ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಅನಿಶ್ಚಿತ ಅಫ್ಗಾನಿಸ್ತಾನ

Last Updated 2 ಮಾರ್ಚ್ 2020, 2:30 IST
ಅಕ್ಷರ ಗಾತ್ರ

ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ನಡೆದ ಯುದ್ಧವೊಂದನ್ನು ಕೊನೆಗೊಳಿಸುವ ಒಪ್ಪಂದವೊಂದಕ್ಕೆ ಆ ದೇಶವು ಶನಿವಾರ (ಫೆ. 29) ಸಹಿ ಮಾಡಿದೆ. ಉಗ್ರ ಸಂಘಟನೆ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ‘ತಾಲಿಬಾನ್‌’ ಜತೆ ನಡೆದಿರುವ ಈ ಒಪ್ಪಂದವು ಭಾರತದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂಬುದು ಖಚಿತ. ಆದರೆ, ಅದರ ಪ್ರಮಾಣ ಯಾವ ಮಟ್ಟದ್ದಾಗಿರುತ್ತದೆ ಎಂದು ಈಗಲೇ ಊಹಿಸುವುದು ಕಷ್ಟ.

ಹಾಗಾಗಿಯೇ, ಒಪ್ಪಂದ ಏರ್ಪಡುವುದಕ್ಕೂ ಕೆಲವು ದಿನ ಮುಂಚಿತವಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಅವರು ಕಾಬೂಲ್‌ಗೆ ಪ್ರಯಾಣ ಮಾಡಿ ಹಲವು ಅಧಿಕಾರಿಗಳು, ರಾಜಕೀಯ ಮುಖಂಡರ ಜತೆ ಮಾತುಕತೆ ನಡೆಸಿ ಬಂದಿದ್ದಾರೆ.

ಯುದ್ಧಪೀಡಿತ ಅಫ್ಗಾನಿಸ್ತಾನದ ಮರುನಿರ್ಮಾಣದಲ್ಲಿ ಭಾರತವು ಮಹತ್ವದ ಪಾತ್ರ ವಹಿಸಿದೆ. ಭಯೋತ್ಪಾದಕ ಕೃತ್ಯಗಳಿಂದ ಸಾಕಷ್ಟು ಹಾನಿ ಅನುಭವಿಸಿರುವ ಭಾರತಕ್ಕೆ, ಅಲ್ಲಿ ರಾಜಕೀಯ ಮತ್ತು ಆರ್ಥಿಕ ಆಸಕ್ತಿಗಳೂ ಇದ್ದವು. ಇದನ್ನು ಮನಗಂಡ ಅಮೆರಿಕವು ಶಾಂತಿ ಮಾತುಕತೆಗೆ ಭಾರತವನ್ನೂ ಸಾಕ್ಷಿಯಾಗಿಸಿಕೊಂಡಿದೆ. ತಾಲಿಬಾನ್‌ ಅನ್ನು
ಉಗ್ರ ಸಂಘಟನೆ ಎಂದೇ ಗುರುತಿಸಿರುವ ಭಾರತವು 2001ರ ಬಳಿಕ ಇದೇ ಮೊದಲ ಬಾರಿಗೆ ಆ ಸಂಘಟನೆಯ ಜತೆಗೆ ನಡೆದ ಅಧಿಕೃತ ಸಭೆಯೊಂದರಲ್ಲಿ ಪಾಲ್ಗೊಂಡಿದೆ. 2018ರಲ್ಲಿ ಮಾಸ್ಕೊದಲ್ಲಿ ನಡೆದಿದ್ದ ಸಭೆಗೆ ಇಬ್ಬರು
ನಿವೃತ್ತ ರಾಜತಾಂತ್ರಿಕರನ್ನು ಅನೌಪಚಾರಿಕ ಪ್ರತಿನಿಧಿಗಳ ರೂಪದಲ್ಲಿ ಭಾರತವು ಕಳುಹಿಸಿಕೊಟ್ಟಿತ್ತು.

ನವೆಂಬರ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಚುನಾವಣೆಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡೇ ಟ್ರಂಪ್‌ ಅವರು ಸೇನಾ ಪಡೆಗಳನ್ನು ಹಿಂದಕ್ಕೆ ಕರೆಯಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಅಮೆರಿಕದ ಪಡೆಗಳು ಅಫ್ಗಾನಿಸ್ತಾನ ನೆಲದಿಂದ ಹೊರಹೋಗುವುದನ್ನೇ ಕಾಯುತ್ತಿರುವ ತಾಲಿಬಾನ್‌, ಆ ನಂತರ ಒಪ್ಪಂದಕ್ಕೆ ಬದ್ಧವಾಗಿರುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಅಶ್ರಫ್‌ ಘನಿ ಅವರ ಸರ್ಕಾರವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಎಂದು ಒಪ್ಪಿಕೊಳ್ಳಲು ತಾಲಿಬಾನ್‌ ನಿರಾಕರಿಸುತ್ತಲೇ ಬಂದಿದೆ. ‘ಘನಿ ಅವರು ಅಮೆರಿಕದ ಕೈಗೊಂಬೆ’ ಎಂದು ಟೀಕಿಸುತ್ತಲೂ ಇದೆ. ಅಲ್ಲಿನ ವಿರೋಧಪಕ್ಷದ ನಾಯಕ ಅಬ್ದುಲ್ಲಾ ಅಬ್ದುಲ್ಲ ಅವರೂ ‘ಈ ಸರ್ಕಾರಕ್ಕೆ ಮಾನ್ಯತೆ ಇಲ್ಲ, ನಾನು ಪರ್ಯಾಯ ಸರ್ಕಾರ ರಚಿಸುತ್ತೇನೆ’ ಎಂದಿದ್ದಾರೆ. ಆದ್ದರಿಂದ ಒಪ್ಪಂದವು ನಿರೀಕ್ಷಿತ ರೀತಿ
ಯಲ್ಲಿ ಜಾರಿಯಾಗುವುದರ ಬಗ್ಗೆ ಅನುಮಾನಗಳಿವೆ.

‘ನ್ಯಾಟೊ ಪಡೆಗಳು ಹೊರಹೋದ ಕೂಡಲೇ ಅಲ್ಲಿನ ಸ್ಥಿತಿ ಪುನಃ ಹದಗೆಡಲಿದೆ. ಆನಂತರ ಅದು ನಿಯಂತ್ರಣಕ್ಕೆ ಸಿಗಲಾರದು’ ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.

ಭಾರತದ ಆತಂಕ

lಈ ಒಪ್ಪಂದಕ್ಕೆ ಮುನ್ನ ಅಮೆರಿಕವು ಪಾಕಿಸ್ತಾನವನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದೆ. ಉಗ್ರರಿಗೆ ನೆಲೆ ಕಲ್ಪಿಸಿರುವ ಪಾಕಿಸ್ತಾನಕ್ಕೆ ಈ ರೀತಿ ಗೌರವ ನೀಡಿರುವುದು ಭಾರತಕ್ಕೆ ಒಪ್ಪಿತವಾಗಿಲ್ಲ

lಒಪ್ಪಂದದಿಂದಾಗಿ ಉಗ್ರ ಸಂಘಟನೆ ತಾಲಿಬಾನ್‌ಗೆ ಜಾಗತಿಕ ಮಾನ್ಯತೆ ನೀಡಿದಂತಾಗುತ್ತದೆ. ಅದರಿಂದಾಗಿ ಉಗ್ರರನ್ನು ನಿಗ್ರಹಿಸುವ ವಿಚಾರದಲ್ಲಿ 19 ವರ್ಷಗಳಲ್ಲಿ ಲಭಿಸಿರುವ ಯಶಸ್ಸು ವ್ಯರ್ಥವಾಗಲಿದೆ

lಅಫ್ಗಾನಿಸ್ತಾನ ಸರ್ಕಾರವನ್ನು ಹೊರಗಿಟ್ಟು, ಬರಿಯ ತಾಲಿಬಾನ್‌ ಜತೆಗೆ ಅಮೆರಿಕವು ಮಾತುಕತೆ ನಡೆಸಿದ್ದರಿಂದ ಒಟ್ಟಾರೆ ಬೆಳವಣಿಗೆಗಳಲ್ಲಿ ಭಾರತವನ್ನು ಏಕಾಂಗಿಯಾಗಿಸಲಾಗಿದೆ ಎಂಬ ಭಾವನೆ ಬರುವಂತಾಗಿದೆ

lತಾಲಿಬಾನ್‌ ಮತ್ತೆ ಅಧಿಕಾರಕ್ಕೆ ಬಂದರೆ ಷರಿಯಾ ಕಾನೂನು ಜಾರಿ ಮಾಡುವ ನಿಲುವಿಗೆ ಬದ್ಧವಾಗಬಹುದು. ಜಿಹಾದ್‌ಗೆ ಪ್ರಚೋದನೆ ನೀಡುವ ಮೂಲಕ ಪರೋಕ್ಷವಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಬಹುದು.

lಪಾಕಿಸ್ತಾನದಲ್ಲಿ 30 ಸಾವಿರದಿಂದ 40 ಸಾವಿರ ಭಯೋತ್ಪಾದಕರಿದ್ದಾರೆ ಎಂದು ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದರು. ತಾಲಿಬಾನ್‌ ಜತೆಗೆ ಪಾಕಿಸ್ತಾನ ಸರ್ಕಾರವು ನಿಕಟ ಸಂಬಂಧ ಹೊಂದಿರುವುದರಿಂದ ಈ ಎಲ್ಲಾ ಉಗ್ರರನ್ನು ತಾಲಿಬಾನ್‌ನತ್ತ ಕಳುಹಿಸಿಕೊಟ್ಟು, ಉಗ್ರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಪ್ರತಿಪಾದಿಸಬಹುದು. ಆ ಮೂಲಕ ಎಫ್‌ಎಟಿಎಫ್‌ನ ಬೂದು ಪಟ್ಟಿಯಿಂದ ಅದು ಹೊರಬರಬಹುದು. ಅದೇ ಉಗ್ರರನ್ನು ಪಾಕಿಸ್ತಾನವು ಭಾರತದ ಮೇಲೆ ದಾಳಿಗೆ ಬಳಸಿಕೊಳ್ಳಬಹುದು

lಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ– ಅಫ್ಗಾನಿಸ್ತಾನ ಗಡಿಯಲ್ಲಿ ಅನೇಕ ಹೊಸ ಉಗ್ರ ಸಂಘಟನೆಗಳು ಹುಟ್ಟಿಕೊಂಡಿವೆ. ನ್ಯಾಟೊ ಪಡೆಗಳು ಅಲ್ಲಿದ್ದ ಕಾರಣಕ್ಕೆ ಅವುಗಳಿಗೆ ಹೆಚ್ಚಿನ ಯಶಸ್ಸು ಸಾಧಿಸಲು ಆಗಿರಲಿಲ್ಲ. ಪಡೆಗಳು ಹೊರಹೋದರೆ ಇವು ಶಕ್ತಿ ಪಡೆಯಬಹುದು

ಸುದೀರ್ಘ ಯುದ್ಧ

ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಜೇಶನ್‌ (ನ್ಯಾಟೊ) ಪಡೆಗಳು ಒಗ್ಗಟ್ಟಿನ ಹೋರಾಟ ಮಾಡಿದರೂ ಅಫ್ಗಾನಿಸ್ತಾನ ಯುದ್ಧವು ಇಷ್ಟೊಂದು ಸುದೀರ್ಘ ಕಾಲ ನಡೆದಿರುವುದಕ್ಕೆ ಪ್ರಮುಖವಾಗಿ ಕೆಲವು ಕಾರಣಗಳನ್ನು ವಿಶ್ಲೇಷಕರು ಗುರುತಿಸಿದ್ದಾರೆ...

lದಾಳಿ ಆರಂಭವಾದಾಗಿನಿಂದಲೇ ಅಫ್ಗಾನಿಸ್ತಾನ ವಿಚಾರವಾಗಿ ಸ್ಪಷ್ಟವಾದ ರಾಜಕೀಯ ನೀತಿ ಇರಲಿಲ್ಲ

lಪ್ರತಿಯೊಂದು ಪಡೆಯೂ ತನ್ನದೇ ರೀತಿಯಲ್ಲಿ ಚಿಂತನೆ ನಡೆಸುತ್ತಿತ್ತು. ಶಾಂತಿ ಮಾತುಕತೆಯ ಪ್ರಸ್ತಾಪವಾದಾಗಲೆಲ್ಲ ತಾಲಿಬಾನ್‌ ತನ್ನ ನಿಯಂತ್ರಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿತ್ತು

lಐಎಸ್‌ ಸಂಘಟನೆಯ ಚಟುವಟಿಕೆಗಳು ಹೆಚ್ಚಾಗಿದ್ದು, ಅಫ್ಗಾನಿಸ್ತಾನದಲ್ಲಿ ನಡೆದ ಕೆಲವು ಭಯಾನಕ ದಾಳಿಗಳ ಹಿಂದೆ ಈ ಸಂಘಟನೆಯ ಉಗ್ರರ ಕೈವಾಡವಿತ್ತು

lತಾಲಿಬಾನ್‌ನ ಬೇರುಗಳು ನೆರೆರಾಷ್ಟ್ರ ಪಾಕಿಸ್ತಾನದಲ್ಲಿದ್ದವು. ಆದ್ದರಿಂದ ಆ ಸಂಘಟನೆಗೆ ಪಾಕಿಸ್ತಾನವೂ ಎಲ್ಲಾ ರೀತಿಯ ಬೆಂಬಲ ನೀಡುತ್ತಿತ್ತು.

ಶಾಂತಿ ಒಪ್ಪಂದದ ಮುಖ್ಯಾಂಶಗಳು
l ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ವಾಪಸ್, ನ್ಯಾಟೊ ಪಡೆಗಳ ವಾಪಸಾತಿ

l ಒಪ್ಪಂದಕ್ಕೆ ಸಹಿ ಹಾಕಿದ 135 ದಿನಗಳ ಒಳಗೆ ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆಯನ್ನು 8,600ಕ್ಕೆ ಇಳಿಸುವುದು

l ಒಪ್ಪಂದಕ್ಕೆ ಸಹಿ ಹಾಕಿದ 14 ತಿಂಗಳ ಒಳಗೆ ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಎಲ್ಲಾ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದು

l ಅಫ್ಗಾನಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧನದಲ್ಲಿರುವ ತಾಲಿಬಾನ್‌ನ 5,000 ಉಗ್ರರನ್ನು ಬಿಡುಗಡೆ ಮಾಡುವುದು

l ತಾಲಿಬಾನ್‌ನ ಬಂಧನದಲ್ಲಿರುವ 1,000 ಮಂದಿ ಅಫ್ಗಾನಿಸ್ತಾನ ಸೈನಿಕರನ್ನು ಮಾರ್ಚ್‌ 10ರ ಒಳಗೆ ಬಿಡುಗಡೆ ಮಾಡಬೇಕು

l ಅಲ್‌ ಕೈದಾ ಉಗ್ರ ಸಂಘಟನೆ ಮತ್ತು ಇತರ ಉಗ್ರ ಸಂಘಟನೆಗಳು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ತಾಲಿಬಾನ್‌ನದ್ದು

l ತಾಲಿಬಾನ್ ಉಗ್ರರ ಮೇಲೆ ವಿಶ್ವಸಂಸ್ಥೆ ವಿಧಿಸಿರುವ ನಿರ್ಬಂಧಗಳನ್ನು ತೆರವು ಮಾಡಿಸುವ ಜವಾಬ್ದಾರಿ ಅಮೆರಿಕದ್ದು

l ತಾಲಿಬಾನ್‌–ಅಫ್ಗಾನಿಸ್ತಾನದ ಚುನಾಯಿತ ಸರ್ಕಾರದ ಮಧ್ಯೆ ಮಾತುಕತೆ ನಡೆಯಬೇಕು. ಅಧಿಕಾರ ಹಂಚಿಕೆ ಸಂಬಂಧ ಒಮ್ಮತಕ್ಕೆ ಬರಬೇಕು

l ಅಫ್ಗಾನಿಸ್ತಾನದ ಎಲ್ಲೆಡೆ ಸಂಘರ್ಷಕ್ಕೆ ಅಂತ್ಯ ಹಾಕಬೇಕು. ಕದನ ವಿರಾಮ ಜಾರಿಯಲ್ಲಿರಬೇಕು

l ಈ ಎಲ್ಲಾ ಷರತ್ತುಗಳನ್ನು ಪೂರೈಸಿದರೆ ಮಾತ್ರ, ಅಮೆರಿಕವು ತನ್ನ ಎಲ್ಲಾ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಿದೆ


ಆಫ್ಗನ್ ಸ್ಥಿತ್ಯಂತರದ 20 ವರ್ಷಗಳು
ಆಫ್ತಾನಿಸ್ತಾನದಲ್ಲಿ ಕಳೆದ 20 ವರ್ಷಗಳಲ್ಲಿ ಆಗಿರುವ ಸ್ಥಿತ್ಯಂತರಗಳನ್ನು ಜಗತ್ತು ಗಮನಿಸಿದೆ. ತಾಲಿಬಾನ್ ಆಡಳಿತ, ಅಲ್ ಕೈದಾ ಜತೆ ನಂಟು, ವಿಶ್ವಸಂಸ್ಥೆಯ ನಿರ್ಬಂಧ, ಲಾಡೆನ್ ಪ್ರಾಬಲ್ಯ, ಅಮೆರಿಕದ ಮೇಲೆ ದಾಳಿ, ನ್ಯಾಟೊ ನಿಯೋಜನೆ, ಪ್ರಜಾಪ್ರಭುತ್ವವಾದಿ ಸರ್ಕಾರ ರಚನೆ, ಲಾಡೆನ್ ಹತ್ಯೆ ಸೇರಿದಂತೆ ಎರಡು ದಶಕಗಳಿಂದ ಅಲ್ಲಿ ಸಾವಿರಾರು ಜನರು ನೆತ್ತರು ಹರಿಸಿದ್ದಾರೆ...


1999 ಅ.15: ಬಂಡುಕೋರ ಸಂಘಟನೆ ಅಲ್ ಕೈದಾ ಹಾಗೂ ತಾಲಿಬಾನ್ ಮೇಲೆ ನಿರ್ಬಂಧ ವಿಧಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ; ಈ ನಿರ್ಧಾರವು ತಾಲಿಬಾನ್ ಹಾಗೂ ಅದರ ನಾಯಕ ಒಸಾಮಾ ಬಿನ್ ಲಾಡೆನ್‌ ಪ್ರಾಬಲ್ಯಕ್ಕೆ ಬರಲು ದಾರಿ ಮಾಡಿಕೊಟ್ಟತು

2001 ಸೆ.11: ನಾಲ್ಕು ವಾಣಿಜ್ಯ ವಿಮಾನಗಳನ್ನು ಅಪಹರಿಸಿದ ಅಲ್ ಕೈದಾ ಉಗ್ರರಿಂದ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ. 3 ಸಾವಿರ ಜನರ ಸಾವು. ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಸಂಕಲ್ಪ. ಅಲ್ ಕೈದಾ ಬಂಡುಕೋರರನ್ನು ಒಪ್ಪಿಸುವಂತೆ ತಾಲಿಬಾನ್ ಆಡಳಿತಕ್ಕೆ ಬುಷ್ ತಾಕೀತು

ಸೆ.18: 9/11 ದಾಳಿಗೆ ಕಾರಣರಾದವರ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಘೋಷಣೆಗೆ ಬುಷ್ ಸಹಿ

ಅ.7: ತಾಲಿಬಾನ್ ಪಡೆಗಳ ಮೇಲೆ ಬಾಂಬ್ ದಾಳಿ ಆರಂಭಿಸಿದ ಅಮೆರಿಕ. ಬ್ರಿಟನ್, ಕೆನಡಾ, ಅಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್‌ ಬೆಂಬಲ ಘೋಷಣೆ. ತಾಲಿಬಾನ್ ವಿರೋಧಿಗಳಾದ ನಾರ್ದರ್ನ್ ಅಲಯನ್ಸ್, ಪಷ್ತುನ್ ಪಡೆಗಳಿಂದ ಅಮೆರಿಕಕ್ಕೆ ಸಹಕಾರ

ಡಿಸೆಂಬರ್ : ‌ಟೋರಾಬೋರಾ ಕಣಿವೆ ಮೇಲೆ ನಡೆದ ದಾಳಿಯಲ್ಲಿ ನೂರಾರು ಬಂಡುಕೋರರ ಸಾವು, ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನಕ್ಕೆ ಪರಾರಿಯಾಗಿರುವ ಶಂಕೆ

ಡಿ.5: ನಾರ್ದರ್ನ್ ಅಲಯನ್ಸ್ ಸೇರಿದಂತೆ ಆಫ್ಗನ್ ಬಣಗಳನ್ನು ಜರ್ಮನಿಯ ಬೊನ್‌ಗೆ ಆಹ್ವಾನಿಸಿದ ವಿಶ್ವಸಂಸ್ಥೆ. ಹಮೀದ್ ಕರ್ಜೈ ಅವರನ್ನು ಆಫ್ಗನ್‌ನ ಮಧ್ಯಂತರ ಆಡಳಿತದ ಮುಖ್ಯಸ್ಥರಾಗಿ ನೇಮಿಸಿ ಆದೇಶ

2002 ಮಾರ್ಚ್: ಅಪರೇಷನ್ ಅನಕೊಂಡ ಮೂಲಕ ಗಾರ್ದೆಜ್ ಪಟ್ಟಣ ಸಮೀಪದ ಕಣಿವೆ ಮೇಲೆ ಅಲ್ ಕೈದಾ ಬಂಡುಕೋರರನ್ನು ಗುರಿಯಾಗಿಸಿ ಅಮೆರಿಕ ಹಾಗೂ ಆಫ್ಗನ್ ಸೇನೆಯಿಂದ ಕಾರ್ಯಾಚರಣೆ

2002 ಸೆ.: ಆಫ್ಗನ್ ಮರು ನಿರ್ಮಾಣಕ್ಕೆ 38 ಬಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕ ಸಂಸತ್ತು

2003 ಆ.8: ಆಫ್ಗನ್‌ನಲ್ಲಿ ಭದ್ರತೆಗೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನ್ಯಾಟೊ) ನಿಯೋಜನೆ

2004 ಜನವರಿ: ಪ್ರಬಲ ಅಧ್ಯಕ್ಷೀಯ ಆಡಳಿತವನ್ನು ಪ್ರಸ್ತಾಪಿಸುವ ಆಫ್ಗನ್ ಸಂವಿಧಾನಕ್ಕೆ ಒಪ್ಪಿಗೆ

2004 ಅ.9: ಐತಿಹಾಸಿ ಚುನಾವಣೆಯಲ್ಲಿ ಕರ್ಜೈ ಅವರು ಮೊದಲ ಚುನಾಯಿತ ಅಧ್ಯಕ್ಷರಾಗಿ ಆಯ್ಕೆ

ಅ.29: ಬುಷ್ ಮರು ಆಯ್ಕೆಗೆ ಕೆಲವೇ ದಿನಗಳ ಮೊದಲು ಲಾಡೆನ್‌ ವಿಡಿಯೊ ಬಿಡುಗಡೆ. ಅಮೆರಿಕ ದಾಳಿಯ ಹೊಣೆ ಹೊತ್ತುಕೊಂಡ ಉಗ್ರ

2005 ಮೇ 23: ಆಫ್ಗನ್ ಸೇನಾ ನೆಲೆ ಬಳಸಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಕರ್ಜೈ–ಬುಷ್ ಒಪ್ಪಂದ

2009 ಫೆ. 17: ಯುದ್ಧಪೀಡಿತ ಆಫ್ಗನ್‌ಗೆ ಮತ್ತೆ 17 ಸಾವಿರ ಹೆಚ್ಚುವರಿ ಸೇನಾ ಸಿಬ್ಬಂದಿ ಕಳುಹಿಸಲು ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮ ನಿರ್ಧಾರ; ಅಲ್‌ ಕೈದಾ ಹಾಗೂ ತಾಲಿಬಾನ್ ಉಗ್ರರ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಹೆಚ್ಚಿನ ನೆರವು ನೀಡಲು ನಿರ್ಧಾರ

2010 ನವೆಂಬರ್: 2014ರೊಳಗೆ ಆಫ್ಗನ್ ಸೇನೆಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಒಪ್ಪಂದಕ್ಕೆ ನ್ಯಾಟೊ ಸದಸ್ಯ ರಾಷ್ಟ್ರಗಳಿಂದ ಲಿಸ್ಬನ್‌ನಲ್ಲಿ ಸಹಿ

2011 ಮೇ 1: 10 ವರ್ಷಗಳಿಂದ ಅಮೆರಿಕಕ್ಕೆ ಬೇಕಾಗಿದ್ದ ಉಗ್ರ ಒಸಾಬಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಹತ್ಯೆ; ಆಫ್ಗನ್‌ನಿಂದ ಸೇನೆ ಹಿಂತೆಗೆಯುವುದಾಗಿ ಘೋಷಿಸಿದ ಒಬಾಮಾ

2012 ಮಾರ್ಚ್: ಶಾಂತಿ ಮಾತುಕತೆಗೆ ಅನುಕೂಲವಾಗುವಂತೆ ಕತಾರ್‌ನಲ್ಲಿ ರಾಜಕೀಯ ಕಚೇರಿ ಆರಂಭಿಸಿದ ತಾಲಿಬಾನ್

2018 : ತಾಲಿಬಾನ್‌ ನಿಗ್ರಹಕ್ಕೆ ಹೊಸ ನೀತಿ ಘೋಷಿಸಿದ ಟ್ರಂಪ್ ಕ್ರಮಕ್ಕೆ ಪ್ರತಿಯಾಗಿ ಕಾಬೂಲ್‌ನಲ್ಲಿ ಭಾರಿ ಪ್ರಮಾಣ ದಾಳಿ ನಡೆಸಿದ ಬಂಡುಕೋರರು; ಶಾಂತಿ ಮಾತುಕತೆಗೆ ಅಮೆರಿಕ–ತಾಲಿಬಾನ್ ನಿರ್ಧಾರ

ಅಮೆರಿಕ–ಹಾಗೂ ತಾಲಿಬಾನ್ ಶಾಂತಿ ಮಾತುಕತೆ

2018: ಸೆ. ತಾಲಿಬಾನ್ ಜತೆ ಮಾತುಕತೆ ನಡೆಸಲು ಆಫ್ಗನ್ ಮೂಲದ ಅಮೆರಿಕದ ಹಿರಿಯ ರಾಜತಂತ್ರಜ್ಞ ಜಲ್ಮೆ ಖಲೀಲ್‌ಜಾದ್ ಅವರನ್ನು ನೇಮಿಸಿದ ಡೊನಾಲ್ಡ್ ಟ್ರಂಪ್

2019: ಜ: ಬಂಡುಕೋರರ ಕಚೇರಿ ಇದ್ದ ಕತಾರ್‌ನಲ್ಲಿ ಮಾತುಕತೆ ನಡೆಸಿದ ಖಲೀಲ್‌ಜಾದ್

ಸೆ: ಕಾಬೂಲ್‌ನಲ್ಲಿ ಅಮೆರಿಕ ಸೈನಿಕನ ಹತ್ಯೆ ಸೇರಿದಂತೆ ತಾಲಿಬಾನ್ ದಾಳಿ ಹೆಚ್ಚಳ; ಮಾತುಕತೆಗೆ ಟ್ರಂಪ್ ತಡೆ

ಸೆ: ಆಫ್ಗನ್ ಅಧ್ಯಕ್ಷೀಯ ಚುನಾವಣೆ; ತಿಂಗಳಾದರೂ ಹೊರಬಾರದ ಫಲಿತಾಂಶ

ನ: ಆಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳನ್ನು ಭೇಟಿ ಮಾಡಿದ ಟ್ರಂಪ್; ಒಪ್ಪಂದಕ್ಕೆ ತಾಲಿಬಾನ್ ಸಿದ್ಧವಿದೆ ಎಂದು ಹೇಳಿಕೆ; ಕತಾರ್‌ ಮಾತುಕತೆಗೆ ಮರು ಜೀವ

2020: ಫೆ.15: ಅಂತಿಮ ಒಪ್ಪಂದಕ್ಕೆ ಪೂರಕವಾಗಿ ಹಿಂಸಾಚಾರವನ್ನು ಕಡಿತಗೊಳಿಸುವಂತೆ ತಾಲಿಬಾನ್‌ಗೆ ಸೂಚಿಸಿದ ಅಮೆರಿಕ

ಫೆ.18: ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಶ್ರಫ್ ಘನಿ ಗೆದ್ದಿದ್ದಾರೆ ಎಂದು ಘೋಷಿಸಿದ ಚುನಾವಣಾ ಆಯೋಗ; ಫಲಿತಾಂಶವನ್ನು ತಿರಸ್ಕರಿಸಿದ ಅಬ್ದುಲ್ಲಾ ಅಬ್ದುಲ್ಲಾ

ಫೆ.29: ಕತಾರ್‌ನ ದೋಹಾದಲ್ಲಿ ಅಮೆರಿಕ–ತಾಲಿಬಾನ್ ಮಧ್ಯೆ ಒಪ್ಪಂದಕ್ಕೆ ಸಹಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT