ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಅಗಲ | ಸೋಂಕಿಗೆ ಅಂಜದ ಸುದ್ದಿವಾಹಕರು

Last Updated 9 ಏಪ್ರಿಲ್ 2020, 4:58 IST
ಅಕ್ಷರ ಗಾತ್ರ

‘ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿರಿ’ ಎಂಬ ಸಂದೇಶ ಜೋರಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಇವರು ಮನೆಯಿಂದ ಆಚೆ ಬರಲೇಬೇಕಿದೆ. ಇಂತಹ ಸಂದೇಶಗಳನ್ನು ಜನರಿಗೆ ತಲುಪಿಸಲಾದರೂ ಇವರು ಹೊರಬರಬೇಕು. ಕೊರೊನಾ ಸೋಂಕಿನ ಬಗ್ಗೆ ಸುಳ್ಳು ಸುದ್ದಿಗಳೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ಸತ್ಯ ತಿಳಿಸುವ ಪತ್ರಿಕೆಗಳನ್ನು ಹಂಚಲು ಇವರು ಹೊರಬರಲೇಬೇಕು.

ಹೌದು, ಇವರು ಪತ್ರಿಕಾ ವಿತರಕರು. ಕ್ಲಿಷ್ಟ ಸಮಯ ದಲ್ಲಿಯೂ ಕೆಲಸ ಮಾಡುತ್ತಿರುವ ನಿಜವಾದ ವೀರರು. ಸುದ್ದಿಯ ಪ್ರಮುಖ ಕೊಂಡಿಯಂತಿರುವ ಇವರು, ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸದಿದ್ದರೆ, ಸುದ್ದಿ ಮನೆಯೊಳಗೆ ನಡೆಯುವ ಎಲ್ಲ ಕಸರತ್ತುಗಳೂ ವ್ಯರ್ಥವಾದಂತೆಯೇ!

ನಸುಕಿನಿಂದಲೇ ಕೆಲಸ ಶುರು: ಬೆಳಿಗ್ಗೆ ಐದರಿಂದ ಆರು ಗಂಟೆಗೆ ಪತ್ರಿಕೆಗಳು ಮನೆ ಬಾಗಿಲಿಗೆ ಬರಬೇಕೆಂದರೆ ಇವರು ನಸುಕಿನ ಮೂರಕ್ಕೇ ಮನೆಯನ್ನು ಬಿಡಬೇಕು. ನೆಗಡಿಯಾದರೆ ಅಪಾಯ ಎನ್ನುವ ಈ ವೇಳೆಯಲ್ಲಿಯೂ ವೃತ್ತಿಗೆ ನಿಷ್ಠರಾಗಿ ಪತ್ರಿಕೆ ಹಾಕಲು ತೆರಳುತ್ತಿದ್ದಾರೆ. ನಿರ್ದಿಷ್ಟ ಸ್ಥಳಕ್ಕೆ ತೆರಳಿ, ಪತ್ರಿಕೆಗಳ ಬಂಡಲ್‌ ಪಡೆದು, ಅವುಗಳನ್ನು ಪತ್ರಿಕೆವಾರು ವರ್ಗೀಕರಿಸಿಕೊಂಡು, ಮನೆ, ಮನೆಗೆ ವಿತರಿಸುತ್ತಿದ್ದಾರೆ. ಅಂದರೆ, ಕನಿಷ್ಠ ಮೂರು ಗಂಟೆ ಇವರು ಹೊರಗಡೆ ಸುತ್ತಾಡಲೇ ಬೇಕು.


ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್‌ನಲ್ಲಿ ಬೆಳಗ್ಗಿನ ಜಾವ ಪತ್ರಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿತರಕರು -ಪ್ರಜಾವಾಣಿ ಚಿತ್ರ

‘ಯಾವುದೇ ಮನೆಗೆ ಹಲವರು ಬಂದು ಹೋಗಿರುತ್ತಾರೆ. ಅಲ್ಲಿನ ಗೇಟ್‌ಗಳನ್ನು, ಬಾಗಿಲುಗಳನ್ನು ಹಲವರು ಮುಟ್ಟಿರುತ್ತಾರೆ. ಇದನ್ನು ನಾವು ಗಮನದಲ್ಲಿಟ್ಟುಕೊಂಡೇ ಕೆಲಸ ಮಾಡುತ್ತಿದ್ದೇವೆ. ಯಾವ ಬಾಗಿಲು, ಗೇಟ್‌ಗಳನ್ನೂ ಮುಟ್ಟುವುದಿಲ್ಲ. ನಿರ್ದಿಷ್ಟ ಅಂತರದಲ್ಲಿ ನಿಂತುಕೊಂಡೇ ಪತ್ರಿಕೆಯನ್ನು ಮನೆಯೊಳಗೆ ಹಾಕುತ್ತಿದ್ದೇವೆ’ ಎನ್ನುತ್ತಾರೆ ಹುಬ್ಬಳ್ಳಿಯ ಪತ್ರಿಕಾ ವಿತರಕ ಬಸವರಾಜ ಪಾವಟೆ.

‘ಕೊರೊನಾ ಸೋಂಕು ಹರಡುತ್ತಿದ್ದ ಪ್ರಾರಂಭದ ದಿನಗಳಲ್ಲಿ ಬಹಳಷ್ಟು ಜನ ಪೇಪರ್‌ ಹಾಕಬೇಡಿ ಎಂದು ಹೇಳುತ್ತಿದ್ದರು. ಅವರ ಜೊತೆ ಮಾತನಾಡಿ ಮನವೊಲಿಸುವ ಕಾರ್ಯ ಮಾಡುತ್ತಿದ್ದೆ. ನಂತರ, ವೈದ್ಯರು ಹಾಗೂ ಸರ್ಕಾರವೇ ಪತ್ರಿಕೆಗಳ ಮೂಲಕ ಕೊರೊನಾ ಸೋಂಕು ಹರಡುವುದಿಲ್ಲ ಎಂದು ಹೇಳಿದ ಮೇಲೆ ಹಲವರು ಮತ್ತೆ ಪತ್ರಿಕೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

ಬೆಂಗಳೂರಿನಲಗ್ಗೆರೆ ಮುಖ್ಯರಸ್ತೆಯಲ್ಲಿ ಹುಡುಗರು ಮನೆಮನೆಗೆ ಪತ್ರಿಕೆಯನ್ನು ತಲುಪಿಸುವ ಕೆಲಸದಲ್ಲಿ ತಲ್ಲೀನರಾಗಿರುವ ದೃಶ್ಯ ಕಂಡುಬಂತು -ಪ್ರಜಾವಾಣಿ ಚಿತ್ರ

ಅಂದೇ ಹಂಚಬೇಕು: ಕಚೇರಿ ಕೆಲಸಗಳಾದರೆ ನಾಳೆ ಮಾಡಿದರಾಯ್ತು ಎನ್ನಬಹುದು. ಬಿಸಿನೆಸ್‌ ಮಾಡುವವರು ಹದಿನೈದು ದಿನ ತಮ್ಮ ವ್ಯಾಪಾರ–ವಹಿವಾಟು ಮುಂದೂಡಬಹುದು. ಆದರೆ, ಪತ್ರಿಕೆ ಹಂಚುವವರು ಹಾಗೆನ್ನಲು ಸಾಧ್ಯವೇ ಇಲ್ಲ. ಇಂದಿನ ಪತ್ರಿಕೆಯನ್ನು ಇಂದೇ ಹಂಚಬೇಕು. ಉಳಿದರೆ ಅದು ರದ್ದಿಯೇ.

‘ಈಗವಿಶ್ರಾಂತಿ ತೆಗೆದುಕೊಂಡು, ಲಾಕ್‌ಡೌನ್‌ ಮುಗಿದ ಮೇಲೆ ಎಲ್ಲ ಪತ್ರಿಕೆಗಳನ್ನು ಹಂಚಲು ಸಾಧ್ಯವಿಲ್ಲ. ಅಂದಿನ ಪತ್ರಿಕೆಗಳನ್ನು ಅಂದೇ ವಿತರಿಸಬೇಕು. ಕೊರೊನಾ ಸೋಂಕಿನ ಕುರಿತು ಸ್ಪಷ್ಟ ಮಾಹಿತಿ ಮುದ್ರಣ ಮಾಧ್ಯಮದಲ್ಲಿ ಮಾತ್ರ ಬರುತ್ತಿದೆ. ಹೀಗಾಗಿ ಈಗ ನಮ್ಮ ಅಗತ್ಯ ಹೆಚ್ಚಾಗಿದೆ ಎಂಬ ಅರಿವಿನಿಂದ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಬೆಂಗಳೂರಿನ ನಂಜುಂಡೇಶ್ವರ ನ್ಯೂಸ್‌ ಏಜೆನ್ಸಿಯ ಎನ್. ರಾಘವೇಂದ್ರ.

‘ಮೊದಲು ಪತ್ರಿಕೆ ಹಂಚಲು ಹುಡುಗರೂ ಹಿಂಜರಿದಿದ್ದರು. ಎಲ್ಲ ಪತ್ರಿಕೆಗಳವರ ಸಹಕಾರ ಮತ್ತು ವೈದ್ಯರ ಅಭಯದ ನಂತರ ಈಗ ಹಂಚುತ್ತಿದ್ದಾರೆ. ಪ್ರತಿನಿತ್ಯ ಮುಖಗವಸು ಬದಲಾಯಿಸುವ ಅಗತ್ಯವಿದ್ದು, ಕಂಪನಿಗಳು, ಸಂಘ ಸಂಸ್ಥೆಗಳು ಉಚಿತವಾಗಿ ಹಂಚಿದರೆ ಅನುಕೂಲ’ ಎನ್ನುತ್ತಾರೆ ಹುಬ್ಬಳ್ಳಿಯ ಮನೋಹರ ಪರ್ವತಿ.

ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್‌ನಲ್ಲಿ ಬೆಳಗ್ಗಿನ ಜಾವ ಪತ್ರಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿತರಕರು -ಪ್ರಜಾವಾಣಿ ಚಿತ್ರ

ತಂದೆ ತೀರಿಕೊಂಡಾಗಲೇ ಬಿಟ್ಟಿಲ್ಲ
ಪತ್ರಿಕೆ ಹಂಚುವುದನ್ನು ಕೆಲವರು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಅಲ್ಲದೆ, ಈ ಕ್ಷೇತ್ರದಲ್ಲಿನ ಶೇ 90ರಷ್ಟು ಜನ ಇದನ್ನೇ ಪೂರ್ಣ ಪ್ರಮಾಣದ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಜೀವನದ ಬಂಡಿ ಸಾಗಬೇಕೆಂದರೆ ಪ್ರತಿದಿನ ಪತ್ರಿಕೆ ಹಾಕಲೇಬೇಕು.

ಒಂದೆರಡು ದಿನ ಪತ್ರಿಕೆ ಹಾಕದಿದ್ದರೆ, ಜನ ಆ ಎರಡು ದಿನದ ದುಡ್ಡು ಮುರಿದುಕೊಂಡೇ ಕೊಡುತ್ತಾರೆ. ಅಂದರೆ, ಆ ಎರಡು ದಿನದ ಕಮಿಷನ್‌ ಇಲ್ಲವಾಗುತ್ತದೆ. ಪತ್ರಿಕೆ ಹಂಚುವ ಒಬ್ಬ ಹುಡುಗ ತಿಂಗಳಿಗೆ ಸರಾಸರಿ ₹5 ಸಾವಿರದವರೆಗೆ ಮಾತ್ರ ಸಂಪಾದಿಸುತ್ತಾನೆ. ಈ ಮೊತ್ತ ಬರಲಿಲ್ಲ ಅಂದರೆ ಜೀವನ ನಿರ್ವಹಣೆ ಕಷ್ಟ. ಸರ್ಕಾರದಿಂದಲೂ ಇವರಿಗೆ ಯಾವುದೇ ಸಹಾಯಧನ ಸಿಗುವುದಿಲ್ಲ.

‘ಇದೇ ಕಾಯಕವನ್ನು ನಂಬಿಕೊಂಡವರಿಗೆ ಪ್ರತಿದಿನವೂ ಪತ್ರಿಕೆಯನ್ನು ಹಂಚುವುದು ಅನಿವಾರ್ಯ. ತಂದೆ ತೀರಿಕೊಂಡ ದಿನವೂ ಬಂದು ಪತ್ರಿಕೆ ಹಂಚಿದವರಿದ್ದಾರೆ. ಈಗಿನ ಈ ಕೊರೊನಾ ಸವಾಲನ್ನೂ ಧೈರ್ಯವಾಗಿಯೇ ಎದುರಿಸುತ್ತಿದ್ದಾರೆ’ ಎನ್ನುತ್ತಾರೆ ಮೈಸೂರಿನ ಪತ್ರಿಕಾ ವಿತರಕ ಲೋಕೇಶ್.

ದಾವಣಗೆರೆಯಲ್ಲಿ ಕೋವಿಡ್‌ -19 (ಕೊರೊನಾ ಸೋಂಕು) ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಪತ್ರಿಕಾ ರಂಗದ ಪ್ರಸರಣ ವಿಭಾಗದ ಪತ್ರಿಕಾ ವಿತರಕರು ಪತ್ರಿಕೆಯನ್ನು ಹಂಚುವುದರಲ್ಲಿ ನಿರತವಾಗಿರುವುದು –ಪ್ರಜಾವಾಣಿ ಚಿತ್ರ

ವಿಮೆ ಸೌಲಭ್ಯ ಕಲ್ಪಿಸಿ
ಪತ್ರಿಕೆ ಹಂಚುವುದಕ್ಕೋ ಅಥವಾ ಬಿಲ್‌ ಸಂಗ್ರಹಕ್ಕೋ ಮನೆ–ಮನೆಗೆ ನಾವು ಹೋಗಲೇಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅನೇಕ ಮುನ್ನೆಚ್ಚರಿಕೆ ತೆಗೆದುಕೊಂಡರೂ ಸೋಂಕಿನ ಅಪಾಯ ಇರುತ್ತದೆ. ಇಂತಹ ಸಂದರ್ಭದಲ್ಲಿ, ಪತ್ರಿಕೆ ಹಂಚುವವರಿಗೆ ಕನಿಷ್ಠ ₹2 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯವನ್ನು ಸರ್ಕಾರ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಾರೆ ಹುಬ್ಬಳ್ಳಿ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ.

‘ಪತ್ರಿಕೆ ಹಂಚುವ ಎಲ್ಲರ ಬಳಿಯೂ ಬಿಪಿಎಲ್‌ ಪಡಿತರ ಚೀಟಿ ಇರುವುದಿಲ್ಲ. ಸರ್ಕಾರದ ಅನೇಕ ಸೌಲಭ್ಯಗಳು ಸಿಗುವುದಿಲ್ಲ. ಆದರೆ, ನಮ್ಮನ್ನೂ ಈಗ ಸರ್ಕಾರ ತುರ್ತು ಸೇವೆ ಸಿಬ್ಬಂದಿ ಎಂದು ಪರಿಗಣಿಸಿದೆ. ಇದಕ್ಕೆ ತಕ್ಕ ಸೌಲಭ್ಯ ಸಿಕ್ಕರೆ ಅನುಕೂಲವಾಗುತ್ತದೆ. ಆರೋಗ್ಯ ವಿಮೆ ಸೇರಿದಂತೆ, ಸಾಮಾಜಿಕ ಭದ್ರತೆ ನೀಡುವಂತಹ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು’ ಎಂಬುದು ಪತ್ರಿಕಾ ವಿತರಕರ ಬೇಡಿಕೆ.


ಕಲಬುರ್ಗಿಯಚೌಕ್‌ನಲ್ಲಿ ಮುಂಜಾನೆ ಪತ್ರಿಕಾ ವಿತರಕರು ಸ್ಟೆರಿಲೈಸ್ ಮಾಡಿಕೊಂಡು ಪತ್ರಿಕೆಗಳು ಯಾವುದೇ ಸೋಂಕಿಲ್ಲದೆ ಓದುಗರಿಗೆಪತ್ರಿಕೆ ವಿಂಗಡಿಸಿ ಹಾಗೂಜನತಾ ಕರ್ಫ್ಯೂ ಇದ್ದರು ಪತ್ರಿಕೆ ಹಂಚಿಕೆದಾರರು ಜನರ ಮನೆ ಬಾಗಿಲಿಗೆ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವಿತರಿಸಿದರು. ಚಿತ್ರ, ಪ್ರಶಾಂತ್‌ ಎಚ್‌.ಜಿ.

‘ಬಿಲ್‌ ಕಡಿತ ಮಾಡಬೇಡಿ...’
ಕೆಲವರು ಎರಡು ವಾರಗಳಿಂದ ಪತ್ರಿಕೆಗಳನ್ನು ಹಾಕಿಸಿಕೊಂಡಿಲ್ಲ. ನಾವೇ ಹಂಚಲು ಸಿದ್ಧವಿದ್ದರೂ ತೆಗೆದುಕೊಂಡಿಲ್ಲ. ಬಿಲ್‌ ಸಂಗ್ರಹಕ್ಕೆ ಹೋದಾಗ, ಈ ಪತ್ರಿಕೆಗಳ ದುಡ್ಡು ಕಡಿತಗೊಳಿಸಿ ನೀಡುತ್ತಾರೆ. ಇದನ್ನೇ ನಂಬಿಕೊಂಡ ನಮಗೆ ಸಂಕಷ್ಟದ ಸಮಯದಲ್ಲಿ ಕಮಿಷನ್‌ ಮೊತ್ತವೂ ಕಡಿತಗೊಂಡರೆ ಕಷ್ಟವಾಗುತ್ತದೆ. ಪ್ರತಿ ತಿಂಗಳು ನೀಡುವಂತೆ ಪತ್ರಿಕೆಯ ಬಿಲ್‌ ಸಂಪೂರ್ಣವಾಗಿ ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪತ್ರಿಕೆ ಹಂಚುವ ಹುಡುಗರು.

ಶಾಲೆ–ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಷ್ಟೋ ಹುಡುಗರು ಬೆಳಿಗ್ಗೆ ಪತ್ರಿಕೆ ಹಂಚುವ ಕೆಲಸ ಮಾಡುತ್ತಾರೆ. ಕಾಲೇಜು ಶುಲ್ಕ ಸೇರಿದಂತೆ ಪುಸ್ತಕಗಳ ಖರೀದಿಗೆ ಇದೇ ಹಣವನ್ನು ನೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿಯೂ ದುಡಿಯುತ್ತಿರುವ ನಮಗೆ ಓದುಗರೇ ನೆರವಿಗೆ ನಿಲ್ಲಬೇಕು ಎಂದೂ ಅವರು ಮನವಿ ಮಾಡುತ್ತಾರೆ.

ದಾವಣಗೆರೆಯಲ್ಲಿ ಕೋವಿಡ್‌ -19 (ಕೊರೊನಾ ಸೋಂಕು) ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಪತ್ರಿಕಾ ರಂಗದ ಪ್ರಸರಣ ವಿಭಾಗದ ಪತ್ರಿಕಾ ವಿತರಕರು ಪತ್ರಿಕೆಯನ್ನು ಹಂಚುವುದರಲ್ಲಿ ನಿರತವಾಗಿರುವುದು –ಪ್ರಜಾವಾಣಿ ಚಿತ್ರ

ಮಧ್ಯವಯಸ್ಕರೇ ಹೆಚ್ಚು
ಮೊದಲಿದ್ದ ಪ್ರಮಾಣಕ್ಕೆ ಹೋಲಿಸಿದರೆ, ಈಗ ಪತ್ರಿಕೆ ಹಂಚಲು ಬರುವ ಯುವಕರ ಸಂಖ್ಯೆ ಕಡಿಮೆ. ಬೆಳಿಗ್ಗೆ ವ್ಯಾಯಾಮ ಆಗುತ್ತದೆ, ಖರ್ಚಿಗೆ ಹಣವೂ ಸಿಗುತ್ತದೆ ಎಂಬ ಕಾರಣಕ್ಕೆ ಈ ಕೆಲಸಕ್ಕೆ ಬರುವವರ ಸಂಖ್ಯೆ ದೊಡ್ಡದಿತ್ತು. ಈಗ ಜಿಮ್‌ ಮತ್ತಿತರ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.

ಹತ್ತು–ಹದಿನೈದು ವರ್ಷಗಳಿಂದ ಈ ವೃತ್ತಿ ಮಾಡಿಕೊಂಡು ಬಂದವರೇ ಇಂದು ಹೆಚ್ಚು ಜನ ಉಳಿದುಕೊಂಡಿದ್ದಾರೆ. ಹೀಗಾಗಿ, ಮಧ್ಯವಯಸ್ಸಿನವರೇ ಹೆಚ್ಚು ಜನ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ಬಳಿಕ ಆದಷ್ಟು ಬೇಗ ಪತ್ರಿಕೆ ಹಂಚುವ ಕಾರ್ಯ ಮುಗಿಸಿ, ಏಳು ಗಂಟೆಯೊಳಗೆ ಮನೆ ಸೇರುತ್ತಿದ್ದಾರೆ ಈ ತೆರೆ ಹಿಂದಿನ ನಾಯಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT