ಮಂಗಳವಾರ, ಜೂನ್ 15, 2021
22 °C
ಮುಂಬೈ, ನಂದೂರ್‌ಬಾರ್‌, ಎರ್ನಾಕುಲಂ ಯಶಸ್ಸು

ಆಳ–ಅಗಲ | ಕೋವಿಡ್‌ ನಿರ್ವಹಣೆ: ದಾರಿ ತೋರಿದ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ ಮಹಾನಗರದಲ್ಲಿ ಕಳೆದ 20 ದಿನಗಳಲ್ಲಿ ಕೋವಿಡ್‌ ರೋಗಿಗಳ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಮುಂಬೈ ಮಹಾನಗರಪಾಲಿಕೆಯ ಆಯುಕ್ತ ಇಕ್ಬಾಲ್‌ಸಿಂಗ್‌ ಚಹಲ್‌ ಅವರ ವ್ಯವಸ್ಥಿತ ನಿರ್ವಹಣೆ ಹಾಗೂ ಅವರಿಗೆ ಅಲ್ಲಿನ ರಾಜಕೀಯ ವ್ಯವಸ್ಥೆಯು ನೀಡಿದ ಬೆಂಬಲ ಎಂದು ವಿಶ್ಲೇಷಿಸಲಾಗಿದೆ.

ಮುಂಬೈಯ ಆಸ್ಪತ್ರೆಗಳಿಗೆ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್‌ನಂಥ ಔಷಧಗಳು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸರಬರಾಜಾಗುವಂತೆ ನೋಡಿಕೊಳ್ಳಲು ಚಹಲ್‌ ಅವರು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿ ಬಂದಿತ್ತು. ಅಂಥ ಸಂದರ್ಭದಲ್ಲಿ ಅಲ್ಲಿನ ರಾಜಕೀಯ ವ್ಯವಸ್ಥೆಯು ಅವರ ಬೆನ್ನಿಗೆ ನಿಂತಿತು. ಇದರಿಂದಾಗಿ ಮುಂಬೈಯ ಜನರು ಹಾಸಿಗೆ ಅಥವಾ ಆಮ್ಲಜನಕದ ಸಿಲಿಂಡರ್‌ಗಾಗಿ ಅಲೆದಾಡುವುದು ತಪ್ಪಿದೆ. ಮುಂಬೈ ಮಾದರಿಯನ್ನು ಸುಪ್ರೀಂ ಕೋರ್ಟ್‌ನ ನಾಗಪುರ ಪೀಠವು ಶ್ಲಾಘಿಸಿದೆ.

ಮುಂಬೈಯಲ್ಲಿ ಮಾಡಿದ್ದೇನು?: ಕೋವಿಡ್‌ ವಿರುದ್ಧದ ಹೋರಾಟವನ್ನು ವಿಕೇಂದ್ರೀಕರಣಗೊಳಿಸಿದ್ದೇ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಲು ಕಾರಣ ಎನ್ನುತ್ತಾರೆ ಚಹಲ್‌. ಸೇನಾ ಹಿನ್ನೆಲೆಯಿಂದ ಬಂದ ಚಹಲ್‌ ಅವರು ವೃತ್ತಿಯಿಂದ ಎಂಜಿನಿಯರ್‌. ಮ್ಯಾರಥಾನ್‌ ಓಟಗಾರರೂ ಹೌದು. ಕೋವಿಡ್‌ ವಿರುದ್ಧದ ಅವರ ಹೋರಾಟಕ್ಕೆ ‘ವಾರ್‌ ರೂಮ್‌’ ಕೇಂದ್ರವಾಗಿತ್ತು.

ಆತಂಕ ನಿವಾರಣೆ, ವಾರ್‌ ರೂಮ್‌ಗಳ ವಿಕೇಂದ್ರೀಕರಣ ಹಾಗೂ ಮೂಲ ಸೌಲಭ್ಯ ಸೃಷ್ಟಿ... ಈ ಮೂರು ಗುರಿಗಳನ್ನಿಟ್ಟುಕೊಂಡು ಅವರು ಹೋರಾಟ ಆರಂಭಿಸಿದ್ದರು.

ಆತಂಕ ನಿವಾರಣೆ: ಮುಂಬೈಯ ಪ್ರಯೋಗಾಲಯಗಳು ಕೋವಿಡ್‌ ಪರೀಕ್ಷೆಗಳ ಫಲಿತಾಂಶವನ್ನು ನೇರವಾಗಿ ರೋಗಿಗಳಿಗೆ ನೀಡುತ್ತಿದ್ದವು. ಬೆಳಿಗ್ಗೆ ಮಾದರಿಗಳನ್ನು ನೀಡಿದರೆ, ಸಂಜೆಯ ವೇಳೆಗೆ ಫಲಿತಾಂಶ ಬರುತ್ತಿತ್ತು. ಅದು ರೋಗಿಗಳ ಕೈ ಸೇರುತ್ತಿದ್ದಂತೆ ರಾತ್ರಿ 8 ಗಂಟೆಯ ವೇಳೆಗೆ ನಗರಪಾಲಿಕೆಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆಗಳ ಸುರಿಮಳೆಯಾಗುತ್ತಿತ್ತು. ಪ್ರತಿನಿತ್ಯ ಸುಮಾರು 10 ಸಾವಿರ ಜನರು ಹಾಸಿಗೆಗಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಚಹಲ್‌, ಈ ವ್ಯವಸ್ಥೆಯನ್ನು ಬದಲಿಸಿದರು.

ಕೋವಿಡ್‌ ಪರೀಕ್ಷೆಯ ಫಲಿತಾಂಶವನ್ನು ನೇರವಾಗಿ ರೋಗಿಗಳಿಗೆ ನೀಡಬಾರದು. ಕಡ್ಡಾಯವಾಗಿ ಅದನ್ನು ಬಿಎಂಸಿ ಜತೆ ಮಾತ್ರ ಹಂಚಿಕೊಳ್ಳಬೇಕು ಎಂದು ಪ್ರಯೋಗಾಲಯಗಳಿಗೆ ಸೂಚನೆ ನೀಡಲಾಯಿತು. ಜತೆಗೆ ಕೇಂದ್ರೀಯ ನಿಯಂತ್ರಣ ಕೊಠಡಿಯನ್ನೂ ಮುಚ್ಚಿ, 24 ಗಂಟೆಯೂ ಕೆಲಸ ಮಾಡುವ ‘ವಾರ್‌ ರೂಮ್‌’ ಆರಂಭಿಸಲಾಯಿತು.

ವಾರ್ಡ್‌ಗೆ ಒಂದರಂತೆ ವಾರ್‌ ರೂಮ್‌ ಸ್ಥಾಪನೆಯಾಯಿತು. ಪ್ರತಿ ವಾರ್‌ರೂಮ್‌ಗೆ 30 ದೂರವಾಣಿ ಸಂಪರ್ಕ, 10 ಮಂದಿ ದೂರವಾಣಿ ಕರೆ ನಿರ್ವಾಹಕರು, 10 ಮಂದಿ ವೈದ್ಯರು, ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ ಹಾಗೂ 10 ಆಂಬುಲೆನ್ಸ್‌ಗಳನ್ನು ಒದಗಿಸಲಾಯಿತು. ರೋಗಿಗಳ ಪರೀಕ್ಷಾ ಫಲಿತಾಂಶವನ್ನು ಮರುದಿನ ಬೆಳಿಗ್ಗೆ 6 ಗಂಟೆಯ ವೇಳೆಗೆ ಅಯಾ ವಾರ್ಡ್‌ನ ವಾರ್‌ ರೂಮ್‌ಗಳಿಗೆ ರವಾನಿಸುವ ವ್ಯವಸ್ಥೆಯಾಯಿತು. ಪ್ರತಿ ವಾರ್ಡ್‌ನಲ್ಲಿ ಲಭ್ಯವಿರುವ ಹಾಸಿಗೆಗಳು ಹಾಗೂ ಇತರ ಮಾಹಿತಿಯನ್ನು ನೀಡುವಂಥ ತಲಾ 10 ಡ್ಯಾಶ್‌ಬೋರ್ಡ್‌ ನಿರ್ಮಿಸಲಾಯಿತು.


ಬಿಎಂಸಿ ಸಿಬ್ಬಂದಿಯೊಬ್ಬರು ಕೊರೊನಾ ವೈರಾಣು ಮಾದರಿಯ ದಿರಿಸಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದ ದೃಶ್ಯ

ವಾರ್‌ರೂಮ್‌ಗಳ ನಿರ್ವಹಣೆಗೆ ಮಾಸಿಕ ಕನಿಷ್ಠ ₹50,000 ವೇತನ ನೀಡಿ ವೈದ್ಯರು ಹಾಗೂ ಇತರ ಸಿಬ್ಬಂದಿಯನ್ನು ನೇಮಕ ಮಾಡಲಾಯಿತು. ಅವರಿಗೆ ಸಮೀಪದ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಾಯಿತು.

800 ಎಸ್‌ಯುವಿಗಳನ್ನು ಪಡೆದು, ಆಂಬುಲೆನ್ಸ್‌ ಆಗಿ ಪರಿವರ್ತಿಸಲಾಯಿತು. ಈ ಆಂಬುಲೆನ್ಸ್‌ಗಳ ಟ್ರ್ಯಾಕಿಂಗ್‌ ಹಾಗೂ ನಿರ್ವಹಣೆಗಾಗಿ ಸಾಫ್ಟ್‌ವೇರ್‌ನ ನೆರವು ನೀಡುವಂತೆ ಉಬರ್‌ ಸಂಸ್ಥೆಯನ್ನು ವಿನಂತಿಸಲಾಯಿತು.

ಎರಡನೇ ಅಲೆಯು ತೀವ್ರ ಸ್ವರೂಪ ಪಡೆಯಲು ಆರಂಭಿಸುತ್ತಿದ್ದಂತೆಯೇ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನಿಯಮಗಳನ್ನು ಜಾರಿ ಮಾಡಿದ ಸರ್ಕಾರವು ಕೋವಿಡ್‌ ಚಿಕಿತ್ಸೆಯ ಗರಿಷ್ಠ ದರವನ್ನು ನಿಗದಿ ಮಾಡಿತ್ತು. 172 ಖಾಸಗಿ ಆಸ್ಪತ್ರೆಗಳು ಹಾಗೂ ಬಿಎಂಸಿ ರೂಪಿಸಿದ ವಿಶೇಷ ಕೋವಿಡ್‌ ಚಿಕಿತ್ಸಾ ಸೌಲಭ್ಯಗಳ ಸಮಗ್ರ ಮಾಹಿತಿ ನೀಡುವ ಡ್ಯಾಶ್‌ಬೋರ್ಡ್‌ ಚಹಲ್‌ ಅವರ ಬಳಿ ಇತ್ತು. ಬಿಎಂಸಿಯ ವಾರ್‌ರೂಮ್‌ ಮೂಲಕವೇ ಎಲ್ಲಾ ಆಸ್ಪತ್ರೆಗಳಿಗೆ ದಾಖಲಾತಿಗಳನ್ನು ಮಾಡಬೇಕು ಎಂಬ ಸೂಚನೆ ನೀಡಲಾಯಿತು.

ಏಳು ಕಡೆಗಳಲ್ಲಿ ಬಿಎಂಸಿ ಸ್ಥಾಪಿಸಿದ್ದ ಜಂಬೊ ಕೇಂದ್ರಗಳಿಗೆ ರೋಗಿಗಳು ನೇರವಾಗಿ ಬಂದು ದಾಖಲಾಗುವಂಥ ಸೌಲಭ್ಯವನ್ನೂ ನೀಡಲಾಯಿತು. ಸುಮಾರು 20,000 ರೋಗಿಗಳು ಹೀಗೆ ನೇರವಾಗಿ ಬಂದು ಚಿಕಿತ್ಸೆ ಪಡೆದಿದ್ದಾರೆ ಎಂದು ಚಹಲ್‌ ತಿಳಿಸಿದ್ದಾರೆ.

ಈಗ ಮುಂಬೈ ನಗರದಲ್ಲಿ ಕೋವಿಡ್‌ನ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜುಲೈ ಅಂತ್ಯದ ವೇಳೆಗೆ ಮೂರನೇ ಅಲೆ ಕಾಣಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

‘ಪ್ರಸಕ್ತ ನಮ್ಮಲ್ಲಿ ವೆಂಟಿಲೇಟರ್‌, ಆಮ್ಲಜನಕ ಸಹಿತವಾದ 2000 ಐಸಿಯು ಹಾಸಿಗೆಗಳೂ ಸೇರಿದಂತೆ ಸುಮಾರು 5,500 ಹಾಸಿಗೆಗಳು ಲಭ್ಯ ಇವೆ. ಇನ್ನೂ ನಾಲ್ಕು ಜಂಬೊ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ’ ಎಂದು ಚಹಲ್‌ ತಿಳಿಸಿದ್ದಾರೆ.

ನಂದೂರ್‌ಬಾರ್‌ನ ಆಮ್ಲಜನಕ ನರ್ಸ್‌
ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯು ಹಲವು ರಾಜ್ಯಗಳಲ್ಲಿ ಕಳವಳವಾರಿ ಸ್ಥಿತಿಯನ್ನು ನಿರ್ಮಿಸಿದೆ. ಆದರೆ, ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯಲ್ಲಿ ಇಂತಹ ಬಿಕ್ಕಟ್ಟು ತಲೆದೋರಿಲ್ಲ. ಇದಕ್ಕೆ ಮುಖ್ಯ ಕಾರಣ ಅಲ್ಲಿ ಅನುಷ್ಠಾನಗೊಳಿಸಲಾದ ‘ಆಮ್ಲಜನಕ ನರ್ಸ್‌’ ಎಂಬ ಪರಿಕಲ್ಪನೆ. 

ನಂದೂರ್‌ಬಾರ್‌ನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಅಗತ್ಯ ಇರುವ ರೋಗಿಗಳ ಮೇಲೆ ನಿಗಾ ಇರಿಸಲು ನರ್ಸ್‌ಗಳನ್ನು ನೇಮಿಸಲಾಗಿದೆ. ಪ್ರತಿ 15–20 ರೋಗಿಗಳಿಗೆ ಒಬ್ಬ ನರ್ಸ್‌ ಅನ್ನು ನೇಮಿಸಲಾಗುತ್ತದೆ. ಆಮ್ಲಜನಕದ ಮೇಲೆ ನಿಗಾ ಇರಿಸುವುದು ಮಾತ್ರ ಈ ನರ್ಸ್‌ಗಳ ಕೆಲಸ. ಅವರು ಒಂದರಿಂದ ಎರಡು ತಾಸಿಗೊಮ್ಮೆ ರೋಗಿಗಳ ಆಮ್ಲಜನಕ ಮಟ್ಟ ಪರೀಕ್ಷಿಸುತ್ತಾರೆ. ಆಮ್ಲಜನಕ ಮಟ್ಟವು ಶೇ 95ಕ್ಕಿಂತ ಮೇಲೆ ಹೋದ ಕೂಡಲೇ ಆಮ್ಲಜನಕದ ಪೂರೈಕೆಯನ್ನು ಅವರು ಕಡಿಮೆ ಮಾಡುತ್ತಾರೆ. ಅದೇ ರೀತಿಯಲ್ಲಿ ಆಮ್ಲಜನಕ ಬೆಂಬಲದಲ್ಲಿ ಇರುವ ರೋಗಿಯ ಆಮ್ಲಜನಕ ಮಟ್ಟವು ಕೆಳಕ್ಕೆ ಇಳಿದರೆ ಅವರ ‍ಪೂರೈಕೆಯನ್ನು ಹೆಚ್ಚಿಸುತ್ತಾರೆ. ಹೀಗೆ ಆಮ್ಲಜನಕ ಪೋಲು ತಡೆಯುವುದರ ಜತೆಗೆ, ಅಗತ್ಯ ಇರುವವರಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಪೂರೈಕೆಯೂ ಸಾಧ್ಯವಾಗುತ್ತದೆ. 

ರೋಗಿಗಳು ಶೌಚಾಲಯಕ್ಕೆ ಹೋಗುವಾಗ, ಆಹಾರ ಸೇವಿಸುವಾಗ ಆಮ್ಲಜನಕದ ಮಾಸ್ಕ್‌ ಅನ್ನು ತೆಗೆದಿರಿಸುತ್ತಾರೆ. ಆಗ ಆಮ್ಲಜನಕ ‍ಪೋಲಾಗುತ್ತದೆ. ಆದರೆ, ನರ್ಸ್‌ಗಳು ಅದರ ಮೇಲೆಯೂ ನಿಗಾ ಇರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸುತ್ತಾರೆ. 

ಈ ವಿಶಿಷ್ಟ ಯೋಜನೆಯನ್ನು ಕಳೆದ ವರ್ಷವೇ ಆರಂಭಿಸಲಾಗಿತ್ತು. ಆದರೆ, ನರ್ಸ್‌ಗಳ ಕೊರತೆಯ ಕಾರಣ ಪೂರ್ಣ ಪ್ರಮಾಣದಲ್ಲಿ ಜಾರಿ ಸಾಧ್ಯವಾಗಿರಲಿಲ್ಲ. ಈ ವರ್ಷ  ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಈ ಕಾರ್ಯತಂತ್ರಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಜತೆಗೆ, ಮಹಾರಾಷ್ಟ್ರದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಇದರ ಅನುಷ್ಠಾನಕ್ಕೆ ಆದೇಶ ನೀಡಲಾಗಿದೆ. 

ಎರ್ನಾಕುಲಂನ ಆಸ್ಪತ್ರೆ ಹಾಸಿಗೆ ನಿರ್ವಹಣೆ
ದೇಶದ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೋವಿಡ್‌ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಯ ತೀವ್ರ ಕೊರತೆಯಾಗಿದೆ ಮತ್ತು ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದು ಸಾಮಾನ್ಯ ದೃಶ್ಯವಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ರೋಗಿಗಳು ಮೃತಪಟ್ಟಿರುವುದೂ ವರದಿಯಾಗಿದೆ. ಜತೆಗೆ, ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಿ, ಅದನ್ನು ಹೆಚ್ಚಿನ ಶುಲ್ಕಕ್ಕೆ ಮಾರಾಟ ಮಾಡುವ ದಂಧೆ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಆದರೆ, ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಆಸ್ಪತ್ರೆ ಹಾಸಿಗೆಗಾಗಿ ರೋಗಿಗಳು ಅಲೆದಾಡುತ್ತಿರುವ ದೃಶ್ಯ ಕಾಣ ಸಿಗದು. ಹಾಸಿಗೆ ಹಂಚಿಕೆಗೆ ಅಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದೆ. ಕೇಂದ್ರೀಕೃತ ವಾರ್‌ರೂಮ್‌ ಮತ್ತು ವಿಕೇಂದ್ರೀಕೃತ ಆರೋಗ್ಯ ವ್ಯವಸ್ಥೆ ಮೂಲಕ ಇದು ಸಾಧ್ಯವಾಗಿದೆ.

ಕೇಂದ್ರೀಕೃತ ವಾರ್‌ರೂಮ್‌ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು, ಅವರ ಮೇಲೆ ನಿಗಾ, ಆಮ್ಲಜನಕ ಪೂರೈಕೆ ಇತ್ಯಾದಿ ವಿಭಾಗಗಳಿವೆ. ಮನೆ ಪ್ರತ್ಯೇಕವಾಸ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಸೇವಾ ವ್ಯವಸ್ಥೆಗಳ ಜತೆಗೆ ವಾರ್‌ರೂಮ್‌ ಅನ್ನು ಜೋಡಿಸಲಾಗಿದೆ. ಕೋವಿಡ್‌ ದೃಢಪಟ್ಟ ಕೂಡಲೇ ರೋಗಿಯು ವಾರ್‌ರೂಮ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇಂತಹ ರೋಗಿಗಳಿಗೆ ತಳಮಟ್ಟದ ಆರೋಗ್ಯ ಕಾರ್ಯಕರ್ತರು ದೂರವಾಣಿ ಮೂಲಕ ವೈದ್ಯರ ಸಮಾಲೋಚನಾ ಸೇವೆಯನ್ನು ವ್ಯವಸ್ಥೆ ಮಾಡುತ್ತಾರೆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂಬುದು ಸಮಾಲೋಚನೆಯಲ್ಲಿ ತಿಳಿದರೆ ಈ ಮಾಹಿತಿಯನ್ನು ವಾರ್‌ರೂಮ್‌ಗೆ ರವಾನಿಸಲಾಗುತ್ತದೆ. ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆಯನ್ನು ಪರಿಶೀಲಿಸಿ, ರೋಗಿಯನ್ನು ಯಾವ ಆಸ್ಪತ್ರೆಗೆ ದಾಖಲಿಸಬೇಕು ಎಂಬುದು ವಾರ್‌ರೂಮ್‌ನಲ್ಲಿ ನಿರ್ಧಾರವಾಗುತ್ತದೆ.

ಹಾಸಿಗೆ, ಐಸಿಯು, ವೆಂಟಿಲೇಟರ್‌ಗಳು ಎಷ್ಟು ಲಭ್ಯ ಇವೆ ಮತ್ತು ಎಷ್ಟರಲ್ಲಿ ರೋಗಿಗಳು ಇದ್ದಾರೆ ಎಂಬ ಮಾಹಿತಿಯನ್ನು ‍ಪೋರ್ಟಲ್‌ನಲ್ಲಿ ಪರಿಷ್ಕರಿಸುವ ಹೊಣೆಯನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಕೋವಿಡ್‌ ನೋಡಲ್‌ ಅಧಿಕಾರಿಗಳಿಗೆ ವಹಿಸಲಾಗಿದೆ.

ಆಮ್ಲಜನಕ ಪೂರೈಕೆಯನ್ನು ಕೂಡ ಕೇಂದ್ರೀಕೃತ ವಾರ್‌ರೂಮ್‌ ನಿರ್ವಹಿಸುತ್ತಿದೆ.

ಗೌರವಯುತ ಅಂತ್ಯಸಂಸ್ಕಾರ
ಸ್ಮಶಾನಗಳ ಮುಂದೆ ಜನರು ತಮ್ಮ ಬಂಧುಗಳ ಶವಗಳನ್ನಿಟ್ಟುಕೊಂಡು ಸಾಲುಗಟ್ಟಿ ನಿಂತಿರುವ ಚಿತ್ರಗಳು ಮುಂಬೈಯಲ್ಲಿ ಕಾಣಿಸಲಿಲ್ಲ. ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದ್ದಾಗ ಅದಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ರೂಪಿಸಿದ್ದೇ ಇದಕ್ಕೆ ಕಾರಣ.

ಐಐಟಿಯ ನೆರವು ಪಡೆದು ಮುಂಬೈಯ 47 ಸ್ಮಶಾನಗಳ ಆನ್‌ಲೈನ್‌ ಡ್ಯಾಶ್‌ಬೋರ್ಡ್‌ಅನ್ನು ಮೊದಲೇ ತಯಾರಿಸಲಾಗಿತ್ತು. ಮೃತಪಟ್ಟವರ ಕುಟುಂಬದವರಿಗೆ ಈ ವ್ಯವಸ್ಥೆಯ ಮೂಲಕ ಸ್ಲಾಟ್‌ಗಳನ್ನು ವಿತರಿಸಿ, ತಮ್ಮ ಬಂಧುಗಳಿಗೆ ಗೌರವಯುತವಾಗಿ ಮತ್ತು ಖಾಸಗಿತನದೊಂದಿಗೆ ಅಂತಿಮ ವಿದಾಯ ನೀಡಲು ವ್ಯವಸ್ಥೆ ಮಾಡಿಕೊಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು