ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ: ಕೋವಿಡ್‌ ಹೊಡೆತಕ್ಕೆ ಜಗ್ಗದ ತೆರಿಗೆ ಸಂಗ್ರಹ

ಬಜೆಟ್‌ ಅಂದಾಜಿಗಿಂತ ₹5 ಲಕ್ಷ ಕೋಟಿ ಹೆಚ್ಚುವರಿ ವರಮಾನ
Last Updated 14 ಏಪ್ರಿಲ್ 2022, 18:01 IST
ಅಕ್ಷರ ಗಾತ್ರ

2021–22ನೇ ಆರ್ಥಿಕ ವರ್ಷದ ಆರಂಭದ ತಿಂಗಳುಗಳಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರ ಹೊಡೆತಕ್ಕೆ ದೇಶ ಸಿಲುಕಿತ್ತು. ಸಾಂಕ್ರಾಮಿಕದ ಬಿಗಿ ಹಿಡಿತದ ನಡುವೆಯೂ ದೇಶದ ತೆರಿಗೆ ಸಂಗ್ರಹದಲ್ಲಿ ಭಾರಿ ಪ್ರಗತಿ ಕಂಡುಬಂದಿದೆ. ಬಜೆಟ್‌ನಲ್ಲಿ ₹22.17 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆರ್ಥಿಕ ವರ್ಷ ಅಂತ್ಯಕ್ಕೆ ಸಂಗ್ರಹವಾದ ತೆರಿಗೆಯನ್ನು ಲೆಕ್ಕಹಾಕಿದಾಗ, ಬಜೆಟ್‌ ಅಂದಾಜಿಗಿಂತ ಸರಿಸುಮಾರು ₹5 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಬೊಕ್ಕಸಕ್ಕೆ ಹರಿದುಬಂದಿದೆ.

2020–21ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಈ ಸಾಲಿನಲ್ಲಿ ಶೇ 34ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲ ತೆರಿಗೆ ಮೂಲಗಳಿಂದ ಒಟ್ಟಾರೆಯಾಗಿ ₹20.27 ಲಕ್ಷ ಕೋಟಿ ಸಂಗ್ರಹವಾಗಿತ್ತು.ಒಟ್ಟು ಸಂಗ್ರಹವಾದ ತೆರಿಗೆಯಲ್ಲಿ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಜಿಎಸ್‌ಟಿ ಮೊದಲಾದವು ಸೇರಿವೆ. ಈ ಸಾಲಿನ ಆರ್ಥಿಕ ವರ್ಷದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕವೊಂದರಿಂದಲೇ ₹3.90 ಲಕ್ಷ ಕೋಟಿ ತೆರಿಗೆ ವರಮಾನ ಬಂದಿದೆ.

ನೇರ ತೆರಿಗೆ ವ್ಯಾಪ್ತಿಯಲ್ಲಿ ಬರುವ ವೈಯಕ್ತಿಕ ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಸಂಗ್ರಹವು ಶೇ 49ರಷ್ಟು ಜಿಗಿತ ದಾಖಲಿಸಿದ್ದು, ₹14.10 ಲಕ್ಷ ಕೋಟಿ ಜಮೆಯಾಗಿದೆ. ಈ ಪೈಕಿ ಕಾರ್ಪೊರೇಟ್ ತೆರಿಗೆಯು ಶೇ 56.1ರಷ್ಟು ಹೆಚ್ಚಳದೊಂದಿಗೆ ₹8.58 ಲಕ್ಷ ಕೋಟಿ ಸಂಗ್ರಹವಾಗಿದೆ. ಹಾಗೆಯೇ, ಆದಾಯ ತೆರಿಗೆ ಸಂಗ್ರಹದಲ್ಲಿ ಶೇ 43ರಷ್ಟು ಹೆಚ್ಚಳ ಕಂಡುಬಂದಿದ್ದು, ₹7.49 ಲಕ್ಷ ಕೋಟಿ ಜಮೆಯಾಗಿದೆ. ಪರೋಕ್ಷೆ ತೆರಿಗೆಯಡಿ ಬರುವ ಕಸ್ಟಮ್ಸ್ ಸುಂಕ, ಕೇಂದ್ರದ ಜಿಎಸ್‌ಟಿ ಹಾಗೂ ಸೆಸ್ ಮತ್ತು ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಸಂಗ್ರಹವು ಶೇ 20ರಷ್ಟು ಹೆಚ್ಚಳವಾಗಿದ್ದು, ₹12.90 ಲಕ್ಷ ಕೋಟಿ ಸಂಗ್ರಹವಾಗಿದೆ.

ಜಿಎಸ್‌ಟಿ ಪರಿಹಾರ: ರಾಜ್ಯಗಳಿಗೆ ಕೇಂದ್ರದ ಬಾಕಿ ₹53,661 ಕೋಟಿ

ಜಿಎಸ್‌ಟಿ ಜಾರಿಗೆ ಬಂದ ನಂತರ, ರಾಜ್ಯಗಳು ಅನುಭವಿಸುವ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರವು ಪ್ರತಿ ಆರ್ಥಿಕ ವರ್ಷದಲ್ಲಿ ಇಂತಿಷ್ಟು ಜಿಎಸ್‌ಟಿ ಪರಿಹಾರದ ಮೊತ್ತ ನೀಡಬೇಕು. ಜಿಎಸ್‌ಟಿ ಜಾರಿಗೆ ಬಂದ ವರ್ಷದಿಂದಲೂ ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಹಾರವನ್ನು ಪೂರ್ಣ ಪ್ರಮಾಣದಲ್ಲಿ ನೀಡುತ್ತಿಲ್ಲ. ಇದರಿಂದ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಬಾಕಿ ಪ್ರತಿ ವರ್ಷ ಏರುತ್ತಲೇ ಇದೆ. 2021–22ನೇ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರ ಬಾಕಿಯ ಮೊತ್ತ ₹53,661 ಕೋಟಿಗೆ ತಲುಪಿದೆ.

ವರದಿ: ಜಯಸಿಂಹ ಆರ್., ಅಮೃತ್ ಕಿರಣ್ ಬಿ.ಎಂ. ಆಧಾರ: ಜಿಎಸ್‌ಟಿ ಮಂಡಳಿ ಪತ್ರಿಕಾ ಪ್ರಕಟಣೆಗಳು, 2022–23ನೇ ಸಾಲಿನ ಕೇಂದ್ರ ಬಜೆಟ್, ಹಣಕಾಸು ಸಚಿವಾಲಯದ ಪತ್ರಿಕಾ ಪ್ರಕಟಣೆಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT