ಶನಿವಾರ, ಮೇ 30, 2020
27 °C
ಆಳ–ಅಗಲ

Explainer | ಕೊಳೆ ಕಳೆದವರನ್ನೂ ಕಾಡುತ್ತಿದೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೈದ್ಯರಂತೆಯೇ ಜನರನ್ನು ಮುಟ್ಟಿ ಕೆಲಸ ಮಾಡುವ ಕ್ಷೌರಿಕರು, ಬಟ್ಟೆಗಳನ್ನು ತೊಳೆದು ‘ಮಡಿ’ ಮಾಡಿಕೊಡುವ ಮಡಿವಾಳರು, ಮನೆ ಮನೆಗಳ ಎಂಜಲು ಪಾತ್ರೆಗಳನ್ನು ತೊಳೆದುಕೊಡುವ ಮನೆಗೆಲಸದ ಮಹಿಳೆಯರು ಕೊಳೆಯನ್ನು ಕಳೆಯುವಂಥವರು. ಆದರೆ, ಈ ರೀತಿ ಕೆಲಸ ಮಾಡುತ್ತಲೇ ಸೋಂಕಿನ ಅಪಾಯವನ್ನು ಉಳಿದೆಲ್ಲವರಿಗಿಂತ ಹೆಚ್ಚಾಗಿ ಅನುಭವಿಸುವವರು. ಸರ್ಕಾರದಿಂದ ನೆರವು ಬೇಕೆನ್ನುವುದು ಮೂರೂ ಸಮುದಾಯಗಳ ಒಕ್ಕೊರಲ ಮನವಿ. ಅವರ ವೃತ್ತಿ ಬದುಕಿನೊಳಗೊಂದು ಸುತ್ತು...

ಕ್ಷೌರದಂಗಡಿ ಗ್ರಾಹಕರಿಗೂ ಬೇಕು ಮಾರ್ಗಸೂಚಿ

‘ನಮ್ಗೂ ಹೆಂಡ್ತಿ–ಮಕ್ಳು ಅದಾರ‍್ರಿ. ಹೊರಗಿನ ಜನ ಯಾರು, ಹ್ಯಾಂಗ ಅಂತ ಎಲ್ಲಿ ಗೊತ್ತಿರ್ತೈತ್ರಿ? ಆದ್ರ ನಮ್ದೂ ಬದುಕಿನ ಬಂಡಿ ನಡೀಬೇಕು ನೋಡ್ರಿ. ಅದ್ಕ ಕೆಲ್ಸ ಮಾಡಾಕ ರೆಡಿಯಾಗೀವಿ. ಮನ್ಯಾಗಿರೋದು ಇನ್ನೇನು ಮುಗಿತೈತಿ ಅಂದ್ರ ಬೆಳ್ಕೊಂತ ಹೊಂಟ್ಹಂಗ ಕಾಣ್ತೈತ್ರಿ. ಅಂಗ್ಡಿ ತಗ್ಯಾಕ ಅವ್ಕಾಶನss ಕೊಡವಲ್ರು...’

ಧಾರವಾಡ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣ ಮುನಿಯಪ್ಪ ಉಪ್ಪೇರ ಒಂದೇ ಉಸಿರಿಗೆ ಹೇಳುತ್ತಾರೆ.

ಕೊರೊನಾ ವೈರಾಣು ಹರಡದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಆದರೆ, ಕ್ಷೌರಿಕರದು ಸಹ ವೈದ್ಯರಂತೆ ಜನರನ್ನು ಮುಟ್ಟಿಯೇ ಕೆಲಸ ಮಾಡಬೇಕಾದಂತಹ ವೃತ್ತಿ. ಅನಾರೋಗ್ಯ ಪೀಡಿತರಿಗೂ ಕ್ಷೌರಿಕರು ಈ ಹಿಂದೆ ಸೇವೆಯನ್ನು ನೀಡುತ್ತಿದ್ದರು. ಕಾಯಿಲೆ ಇದ್ದವರಿಗೆ ಕೆಲವು ಕ್ಷೌರಿಕರು ನಾಟಿ ಔಷಧಿಯನ್ನೂ ನೀಡುತ್ತಿದ್ದರು. ಆದರೆ, ಈಗ ಕೆಮ್ಮು–ಶೀತದಿಂದ ಬಳಲುವವರು ಬಂದರೆ ಬೆಚ್ಚಿ ಬೀಳುವಂತಹ ಸ್ಥಿತಿ.

‘ಜನರ ಉಸಿರಿಗೆ ಉಸಿರು ತಾಗಿಸಿ ಕೆಲಸ ಮಾಡುವಂತಹ ವೃತ್ತಿ ನಮ್ಮದು. ಹಿಂದೆ ಕಟಿಂಗ್‌ಗೆ ಬಂದ ಚಿಕ್ಕಮಕ್ಕಳ, ವೃದ್ಧರ ಸಿಂಬಳವನ್ನೂ ತೆಗೆದು ಸೇವೆ ನೀಡಿದವರು ನಾವು. ಇನ್ನುಮುಂದಿನ ದಿನಗಳು ಮಾತ್ರ ಹಾಗಿರಲ್ಲ. ಈಗಾಗಲೇ ನಮ್ಮ ಸಮಾಜದ ಸಾವಿರಾರು ಈ ವೃತ್ತಿಯಲ್ಲಿ ಮುಂದುವರಿಯಬೇಕೇ ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ರಾಜ್ಯ ಸವಿತಾ ಸಮಾಜದ ನಿರ್ದೇಶಕ ಕಡೂರಿನ ರವಿಕುಮಾರ್‌.

‘ಕ್ಷೌರದಂಗಡಿಗಳಿಗೆ ಬರುವವರಿಗೂ ಒಂದು ಮಾರ್ಗಸೂಚಿ ರೂಪಿಸಬೇಕು. ಕಾಯಿಲೆಯಿಂದ ಬಳಲುವವರು, ಕೆಮ್ಮು–ಶೀತ ಇರುವವರು ಕ್ಷೌರಕ್ಕೆ ಹೋಗುವಂತಿಲ್ಲ ಎಂಬ ನಿರ್ದೇಶನವನ್ನು ಸರ್ಕಾರವೇ ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಗ್ರಾಹಕರ ಜತೆ ವಾಗ್ವಾದಕ್ಕೆ ಇಳಿಯುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಅವರು ಹೇಳುತ್ತಾರೆ.  

‘ನೀವು ಯಾವ ರೀತಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತೀರೋ ಅದನ್ನು ಚಾಚೂತಪ್ಪದೆ ಅನುಸರಿಸುತ್ತೇವೆ. ಮಾಸ್ಕ್, ಸ್ಯಾನಿಟೈಸರ್, ಡೆಟಾಲ್ ಎಲ್ಲವನ್ನೂ ಬಳಸಿ, ಸ್ವಚ್ಛ ಪರಿಸರದಲ್ಲಿ ಸೇವೆ ನೀಡುತ್ತೇವೆ. ನಮಗೆ ಕೆಲಸ ಮಾಡಲು ಅನುವು ಮಾಡಿಕೊಡಿ' ಎಂದು ಕ್ಷೌರಿಕರ ಸಂಘಟನೆಗಳ ವತಿಯಿಂದ ಸರ್ಕಾರಕ್ಕೆ ಮನವಿ ಪತ್ರಗಳು ಹೋಗಿವೆ.

‘ಮನೆಗೇ ಬಂದು ಕಟಿಂಗ್ ಮಾಡಿಹೋಗುವಂತೆ ಜನ ಕೇಳುತ್ತಿದ್ದಾರೆ. ನೂರಲ್ಲ, ಐನೂರು ರೂಪಾಯಿ ಕೊಡಲು ಸಿದ್ಧರಿದ್ದಾರೆ. ಆದರೆ, ಹೋಗುವುದಾದರೂ ಹೇಗೆ? ಕೆಲವರು ಹೋಗಿದ್ದಾರೆ. ಹಾಗೆ ಹೋದವರು ಪೊಲೀಸರ ಕೈಲಿ ಹೊಡೆತವನ್ನೂ ತಿಂದಿದ್ದಾರೆ’ ಎನ್ನುತ್ತಾರೆ ಉಪ್ಪೇರ.

‘ಜನರನ್ನು ಮುಟ್ಟದೆ ನಮ್ಮ ಸೇವೆ ಸಾಧ್ಯವಿಲ್ಲ. ಹೀಗಾಗಿ ನಾವೂ ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಮಾಸ್ಕ್‌ ಧರಿಸಿ ಕೆಲಸ ಮಾಡಬಹುದು ನಿಜ. ಆದರೆ, ಪ್ರತಿದಿನ ಸೋಂಕುಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ’ ಎನ್ನುವವರೂ ಇದ್ದಾರೆ.  

‘ಇಪ್ಪತ್ತು ದಿನಗಳಾದವು. ನಯಾಪೈಸೆ ದುಡಿಮೆಯಿಲ್ಲ. ಬಹುತೇಕರಿಗೆ ಸ್ವಂತ ಅಂಗಡಿಯಿಲ್ಲ. ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇದೇ ಪರಿಸ್ಥಿತಿ ಮುಂದುವರಿದರೆ ನಾವು ಅನ್ನವಿಲ್ಲದೆ ನರಳುವುದು ತಪ್ಪದು’ ಎನ್ನುತ್ತಾರೆ ಮೈಸೂರಿನ ಸವಿತಾ ಕೇಶಾಲಂಕಾರಿಗಳ ಸಂಘದ ಅಧ್ಯಕ್ಷ ವಿ.ಮಂಜುನಾಥ್.

‘ವರ್ಷದ ಹಿಂದೆಯಷ್ಟೇ ₹ 5 ಲಕ್ಷ ಸಾಲ ಮಾಡಿ ಸ್ವಂತ ಅಂಗಡಿ ಮಾಡಿದೆ. ಇದರ ನಡುವೆ ಅಪ್ಪ ತೀರಿಹೋದರು. ನಿತ್ಯದ ದುಡಿಮೆಯಲ್ಲಿ ಸಾಲ ತೀರಿಸುತ್ತಿದ್ದೆ. ಇದೀಗ ಕೆಲಸ ಬಂದ್ ಆಗಿದೆ. ಮನೆ ಮನೆಗೆ ಹೋಗಿ ಹೇರ್ ಕಟ್ ಮಾಡಲು ಮುಂದಾದರೆ ಅದಕ್ಕೂ ಅವಕಾಶ ಸಿಗಲಿಲ್ಲ. ದಿಕ್ಕೇ ತೋಚದಂತಾಗಿದೆ’ ಎನ್ನುತ್ತಾರೆ ಮೈಸೂರಿನ ಬಲ್ಲಾಳ್ ಸರ್ಕಲ್‌ನಲ್ಲಿ ಕಟಿಂಗ್‌ ಸಲೂನ್‌ ಹೊಂದಿರುವ ಎ.ರಕ್ಷಿತ್‌ಕುಮಾರ್.

28

ಉಪಪಂಗಡಗಳು ಕ್ಷೌರಿಕ ಸಮುದಾಯದಲ್ಲಿವೆ

8

ಭಾಷೆಗಳನ್ನು ಆಡುವ ಕ್ಷೌರಿಕರು ರಾಜ್ಯದಲ್ಲಿದ್ದಾರೆ

18–20 ಲಕ್ಷ

ಕ್ಷೌರಿಕರು ರಾಜ್ಯದಲ್ಲಿದ್ದಾರೆ

6–8ಲಕ್ಷ

ಕ್ಷೌರದಂಗಡಿಗಳು ರಾಜ್ಯದಲ್ಲಿವೆ

***

ಬಟ್ಟೆಗಳೇನೋ ಶುಭ್ರ; ಭವಿಷ್ಯದ ಬದುಕು

ಮನೆಯಲ್ಲೇ ಎಲ್ಲರೂ ಉಳಿದಿರುವಾಗ ಬಟ್ಟೆ ತೊಳೆಯಲು ಕೊಡುವವರು, ಇಸ್ತ್ರಿ ಮಾಡಿಸಲು ಬರುವವರು ಯಾರು ಎನ್ನುವ ಪ್ರಶ್ನೆಯೇ ಮಡಿವಾಳರನ್ನು (ದೋಬಿಗಳು) ಮುಖ್ಯವಾಗಿ ಕಾಡುತ್ತಿದೆ. ತೊಳೆಯಲು ಕೊಟ್ಟ ಬಟ್ಟೆಯಲ್ಲಿ ಸೋಂಕಿನ ಅಂಶವಿದ್ದರೆ ಹೇಗೆ ಎಂಬ ಆತಂಕ ಅವರನ್ನು ಹೆಚ್ಚಾಗಿ ಬಾಧಿಸಿಲ್ಲ.

ಹೌದು, ಜನರ ಬಟ್ಟೆಯನ್ನು ತೊಳೆದು ‘ಮಡಿ’ ಮಾಡುವ ಮಡಿವಾಳರ ಬದುಕು ಕೊರೊನಾ ಹಾವಳಿಯಿಂದಾಗಿ ದಿಕ್ಕೆಟ್ಟು ಹೋಗಿದೆ. ಅವರ ಕುಟುಂಬಗಳ ಅರ್ಥವ್ಯವಸ್ಥೆ ಬುಡಮೇಲಾಗಿದೆ.

ನಿತ್ಯ ಸರಾಸರಿ ₹500ರಷ್ಟು ದುಡಿಯುತ್ತಿದ್ದವರು ಈಗ ಮನೆಯಲ್ಲಿ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಯಾರೂ ಹೊರಗೆ ಹೋಗುತ್ತಿಲ್ಲ. ಹೀಗಾಗಿ, ಬಟ್ಟೆ ತೊಳೆಯುವ, ಇಸ್ತ್ರಿ ಮಾಡುವ ಅವಶ್ಯಕತೆಯೇ ಇಲ್ಲ. ಕೆಲವರು ಬಟ್ಟೆ ಕೊಟ್ಟರೂ ಇಸ್ತ್ರಿ ಪೆಟ್ಟಿಗೆ ಕಾಯಿಸಲು ಇದ್ದಿಲು ಸಿಗುತ್ತಿಲ್ಲ. ಇದ್ದಿಲು ಭಟ್ಟಿಗೆ ಹೊರಟರೆ ಲಾಠಿ ಏಟು ಬೀಳುತ್ತದೆ. ಇದರ ಗೊಡವೆಯೇ ಬೇಡವೆಂದು ಹಲವು ದೋಬಿಗಳು ಇಸ್ತ್ರಿ ಪೆಟ್ಟಿಗೆಯನ್ನೇ ಹಿಡಿದಿಲ್ಲ.

‘ಲಾಡ್ಜ್‌ ಮಾಲೀಕರು ಹಾಗೂ ನೌಕರಸ್ಥರು ನಮಗೆ ಬಟ್ಟೆ ತೊಳೆದು, ಇಸ್ತ್ರಿ ಮಾಡಿಕೊಡಲು ಕೊಡುತ್ತಿದ್ದರು. ನಮಗೆ ಬರುವ ಯಾರದೋ ಬಟ್ಟೆಯಲ್ಲಿ ಸೋಂಕಿದ್ದರೆ ತಮ್ಮ ಬಟ್ಟೆಗಳಿಗೂ ಅದು ಎಲ್ಲಿ ಅಂಟಿ ಬಿಡುವುದೋ ಎಂಬ ಭೀತಿಯಿಂದ ಈಗ ಯಾರೂ ಕೊಡುತ್ತಿಲ್ಲ’ ಎನ್ನುತ್ತಾರೆ ಕಲಬುರ್ಗಿಯ ಎಸ್‌ವಿಪಿ ವೃತ್ತದ ಬಳಿ ಅಂಗಡಿ ಹೊಂದಿರುವ ರಾಹುಲ್ ಇಂಜನಕರ್‌ .

‘ಅಂಗಡಿ ತೆಗೆಯಲೂ ಪೊಲೀಸರು ಅವಕಾಶ ನೀಡಿಲ್ಲ. ಮನೆಗೆ ಸರ್ಕಾರದವರು ನೀಡಿದ ಎರಡು ತಿಂಗಳ ರೇಷನ್ ತಂದಿಟ್ಟುಕೊಂಡಿದ್ದೇವೆ. ಆದರೆ, ಇತರೆ ಖರ್ಚುಗಳಿಗಾಗಿ ನಮ್ಮ ಬಳಿ ಹಣ ಇಲ್ಲ’ ಎಂದು ನೋವು ತೋಡಿಕೊಳ್ಳುತ್ತಾರೆ.

ಇದೇ ಊರಿನಲ್ಲಿ ಪುಟ್ಟ ಲಾಂಡ್ರಿ ಇಟ್ಟುಕೊಂಡಿರುವ ಅಂಬಾಜಿ ಪರೀಟ ಅವರದೂ ಇದೇ ಚಿಂತೆ. ‘ಇಸ್ತ್ರಿ ಮಾಡಲು ಮೂರರಿಂದ ನಾಲ್ಕು ಸೆಟ್‌ ಬಟ್ಟೆಗಳು ಬರುತ್ತಿವೆ ಅಷ್ಟೆ. ಬಟ್ಟೆ ತೊಳೆಯೋಕೆ ಯಾರೂ ಕೊಡುತ್ತಿಲ್ಲ. ಇದರಿಂದ ದಿನದ ಖರ್ಚು ನೀಗಿಸುವುದೇ ಅಸಾಧ್ಯವಾಗಿದೆ. ಅಂಗಡಿಯಿಂದ ಮನೆಗೆ ಹೋಗಿ ಬರಲೂ ಪೊಲೀಸರು ಬಿಡುವುದಿಲ್ಲ. ಹೀಗಾಗಿ, ಇಸ್ತ್ರಿ ಕಾಯುವಾಗಲೇ ಅದರ ಇದ್ದಿಲುಗಳ ಮೇಲೆ ಚಹಾ ಮಾಡಿಕೊಂಡು ಕುಡಿಯುತ್ತಿದ್ದೇವೆ’ ಎನ್ನುತ್ತಾರೆ.

‘ನಿತ್ಯವೂ ಕನಿಷ್ಠ ₹ 500 ಸಂಪಾದಿಸುತ್ತಿದ್ದೆ. ಇದರಲ್ಲೇ ಮನೆ ನಡೆಯುತ್ತಿತ್ತು. ಆದರೆ, ಯಾವಾಗ ಜನರ ಓಡಾಟ ನಿಂತಿತೋ ನನ್ನ ಅಂಗಡಿಗೆ ಬಟ್ಟೆ ಬರುವುದೂ ನಿಂತಿತು. ಅಂಗಡಿ ಬಾಗಿಲು ಮುಚ್ಚಿ, ಐದು ರೂಪಾಯಿ ಸಂಪಾದನೆಯೂ ಇಲ್ಲದೇ ಮನೆಯಲ್ಲಿ ಕೂತಿದ್ದೇನೆ’ ಎಂದು ಹೇಳುತ್ತಾರೆ ಮೈಸೂರಿನ ನೇತಾಜಿ ಲೇಔಟ್‌ನಲ್ಲಿ ಲಾಂಡ್ರಿ ಹೊಂದಿರುವ ಎಂ.ನಾಗರಾಜ.

ಮಡಿವಾಳ ಸಮುದಾಯದವರು ಬಟ್ಟೆ ತೊಳೆಯಲು ಹೆಚ್ಚಿನ ಸಮಯ ನೀರಿನಲ್ಲೇ ಕಳೆಯುತ್ತಾರೆ. ಸಾಬೂನಿನ ನೊರೆಯಲ್ಲಿ ಓಡಾಡುತ್ತಾರೆ. ಇದೇ ಕಾರಣದಿಂದ ಅವರ ಕಾಲುಗಳು ಸೆಲೆಯುವುದು ಮಾಮೂಲಿ. ಸೋಂಕು ಅಂಟುವ ಸಾಧ್ಯತೆ ಹೆಚ್ಚಿರುವ ವೃತ್ತಿಗಳಲ್ಲಿ ಈ ಸಮುದಾಯದವರೂ ಸೇರಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. ಆದರೆ, ಬಹುತೇಕರು ಈ ಕುರಿತು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ದುಡಿಯುವ ಕೈಗಳಿಗೆ ಕೆಲಸ ಸಿಗುವುದೇ ಮುಖ್ಯವಾಗಿದೆ.

‘ಜಗತ್ತಿಗೇ ಕಷ್ಟ ಬಂದೈತಿ, ಎಲ್ಲರಿಗೂ ಅವರವರದ್ದೇ ಕಷ್ಟ ಐತಿ; ನಾವೇನು ಇದಕ್ಕೆ ಹೊರತಲ್ಲ. ಬಂದಂಗೆ ಜೀವನ ಮಾಡ್ಕೊಂಡು ಹೊಂಟೀವಿ. ಮುಂದೇನೋ ಗೊತ್ತಿಲ್ಲ’ ಎನ್ನುತ್ತಾರೆ ಹುಬ್ಬಳ್ಳಿಯ ಕಾಶಿನಾಥ ಯಲ್ಲಪ್ಪ ಕೌತಾಳ.

***

ಹೆಚ್ಚಿದ ಮನೆಗೆಲಸದವರ ನೋವು

ಮನೆ ಮನೆಗಳಲ್ಲಿ ಎಂಜಲು ಪಾತ್ರೆಗಳನ್ನು ಮುಟ್ಟಿ ತೊಳೆಯುವ ಮನೆಗೆಲಸದ ಮಹಿಳೆಯರೂ ಸೋಂಕಿನ ಭೀತಿಯನ್ನು ಎದುರಿಸುತ್ತಿದ್ದಾರೆ.

ಉದಾರೀಕರಣದ ನಂತರದ ಒಂದು ದಶಕದಲ್ಲಿ ನಗರಪ್ರದೇಶಗಳಲ್ಲಿ ಮನೆ ಕೆಲಸದವರ ಬೇಡಿಕೆಯು ಶೇ 120ರಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. 1991ರಲ್ಲಿ 7.40 ಲಕ್ಷದಷ್ಟಿದ್ದ ಮನೆಗೆಲಸದವರ ಸಂಖ್ಯೆಯು ಈಗ ಐದು ಕೋಟಿ ದಾಟಿದೆ ಎಂದು ದೆಹಲಿಯ ಕಾರ್ಮಿಕ ಸಂಘಟನೆಯೊಂದು ಹೇಳಿದೆ.

ಮನೆಗೆಲಸದವರಲ್ಲಿ ಹೆಚ್ಚಿನವರು ಬೇರೆ ಊರುಗಳಿಂದ ನಗರಕ್ಕೆ ವಲಸೆ ಬಂದ ಮಹಿಳೆಯರು. ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡಿ, ಬರುವ ಆದಾಯದಲ್ಲೇ ಕುಟುಂಬದ ನೊಗ ಹೊರಬೇಕು. ಸೋಂಕಿನ ಕುರಿತು ಯೋಚಿಸಲು ಅವರಿಗೂ ಪುರುಸೊತ್ತಿಲ್ಲ. ಹಲವು ಮನೆಗಳಲ್ಲಿ ಕೆಲಸ ಮಾಡುವವರು ಇವರಾಗಿದ್ದರಿಂದ ಸೋಂಕು ಹರಡಬಹುದೆಂಬ ಭಯದಿಂದ ಅನೇಕ ಮನೆ, ಫ್ಲ್ಯಾಟ್‌ಗಳಲ್ಲಿ ಈಗ ಅವರಿಗೆ ಪ್ರವೇಶ ನೀಡಲಾಗುತ್ತಿಲ್ಲ.

‘ಕೆಲಸ ಇಲ್ಲದಿದ್ದರೂ ಕೆಲವರು ಸಂಬಳ ಕೊಟ್ಟಿದ್ದಾರೆ. ಇನ್ನೂ ಕೆಲವರು ಲಾಕ್‌ಡೌನ್‌ ದಿನದವರೆಗಿನ ಸಂಬಳ ಕೊಟ್ಟು, ಸಮಸ್ಯೆ ಪರಿಹಾರ ಆಗುವವರೆಗೂ ಕೆಲಸಕ್ಕೆ ಬರುವುದು ಬೇಡ ಎಂದಿದ್ದಾರೆ’ ಎಂಬುದು ಮನೆಗೆಲಸಕ್ಕೆ ಹೋಗುವ ಮಹಿಳೆಯರ ಸಾಮಾನ್ಯ ಅಳಲು.

ಇಂಥ ಮಹಿಳೆಯರಿಗೆ ಕೆಲವು ಮನೆಗಳಿಂದ ಆಹಾರ ಪದಾರ್ಥಗಳೂ ಲಭಿಸುತ್ತಿದ್ದವು. ಈಗ ಅವುಗಳೂ ಸಿಗುತ್ತಿಲ್ಲ. ಆದ್ದರಿಂದ ಕೆಲವರಿಗೆ ಅಗತ್ಯ ವಸ್ತುಗಳನ್ನು ಖರೀದಿಸುವುದು ಸಹ ಸಮಸ್ಯೆಯಾಗಿದೆ.

ಮಾಹಿತಿ: ಡಿ.ಬಿ.ನಾಗರಾಜ್‌, ಆರ್.ಮಂಜುನಾಥ್‌, ಮನೋಜಕುಮಾರ್‌ ಗುದ್ದಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು