ಶನಿವಾರ, ಮಾರ್ಚ್ 25, 2023
23 °C
ಬ್ರೆಜಿಲ್‌: ಬೊಲ್ಸೊನಾರೊ ಬೆಂಬಲಿಗರಿಂದ ಸಂಸತ್ತಿಗೆ ಮುತ್ತಿಗೆ

ಆಳ– ಅಗಲ: ಫಲಿತಾಂಶ ಪ್ರಶ್ನಿಸಿ ದಾಂದಲೆ ಪ್ರಜಾತಂತ್ರಕ್ಕೆ ಕುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾಸತ್ತಾತ್ಮಕವಾಗಿ ನಡೆದ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳದೇ ಇರುವುದು ಮತ್ತು ಸೋತ ರಾಜಕೀಯ ನಾಯಕರ ಬೆಂಬಲಿಗರು ಸಂಸತ್ತಿಗೇ ನುಗ್ಗಿ ದಾಂದಲೆ ನಡೆಸುವುದು ಹೊಸ ಪ್ರವೃತ್ತಿಯಾಗಿದೆ. ಬ್ರೆಜಿಲ್‌ನಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಅತಿಬಲಪಂಥೀಯ ವಾದದ ಪ್ರತಿಪಾದಕ ಜೈರ್‌ ಬೊಲ್ಸೊನಾರೊ ಅವರು ಸೋತಿದ್ದಾರೆ. ಎಡಪಂಥೀಯ ಒಲವಿನ ಲುಯಿಸ್‌ ಇನಾಸಿಯೊ ಲುಲ ಡ ಸಿಲ್ವ ಅವರು ಗೆದ್ದು ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಬೊಲ್ಸೊನಾರೊ ಬೆಂಬಲಿಗರು ಬ್ರೆಜಿಲ್‌ನ ಸಂಸತ್ತು, ಸುಪ್ರೀಂ ಕೋರ್ಟ್‌ ಮತ್ತು ಅಧ್ಯಕ್ಷರ ಅರಮನೆಗೆ ಭಾನುವಾರ ನುಗ್ಗಿ ದಾಂದಲೆ ನಡೆಸಿದ್ದಾರೆ. 

ಬ್ರೆಜಿಲ್‌ನ ಅಧಿಕಾರ ಕೇಂದ್ರವಾದ ‘ಥ್ರೀ ಪವರ್‌ ಸ್ಕ್ವೇರ್‌’ಗೆ ಜನರು ನುಗ್ಗಿದರು. ಥ್ರೀ ಪವರ್‌ ಸ್ಕ್ವೇರ್‌ನಲ್ಲಿರುವ ಸಂಸತ್ತು, ಸುಪ್ರೀಂ ಕೋರ್ಟ್‌ ಮತ್ತು ಅಧ್ಯಕ್ಷರ ಅರಮನೆಗೆ ದಾಳಿಯಿಟ್ಟರು. ಕಿಟಕಿಯ ಗಾಜುಗಳನ್ನು ಒಡೆದು ಹಾಕಿದರು, ಬೆಂಕಿ ಹಚ್ಚಿದರು. ದಾಂದಲೆ ಸುಮಾರು ಮೂರು ತಾಸು ನಡೆಯಿತು. ಪೊಲೀಸರು ಸುಮಾರು 300 ಮಂದಿಯನ್ನು ಬಂಧಿಸಿದ್ದಾರೆ. 

ಲುಲ ಅವರಿಗೆ ಶೇ 50.9ರಷ್ಟು ಮತಗಳು ಸಿಕ್ಕಿವೆ. ಹಾಗಾಗಿಯೇ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬೊಲ್ಸೊನಾರೊ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ. ಸೇನೆಯು ಮಧ್ಯಪ್ರವೇಶಿಸಿ ಲುಲ ಅವರು ಅಧಿಕಾರ ವಹಿಸಿಕೊಳ್ಳುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ, ಚುನಾವಣೆಯಲ್ಲಿ ವಂಚನೆ ನಡೆದಿದೆಯೇ ಎಂಬ ಕುರಿತು ಸೇನೆಯು ತನಿಖೆ ನಡೆಸಬೇಕು ಎಂದು ಬೊಲ್ಸೊನಾರೊ ಆಗ್ರಹಿಸಿದ್ದರು.

ಸೇನೆಯು ತನಿಖೆ ನಡೆಸಿ, ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಕುರಿತು ವರದಿಯೊಂದನ್ನು ಸಿದ್ಧಪಡಿಸಿದೆ. ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿದೆ.  

ಕೆಲವು ಮತಯಂತ್ರಗಳ ಕೆಲವು ಮತಗಳನ್ನು ಅಸಿಂಧುಗೊಳಿಸಬೇಕು ಎಂದು ಚುನಾವಣಾ ಪ್ರಾಧಿಕಾರಕ್ಕೆ ಬೊಲ್ಸೊನಾರೊ ಅವರು ದೂರು ಕೊಟ್ಟಿದ್ದರು. ಆದರೆ, ಅದನ್ನು ಪ್ರಾಧಿಕಾರವು ತಳ್ಳಿ ಹಾಕಿದೆ. ಹಾಗೆಯೇ ಲುಲ ಅವರಿಗೆ ಅಧಿಕಾರ ನೀಡುವ ವಿಚಾರದಲ್ಲಿ ಆಡಳಿತ ವ್ಯವಸ್ಥೆಯು ಯಾವುದೇ ಆಕ್ಷೇಪ ಹೊಂದಿಲ್ಲ ಮತ್ತು ಲುಲ ಅವರು ಅಧಿಕಾರವನ್ನೂ ವಹಿಸಿಕೊಂಡಿದ್ದಾರೆ. ಬೊಲ್ಸೊನಾರೊ ಅವರು ಸೋಲನ್ನು ಒಪ್ಪಿಕೊಂಡಿಲ್ಲ ಮತ್ತು ಹೊಸ ಅಧ್ಯಕ್ಷರಿಗೆ ಅಭಿನಂದನೆಯನ್ನೂ ಹೇಳಿಲ್ಲ. ಇದರಿಂದಾಗಿ ಬೊಲ್ಸೊನಾರೊ ಅವರ ಬೆಂಬಲಿಗರು ಕೂಡ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಟ್ರಂಪ್‌ ಮಾದರಿ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ರೆಜಿಲ್‌ನಲ್ಲಿ ಮೊದಲ ಹಂತದ ಮತದಾನವಷ್ಟೇ ನಡೆದಿತ್ತು. ಸ್ಟೀವ್‌ ಬ್ಯಾನನ್‌ ಅವರು ಪಾಡ್‌ಕಾಸ್ಟ್‌ ನಡೆಸಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಅಂತಿಮ ಫಲಿತಾಂಶ ಪ್ರಕಟವಾಗುವುದಕ್ಕೆ ಮೊದಲೇ ಅವರು ಚುನಾವಣಾ ಅಕ್ರಮ ಕುರಿತಂತೆ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಲೇ ಇದ್ದರು. ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿದ್ದಾಗ ಶ್ವೇತ ಭವನದ ಕಾರ್ಯತಂತ್ರ ವಿಭಾಗದ ಮುಖ್ಯಸ್ಥರಾಗಿ ಸ್ವೀವ್‌ ಕೆಲಸ ಮಾಡಿದ್ದರು.

‘ಬ್ರೆಜಿಲಿಯನ್‌ ಸ್ಪ್ರಿಂಗ್’ ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಕೂಡ ಸ್ಟೀವ್‌ ಸೃಷ್ಟಿಸಿದ್ದರು.

ಅಮೆರಿಕ ಅಧ್ಯಕ್ಷ ಹುದ್ದೆಗೆ 2020ರಲ್ಲಿ ನಡೆದ ಚುನಾವಣೆಯ ಫಲಿತಾಂಶದ ಕುರಿತು ಬೆಂಬಲಿಗರಲ್ಲಿ ಸಂದೇಹ ಮೂಡಿಸಲು ಇದೇ ಕಾರ್ಯತಂತ್ರವನ್ನು ಅನುಸರಿಸಲಾಗಿತ್ತು. ಅಮೆರಿಕದಲ್ಲಿ 2021ರ ಜನವರಿ 6ರ ಗಲಭೆಯ ಮುನ್ನಾದಿನ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ‘ನಾಳೆ ಎಲ್ಲವೂ ತಲೆಕೆಳಗಾಗಲಿದೆ’ ಎಂದು ಸ್ಟೀವ್‌ ಹೇಳಿದ್ದರು.


ಲುಲ ಡಸಿಲ್ವಾ ಮತ್ತು ಬೊಲ್ಸೊನಾರೊ 

‘ಲುಲ ಅವರು ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ. ಬ್ರೆಜಿಲ್‌ನ ಜನರಿಗೆ ಅದು ಗೊತ್ತು’ ಎಂದು ಸ್ಟೀವ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬ್ರೆಜಿಲ್‌ನಲ್ಲಿ ಭಾನುವಾರ ದಾಂದಲೆ ನಡೆಸಿದವರನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಕರೆದಿದ್ದಾರೆ.

ಟ್ರಂಪ್‌ ಮತ್ತು ಬೊಲ್ಸೊನಾರೊ ಅವರ ಮಗ ಎಡ್ವರ್ಡೊ ಬೊಲ್ಸೊನಾರೊ, ಟ್ರಂಪ್‌ ಅವರ ಫ್ಲಾರಿಡಾದ ರೆಸಾರ್ಟ್‌ನಲ್ಲಿ ಕಳೆದ ನವೆಂಬರ್‌ನಲ್ಲಿ ಭೇಟಿಯಾಗಿದ್ದರು. ಈ ಭೇಟಿಯ ಸಂದರ್ಭದಲ್ಲಿ ಎಡ್ವೊರ್ಡೊ ಅವರು ಸ್ಟೀವ್‌ ಅವರನ್ನು ಭೇಟಿಯಾಗಿದ್ದರು. ಟ್ರಂಪ್‌ ಅವರ ಸಲಹೆಗಾರ ಜೇಸನ್‌ ಮಿಲ್ಲರ್‌ ಅವರನ್ನೂ ಭೇಟಿಯಾಗಿದ್ದರು ಎಂಬುದು ವಾಷಿಂಗ್ಟನ್‌ ಪೋಸ್ಟ್‌ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಟ್ರಂಪ್‌ ಅವರು ಮತದಾನ ವ್ಯವಸ್ಥೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು. ಮತಯಂತ್ರಗಳ ಮತ ಎಣಿಕೆ ವ್ಯವಸ್ಥೆ ಸರಿ ಇಲ್ಲ ಎಂಬುದು ಬೊಲ್ಸೊನಾರೊ ಅವರ ಆರೋಪವಾಗಿದೆ. ಹೀಗೆ, ಎರಡೂ ದೇಶಗಳಲ್ಲಿ ನಡೆದ ದಾಂದಲೆ, ಅದರ ಹಿಂದಿನ ಪಿತೂರಿ, ಕಾರ್ಯತಂತ್ರ ಎಲ್ಲವೂ ಒಂದೇ ರೀತಿಯದ್ದಾಗಿದೆ.

ಅಮೆರಿಕದಲ್ಲಿ ನಡೆದದ್ದೇನು?

ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್‌ನಲ್ಲಿ 2021ರ ಜನವರಿ 6ರಂದು ದಾಂದಲೆ ನಡೆಸಿದ್ದರು. ಅವರು ಸಂಸತ್ತಿಗೆ ನುಗ್ಗಿ ಕಿಟಕಿಗಳ ಗಾಜು ಒಡೆದಿದ್ದರು ಮತ್ತು ಪೀಠೋಪಕರಣಗಳಿಗೆ ಹಾನಿ ಮಾಡಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ಟ್ರಂಪ್‌ ಅವರ ಪ‍್ರತಿಪಾದನೆಯಾಗಿತ್ತು. ದಾಳಿ ನಡೆಸುವಂತೆ ತಮ್ಮ ಬೆಂಬಲಿಗರಿಗೆ ಟ್ರಂಪ್‌ ಅವರು ಕುಮ್ಮಕ್ಕು ನೀಡಿದ್ದರು. ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಡಿದ್ದರು.

ಮೂಲಭೂತವಾದಿಗಳ ಅಬ್ಬರ

ಬ್ರೆಜಿಲ್‌ನಲ್ಲಿ ಉಂಟಾಗಿರುವ ದಂಗೆಗೆ ಕಾರಣ ಎನ್ನಲಾಗಿರುವ ಮಾಜಿ ಅಧ್ಯಕ್ಷ ಬೊಲ್ಸೊನಾರೊ ಅವರು ತೀವ್ರ ಬಲಪಂಥೀಯವಾದಿ ಎಂಬ ಹಣೆಪಟ್ಟಿ ಹೊತ್ತಿದ್ದಾರೆ. ತೀವ್ರ ಮೂಲಭೂತವಾದವನ್ನು ಬೆಂಬಲಿಸುವ ದೊಡ್ಡ ಬೆಂಬಲಿಗರ ಪಡೆಯನ್ನೇ ಅವರು ಹೊಂದಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ನಡೆದುಕೊಂಡ ರೀತಿ ಹಾಗೂ ತೆಗೆದುಕೊಂಡ ತೀರ್ಮಾನಗಳು, ಎಡಪಂಥೀಯ ಸರ್ಕಾರ ಅಧಿಕಾರಕ್ಕೆ ಬಾರದಂತೆ ತಡೆಯುವ ಎಲ್ಲ ಸೂಚನೆಗಳನ್ನು ನೀಡಿದ್ದವು.

ಕಳೆದ ಸೆಪ್ಟೆಂಬರ್‌ನಲ್ಲಿ, ಸ್ವಾತಂತ್ರ್ಯದ 200ನೇ ವರ್ಷವನ್ನು ಬ್ರೆಜಿಲ್ ಆಚರಿಸುತ್ತಿದ್ದ ವೇಳೆ, ಬೊಲ್ಸೊನಾರೊ ಅವರು ನಿರಂಕುಶಾಧಿಕಾರದ ಬಗ್ಗೆ ಮಾತನಾಡಿದ್ದರು. ರಿಯೊ ಡಿ ಜನೈರೊ ಸೇರಿದಂತೆ ಕೆಲವು ಕಡೆ ಆಯೋಜಿಸಿದ್ದ ಸಮಾರಂಭಗಳಲ್ಲಿ ಭಾಗಿಯಾಗಿದ್ದ ಬೊಲ್ಸೊನಾರೊ, ‘ಇತಿಹಾಸ ಮರುಕಳಿಸುತ್ತದೆ. ಕೆಟ್ಟ ದಿನಗಳ ಮೇಲೆ ಒಳ್ಳೆಯ ದಿನಗಳು ಗೆಲುವು ಸಾಧಿಸಲಿವೆ’ ಎಂದು ಹೇಳುವ ಮೂಲಕ ನಿರಂಕುಶಾಧಿಕಾರದ ಸುಳಿವು ನೀಡಿದ್ದರು.
ಸುಪ್ರೀಂ ಕೋರ್ಟ್‌ ಅನ್ನು ಮುಚ್ಚುವ ಹಾಗೂ ಸರ್ಕಾರದ ಆಡಳಿತದಲ್ಲಿ ಸೇನೆ ಮಧ್ಯಪ್ರವೇಶಿಸುವ ಬೇಡಿಕೆಗಳನ್ನು ಸಮರ್ಥಿಸಿ ಬೊಲ್ಸೊನಾರೊ ಮಾತನಾಡಿದ್ದರು.

ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಸುಳಿವು ಸಿಕ್ಕಿ‌ದ್ದರಿಂದ, ಚುನಾವಣೆಗೆ ಒಂದು ತಿಂಗಳ ಮೊದಲೇ ಅಧ್ಯಕ್ಷರ ಬೆಂಬಲಿಗರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು.

2019ರ ಜನವರಿ 1ರಂದು ಬೊಲ್ಸೊನಾರೊ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ಮೂಲಭೂತವಾದಿ ನಿಲುವುಗಳನ್ನು ಅನುಸರಿಸಲು ಮುಂದಾದರು. ಬ್ರೆಜಿಲ್‌ನ ಸಂಸತ್ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಬಹಿರಂಗವಾಗಿ ಟೀಕಿಸಲು ಶುರು ಮಾಡಿದರು. ಪೊಲೀಸ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು.
ಬೊಲ್ಸೊನಾರೊ ಅವರು ಮೂಲಭೂತವಾದಿ ಸಿದ್ಧಾಂತದ ಸಂಘಟನೆಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು. ಬಲಪಂಥದ ಬಗ್ಗೆ ಒಲವುಳ್ಳ ಈ ಸಂಘಟನೆಗಳ ಸದಸ್ಯರೇ ಬ್ರೆಜಿಲ್‌ನಲ್ಲಿ ಬೀದಿಗಿಳಿದು ದಾಳಿ ಎಸಗಿದ್ದಾರೆ ಎನ್ನಲಾಗಿದೆ.

ಚುನಾವಣೆಯಿಂದ ದಂಗೆಯವರೆಗೆ...

2022

ಅಕ್ಟೋಬರ್ 30; 2003ರಿಂದ 2011ರವರೆಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಲುಲ ಅವರು ಬ್ರೆಜಿಲ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಬೊಲ್ಸೊನಾರೊ ಅವರನ್ನು ಸೋಲಿಸಿದರು. ಫಲಿತಾಂಶದಿಂದ ರೊಚ್ಚಿಗೆದ್ದ ಬೊಲ್ಸೊನಾರೊ ಅವರ ಬೆಂಬಲಿಗರು ದೇಶದ ಎಲ್ಲ ಸೇನಾನೆಲೆಗಳ ಹೊರಗೆ ಜಮಾವಣೆಗೊಂಡರು

ನ.22; ಚುನಾವಣಾ ಫಲಿತಾಂಶವನ್ನು ಬೊಲ್ಸೊನಾರೊ ಪ್ರಶ್ನಿಸಿದರು. ಕೆಲವು ಮತಯಂತ್ರಗಳ ಮತಗಳನ್ನು ಅಸಿಂಧು ಎಂಬುದಾಗಿ ಘೋಷಿಸಲು ಆಗ್ರಹಿಸಿದರು. ಆದರೆ, ಅವರ ದೂರನ್ನು ಚುನಾವಣಾ ಪ್ರಾಧಿಕಾರ ತಿರಸ್ಕರಿಸಿತು

ಡಿ.12; ಲುಲ ಅವರ ಚುನಾವಣಾ ಜಯವನ್ನು ಚುನಾವಣಾ ಪ್ರಾಧಿಕಾರ ಪ್ರಮಾಣೀಕರಿಸಿತು. ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಬೊಲ್ಸೊನಾರೊ ಬೆಂಬಲಿಗರನ್ನು ಬಂಧಿಸಲಾಯಿತು. ಇದನ್ನು ಖಂಡಿಸಿ ಇನ್ನಷ್ಟು ಬೆಂಬಲಿಗರು ಬ್ರೆಸಿಲಿಯಾದ ಪೊಲೀಸ್ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದರು

ಡಿ.24; ಚುನಾವಣಾ ಫಲಿತಾಂಶವನ್ನು ಪ್ರತಿಭಟಿಸಿ ಬಾಂಬ್ ಸ್ಫೋಟಿಸಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಯಿತು. ನಾಗರಿಕರನ್ನು ಶಸ್ತ್ರಧಾರಿಗಳನ್ನಾಗಿ ಮಾಡುವ ಬೊಲ್ಸೊನಾರೊ ಅವರ ಇಚ್ಛೆಯಿಂದ ಸ್ಫೂರ್ತಿ ಪಡೆದು ಬಾಂಬ್ ತಯಾರಿಸಿದ್ದೆ ಎಂದು ಬಂಧಿತ ವ್ಯಕ್ತಿ ಹೇಳಿಕೊಂಡಿದ್ದ

ಡಿ.30; ಲುಲ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಎರಡು ದಿನ ಮುನ್ನ, ಬೊಲ್ಸೊನಾರೊ ಅವರು ಫ್ಲಾರಿಡಾಗೆ ಹಾರಿದರು

2023

ಜ.1; ಬ್ರೆಜಿಲ್ ಅಧ್ಯಕ್ಷರಾಗಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ಲುಲ ಅವರು, ಅಧ್ಯಕ್ಷೀಯ ಚುನಾವಣೆಯಲ್ಲಿ ನಿಜವಾಗಿ ಗೆದ್ದಿದ್ದು ಪ್ರಜಾಪ್ರಭುತ್ವ ಎಂದು ಬಣ್ಣಿಸಿದರು

ಜ.8; ಬೊಲ್ಸೊನಾರೊ ಬೆಂಬಲಿಗರಿಂದ ಅಧ್ಯಕ್ಷೀಯ ಅರಮನೆ, ಸಂಸತ್ ಭವನ ಹಾಗೂ ಸುಪ್ರೀಂ ಕೋರ್ಟ್‌ ಮೇಲೆ ದಾಳಿ

ಜ.8; ದೇಶದಲ್ಲಿ ತುರ್ತು ಪರಿಸ್ಥಿತಿ ವಿಧಿಸುವ ಸುಗ್ರೀವಾಜ್ಞೆಗೆ ಅಧ್ಯಕ್ಷ ಲುಲ ಅವರಿಂದ ಸಹಿ. ಪ್ರತಿಭಟನಾಕಾರರು ಸೇನಾ ನೆಲೆಗಳ ಹೊರಭಾಗದಲ್ಲಿ ಹಾಕಿರುವ ಟೆಂಟ್‌ಗಳನ್ನು 24 ಗಂಟೆಯ ಒಳಗೆ ತೆರವುಗೊಳಿಸಬೇಕು ಎಂದು ಬ್ರೆಜಿಲ್‌ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ

**
ಬ್ರೆಜಿಲ್‌ನಲ್ಲಿ ಸರ್ಕಾರಿ ವ್ಯವಸ್ಥೆಯ ಮೇಲೆ ನಡೆದ ದಾಳಿಯಿಂದ ತೀವ್ರ ನೋವಾಗಿದೆ. ಪ್ರಜಾಪ್ರಭುತ್ವದ ನೀತಿಗಳಿಗೆ ಎಲ್ಲರೂ ಗೌರವ ನೀಡಬೇಕು. ಈ ದಿಸೆಯಲ್ಲಿ ಬ್ರೆಜಿಲ್ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.
–ನರೇಂದ್ರ ಮೋದಿ, ಪ್ರಧಾನಿ

**
ಬ್ರೆಜಿಲ್‌ನಲ್ಲಿ ಸೇನಾದಂಗೆಯನ್ನು ಪ್ರಚೋದಿಸುವುದು ಹಾಗೂ ಆ ಮೂಲಕ ಬೊಲ್ಸೊನಾರೊ ಅವರಿಗೆ ಮತ್ತೆ ಅಧಿಕಾರ ನೀಡುವ ಉದ್ದೇಶ ಹೊಂದಿದ್ದ ಮತಾಂಧ ನಾಯಕರಿಗೆ ಕಠಿಣ ಶಿಕ್ಷೆ ಖಚಿತ.
–ಲುಲ ಡಸಿಲ್ವಾ, ಬ್ರೆಜಿಲ್ ಅಧ್ಯಕ್ಷ

**
ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಅಧಿಕಾರವನ್ನು ಶಾಂತಿಯುತವಾಗಿ ಹಸ್ತಾಂತರ ಮಾಡದಿರುವುದನ್ನು ನಾನು ಖಂಡಿಸುತ್ತೇನೆ. ಬ್ರೆಜಿಲ್‌ನ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಬ್ರೆಜಿಲ್ ನಾಗರಿಕರು ನೀಡಿದ ಜನಾದೇಶವನ್ನು ಕಡೆಗಣಿಸಬಾರದು. ಲುಲ ಡಸಿಲ್ವಾ ಜೊತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ
–ಜೋ ಬೈಡನ್, ಅಮೆರಿಕ ಅಧ್ಯಕ್ಷ

ಆಧಾರ: ಎಪಿ, ರಾಯಿಟರ್ಸ್‌, ಬಿಬಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು