯ್ ಬಹುಗುಣ ಬಳಿಕ ಹರೀಶ್ ರಾವತ್ ಮುಖ್ಯಮಂತ್ರಿ ಆಗಿದ್ದರು. 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಧಿಕಾರ ಕೈಜಾರಿ ಬಿಜೆಪಿ ತೆಕ್ಕೆಗೆ ಸೇರಿತ್ತು. ಹರೀಶ್ ರಾವತ್ ಅವರು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಬಾರಿ ಕಾಂಗ್ರೆಸ್‌ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಅದು ನಿಜವಾದಲ್ಲಿ, ರಾಜ್ಯದಲ್ಲಿ ಪರ್ಯಾಯ ಆಡಳಿತ ಸಂಸ್ಕೃತಿ ಮುಂದುವರಿದಂತಾಗುತ್ತದೆ.

ಕಾಂಗ್ರೆಸ್‌ ಒಡೆದ ಮನೆ

ಉತ್ತರಾಖಂಡದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಸಹ ಭಾರಿ ಸಿದ್ಧತೆ ನಡೆಸಿದೆ. ಭಾರಿ ರ‍್ಯಾಲಿಗಳನ್ನು ಕಾಂಗ್ರೆಸ್‌ ಆಯೋಜಿಸಿತ್ತು. ಜನರಿಗೆ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದೆ. ಈ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್‌ ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದರೂ, ನಾಯಕತ್ವದಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ. ಪಕ್ಷದೊಳಗಿನ ಬಣ ರಾಜಕಾರಣವನ್ನು ತಣ್ಣಗಾಗಿಸಲು ಯಾವುದೇ ಯತ್ನಗಳು ನಡೆಯುತ್ತಿಲ್ಲ. ಇದು ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಢಾಳಾಗಿ ಕಾಣುತ್ತಿವೆ.

ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವೇ ಸಂಖ್ಯೆಯಲ್ಲಿರುವ ಕಾರ್ಯಕರ್ತರನ್ನು ಸಂಘಟಿಸಿ, ಚುನಾವಣೆ ಎದುರಿಸಲು ಅಗತ್ಯವಿರುವ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯಗಳು, ಕೋಮು ಧ್ರುವೀಕರಣ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಅನುಷ್ಠಾನವಾಗದಿರುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಾರ್ಯತಂತ್ರವನ್ನು ರೂಪಿಸಲಾಗಿದೆ. ಇದಕ್ಕಾಗಿ ರ‍್ಯಾಲಿ, ಮನೆ–ಮನೆ ಭೇಟಿ ಮತ್ತು ವರ್ಚ್ಯುವಲ್‌ ಸಭೆಗಳನ್ನೂ ನಡೆಸಲಾಗುತ್ತಿದೆ. ಚುನಾವಣಾ ಆಯೋಗವು ರ‍್ಯಾಲಿಯನ್ನು ನಿಷೇಧಿಸಿರುವ ಕಾರಣ, ವರ್ಚ್ಯುವಲ್‌ ಸಂವಾದಕ್ಕೆ ಒತ್ತು ನೀಡಲಾಗಿದೆ.

ಆದರೆ ರಾವತ್ ಅವರ ಈ ಯತ್ನಕ್ಕೆ, ಪಕ್ಷದ ಒಂದು ಬಣದ ನಾಯಕರು ಮತ್ತು ಕಾರ್ಯಕರ್ತರಷ್ಟೇ ಸಹಕಾರ ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ಪ್ರಭಾವಿ ನಾಯಕ ಪ್ರೀತಂ ಸಿಂಗ್‌ ಅವರು, ರಾವತ್ ನಾಯಕತ್ವವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಪ್ರೀತಂ ಜತೆಗೆ ಗುರುತಿಸಿಕೊಂಡಿರುವ ನಾಯಕರು ಮತ್ತು ಕಾರ್ಯಕರ್ತರು ರಾವತ್ ಅವರ ಕಾರ್ಯತಂತ್ರಕ್ಕೆ ಸಹಕಾರ ನೀಡುತ್ತಿಲ್ಲ. ಇದರಿಂದ ರೋಸಿ ಹೋಗಿರುವ ರಾವತ್ ಅವರು ಕಳೆದ ತಿಂಗಳು, ‘ಪಕ್ಷದ ನಾಯಕರು ಸಹಕಾರ ನೀಡುತ್ತಿಲ್ಲ. ಪ್ರವಾಹದ ವಿರುದ್ಧ ಈಜಿ, ಈಜಿ ನನಗೂ ಸಾಕಾಗಿದೆ’ ಎಂದು ಹೇಳಿದ್ದರು. ಆದರೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ರಾವತ್ ಅವರನ್ನು ಸಮಾಧಾನ ಪಡಿಸಿದ್ದರು. ಆದರೆ ಅಷ್ಟಕ್ಕೇ ಬಣ ರಾಜಕಾರಣ ತಣ್ಣಗಾಗಿಲ್ಲ.

‘ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದೇಈ ಬಣ ರಾಜಕಾರಣದ ಹಿಂದಿನ ಚಾಲಕ ಶಕ್ತಿ. ರಾವತ್ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಪಕ್ಷವು ಅಧಿಕಾರಕ್ಕೆ ಬಂದರೆ, ರಾವತ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಮುಂದಿನ ಮುಖ್ಯಮಂತ್ರಿ ತಾನೇ ಆಗಬೇಕು ಎಂದು ಪ್ರೀತಂ ಸಿಂಗ್ ಬಯಸಿದ್ದಾರೆ. ಇದಕ್ಕಾಗಿಯೇ ಅವರು ರಾವತ್ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ವಿವರಿಸಿದ್ದಾರೆ. ಇದನ್ನು ತಿಳಿಗೊಳಿಸುವ ಯತ್ನಗಳು ನಡೆದಿವೆಯಾದರೂ, ಅದು ನಿರೀಕ್ಷಿತ ಫಲ ನೀಡಿಲ್ಲ. ‘ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಫಲಿತಾಂಶದ ನಂತರ ನಿರ್ಧರಿಸೋಣ’ ಎಂದು ಪ್ರೀತಂ ಸಿಂಗ್ ಹೇಳಿದ್ದಾರೆ.

‘ಕಾಂಗ್ರೆಸ್‌ನಲ್ಲಿನ ಈ ಒಡಕು, ಬಹಿರಂಗವಾಗಿಯೇ ಕಾಣುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಈ ಅಲೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್‌ಗೆ ಸಾಕಷ್ಟು ಅವಕಾಶಗಳಿವೆ. ಆದರೆ ಒಳಜಗಳದ ಪರಿಣಾಮ ಇಂತಹ ಮಹತ್ವದ ಅವಕಾಶವನ್ನು ಕಾಂಗ್ರೆಸ್‌ ಕೈಚೆಲ್ಲುತ್ತಿದೆ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಮತ ಉಳಿಸಿಕೊಂಡರೂ ಕ್ಷೇತ್ರ ಉಳಿಸಿಕೊಳ್ಳದ ಕಾಂಗ್ರೆಸ್‌

2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣವೇನೂ ಕಡಿಮೆಯಾಗಿಲ್ಲ. ಆದರೆ ಬಂದ ಮತಗಳು ಗೆಲುವಾಗಿ ಮಾರ್ಪಾಡಾಗಿಲ್ಲ. ಈ ಬಾರಿಯೂ ಇದೇ ರೀತಿ ಆಗುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

2012ರ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್‌ ಶೇ 33.79ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಇದು ಗೆಲುವಾಗಿ ಪರಿವರ್ತನೆಯಾದ ಕಾರಣ ಕಾಂಗ್ರೆಸ್‌ 32 ಸ್ಥಾನಗಳಲ್ಲಿ ಆರಿಸಿ ಬಂದಿತ್ತು. ಆದರೆ 2017ರ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್‌ನ ಪಾಲು ಶೇ 33.49ರಷ್ಟು. ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ದೊರೆತ ಮತಗಳ ಪ್ರಮಾಣದಲ್ಲಿ ಗಣನೀಯ ಕುಸಿತವೇನೂ ಆಗಿಲ್ಲ.

ಈ ಎರಡೂ ಚುನಾವಣೆಗಳಲ್ಲಿ ಮತಪ್ರಮಾಣವನ್ನು ಹೆಚ್ಚಿಸಿಕೊಂಡ ಪಕ್ಷ ಬಿಜೆಪಿ ಮಾತ್ರ. 2012ರಲ್ಲಿ ಬಿಜೆಪಿಯು ಶೇ 33.13ರಷ್ಟು ಮತಗಳನ್ನು ಪಡೆದುಕೊಂಡು 31 ಸ್ಥಾನಗಳನ್ನು ಗೆದ್ದಿತ್ತು. 2017ರ ಚುನಾವಣೆಯಲ್ಲಿ ಬಿಜೆಪಿ ಶೇ 46.51ರಷ್ಟು ಮತಗಳನ್ನು ಪಡೆದುಕೊಂಡಿತು. ಪಕ್ಷವು ಪಡೆದ ಈ ಹೆಚ್ಚುವರಿ ಮತಗಳೆಲ್ಲವೂ ಗೆಲುವಾಗಿ ಮಾರ್ಪಾಡಾದವು. ಬಿಜೆಪಿಯು ಒಟ್ಟು 56 ಸ್ಥಾನಗಳಲ್ಲಿ ಆರಿಸಿ ಬಂತು. ಬಿಜೆಪಿ ಕಾಂಗ್ರೆಸ್‌ನ ಮತಗಳನ್ನು ಕಸಿದುಕೊಳ್ಳದಿದ್ದರೂ, ಕಾಂಗ್ರೆಸ್‌ನ ಸ್ಥಾನಗಳನ್ನು ಕಸಿದುಕೊಂಡಿತು. 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು ಕೇವಲ 11 ಕ್ಷೇತ್ರಗಳಲ್ಲಿ.

ಈ ಎರಡೂ ಚುನಾವಣೆಗಳಲ್ಲಿ ಹೆಚ್ಚು ಕಳೆದುಕೊಂಡದ್ದು ಬಿಎಸ್‌ಪಿ. 2012ರಲ್ಲಿ ಬಿಎಸ್‌ಪಿ ಶೇ 12.19ರಷ್ಟು ಮತಗಳನ್ನು ಪಡೆದುಕೊಂಡು, 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ 2017ರಲ್ಲಿ ಪಕ್ಷವು ಪಡೆದುಕೊಂಡಿದ್ದು ಶೇ 6.98ರಷ್ಟು ಮತಗಳನ್ನು ಮಾತ್ರ. ಆದರೆ ಒಂದು ಕ್ಷೇತ್ರವನ್ನೂ ಗೆಲ್ಲಲಿಲ್ಲ.

ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ

ಉತ್ತರಾಖಂಡದಲ್ಲಿ ಕಳೆದ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದ ಬಿಜೆಪಿ, ಸ್ಥಿರ ಸರ್ಕಾರದ ಚರ್ಚೆ ಹುಟ್ಟುಹಾಕಿತು. 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನ ಗಳಿಸಿ ಅಧಿಕಾರ ವಹಿಸಿಕೊಂಡಿತ್ತು. ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಸ್ಥಾನಕ್ಕೆ ತೀರಥ್ ಸಿಂಗ್ ರಾವತ್ ಬಂದರು. ಅವರನ್ನೂ ಬದಲಿಸಿದ ಬಿಜೆಪಿ, ಪುಷ್ಕರ್ ಧಾಮಿ ಅವರಿಗೆ ರಾಜ್ಯದ ಚುಕ್ಕಾಣಿ ನೀಡಿತು. ಇಷ್ಟಾಗುವ ವೇಳೆಗೆ ಮತ್ತೆ ಚುನಾವಣೆ ಬಂದುನಿಂತಿದೆ.

2017ರಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಮುಖ್ಯಮಂತ್ರಿಯಾಗಿ ಕೇಂದ್ರೀಯ ಬಿಜೆಪಿ ನಾಯಕತ್ವ ಘೋಷಿಸಿತ್ತು.ಅಷ್ಟೊಂದು ಪ್ರಸಿದ್ಧರಲ್ಲದ ತ್ರಿವೇಂದ್ರ ಸಿಂಗ್ ಅವರು ಅಂದುಕೊಂಡಂತೆ ಕೆಲಸ ಮಾಡಲಿಲ್ಲ ಎಂಬುದಾಗಿ ಬಿಜೆಪಿ ಪರಿಗಣಿಸಿತು. ಶಾಸಕರ ಜೊತೆ ಸಂಪರ್ಕ ಇಲ್ಲ, ಆಡಳಿತ ವೈಖರಿ ತೃಪ್ತಿದಾಯಕವಾಗಿಲ್ಲ, ಎಲ್ಲಕಿಂತ ಮುಖ್ಯವಾಗಿ ಕುಂಭಮೇಳ ನಡೆಸುವುದರ ಪರವಾಗಿ ಅವರು ಇರಲಿಲ್ಲ ಎಂಬ ಅಭಿಪ್ರಾಯವಿತ್ತು.

ತೀರಥ್ ಸಿಂಗ್ ರಾವತ್ ಅವರನ್ನು ತ್ರಿವೇಂದ್ರ ಸಿಂಗ್ ಉತ್ತರಾಧಿಕಾರಿಯಾಗಿ ಬಿಜೆಪಿ ಪ್ರಕಟಿಸಿತು. ಬಿಜೆಪಿ ನಿರೀಕ್ಷೆ ಇಲ್ಲಿಯೂ ತಲೆಕೆಳಗಾಯಿತು. ಕೇವಲ 114 ದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ತೀರಥ್ ತಮ್ಮ ಸ್ಥಾನವನ್ನು ಬಿಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡರು. ಇವರ ಅವಧಿಯಲ್ಲಿ ಕುಂಭಮೇಳ ನಡೆಯಿತು. ಇದರಿಂದ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿದವು ಎಂಬ ಆರೋಪವಿದೆ. ತೀರಥ್ ಅವರು ಮುಜುಗರ ಆಗುವಂತಹ ಹೇಳಿಕೆಗಳನ್ನು ನೀಡಿದ್ದರಿಂದ ತಲೆದಂಡವಾಯಿತು. ತೀರಥ್ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ಆರು ತಿಂಗಳೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು. ಇದು ಸಾಧ್ಯವಾಗದ ಕಾರಣ ಅವರು ಪದತ್ಯಾಗ ಮಾಡಿದ್ದಾರೆ ಎಂಬ ಮಾತೂ ಕೇಳಿಬಂದಿತು. ಆದರೆ ಉಪಚುನಾವಣೆ ನಡೆದರೂ, ಕೆಲವು ಕಾರಣಗಳಿಂದ ಅವರು ಸ್ಪರ್ಧಿಸಲಿಲ್ಲ. ಇವರೂ ಕೇಂದ್ರ ನಾಯಕತ್ವಕ್ಕೆ ವಿಶ್ವಾಸಾರ್ಹವಾಗಿ ಕಂಡುಬರಲಿಲ್ಲ. ಹೀಗಾಗಿ ಪುಷ್ಕರ್ ಧಾಮಿ ಆಯ್ಕೆಯಾಯಿತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸಚಿವರಾಗಿ ಕೆಲಸ ಮಾಡಿದ ಅನುಭವವೇ ಇಲ್ಲದ ಧಾಮಿ ಅವರನ್ನು ಮುಖ್ಯಮಂತ್ರಿಯಾಗಿ ಕೇಂದ್ರೀಯ ನಾಯಕತ್ವ ನೇಮಿಸಿತು. ಇವರ ನೇಮಕವೂ ರಾಜ್ಯ ಬಿಜೆಪಿಯಲ್ಲಿ ಬೇಗುದಿ ಸೃಷ್ಟಿಸಿತು.ಜಾತಿ ಮತ್ತು ಪ್ರಾದೇಶಿಕ ಕಾರಣಗಳಿಂದ ರಾಜ್ಯದಲ್ಲಿ ಸರ್ಕಾರಗಳು ಅಸ್ಥಿರಗೊಳ್ಳುತ್ತಿವೆ. ಗರ್ವಾಲ್ ಮತ್ತು ಕುಮಾವೂನ್ ಪ್ರದೇಶಗಳ ನಡುವಿನ ಒಡಕು ಹಾಗೂ ಬ್ರಾಹ್ಮಣರು ಮತ್ತು ರಜಪೂತರ ನಡುವಿನ ಪೈಪೋಟಿ, ರಾಜ್ಯದಲ್ಲಿ ಬಿಜೆಪಿಗೆ ಸಮಸ್ಯೆಯಾಗಿದೆ. ತೀರಥ್ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ಬಿಜೆಪಿ, ಬ್ರಾಹ್ಮಣ ಸಮುದಾಯದ ವಿಶ್ವಾಸ ಗಳಿಸಲು ಆ ಸಮುದಾಯಕ್ಕೆ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯನ್ನು ನೀಡಿ ಪರಿಸ್ಥಿತಿ ನಿಭಾಯಿಸಿತ್ತು.

ಬಿಎಸ್‌ಪಿ, ಎಎಪಿ ಸ್ಪರ್ಧೆ

ಈ ಚುನಾವಣೆಯಲ್ಲಿ ಎಎಪಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ, ಪಕ್ಷಕ್ಕೆ ಇಲ್ಲಿ ನೆಲೆ ಇರಲಿಲ್ಲ. ಆದರೆ ತಳಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸವನ್ನು ಎಎಪಿ ಮಾಡಿದೆ. ನಿರೀಕ್ಷಿತ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ಪಕ್ಷದ ನಾಯಕರಲ್ಲಿ ಇಲ್ಲ. ಆದರೆ, ಎಎಪಿಯು ಬಿಜೆಪಿ ಮತ್ತು ಕಾಂಗ್ರೆಸ್‌ನ ಮತಗಳನ್ನು ಕಸಿದುಕೊಳ್ಳುವ ಸಾಧ್ಯತೆ ಅತ್ಯಧಿಕವಾಗಿದೆ. ಇದು ಎರಡು ರಾಷ್ಟ್ರೀಯ ಪಕ್ಷಗಳ ಗೆಲುವು–ಸೋಲನ್ನು ನಿರ್ಧರಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಬಿಎಸ್‌ಪಿ ರಾಜ್ಯದಲ್ಲಿ ನೆಲೆ ಕಳೆದುಕೊಂಡಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ ಪಕ್ಷದ ಮತ ಪ್ರಮಾಣ ಅರ್ಧದಷ್ಟು ಕುಸಿದಿದೆ. ಜತೆಗೆ ಹಾಲಿ ವಿಧಾನಸಭೆಯಲ್ಲಿ ಒಬ್ಬ ಶಾಸಕನೂ ಇಲ್ಲದ ಕಾರಣ, ರಾಜ್ಯದಲ್ಲಿ ಪಕ್ಷದ ಸಂಘಟನೆ ಸಂಪೂರ್ಣ ನೆಲಕಚ್ಚಿದೆ. ಆದರೂ ಹುರುಪಿನೊಂದಿಗೆ ಕಣಕ್ಕಿಳಿಯಲು ತಯಾರಿ ನಡೆಸಿದೆ. ಇದು ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಆಧಾರ: ಪಿಟಿಐ, ಚುನಾವಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT